ADVERTISEMENT

ಸಂಗತ | ಸಮಯ ಕಳೆಯುವ ಸಂಕಷ್ಟ

ಕೊರೊನಾ ವೈರಾಣುವಿನಿಂದಾಗಿ ನಾವು ನಮ್ಮ ತಪ್ಪುಗಳನ್ನು ಸರಿಪಡಿಸುವ ಏನನ್ನಾದರೂ ಕಲಿಯಬಹುದಿದ್ದರೆ ಅದು ‘ಸಮಾನತೆ’ಯನ್ನು ಮಾತ್ರ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 20:15 IST
Last Updated 16 ಏಪ್ರಿಲ್ 2020, 20:15 IST
   

ಅನಾರೋಗ್ಯಕ್ಕೆ ತುತ್ತಾದಾಗ ಮಾತ್ರ ನಮ್ಮಲ್ಲಿ ಅನೇಕರಿಗೆ ನಾವು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಅದೆಷ್ಟು ಉದಾಸೀನ ಧೋರಣೆ ತಳೆದಿದ್ದೆವು ಎಂಬುದು ಗೊತ್ತಾಗುತ್ತದೆ. ಕೋವಿಡ್–19 ಸೃಷ್ಟಿಸಿರುವ ವ್ಯಾಪಕವಾದ ಬಿಕ್ಕಟ್ಟಿಗೆ ಕಾರಣ ಜೀವವೈವಿಧ್ಯದ ನಾಶ ಎಂದು ಕೆಲವರು ಹೇಳುತ್ತಿದ್ದಾರೆ. ತೀವ್ರವಾದ ಜನಸಂದಣಿ, ಮಾಲಿನ್ಯ ಹಾಗೂ ಮನುಷ್ಯ ನಿರಂತರವಾಗಿ ಅತ್ತಿಂದಿತ್ತ ಓಡಾಡುವ ಕಾರಣ, ನಗರ ಪ್ರದೇಶಗಳು ವೈರಾಣು ಹರಡಲು ಹೇಳಿ ಮಾಡಿಸಿದಂತಹ ಸ್ಥಳಗಳಾಗುತ್ತವೆ.

ಮನುಷ್ಯನು ಪ್ರಕೃತಿಯ ಮೇಲೆ ಹಲ್ಲೆ ನಡೆಸಿದಾಗ, ಪ್ರಕೃತಿ ಕೂಡ ಅದೇ ಕೆಲಸ ಮಾಡಲು ಆರಂಭಿಸುತ್ತದೆ. ಇದರ ಪರಿಣಾಮವೆಂಬಂತೆ, ‘ದೈಹಿಕ ಅಂತರ’ದ ಹೆಸರಿನಲ್ಲಿ ಮನುಷ್ಯ ಮನೆಯೊಳಗೇ ಇರಲು ಶುರುಮಾಡಿದ್ದಾನೆ. ಈಗ ಪ್ರಕೃತಿಯು ಉಪಶಮನಗೊಳ್ಳುವ ಪ್ರಕ್ರಿಯೆಯಲ್ಲಿದೆ. ಮನುಷ್ಯನ ಚಟುವಟಿಕೆಗಳು ನಿಂತುಹೋಗಿರುವ ಈ ಹೊತ್ತಿನಲ್ಲಿ ಜಗತ್ತಿನೆಲ್ಲೆಡೆ ಮಾಲಿನ್ಯದ ಪ್ರಮಾಣ ಕಡಿಮೆ ಆಗುತ್ತಿದೆ. ಮೀನುಗಳು, ಹಕ್ಕಿಗಳು ಹಾಗೂ ಪ್ರಾಣಿಗಳು ಹಿಂದೆಂದೂ ಕಾಣದಷ್ಟು ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಕೋವಿಡ್–19 ಸಾಂಕ್ರಾಮಿಕದಿಂದಾಗಿ ಸರ್ಕಾರಗಳು ಹಾಗೂ ವ್ಯಕ್ತಿಗಳು ಪಾಠ ಕಲಿತು, ವಸುಂಧರೆಯ ಜೊತೆ ಜಾಗರೂಕವಾಗಿ ಹೆಜ್ಜೆ ಹಾಕುವರೇ ಎಂಬ ಪ್ರಶ್ನೆಗೆ ಕಾಲವೇ ಉತ್ತರ ನೀಡಬೇಕು.

ನಾನು ಮತ್ತು ನನ್ನಂತೆಯೇ ಇತರ ಹಲವರು ವರ್ಗ, ಜಾತಿ, ಶಿಕ್ಷಣದ ಕಾರಣದಿಂದಾಗಿ ಹೊಂದಿರುವ ಅಸಮರ್ಥನೀಯ ಸವಲತ್ತುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ನನಗೆ ಈ ಲಾಕ್‌ಡೌನ್‌ ಅವಧಿ ನೆರವಾಗಿದೆ. ರಾಷ್ಟ್ರವ್ಯಾಪಿಯಾಗಿರುವ ಈ ಸ್ಥಿತಿಯು ಉಳಿತಾಯ ಇಲ್ಲದವರಿಗೆ, ದಿನಗೂಲಿ ಕಾರ್ಮಿಕರಿಗೆ ಯಾವ ಬಗೆಯ ಪರಿಸ್ಥಿತಿಯನ್ನು ತಂದಿತ್ತಿದೆ ಎನ್ನುವುದನ್ನು ನಾನು ಕಲ್ಪಿಸಿಕೊಳ್ಳಬಲ್ಲೆ– ಆದರೆ, ಎಂದಿಗೂ ಅದನ್ನು ಅನುಭವಿಸಿ ತಿಳಿಯಲಾರೆ. ನನ್ನಂತಹ ಕೆಲವು ‘ಉಳ್ಳವರು’ ಸಮಯ ಕಳೆಯಲು ಏನಾದರೂ ದಾರಿ ಹುಡುಕಿಕೊಳ್ಳಬೇಕಾಗುತ್ತದೆ. ಆದರೆ, ಹೆಗಲ ಮೇಲೆ ಪುಟ್ಟ ಮಕ್ಕಳನ್ನು ಹೊತ್ತು ನೂರಾರು ಕಿ.ಮೀ. ನಡೆದು ಸಾಗುವ ಕೂಲಿಕಾರ್ಮಿಕರಿಗೆ ‘ಇಷ್ಟೊಂದು ಸುದೀರ್ಘವಾದ ಸಮಯವನ್ನು ನಾವು ನಿಜಕ್ಕೂ ಕಳೆಯಬಲ್ಲೆವಾ’ ಎಂಬ ಪ್ರಶ್ನೆ ಎದುರಾಗಿರುತ್ತದೆ. ವಿಮಾನ ಪ್ರಯಾಣಿಕರ ಮೂಲಕ ದೇಶಕ್ಕೆ ಬಂದ ಕೊರೊನಾ, ಸಾರ್ವಜನಿಕ ಸಾರಿಗೆಯ ಮೂಲಕ ಪ್ರಯಾಣಿಸುವವರ ಹಾಗೂ ಪಡಿತರ ಚೀಟಿ ನಂಬಿ ಜೀವನ ಸಾಗಿಸುವವರ ಬದುಕಿನಲ್ಲಿ ಈಗ ಅಲ್ಲೋಲಕಲ್ಲೋಲ ಸೃಷ್ಟಿಸಿದೆ.

ADVERTISEMENT

ರಾಷ್ಟ್ರಗಳ ಗಡಿಗಳನ್ನು ಮೀರಿ, ಹಿಂದೆಂದೂ ಕಾಣದಂತಹ ಕಷ್ಟಗಳು ಎದುರಾದಾಗ, ನಿಜವಾದ ಹೀರೊಗಳ ತ್ಯಾಗವನ್ನು ನಾವು ಒಂದು ಸಮಾಜವಾಗಿಗೌರವಿಸಲು ಆರಂಭಿಸುತ್ತೇವೆ. ‘ನಾನು ಸಹಾಯ ಮಾಡುವುದು ಹೇಗೆ’ ಎಂಬುದು ಹಲವರ ಮನಸ್ಸಿನಲ್ಲಿರುವ ಸರಳ ಪ್ರಶ್ನೆ. ‘ದೈಹಿಕ ಅಂತರ’ ಕಾಯ್ದುಕೊಳ್ಳಬೇಕಿರುವ ಈ ಹೊತ್ತಿನಲ್ಲಿ, ಒಂದು ಸಮಾಜವಾಗಿ ಒಬ್ಬರಿಗೊಬ್ಬರಿಗೆ ಹತ್ತಿರವಾಗಲು ಮಾರ್ಗಗಳನ್ನು ಕಂಡುಕೊಳ್ಳಬೇಕು. ವ್ಯಕ್ತಿಗತ ನೆಲೆಯಲ್ಲಿ ನಾವು ಸಮಾಜಕ್ಕೆ ಏನು ಕೊಡಬಲ್ಲೆವು ಎಂಬುದನ್ನು ಕಂಡುಕೊಳ್ಳಬಹುದು.

ನಾನು ಎರಡು ವಿಧಗಳಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. 1. ಸಿನಿಮಾ ಉದ್ಯಮದಲ್ಲಿ ದಿನಗೂಲಿ ಆಧಾರದಲ್ಲಿ ಕೆಲಸ ಮಾಡುತ್ತಿರುವವರಿಗೆ ಹಣಕಾಸಿನ ನೆರವು ಒದಗಿಸುವುದು. 2. ಉತ್ತರ ಕರ್ನಾಟಕ ಭಾಗದಲ್ಲಿ ಅಲೆಮಾರಿ ಸಮುದಾಯಗಳ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸುವುದು.

ಸಿನಿಮಾ ಚಿತ್ರೀಕರಣದ ಕೆಲಸಗಳು ಈಗ ಸ್ಥಗಿತಗೊಂಡಿವೆ. ಈ ಉದ್ಯಮದಲ್ಲಿ ಆರು ಸಾವಿರಕ್ಕೂ ಹೆಚ್ಚು ದಿನಗೂಲಿ ನೌಕರರಿದ್ದಾರೆ.ಇವರಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ‘ಫೈರ್’ ಸಂಘಟನೆ ಗುರುತಿಸಿದೆ. ಕೆಲವು ವಾರಗಳಿಂದ ಫೈರ್ ಸಂಘಟನೆಯು ನಿರ್ದೇಶಕ ಪವನ್ ಕುಮಾರ್ ಜೊತೆಗೂಡಿ, ವಿವಿಧ ಮೂಲಗಳಿಂದ ಹಣ ಸಂಗ್ರಹಿಸಿ, ಕಾರ್ಮಿಕರ ಖಾತೆಗಳಿಗೆ ತಲಾ ₹2,000 ವರ್ಗಾವಣೆ ಮಾಡುವ ಕೆಲಸದಲ್ಲಿ ಭಾಗಿಯಾಗಿದೆ.

ಸುಡುಗಾಡು ಸಿದ್ದ, ಸಿಳ್ಳೆಕ್ಯಾತ, ಗೊಂಡಲಿ, ಚೆನ್ನದಾಸ ಇತ್ಯಾದಿ ಸಮುದಾಯಗಳ ಜನ ಇಂದಿಗೂ ಸಣ್ಣ ಟೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ. ಈ ಸಮುದಾಯಗಳ ಜನರ ಬಳಿ ಬ್ಯಾಂಕ್ ಖಾತೆಯೂ ಇಲ್ಲ, ಆಧಾರ್ ಅಥವಾ ಪಡಿತರ ಚೀಟಿಯೂ ಇಲ್ಲ. ಲಾಕ್‌ಡೌನ್‌ ಕಾರಣದಿಂದಾಗಿ ಇವರ ಜೀವನ ಕೂಡ ಕಷ್ಟಕ್ಕೆ ಸಿಲುಕಿದೆ. ಖಾದ್ಯತೈಲ, ಅಗತ್ಯ ಆಹಾರ ಸಾಮಗ್ರಿ, ಸೋಪುಗಳನ್ನು ಈ ಸಮುದಾಯಗಳ ಒಟ್ಟು 300 ಕುಟುಂಬಗಳಿಗೆ ನಮ್ಮ ‘ಯುವ ಕರ್ನಾಟಕ’ ಸಮಾಜ ಸೇವಾ ಸಂಘಟನೆಯು ಒದಗಿಸಿದೆ.

ಕೊರೊನಾ ವೈರಾಣುವಿನಿಂದಾಗಿ ನಾವು ನಮ್ಮ ತಪ್ಪುಗಳನ್ನು ಸರಿಪಡಿಸುವ ಏನನ್ನಾದರೂ ಕಲಿಯಬಹುದಿದ್ದರೆ ಅದು ‘ಸಮಾನತೆ’ಯನ್ನು ಮಾತ್ರ. ಕೋವಿಡ್–19 ಕಾಯಿಲೆಯು ಲಿಂಗ, ಜಾತಿ, ವರ್ಗ, ಧರ್ಮ, ಜನಾಂಗ, ಭಾಷೆ, ಬಣ್ಣ, ವಯಸ್ಸು... ಈ ಬಗೆಯ ಯಾವ ವ್ಯತ್ಯಾಸವನ್ನೂ ಪರಿಗಣಿಸುತ್ತಿಲ್ಲ. ಈ ವೈರಾಣು ನಮ್ಮನ್ನು ಸಮಾನವಾಗಿ ಪರಿಗಣಿಸುವಂತೆಯೇ, ನಾವೂ ಎಲ್ಲರನ್ನೂ ಸಮಾನರೆಂದು ಪರಿಗಣಿಸಬೇಕು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.