ADVERTISEMENT

ಸಂಗತ: ಜೀವವೈವಿಧ್ಯದ ಸಂರಕ್ಷಣೆ, ನಮ್ಮೆಲ್ಲರ ಹೊಣೆ

ಶ್ರೀಗುರು
Published 2 ಮಾರ್ಚ್ 2026, 20:30 IST
Last Updated 2 ಮಾರ್ಚ್ 2026, 20:30 IST
   
ಪರಿಸರನಾಶ ಹಾಗೂ ಜೀವಿನಾಶಗಳ ಆತಂಕದ ಸುದ್ದಿ ನಡುವೆಯೂ, ಜೀವವೈವಿಧ್ಯ ಸಂರಕ್ಷಣೆಗೆ ಸಂಬಂಧಿಸಿದ ಆಶಾದಾಯಕ ಚಟುವಟಿಕೆಗಳು ಸಾಕಷ್ಟು ನಡೆಯುತ್ತಿವೆ.

ಜಗತ್ತು ಆರನೇ ‘ಮಹಾ ಅಳಿವು’ ಎದುರಿಸುತ್ತಿದೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ. ಹವಾಮಾನ ಬದಲಾವಣೆ, ಅರಣ್ಯ ನಾಶ ಮತ್ತು ಅಕ್ರಮ ಬೇಟೆಯಿಂದಾಗಿ ಲಕ್ಷಾಂತರ ಜೀವ ಪ್ರಭೇದಗಳು ಅಳಿವಿನ ಭೀತಿಯಲ್ಲಿವೆ. ಏರುತ್ತಿರುವ ತಾಪಮಾನದಿಂದಾಗಿ ಆರ್ಕ್ಟಿಕ್‌ನ ಹಿಮಕರಡಿಗಳಿಂದ ಹಿಡಿದು ಸಮುದ್ರದ ಹವಳದ ದಿಬ್ಬಗಳವರೆಗೆ ಎಲ್ಲವೂ ಸಂಕಷ್ಟದಲ್ಲಿವೆ.

‘ಐಯುಸಿಎನ್’ ಪ್ರಕಟಿಸಿರುವ ಕೆಂಪುಪಟ್ಟಿ ಪ್ರಕಾರ ಜಗತ್ತಿನ 44,000ಕ್ಕೂ ಹೆಚ್ಚು ಪ್ರಭೇದಗಳು ಅಳಿವಿನ ಭೀತಿ ಎದುರಿಸುತ್ತಿವೆ. ಅದರಲ್ಲಿ ಶೇ 41ರಷ್ಟು ಉಭಯಚರಗಳು ಮತ್ತು ಶೇ 25ರಷ್ಟು ಸಸ್ತನಿಗಳು ಸೇರಿವೆ. ಪ್ರತಿವರ್ಷ ಜಗತ್ತು ಸುಮಾರು 10 ದಶಲಕ್ಷ ಹೆಕ್ಟೇರ್ ಅರಣ್ಯವನ್ನು ಕಳೆದುಕೊಳ್ಳು ತ್ತಿದೆ. ಇದು ಜೀವವೈವಿಧ್ಯದ ಆವಾಸಸ್ಥಾನದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಸಮುದ್ರದ ತಾಪಮಾನ ಏರಿಕೆ ಯಿಂದಾಗಿ ಜಗತ್ತಿನ ಶೇ 50ರಷ್ಟು ಹವಳದ ದಿಬ್ಬಗಳು ಈಗಾಗಲೇ ನಾಶವಾಗಿವೆ.

ಭಾರತವು ವಿಶ್ವದ ಒಟ್ಟು ಭೂಭಾಗದಲ್ಲಿ ಶೇ 2.4ರಷ್ಟಿದ್ದರೂ, ಜಗತ್ತಿನ ಶೇ 7–8ರಷ್ಟು ಜೀವವೈವಿಧ್ಯದ ಆವಾಸ ವಾಗಿದೆ. ನಮ್ಮ ವನ್ಯಜೀವಿ ಸಂರಕ್ಷಣಾ ಪ್ರಯತ್ನ ಮತ್ತು ಅದರ ಫಲಗಳು ಆಶಾದಾಯಕವಾಗಿವೆ. ಆದರೆ, ಸವಾಲುಗಳಿಂದ ಮುಕ್ತವಾಗಿಲ್ಲ. ಭಾರತದಂತಹ ಜನ ಬಾಹುಳ್ಯವಿರುವ ದೇಶದಲ್ಲಿ ಕಾಡು ಗಳ ಒತ್ತುವರಿಯಿಂದಾಗಿ ವನ್ಯಮೃಗ–ಮಾನವ ಸಂಘರ್ಷ ಹೆಚ್ಚುತ್ತಲೇ ಇದೆ. ಇದು ರೈತರ ಬೆಳೆ ಹಾನಿ ಮತ್ತು ಪ್ರಾಣಿಗಳ ಜೀವಹಾನಿಗೆ ಕಾರಣ ವಾಗುತ್ತಿದೆ.

ADVERTISEMENT

‘ಪ್ರಾಜೆಕ್ಟ್ ಟೈಗರ್’ ಮತ್ತು ‘ಪ್ರಾಜೆಕ್ಟ್ ಎಲಿಫೆಂಟ್’ ಮೂಲಕ ಹುಲಿ ಮತ್ತು ಆನೆಗಳ ಸಂಖ್ಯೆಯು ಗಣನೀಯವಾಗಿ ಹೆಚ್ಚಿದೆ. 2022ರ ಗಣತಿಯ ಪ್ರಕಾರ, ಭಾರತದಲ್ಲಿ ಹುಲಿಗಳ ಸಂಖ್ಯೆಯು 3,682ಕ್ಕೆ ಏರಿಕೆಯಾಗಿದೆ. ಇದು ವಿಶ್ವದ ಒಟ್ಟು ಹುಲಿ ಸಂಖ್ಯೆಯ ಶೇ 75ರಷ್ಟಿದೆ. ಭಾರತದಲ್ಲಿ ಸುಮಾರು 22–27 ಸಾವಿರ ಏಷ್ಯನ್ ಆನೆಗಳಿವೆ. ಕರ್ನಾಟಕವು ದೇಶದಲ್ಲೇ ಅತಿಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯವಾಗಿದೆ. ಅಂತರರಾಷ್ಟ್ರೀಯ ಸಹಭಾಗಿತ್ವದ ಅಡಿಯಲ್ಲಿ ‘ಪ್ರಾಜೆಕ್ಟ್ ಚೀತಾ’ ಪ್ರಾರಂಭಿಸಿ 70 ವರ್ಷಗಳ ಹಿಂದೆ ಭಾರತದಲ್ಲಿ ಅಳಿದು ಹೋಗಿದ್ದ ಚೀತಾಗಳನ್ನು ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ತಂದು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಮರುಪರಿಚಯಿಸಲಾಗಿದೆ. ಇದು ಜಗತ್ತಿನ ಮೊದಲ ಖಂಡಾಂತರ ಮಾಂಸಾಹಾರಿ ಪ್ರಾಣಿ ವರ್ಗಾವಣೆ ಯೋಜನೆಯಾಗಿದೆ.

ವಿಶ್ವದ ಏಳು ಪ್ರಮುಖ ಬೆಕ್ಕಿನ ತಳಿಗಳಾದ ಹುಲಿ, ಸಿಂಹ, ಚಿರತೆ, ಹಿಮಚಿರತೆ, ಚೀತಾ, ಜಾಗ್ವಾರ್ ಮತ್ತು ಪೂಮಾ ಗಳನ್ನು ರಕ್ಷಿಸಲು ಇರುವ ಇಂಟರ್ ನ್ಯಾಷನಲ್ ಬಿಗ್ ಕ್ಯಾಟ್ ಅಲಯನ್ಸ್ ಎಂಬ ಜಾಗತಿಕ ಒಕ್ಕೂಟ ವನ್ನು ಭಾರತವೇ ಮುನ್ನಡೆಸುತ್ತಿದೆ.

ಭಾರತದಲ್ಲಿ ರಾಷ್ಟ್ರೀಯ ಉದ್ಯಾನಗಳು, ವನ್ಯಜೀವಿಧಾಮಗಳು ಮತ್ತು ಸಂರಕ್ಷಣಾ ಮೀಸಲು ಪ್ರದೇಶ ಗಳು ಸೇರಿದಂತೆ ಪ್ರಸ್ತುತ 1,000ಕ್ಕೂ ಹೆಚ್ಚು ರಕ್ಷಿತ ಪ್ರದೇಶಗಳಿವೆ. ಇಲ್ಲಿನ ಜೀವವೈವಿಧ್ಯ ಕಾಪಾಡಲು ವಿಶೇಷ ಪ್ರಯತ್ನಗಳು ನಡೆದಿವೆ. ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಗಸ್ತು ತಿರುಗಲು ಮತ್ತು ಪರಿಸರ ಮೇಲ್ವಿಚಾರಣೆ ಮಾಡಲು ಎಂ–ಸ್ಟ್ರೈಪ್ಸ್ ಎಂಬ ಡಿಜಿಟಲ್ ಅಪ್ಲಿಕೇಶನ್ ಬಳಸುತ್ತಿ ದ್ದೇವೆ. ಅಳಿವಿನ ಅಂಚಿನಲ್ಲಿರುವ ಜೀವಸಂಕುಲದ ರಕ್ಷಣೆಗೆ ಆಧುನಿಕ ತಂತ್ರಜ್ಞಾನದ ಬಳಕೆಯಾಗುತ್ತಿದೆ. ​ಕಾಜಿರಂಗ ಮತ್ತು ಜಿಮ್ ಕಾರ್ಬೆಟ್‌ನಂತಹ ರಾಷ್ಟ್ರೀಯ ಉದ್ಯಾನಗಳಲ್ಲಿ ಅಕ್ರಮ ಬೇಟೆಗಾರರನ್ನು ಪತ್ತೆಹಚ್ಚಲು ಮತ್ತು ಪ್ರಾಣಿಗಳ ಚಲನವಲನ ಗಮನಿಸಲು ಡ್ರೋನ್ ಕಣ್ಗಾವಲು ಪಡೆಗಳು ನಿಯುಕ್ತಿಗೊಂಡಿವೆ.

ಅಪರೂಪದ ಸಸ್ಯ ಪ್ರಭೇದಗಳನ್ನು ಉಳಿಸಲು ದೇಶ ದಾದ್ಯಂತ ಸ್ಥಾಪಿಸಲಾಗಿರುವ ಬೀಜ ಬ್ಯಾಂಕುಗಳು ದೇಶದ ಕೃಷಿ ಜೀವವೈವಿಧ್ಯ ಕಾಪಾಡುತ್ತಿವೆ. ರಸ್ತೆ ಮತ್ತು ರೈಲ್ವೆ ಹಳಿಗಳ ಮೇಲೆ ಪ್ರಾಣಿಗಳು ಅಪಘಾತಕ್ಕೀಡಾಗುವುದನ್ನು ತಪ್ಪಿಸಲು ‘ಎಕೋ ಬ್ರಿಡ್ಜ್’ ಮತ್ತು ಅಂಡರ್‌ಪಾಸ್‌ ನಿರ್ಮಿಸಲಾಗುತ್ತಿದೆ. ಉದಾಹರಣೆಗೆ, ನಾಗಪುರ–ಜಬಲ್ಪುರ ಹೆದ್ದಾರಿಯಲ್ಲಿ ಪ್ರಾಣಿ ಗಳಿಗಾಗಿಯೇ ವಿಶೇಷ ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದೆ.

ಪ್ರತಿ ವರ್ಷ ಮಾರ್ಚ್ 3ರಂದು ವಿಶ್ವದಾದ್ಯಂತ ‘ವಿಶ್ವ ವನ್ಯಜೀವಿ ದಿನ’ವನ್ನು ಆಚರಿಸಲಾಗುತ್ತದೆ. 1973ರ ಮಾರ್ಚ್ 3ರಂದು ‘ಅಳಿವಿನಂಚಿನಲ್ಲಿರುವ ವನ್ಯಜೀವಿ ಮತ್ತು ಸಸ್ಯವರ್ಗದ ಅಂತರರಾಷ್ಟ್ರೀಯ ವ್ಯಾಪಾರ ಸಮಾವೇಶ’ ಅಂಗೀಕಾರಗೊಂಡ ನೆನಪಿಗಾಗಿ ವಿಶ್ವಸಂಸ್ಥೆಯು ಈ ದಿನವನ್ನು ಮೀಸಲಿಟ್ಟಿದೆ. ಭೂಮಿಯ ಮೇಲಿನ ವೈವಿಧ್ಯಮಯ ಪ್ರಾಣಿ ಮತ್ತು ಸಸ್ಯ ಸಂಕುಲಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅವುಗಳ ರಕ್ಷಣೆಗೆ ಒತ್ತು ನೀಡುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.

​ಜೀವವೈವಿಧ್ಯ ಎನ್ನುವುದು ಬರೀ ಕಾಡಿನ ಪ್ರಾಣಿಗಳಿಗೆ ಸಂಬಂಧಿಸಿದ್ದಲ್ಲ. ಅದು ಮನುಕುಲದ ಅಸ್ತಿತ್ವದ ಪ್ರಶ್ನೆಯೂ ಆಗಿದೆ. ಶುದ್ಧ ಗಾಳಿ, ನೀರು ಮತ್ತು ಆಹಾರಕ್ಕಾಗಿ ನಾವು ಈ ಸಮತೋಲನದ ಮೇಲೆ ಅವಲಂಬಿತರಾಗಿದ್ದೇವೆ. ಪ್ಲಾಸ್ಟಿಕ್ ಮುಕ್ತ ಪರಿಸರ ನಮ್ಮದಾಗಬೇಕು. ಕಾಡು ಮತ್ತು ಸಮುದ್ರ ಸೇರುತ್ತಿರುವ ಪ್ಲಾಸ್ಟಿಕ್ ಅನ್ನು ತಡೆಗಟ್ಟಬೇಕು. ಶಾಲಾ-ಕಾಲೇಜುಗಳಲ್ಲಿ ವನ್ಯಜೀವಿಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಶಿಕ್ಷಣ ನೀಡಬೇಕು. ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು. ವನ್ಯಜೀವಿಗಳ ಉತ್ಪನ್ನಗಳಿಂದ ತಯಾರಿ ಸಿದ ವಸ್ತುಗಳನ್ನು ಬಹಿಷ್ಕರಿಸಬೇಕು.

ಬರೀ ಕಾನೂನುಗಳಿಂದ ಜೀವವೈವಿಧ್ಯ ಉಳಿಸಲು ಸಾಧ್ಯವಿಲ್ಲ. ವಿಜ್ಞಾನ, ತಂತ್ರಜ್ಞಾನ ಮತ್ತು ಸಾಮಾನ್ಯ ಜನರ ಸಹಭಾಗಿತ್ವ ಸೇರಿದಾಗ ಮಾತ್ರ ನಾವು ಭೂಮಿಯನ್ನು ಮುಂದಿನ ಪೀಳಿಗೆಗೆ ಉಳಿಸಿ ಕೊಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.