ADVERTISEMENT

ಸಂಗತ | ಜಾತಿ ಸಮೀಕ್ಷೆ: ಸಮಾನತೆಯತ್ತ ಹೆಜ್ಜೆ...

ರಾಘವೇಂದ್ರ ಕೆ ತೊಗರ್ಸಿ
Published 30 ಜುಲೈ 2025, 0:12 IST
Last Updated 30 ಜುಲೈ 2025, 0:12 IST
<div class="paragraphs"><p>ಸಂಗತ | ಜಾತಿ ಸಮೀಕ್ಷೆ: ಸಮಾನತೆಯತ್ತ ಹೆಜ್ಜೆ...</p></div>

ಸಂಗತ | ಜಾತಿ ಸಮೀಕ್ಷೆ: ಸಮಾನತೆಯತ್ತ ಹೆಜ್ಜೆ...

   

ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮತ್ತೆ ನಡೆಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಜ್ಜಾಗುತ್ತಿದೆ. ಆ ಕೆಲಸ ಆರಂಭ ಆಗುವ ಮುನ್ನವೇ ಆಕ್ಷೇಪಗಳೂ ವ್ಯಕ್ತವಾಗುತ್ತಿವೆ. ಕೇಂದ್ರ ಸರ್ಕಾರವೇ ಜಾತಿ ಜನಗಣತಿ ಮಾಡಲು ಉದ್ದೇಶಿಸಿರುವಾಗ ರಾಜ್ಯದ ಸಮೀಕ್ಷೆಯ ಅಗತ್ಯ ಏನಿದೆ ಎನ್ನುವುದು ಆಕ್ಷೇಪಕ್ಕೆ ಕಾರಣಗಳಲ್ಲೊಂದು. ಉದ್ದೇಶಿತ ಸಮೀಕ್ಷೆ, ಜಾತಿ ಜಾತಿಗಳ ನಡುವೆ ಅನಗತ್ಯ ಬಿರುಕು ಹುಟ್ಟಿಸುತ್ತದೆ ಎಂದೂ ಕೆಲವರು ಹೇಳುತ್ತಿದ್ದಾರೆ. ಈ ಆಕ್ಷೇಪಗಳ ಜೊತೆಗೇ, ಜಾತಿಗಳ ಶಕ್ತಿಯನ್ನು ಸಾಬೀತುಪಡಿಸುವ ತಾಲೀಮು ಕೂಡ ನಡೆಯುತ್ತಿದೆ. ಸಮುದಾಯದ ಒಳಪಂಗಡಗಳನ್ನು ಉಳಿಸಿಕೊಂಡು ತಮ್ಮ ಜಾತಿಯನ್ನು ಏಕಛತ್ರಿಯಡಿ ತರುವ ನಿಟ್ಟಿನಲ್ಲಿ ಕೆಲವು ಸ್ವಾಮೀಜಿಗಳು ಪ್ರಯತ್ನ ನಡೆಸುತ್ತಿದ್ದಾರೆ.

ವಾಸ್ತವದಲ್ಲಿ, ಕೇಂದ್ರ ಸರ್ಕಾರ ಉದ್ದೇಶಿಸಿರುವ ಜನಗಣತಿಯೂ ರಾಜ್ಯ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯೂ ಬೇರೆ ಬೇರೆ. ಮೂಲ ಸೌಕರ್ಯ ಒದಗಿಸುವ ಸರ್ಕಾರದ ಯೋಜನೆಗಳು ಇನ್ನೂ ತಲುಪದ ಅತಿ ಹಿಂದುಳಿದ ಜಾತಿ, ಬುಡಕಟ್ಟು, ಸಮುದಾಯಗಳನ್ನು ಗುರುತಿಸಿ, ಆ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ದೃಷ್ಟಿಯಲ್ಲಿ ಸಮೀಕ್ಷೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಡೆಸಲಿರುವ ಸಮೀಕ್ಷೆಗೆ ವಿಶೇಷ ಮಹತ್ವವಿದೆ.

ADVERTISEMENT

ರಾಜ್ಯವೊಂದು ಸಮೀಕ್ಷೆ ಮಾಡುವುದು ಕಾನೂನಿನ ಉಲ್ಲಂಘನೆಯೂ ಅಲ್ಲ; ಕೇಂದ್ರದ ಜಾತಿಗಣತಿಯ ವಿರುದ್ಧವೂ ಆಗುವುದಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಜಾತಿ ಕುರಿತು ಅಧ್ಯಯನ, ಅಭಿವೃದ್ಧಿ, ಯೋಜನೆ ರೂಪಿಸುವ ವಿಷಯದಲ್ಲಿ ಕೇಂದ್ರದಷ್ಟೇ ಅಧಿಕಾರ ಮತ್ತು ಜವಾಬ್ದಾರಿ ರಾಜ್ಯಕ್ಕೂ ಇದೆ. ಹೀಗಿದ್ದರೂ, ಸಮೀಕ್ಷೆಯನ್ನು ವಿರೋಧಿಸುವುದು ರಾಜ್ಯದ ಕಾನೂನಾತ್ಮಕ ಹಕ್ಕನ್ನು ವಿರೋಧಿಸಿದಂತೆ ಆಗುತ್ತದೆ. ಜೊತೆಗೆ ನಿರ್ಲಕ್ಷಿತ ಸಮುದಾಯಗಳ ಬಗೆಗಿನ ಕಾಳಜಿಯನ್ನು ನಿರ್ಲಕ್ಷಿಸಿದಂತೆ ಆಗುತ್ತದೆ. ಈ ವಿರೋಧವನ್ನು, ‘ಸಾಮಾಜಿಕ ನ್ಯಾಯದ ವಿರೋಧಿಗಳು, ಸಾಮಾಜಿಕ ಪರಾವಲಂಬಿ ಜೀವಿಗಳು ಮಾಡುತ್ತಿರುವ ಅಡ್ಡಿ’ ಎಂದು ಅರ್ಥೈಸುವ ಪ್ರತಿರೋಧದ ವಿಮರ್ಶೆಯೂ ಮತ್ತೊಂದು ಮಗ್ಗುಲಿನಿಂದ ಕೇಳುತ್ತಿದೆ.

ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪರ ಹಾಗೂ ವಿರುದ್ಧ ಅಭಿಪ್ರಾಯಗಳ ನಡುವೆ, ಸೌಲಭ್ಯ ವಂಚಿತ ಸಮುದಾಯಗಳ ಹಿತಾಸಕ್ತಿಯ ಬಗ್ಗೆ ಯೋಚಿಸಿದಾಗ ಸಮೀಕ್ಷೆಯ ಅಗತ್ಯ ಅರಿವಾಗುತ್ತದೆ. ಸರ್ಕಾರದ ಲೆಕ್ಕಕ್ಕೇ ಸಿಗದ ಸೂಕ್ಷ್ಮ– ಅತಿಸೂಕ್ಷ್ಮ ಜಾತಿ, ಬುಡಕಟ್ಟು ಸಮುದಾಯ, ಅಲೆಮಾರಿಗಳ ಕುರಿತು ನಿಖರ ಅಂಕಿಅಂಶಗಳು ಯಾವ ವಿಶ್ವವಿದ್ಯಾಲಯ, ಆಯೋಗ, ನಿಗಮಗಳ ಬಳಿಯೂ ಇಲ್ಲ. ಭಾರತ, ಎಲ್ಲ ಜಾತಿ ಸಮುದಾಯಗಳ ದೇಶ ಎನ್ನುವುದನ್ನು ಸಂವಿಧಾನ ಸ್ಪಷ್ಟವಾಗಿ ಹೇಳಿದೆ. ಹೀಗಿರುವಾಗ, ಹಲವು ಜಾತಿಯವರು ಇರುವ ದೇಶದೊಳಗೆ ಆ ಎಲ್ಲ ಜಾತಿಗಳ ದತ್ತಾಂಶ ಇರುವುದು ಅಗತ್ಯ. ಆ ಮಾಹಿತಿ ಸಂಗ್ರಹಿಸಲು ಸಮೀಕ್ಷೆಯನ್ನು ಹೊರತುಪಡಿಸಿದ ಅನ್ಯಮಾರ್ಗ ಇಲ್ಲ.

ಉದ್ದೇಶಿತ ಸಮೀಕ್ಷೆ, ರಾಜ್ಯದ ಎಲ್ಲ ಜಾತಿ, ಬುಡಕಟ್ಟುಗಳ ಪ್ರಮಾಣ, ಲಿಂಗ, ವಯಸ್ಸು ಸೇರಿದಂತೆ ಅವರ ಶಿಕ್ಷಣ, ಉದ್ಯೋಗ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯ ವಿವರವನ್ನು ನೀಡಬೇಕು.

ಸಣ್ಣಪುಟ್ಟ ಜಾತಿ ಸಮುದಾಯಗಳು, ಸಂಖ್ಯಾಬಲ ಇಲ್ಲದ ಬುಡಕಟ್ಟು ಸಮುದಾಯಗಳು, ಧಾರ್ಮಿಕ ಅಲ್ಪಸಂಖ್ಯಾತರು, ಅರೆಅಲೆಮಾರಿಗಳು, ಭೂರಹಿತರು, ಗೇಣಿದಾರರು, ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು, ಪರಿಶಿಷ್ಟ ಜಾತಿ– ಪಂಗಡಗಳು, ಅರೆಉದ್ಯೋಗದಲ್ಲಿರುವ ಸಮುದಾಯಗಳ ಸಂಪೂರ್ಣ ಮಾಹಿತಿಯನ್ನು ಸಮೀಕ್ಷೆ ನೀಡುವಂತಾಗಬೇಕು. ಈ ಆಶಯದಲ್ಲಿ ಸಮೀಕ್ಷೆ ನಡೆಸಿದ್ದೇ ಆದರೆ, ಅದು ವಸ್ತುಸ್ಥಿತಿಯನ್ನು ಪ್ರತಿಫಲಿಸುವ ಮೊದಲ ಅಧಿಕೃತ ದಾಖಲೆಯಾಗುತ್ತದೆ. ಈ ಸಂಶೋಧನಾ ಮಾದರಿಯಲ್ಲಿಯೇ ಸಮೀಕ್ಷೆಯನ್ನು ರೂಪಿಸಬೇಕಿದೆ. ಸರ್ಕಾರ ಈ ತನಕ ಅನೇಕ ಸಮುದಾಯಗಳನ್ನು ತಲುಪಲು ಏಕೆ ಸಾಧ್ಯವಾಗಿಲ್ಲ ಎನ್ನುವುದಕ್ಕೆ ಸಮೀಕ್ಷೆ ಉತ್ತರ ನೀಡುವಂತೆ ಆಗಬೇಕು.  

ಸ್ವಾತಂತ್ರ್ಯೋತ್ತರ ಭಾರತದಲ್ಲಿ, ಏಳೂವರೆ ದಶಕಗಳ ನಂತರವೂ, ಸೌಲಭ್ಯ ವಂಚಿತ ಸಮುದಾಯಗಳ ಸ್ಥಿತಿಯ ಬಗ್ಗೆ ಮರುಕಪಡುವುದಕ್ಕಿಂತ, ಅದಕ್ಕೆ ಕಾರಣ ಕಂಡುಕೊಳ್ಳಲು ಸಮೀಕ್ಷೆಯ ಅಗತ್ಯವಿದೆ. ಜಾತಿ ಅಥವಾ ಪಂಗಡಗಳ ಸಂಖ್ಯಾಬಲದ ಅನುಸಾರ ಯೋಜನೆಗಳನ್ನು ರೂಪಿಸಬೇಕಿದೆ. ಕುಲಕಸುಬು ಆಧಾರಿತ ಸಮುದಾಯಗಳಿಗೆ ಕೌಶಲ ಕಲಿಸುವ ಹಾಗೂ ಆಧುನಿಕ ಸೌಲಭ್ಯ ನೀಡುವ ಕೆಲಸವೂ ಆಗಬೇಕು ಎನ್ನುವುದಾದರೆ, ಅದಕ್ಕೆ ಕುಲಶಾಸ್ತ್ರೀಯ ಮಾದರಿಯ ಸಮೀಕ್ಷೆಯೇ ಪರಿಹಾರ. ಈ ಹಿನ್ನೆಲೆಯಲ್ಲಿ ಸಮೀಕ್ಷೆಯನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು.

ಈ ಹಿಂದೆ ಕಾಂತರಾಜ ಆಯೋಗದ ಸಮೀಕ್ಷಾ ವರದಿಯ ಲೋಪಗಳು ಈಗ ಎಚ್ಚರದ ಕಣ್ಣಾಗಬೇಕು. ಜಾತಿ ಸಮೀಕ್ಷೆಯ ಬಗ್ಗೆ ಪ್ರಶ್ನೆ, ಅನುಮಾನ ಇರುವವರು ಮಾಡಬೇಕಾದುದು, ಸಮೀಕ್ಷೆ ವಸ್ತುನಿಷ್ಠ ಮತ್ತು ಪಾರದರ್ಶಕವಾಗಿ ನಡೆಯುವಂತೆ ಸರ್ಕಾರವನ್ನು ಆಗ್ರಹಿಸುವುದು. ಸಮೀಕ್ಷೆ ವಸ್ತುನಿಷ್ಠವಾಗಿ ನಡೆದಾಗ, ಮೀಸಲು ವರ್ಗೀಕರಣಕ್ಕೂ ವೈಜ್ಞಾನಿಕ ನ್ಯಾಯಮಾರ್ಗ ಸಿಗುತ್ತದೆ. ಜಾತಿಬಾಧೆಗೆ ಒಳಗಾದವರ ಏಳಿಗೆಗೆ ಜಾತಿ ಸಮೀಕ್ಷೆ ವರವಾಗಲಿ. 

ಜಾತಿ ಸಮೀಕ್ಷೆ ವಿಷಯದಲ್ಲಿ ತೆಲಂಗಾಣ ಅಪರೂಪದ ಮಾದರಿಯನ್ನು ರೂಪಿಸಿಕೊಟ್ಟಿದೆ. ದೇಶದ ಮೊದಲ ಜಾತಿ ಸಮೀಕ್ಷೆಯನ್ನು ಅಧಿಕೃತಗೊಳಿಸಿದ ರಾಜ್ಯವೂ ಅದಾಗಿದೆ. ತೆಲಂಗಾಣದಲ್ಲಿ ಆದುದು ಕರ್ನಾಟಕದಲ್ಲಿ ಏಕೆ ಸಾಧ್ಯವಿಲ್ಲ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.