ರಾಜ್ಯದ ಎಲ್ಲಾ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಮಕ್ಕಳ ಸಹಾಯವಾಣಿ ‘1098’ ಅನ್ನು ಗೋಡೆಗಳ ಮೇಲೆ ದೊಡ್ಡದಾಗಿ ಬರೆಸಲು ಶಿಕ್ಷಣ ಇಲಾಖೆಯು ಆದೇಶಿಸಿದೆ. ಈ ಆದೇಶಕ್ಕೆ ವಿಶೇಷ ಮಹತ್ವವಿದೆ.
ಗೋಡೆ ಬರಹವಾಗಿ ಮಾತ್ರವಲ್ಲ, ಪಠ್ಯಪುಸ್ತಕದ ಪುಟಗಳ ತಳಭಾಗದಲ್ಲೂ ಸಹಾಯವಾಣಿಯ ಮೊಹರು ಇರಬೇಕು, ಶಾಲೆಯ ಜಾಲತಾಣದಲ್ಲೂ ಈ ಸಂಖ್ಯೆ ಎದ್ದು ಕಾಣುವಂತೆ ತೋರಿಸಬೇಕು, ಮಕ್ಕಳ ಬೆಳಗಿನ ಸಭೆಯಲ್ಲೂ ಸಹಾಯವಾಣಿಯ ಮಹತ್ವ ವಿವರಿಸಬೇಕೆಂದು ಸುತ್ತೋಲೆ ತಿಳಿಸಿದೆ. ಪ್ರತಿ ಮಗುವಿಗೂ ಪ್ರತಿನಿತ್ಯ ಈ ಸಂಖ್ಯೆ ಕಣ್ಣಿಗೆ ಬೀಳುತ್ತಿರಬೇಕು; ಹತ್ತು ಒಂಬತ್ತು ಎಂಟು ಎಂಬುದು ಕಂಠಪಾಠವಾಗಬೇಕು ಮತ್ತು ಅಗತ್ಯ ಬಿದ್ದಾಗ ಮಕ್ಕಳು ಯಾವುದೇ ಹಿಂಜರಿಕೆಯಿಲ್ಲದೆ ಅದನ್ನು ಬಳಸಬೇಕು ಎಂಬುದು ಸರ್ಕಾರದ ಚಿಂತನೆ.
1996ರ ಸುಮಾರಿಗೆ ಮುಂಬೈನಲ್ಲಿ ಪ್ರಾರಂಭವಾಗಿ ನಂತರದಲ್ಲಿ ದೇಶದಾದ್ಯಂತ ವಿಸ್ತರಣೆಗೊಂಡ ಮಕ್ಕಳ ಸಹಾಯವಾಣಿಗೆ ಈಗ ದಿಢೀರೆಂದು ಮಹತ್ವ ನೀಡಲು ಕಾರಣವಿದೆ. ನಮ್ಮ ರಾಜ್ಯದಲ್ಲಿ ಕಳೆದ ವರ್ಷ ಏಳುನೂರಕ್ಕೂ ಹೆಚ್ಚು ಬಾಲ್ಯವಿವಾಹಗಳು ವರದಿಯಾಗಿವೆ. ಎಂಟು ಸಾವಿರಕ್ಕೂ ಅಧಿಕ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ, ಇದರಲ್ಲಿ ಅರ್ಧದಷ್ಟು ಪೋಕ್ಸೊ ಕೇಸುಗಳು!
ಅಂದರೆ, ಪ್ರತಿದಿನ ಸರಾಸರಿ ಹತ್ತು ಮಕ್ಕಳು ಲೈಂಗಿಕ ಕಿರುಕುಳದ ಕಾರಣ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಿದ್ದಾರೆ. ಮಕ್ಕಳಿಗೆ ಅವರಿಗಾಗಿಯೇ ಇರುವ ತುರ್ತು ಸೇವೆಯ ಸಹಾಯವಾಣಿಯ ಉಪಯುಕ್ತತೆಯನ್ನು ಮನದಟ್ಟು ಮಾಡಿಸಿದಾಗ ತಮ್ಮ ಮೇಲಾಗುವ ದೈಹಿಕ, ಮಾನಸಿಕ, ಲೈಂಗಿಕ ಕಿರುಕುಳ, ಹಲ್ಲೆ, ಬಲವಂತದ ಮದುವೆ, ಹಕ್ಕುಚ್ಯುತಿಯಂತಹ ಪ್ರಕರಣಗಳನ್ನು ಸಹಾಯವಾಣಿಯ ಗಮನಕ್ಕೆ ತಂದು ಅಗತ್ಯ ರಕ್ಷಣೆ, ಆರೈಕೆ ಪಡೆಯುತ್ತಾರೆ.
‘ಯಾವುದು ಕಣ್ಣಿನಿಂದ ಮರೆಯಾಗುತ್ತದೆಯೋ ಅದು ಮನಸ್ಸಿನಿಂದಲೂ ದೂರವಾಗುತ್ತದೆ’ ಎಂಬುದು ಅನುಭವದ ನುಡಿ. ಹೆಚ್ಚಿನ ಮಕ್ಕಳಿಗೆ ಸದಾ ತಮ್ಮ ಸಹಾಯಕ್ಕೆ ಧಾವಿಸುವ, 24x7 ಸಮಯವೂ ಸಕ್ರಿಯವಾಗಿರುವ ಹೀಗೊಂದು ಉಚಿತ ವ್ಯವಸ್ಥೆಯಿದೆಯೆಂಬ ಅರಿವಿಲ್ಲ.
ಕಾನೂನು, 18 ವರ್ಷದೊಳಗಿನ ಎಲ್ಲರನ್ನೂ ಮಕ್ಕಳೆಂದೇ ಪರಿಗಣಿಸುತ್ತದೆ. ಎಳೆಯರು ತಮ್ಮ ಮೇಲಾಗುವ ಶೋಷಣೆ, ಕಿರುಕುಳ, ದೌರ್ಜನ್ಯಗಳನ್ನು ಅದು ಮನೆಯಲ್ಲಾಗಲಿ, ಶಾಲೆಯಲ್ಲಾಗಲಿ ತಮ್ಮ ಪೋಷಕರು, ಶಿಕ್ಷಕರೊಂದಿಗೆ ಹಂಚಿಕೊಳ್ಳಲು ಸಹಜವಾಗಿಯೇ ಹಿಂಜರಿಯುತ್ತಾರೆ. ಅವರ ಈ ಅಸಹಾಯಕತೆಯ ಕಾರಣ, ಕ್ರೌರ್ಯ ಮತ್ತಷ್ಟು ಹೆಚ್ಚುತ್ತದೆ.
ಮಕ್ಕಳಿಗೆ ಸುರಕ್ಷಿತ ವಾತಾವರಣ, ಉತ್ತಮ ಭವಿಷ್ಯ ಖಾತರಿಪಡಿಸುವುದು, ಅವರ ಯಾವುದೇ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸುವುದು ಆಡಳಿತದ ಹೊಣೆ. ಈ ನಿಟ್ಟಿನಲ್ಲಿ ಸಹಾಯವಾಣಿಯ ಸೌಲಭ್ಯವಲ್ಲದೆ, ಪ್ರತಿ ಶಿಕ್ಷಣ ಸಂಸ್ಥೆಯಲ್ಲೂ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ರಚಿಸಬೇಕೆಂದು ಸರ್ಕಾರದ ಆದೇಶವಿದೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಆಡಳಿತ ಮಂಡಳಿಯ ಪ್ರತಿನಿಧಿಗಳುಳ್ಳ ಈ ಸಮಿತಿ ನಿಯಮಿತವಾಗಿ ಸಭೆ ಸೇರಿ ಮಕ್ಕಳ ಕುಂದು–ಕೊರತೆ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಮಕ್ಕಳ ಹಕ್ಕುಗಳು, ಪೋಕ್ಸೊ ಕಾಯ್ದೆಯಂತಹ ವಿಚಾರಗಳಲ್ಲಿ ಅರಿವು ಮೂಡಿಸಬೇಕೆಂಬ ನಿರ್ದೇಶನವಿದೆ.
ಸಹಾಯವಾಣಿ ವಿಷಯದಲ್ಲಿ ನಮ್ಮ ಬಹುತೇಕ ಮಕ್ಕಳು ಮುಗ್ಧರು. ಮಕ್ಕಳ ಗ್ರಾಮ ಸಭೆ, ಶಾಲಾ ಕಾರ್ಯಕ್ರಮಗಳಲ್ಲಿ ಸಹಾಯವಾಣಿಯ ಬಗ್ಗೆ ಎಷ್ಟು ಮಕ್ಕಳಿಗೆ ಗೊತ್ತಿದೆ ಎಂಬ ಪ್ರಶ್ನೆ ಮುಂದಿಟ್ಟರೆ ಸಿಗುವ ಪ್ರತಿಕ್ರಿಯೆ ನಿರಾಶಾದಾಯಕ. ಬೆರಳೆಣಿಕೆಯಷ್ಟು ಎಳೆಯರನ್ನು ಬಿಟ್ಟರೆ ಉಳಿದವರಿಗೆ ಈ ಸಂಖ್ಯೆಯಾಗಲೀ, ಅದರ ಮಹತ್ವವಾಗಲೀ ತಿಳಿದಿಲ್ಲ. ಹಾಗಾಗಿಯೇ ಬಾಲ್ಯವಿವಾಹ, ಬಾಲಕಾರ್ಮಿಕರು, ದೇವದಾಸಿ ಪದ್ಧತಿ, ಮಕ್ಕಳ ಕಳ್ಳಸಾಗಣೆ, ಲೈಂಗಿಕ ದೌರ್ಜನ್ಯ ಸೇರಿದಂತೆ ಮಕ್ಕಳ ಮೇಲಾಗುತ್ತಿರುವ ವಿವಿಧ ಕ್ರೌರ್ಯಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.
ಸಹಾಯವಾಣಿಯೆಂಬ ಆಪ್ತರಕ್ಷಕ ವ್ಯವಸ್ಥೆಯನ್ನು ಎಳೆಯರಿಗೆ ಆಪ್ತವಾಗಿಸಿ ಅವರ ಸಮಗ್ರ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ವ್ಯಾಪಕ ಪ್ರಚಾರ ನೀಡುವ ಆಡಳಿತದ ಈ ನಡೆ ಖಂಡಿತವಾಗಿಯೂ ಪ್ರಶಂಸಾರ್ಹ. ಹೌದು, ಮಕ್ಕಳ ಸಹಾಯವಾಣಿ ಎಳೆಯರ ಸಂವಿಧಾನಬದ್ಧ ಹಕ್ಕುಗಳನ್ನು ರಕ್ಷಿಸುವಲ್ಲಿ, ಅವರ ಸುರಕ್ಷಿತ ಭವಿಷ್ಯ ಖಚಿತಪಡಿಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.
ಸಹಾಯವಾಣಿಯ ನೆರವಿನಿಂದ ಮಕ್ಕಳು ತಮ್ಮ ಸಂಕಟಗಳಿಗೆ ಪರಿಹಾರ ಕಂಡುಕೊಂಡ ಅನೇಕ ನಿದರ್ಶನಗಳಿವೆ. ಶಿಕ್ಷಣ ಪಡೆಯುವ ತನ್ನ ಹಕ್ಕಿಗೆ ಚ್ಯುತಿಯಾಗುತ್ತಿದೆಯೆಂಬ ಕಾರಣಕ್ಕೆ ಮನೆಗೆ ವಿದ್ಯುತ್ ಸಂಪರ್ಕ ಪಡೆದುಕೊಂಡ, ಶೌಚಾಲಯ ಸೌಲಭ್ಯ ಪಡೆದುಕೊಂಡ, ಕುಡಿಯುವ ನೀರಿನ ಸಂಪರ್ಕ ಪಡೆದ, ಬಾಲ್ಯವಿವಾಹದಿಂದ ಬಚಾವಾದ, ಬಂಧುಗಳು, ಶಿಕ್ಷಕರ ಲೈಂಗಿಕ ಕಿರುಕುಳದಿಂದ ಪಾರಾದ, ಮನೆಗೆ ರಸ್ತೆ ಸಂಪರ್ಕ ಪಡೆದುಕೊಂಡ ಹಲವು ಉದಾಹರಣೆಗಳು ನಮ್ಮ ಕಣ್ಣೆದುರುಗಿವೆ.
ಸಹಾಯವಾಣಿಯ ಇಂತಹ ಯಶೋಗಾಥೆಗಳನ್ನು ಎಳೆಯರೊಡನೆ ಹಂಚಿಕೊಳ್ಳಬೇಕು. ವ್ಯಾಪಕ ಪ್ರಚಾರದ ಜೊತೆಗೆ ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ಮಕ್ಕಳ ಗ್ರಾಮಸಭೆಯನ್ನು ಪರಿಣಾಮಕಾರಿಯಾಗಿ ಆಯೋಜಿಸಿ, ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿ, ಅಹವಾಲುಗಳನ್ನು ಆಲಿಸಿ, ಪರಿಹಾರ ಕಂಡುಕೊಳ್ಳಬೇಕು. ಸ್ವಸ್ಥ ನಾಗರಿಕ ಸಮಾಜ ಕಟ್ಟಲು ಅರಿವೆಂಬ ಅಸ್ತ್ರ ಮೊನಚಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.