ADVERTISEMENT

ಸಂಗತ: ‘ನೈತಿಕಕ್ಷಾಮ’ದ ಸುಳಿಯಲ್ಲಿ ಚಲನಚಿತ್ರ

ರಂಜನೆಯ ಸೂತ್ರಕ್ಕೆ ಜೋತುಬಿದ್ದಿರುವ ಕನ್ನಡ ಸಿನಿಮಾ, ಸಾಮಾಜಿಕ ಹೊಣೆಗಾರಿಕೆ ಮರೆತಿದೆ. ಸಿನಿಮಾಕ್ಕೆ ನೈತಿಕತೆ ಅಗತ್ಯ ಎನ್ನುವ ನಂಬಿಕೆಯಿಂದ ದೂರವಾಗುತ್ತಿದೆ.

ರಾಜಕುಮಾರ ಕುಲಕರ್ಣಿ
Published 1 ಡಿಸೆಂಬರ್ 2025, 23:30 IST
Last Updated 1 ಡಿಸೆಂಬರ್ 2025, 23:30 IST
..
..   

ಗೋವಾದಲ್ಲಿ ಇತ್ತೀಚೆಗೆ ನಡೆದ 56ನೇ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಟ ಅಮೀರ್‌ಖಾನ್ ತಮ್ಮ ಸಿನಿಮಾಗಳ ಕಥಾವಸ್ತುವಿನ ಕುರಿತು ಹೇಳಿರುವುದು ಹೀಗೆ: ‘ನಾನು ಸಿನಿಮಾಕ್ಕಾಗಿ ಆಯ್ದುಕೊಂಡ ಅಸಾಂಪ್ರದಾಯಿಕ ಆಯ್ಕೆಗಳು ಜನರೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ’. ಈ ಮಾತು ಸಿನಿಮಾದ ಕಥೆ ಜನರ ಬದುಕಿನೊಂದಿಗೆ ಬೆಸೆದುಕೊಂಡಿರಬೇಕು ಎನ್ನುವುದನ್ನು ಧ್ವನಿಸುತ್ತದೆ. ಬದುಕಿನ ಕನ್ನಡಿಯಾಗಿ ಒಂದು ನೈತಿಕ ಚೌಕಟ್ಟಿನಲ್ಲಿ ಸಿನಿಮಾ ರೂಪುಗೊಳ್ಳಬೇಕು. ದುರಂತವೆಂದರೆ, ಇಂದಿನ ಸಿನಿಮಾಗಳಲ್ಲಿ ನೀತಿ ಹಿನ್ನೆಲೆಗೆ ಸರಿದಿದೆ.

ಸಿನಿಮಾಗಳಲ್ಲಿ ನಟರು ಮಚ್ಚು, ಲಾಂಗು, ಬಂದೂಕು ಹಿಡಿದು ರಕ್ತದೋಕುಳಿ ಹರಿಸುತ್ತಿದ್ದಾರೆ. ಏನೆಲ್ಲ ಅಪರಾಧಗಳನ್ನು ಮಾಡಿಯೂ ನಾಯಕ ಅಂತಿಮವಾಗಿ ಆದರ್ಶಪ್ರಾಯನಾಗಿ ಬಿಂಬಿತನಾಗುತ್ತಿದ್ದಾನೆ. ನಾಯಕ ನಟರನ್ನು ಆರಾಧಿಸುವ ಮತ್ತು ಸಿನಿಮಾದ ಕಥೆಯನ್ನೇ ಸತ್ಯವೆಂದು ನಂಬುವ ಪ್ರೇಕ್ಷಕರಿರುವಾಗ, ಸಮಾಜವನ್ನು ಸರಿದಾರಿಯಲ್ಲಿ ಮುನ್ನಡೆಸುವ ಸಿನಿಮಾಗಳು ಬೇಕು.

ಈ ಹಿಂದೆ ನಿರ್ಮಾಣಗೊಳ್ಳುತ್ತಿದ್ದ ಸಿನಿಮಾಗಳಲ್ಲಿ ಒಂದು ಸಂದೇಶವಿರುತ್ತಿತ್ತು. ಕಲಾವಿದರು ಮತ್ತು ತಂತ್ರಜ್ಞರಲ್ಲಿ ಸಿನಿಮಾದ ಮೂಲಕ ಮೌಲ್ಯವನ್ನು ಬೋಧಿಸುವ ಬದ್ಧತೆ ಇರುತ್ತಿತ್ತು. ಕನ್ನಡ ಸಿನಿಮಾರಂಗದಲ್ಲಂತೂ ಅನೇಕ ಕಾದಂಬರಿಗಳು ಕಥಾವಸ್ತುವಾಗಿ, ಮೌಲ್ಯಪ್ರಧಾನ ಸಿನಿಮಾಗಳು ನಿರ್ಮಾಣವಾಗಲು ಕಾರಣವಾದವು. ಸಾಹಿತ್ಯಲೋಕದ ಕೆಲವು ಸೃಜನಶೀಲರು ಸಿನಿಮಾಗಳಿಗೆ ಕಥೆ–ಹಾಡುಗಳನ್ನು ಬರೆದರು. ಕುವೆಂಪು, ಬೇಂದ್ರೆ ಅವರಂಥ ಸಾಹಿತ್ಯಶ್ರೇಷ್ಠರ ಕವಿತೆಗಳು ಸಿನಿಮಾಗಳಲ್ಲಿ ಗೀತೆಗಳಾಗಿವೆ.

ADVERTISEMENT

ಇಂದಿನ ನಾಯಕ ನಟರು ಏಕಕಾಲಕ್ಕೆ ನಾಯಕ, ಖಳ ಮತ್ತು ವಿದೂಷಕ– ಎಲ್ಲ ಪಾತ್ರಗಳಲ್ಲಿ ಅಭಿನಯಿಸುವ ಸಕಲಕಲಾವಲ್ಲಭರು! ಈ ಬೆಳವಣಿಗೆ ಸಿನಿಮಾಗಳಲ್ಲಿ ಕಥೆ ಮೂಲೆಗುಂಪಾಗಿ ನಾಯಕ ನಟರು ವಿಜೃಂಭಿಸಲು ಕಾರಣವಾಗಿದೆ. ನಾಯಕಪ್ರಧಾನ ಸಿನಿಮಾಗಳಲ್ಲಿ ರಂಜನೆ ಮುನ್ನೆಲೆಗೆ ಬಂದು ನೀತಿ ಹಿನ್ನೆಲೆಗೆ ಸರಿದಿದೆ. ಮನರಂಜನೆಯ ಹೆಸರಿನಲ್ಲಿ ಹಿಂಸೆಯನ್ನು ವೈಭವೀಕರಿಸುವ ಮತ್ತು ಮೈನವಿರೇಳುವ ದೃಶ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ನಾಯಕ ಮತ್ತು ದೃಶ್ಯ ಪ್ರಧಾನ ಸಿನಿಮಾ
ಗಳಲ್ಲಿ ಉತ್ತಮ ಸಂದೇಶ ಸಾರುವ ಕಥೆಯನ್ನು ಕಣ್ಣಿಗೆ ದುರ್ಬೀನು ಹಾಕಿಕೊಂಡು ಹುಡುಕಬೇಕಾಗಿದೆ. ಕುಡಿತ, ಧೂಮಪಾನ, ಕೊಲೆ, ಅತ್ಯಾಚಾರದಂತಹ ದೃಶ್ಯಗಳು ಸಾಮಾನ್ಯವಾಗಿವೆ. ಇಂತಹ ಸಿನಿಮಾಗಳು ಪ್ರೇಕ್ಷಕರ ಅಭಿರುಚಿಯನ್ನು ಬದಲಿಸಿ ಅವರನ್ನು ತಪ್ಪುದಾರಿಗೆ ಎಳೆಯುತ್ತಿವೆ.

ಪ್ರೇಕ್ಷಕರಿಗೆ ಮನರಂಜನೆಯನ್ನು ಒದಗಿಸುವುದೇ ಆದ್ಯತೆ ಆಗಿರುವುದರಿಂದ ನೈಜತೆಗೆ ದೂರವಾದ ಸಿನಿಮಾಗಳು ನಿರ್ಮಾಣಗೊಳ್ಳುತ್ತಿವೆ. ಸಿನಿಮಾದ ಹಾಡು–ಹೊಡೆದಾಟಗಳಲ್ಲಿ ಕೃತಕತೆ ಎದ್ದು ಕಾಣುತ್ತಿದೆ. ಪ್ರೇಕ್ಷಕರನ್ನು ಆಕರ್ಷಿಸಲೆಂದು ಗ್ರಾಫಿಕ್ಸ್‌ ತಂತ್ರಜ್ಞಾನದ ಸಹಾಯದಿಂದ ಚೇತೋಹಾರಿ ದೃಶ್ಯಗಳನ್ನು ಸೃಷ್ಟಿಸಲಾಗುತ್ತಿದೆ. ಕೊಲೆಯಂತಹ ಘಾತುಕ ಕೃತ್ಯವನ್ನೂ ಸಿನಿಮಾಗಳಲ್ಲಿ ರಂಜಕ ನೆಲೆಯಲ್ಲಿ ತೋರಿಸಲಾಗುತ್ತಿದೆ. ಸಿನಿಮಾಗಳಲ್ಲಿ ಸಹಜ ಎನ್ನುವಂತೆ ತೋರಿಸುವ
ಅಪರಾಧ ಕೃತ್ಯಗಳನ್ನು ನಿಜಜೀವನದಲ್ಲಿ ಅನುಕರಿಸುವವರ ಸಂಖ್ಯೆ ಹೆಚ್ಚುತ್ತಿದೆ. ಒಟ್ಟಾರೆ ಸಿನಿಮಾ ನಿರ್ಮಾಣದ ಹೊಸಸೂತ್ರವನ್ನು ರೂಪಿಸುವ ಧಾವಂತದಲ್ಲಿ ಚಿತ್ರರಂಗದ ಜನ, ಸಿನಿಮಾ ಮಾಧ್ಯಮವನ್ನು ನೀತಿಯ ಚೌಕಟ್ಟಿನಿಂದ ಹೊರಗೆ ತಂದಿರುವರು.

ಮನರಂಜನೆಯನ್ನೇ ಮೂಲ ಉದ್ದೇಶವಾಗಿಟ್ಟುಕೊಂಡು ಸಿನಿಮಾ ತಯಾರಿಸುತ್ತಿರುವ ಸಂದರ್ಭದಲ್ಲೇ, ಈ ಬದಲಾವಣೆಗೆ ಪರ್ಯಾಯವಾಗಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಸಿನಿಮಾಗಳು ವಿವಿಧ ಭಾಷೆಗಳಲ್ಲಿ ನಿರ್ಮಾಣಗೊಳ್ಳುತ್ತಿರುವುದು ಸಮಾಧಾನದ ಸಂಗತಿ. ವಿಪರ್ಯಾಸವೆಂದರೆ, ಈ ಪ್ರಕಾರದ ಸಿನಿಮಾಗಳನ್ನು ಮುಖ್ಯಧಾರೆಯಿಂದ ದೂರವಿಟ್ಟು ಅವುಗಳಿಗೆ ‘ಕಲಾತ್ಮಕ ಸಿನಿಮಾಗಳು’ ಎನ್ನುವ ಹಣೆಪಟ್ಟಿ ಕಟ್ಟಲಾಗಿದೆ. ಇಡೀ ಭಾರತೀಯ ಸಿನಿಮಾರಂಗಕ್ಕೆ ಅನ್ವಯಿಸುವ ದೂರು ಇದು. ಮುಖ್ಯಧಾರೆಯಿಂದ ಹೊರಗಿರುವ ಈ ಸಿನಿಮಾಗಳನ್ನು ಪ್ರದರ್ಶಿಸಲು ಚಿತ್ರಮಂದಿರದ ಸಮಸ್ಯೆ ಎದುರಾಗುತ್ತಿದೆ. ಕಲಾತ್ಮಕ ಸಿನಿಮಾಗಳನ್ನು ವೀಕ್ಷಿಸಿ ಪ್ರೋತ್ಸಾಹಿಸುವ ಸಹೃದಯಿ ಪ್ರೇಕ್ಷಕರ ಸಮೂಹವೊಂದು ರೂಪುಗೊಂಡಿಲ್ಲದಿರುವುದು ಕೂಡ ಸಮಸ್ಯೆಗೆ ಕಾರಣವಾಗಿದೆ.

ಕನ್ನಡ ಸಿನಿಮಾರಂಗದಲ್ಲಿ ಸಿನಿಮಾವನ್ನು ನೀತಿಯ ಚೌಕಟ್ಟಿನೊಳಗೆ ಕಟ್ಟಿಕೊಟ್ಟಿದ್ದು ವರನಟ ರಾಜ್‌ಕುಮಾರ್ ಅವರ ಸಿನಿಮಾಗಳ ಹೆಗ್ಗಳಿಕೆ ಎನ್ನುವ ಮಾತಿನಲ್ಲಿ ಉತ್ಪ್ರೇಕ್ಷೆಯಿಲ್ಲ. ರಾಜ್‌ಕುಮಾರ್ ಅನೇಕ ನೀತಿಬೋಧಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಸಾಮಾಜಿಕ ಪಲ್ಲಟಗಳಿಗೆ ಕಾರಣರಾದರು. ಉತ್ತಮ ಸಂದೇಶ ಸಾರುವ ಸಿನಿಮಾಗಳ ರಾಯಭಾರಿಯಂತೆ ಅವರು ಕಾಣಿಸುತ್ತಿದ್ದರು. ಅವರ ಯುಗಾಂತ್ಯ, ಕನ್ನಡ ಸಿನಿಮಾರಂಗದಲ್ಲಿ ನೀತಿಗೆ ಒತ್ತುಕೊಡುವ ಸಿನಿಮಾಗಳ ಯುಗಾಂತ್ಯವೂ ಆದಂತಿದೆ.

ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ನ್ಯಾಯಸಮ್ಮತ ಎನ್ನುವುದು ಈಗ ಸಿನಿಮಾ ಮಾಧ್ಯಮಕ್ಕೂ ಅನ್ವಯಿಸುತ್ತಿದೆ. ಅದಕ್ಕೆಂದೇ ಇಲ್ಲಿ ನೀತಿ ಮುಖ್ಯವಲ್ಲದ ಸಿನಿಮಾಗಳು ನಿರ್ಮಾಣಗೊಳ್ಳುತ್ತಿವೆ. ಗಲ್ಲಾಪೆಟ್ಟಿಗೆಯಲ್ಲಿ ಹಣದ ಹೊಳೆ ಹರಿಸುವ ಯಶಸ್ವಿ ಸಿನಿಮಾಗಳು ಅತ್ಯುತ್ತಮ ಸಿನಿಮಾಗಳೆನಿಸುತ್ತಿವೆ. ‘ಮನುಷ್ಯನ ಮನಸ್ಸಿನ ಅನಿರೀಕ್ಷಿತ ಪದರುಗಳಿಗೆ ನಿರ್ದೇಶಕ ತನ್ನ ಒಳನೋಟವನ್ನು ಹರಿಸಿದಾಗ ಮಾತ್ರ ಅತ್ಯುತ್ತಮ ಸಿನಿಮಾಗಳ ಕಾಣ್ಕೆ ಸಾಧ್ಯ’ ಎನ್ನುವುದು ಪಿ. ಲಂಕೇಶರ ಮಾತು. ಬದುಕಿನ ವಾಸ್ತವ ಸಂಗತಿಗಳನ್ನು ತೆರೆಯ ಮೇಲೆ ತೋರಿಸುವ ಸಿನಿಮಾಗಳು ಮಾತ್ರ ಚಿತ್ರರಂಗದ ಅತ್ಯುತ್ತಮ ಕಾಣ್ಕೆಗಳಾಗಿ ಬಹುಕಾಲ ಪ್ರೇಕ್ಷಕರ ನೆನಪಿನಲ್ಲಿ ಉಳಿಯಬಲ್ಲವು. ಇದು ಸಿನಿಮಾ ಮಾಧ್ಯಮದವರಿಗೆ ಅರ್ಥವಾಗುವುದು ಯಾವಾಗ? 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.