ADVERTISEMENT

ಅಲ್ಲಿದೆ ನಮ್ಮನೆ!

ಗುರು ಪಿ.ಎಸ್‌
Published 25 ಡಿಸೆಂಬರ್ 2019, 19:45 IST
Last Updated 25 ಡಿಸೆಂಬರ್ 2019, 19:45 IST
ಚುರುಮುರಿ
ಚುರುಮುರಿ   

‘ಭಕ್ತ ಕಣ್ತೆರೆ, ನಿನ್ನ ಭಕ್ತಿಗೆ ಮೆಚ್ಚಿದ್ದೇನೆ. ಅದೇನು ವರ ಬೇಕೋ ಕೇಳು...’

‘ನಿನ್ನ ಕಂಚಿನ ಕಂಠ ಕೇಳಿ ಕೃತಾರ್ಥನಾದೆ ದೇವ. ಸಣ್ಣದೊಂದು ಕೋರಿಕೆ ಇತ್ತು’.

‘ಸಣ್ಣದೋ, ದೊಡ್ಡದೋ ಬೇಗ ಕೇಳು. ಮುಂಜಾನೆಯಿಂದ ಭಕ್ತರ ಕೋರಿಕೆ ಕೇಳಿ ಕೇಳಿ ಸುಸ್ತಾಗಿದ್ದೇನೆ’.

ADVERTISEMENT

‘ನಿನ್ನ ಲೋಕದಲ್ಲಿರುವ ನನ್ನ ಮನೆಯ ವಿಳಾಸ ಕೊಡು’.

‘ಏನಿದು ಉದ್ಧಟತನ ಭಕ್ತ. ನಿನ್ನ ಮನೆ ಇಲ್ಲೇಕೆ ಇರುತ್ತದೆ?’

‘ಕೋಪಗೊಳ್ಳದಿರು ದೇವ, ಇಲ್ಲಿರುವುದು ಸುಮ್ಮನೆ, ಅಲ್ಲಿರುವುದೇ ನಮ್ಮನೆ ಎನ್ನುತ್ತಾರಲ್ಲ. ಹಾಗಾಗಿ, ನಿನ್ನ ಲೋಕದಲ್ಲಿ ನನ್ನ ಮನೆ ಇರಲೇಬೇಕೆಂಬ ಖಾತ್ರಿಯಲ್ಲಿ ಕೇಳಿದೆ’.

‘ಭರತ ಖಂಡದ ಅನೇಕ ಭಕ್ತರು ಇದೇ‌ ಕೋರಿಕೆ ಇಡುತ್ತಿದ್ದೀರಲ್ಲ, ಏನು ಕಾರಣ?’

‘ನಾವೆಲ್ಲರೂ ನಮ್ಮ ಶಾಶ್ವತ ವಿಳಾಸವನ್ನು ನೀಡಬೇಕಾಗಿದೆ ದೇವ, ಇದು ರಾಜಾಜ್ಞೆ’.

‘ಎಲ್ಲರೂ ಕೊಡಬೇಕೆ?’

‘ಆಜ್ಞೆಯ ಪ್ರಕಾರ, ಮೂಲನಿವಾಸಿಗಳು ಕೊಡಬೇಕೆಂದಿಲ್ಲ‌. ಆದರೆ, ನಾವೇ ಮೂಲ
ನಿವಾಸಿಗಳು ಅನ್ನೋ ದಾಖಲೆಗೆ ಏನಾದರೂ ಕೊಡಬೇಕು‌. ಒಟ್ಟಿನಲ್ಲಿ ಸರದಿಯಲ್ಲಿ ನಿಂತು ಸಾಯಬೇಕು. ಇಲ್ಲಿ ಸಾಯುವುದಕ್ಕಿಂತ ಅಲ್ಲಿಯೇ ಬಂದುಬಿಡೋಣ ಅಂತ ನಿನಗೆ ಮೊರೆ ಇಟ್ಟೆ’.

‘ನಿನಗೆ ಅನ್ನ ಬೇಕಾ ಕೇಳು ನೀಡುತ್ತೇನೆ, ಕೆಲಸ ಬೇಕಾ ಕೇಳು ಕೊಡುತ್ತೇನೆ. ಅದು ಬಿಟ್ಟು ವಿಳಾಸವೇಕೆ‌... ಮನೆ ಇಲ್ಲಿದೆ ಎಂದುಕೊಂಡು ಎಲ್ಲರೂ ಇಲ್ಲಿಗೇ ಬಂದರೆ ನನ್ನ ಗತಿ ಏನು?’

‘ಉದ್ಯೋಗ ಬೇಡ, ದುಡಿಮೆಗೆ ತಕ್ಕ ಹಣವೂ ಬೇಡ... ಅಡ್ರೆಸ್ ದಯಪಾಲಿಸು ದೇವ, ಅಡ್ರೆಸ್’.

‘ಭರತ ಖಂಡದ ಎಲ್ಲರಿಗೂ ವಿಳಾಸ ಕಲ್ಪಿಸು
ವಷ್ಟು ದೊಡ್ಡ ಲೋಕ ನನ್ನದಲ್ಲ. ಬೇಕಾದರೆ, ಜೈಲಿಗೆ ಹೋಗಿ ಬಂದವರು, ನಕಲಿ ಪದವಿ ಪ್ರಮಾಣಪತ್ರ ಹೊಂದಿದವರನ್ನು ಕಳಿಸು. ನರಕದಲ್ಲಿ ವ್ಯವಸ್ಥೆ ಮಾಡುತ್ತೇನೆ...’

‘ಅಯ್ಯೋ ದೇವ, ಇದೇನಿದು... ನಮ್ಮನ್ನು ಆಳುವವರ ಬುಡಕ್ಕೇ ಕೊಡಲಿಯೇಟು!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.