ADVERTISEMENT

ಸಂಗತ | ರೋಗ ಭೀತಿಯಿಂದ ರಕ್ಷಿಸಬೇಕಿದೆ!

ಭಯವನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವುದು ಈ ಕಾಲದ ವ್ಯಾಪಾರದ ಒಂದು ಹೊಸ ಗುಣ

ಸದಾಶಿವ ಸೊರಟೂರು
Published 23 ಡಿಸೆಂಬರ್ 2022, 22:00 IST
Last Updated 23 ಡಿಸೆಂಬರ್ 2022, 22:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಗರವೊಂದರಲ್ಲಿ ಇತ್ತೀಚೆಗೆ ನಡೆದಾಡುತ್ತಿದ್ದಾಗ,ಅಲ್ಲಿನ ರಸ್ತೆಗಳಲ್ಲಿ ಬೃಹದಾಕಾರದ ಭಯಾನಕ ಪೋಸ್ಟರ್‌ಗಳು ಕಂಡವು. ಎದೆ ಹಿಡಿದು ಒದ್ದಾಡುವವನ ಚಿತ್ರ, ಕತ್ತಿನಲ್ಲಿ ಊದಿಕೊಂಡ ಗಡ್ಡೆ, ನೋಡಿದರೆ ಬೆವರು ಕಿತ್ತು ಬರುವಂತಹ ಕೊಳೆತ ಕಾಲಿನ ಗಾಯ, ಚರ್ಮದ ಸೋಂಕಿನ ಬೀಭತ್ಸ ನೋಟ... ಭಯ ಹುಟ್ಟಿಸುವ ಇಂಥವೇ ಹತ್ತಾರು ದೊಡ್ಡ ದೊಡ್ಡ ಪೋಸ್ಟರ್‌ಗಳನ್ನು ನೇತು ಹಾಕಲಾಗಿತ್ತು. ನೋಡಿದವರು ಯಾರೇ ಆದರೂ ಒಂದು ಕ್ಷಣ ಅಧೀರರಾಗದೇ ಇರಲಾರರು. ಆ ಪೋಸ್ಟರ್‌ಗಳು ಖಾಸಗಿ ಆಸ್ಪತ್ರೆಗಳ ಜಾಹೀರಾತುಗಳ ಭಾಗ.

ಥಿಯೇಟರ್‌ಗೆ ಬಂದ ಹೊಸ ಸಿನಿಮಾವನ್ನೊ, ದಿನಬಳಕೆಗೆ ಬೇಕಾದ ಹೊಸ ಉತ್ಪನ್ನವನ್ನೊ ಜನರನ್ನು ಸೆಳೆಯಲು ಹಾಕಿಕೊಂಡಂತೆ ಕೆಲವು ಆಸ್ಪತ್ರೆಗಳು ಇಂತಹ ಪೋಸ್ಟರ್‌ಗಳನ್ನು ಹಾಕಿಕೊಳ್ಳುವುದುಂಟು. ಆಸ್ಪತ್ರೆಯು ತನ್ನಲ್ಲಿರುವ ಸವಲತ್ತುಗಳನ್ನು ಪ್ರಚಾರ ಮಾಡಿಕೊಳ್ಳುವುದು ತಪ್ಪಲ್ಲ. ಆದರೆ ಈ ಬಗೆಯ ಪೋಸ್ಟರ್‌ಗಳನ್ನು ಹಾಕಿ, ಜನರನ್ನು ಹೆದರಿಸಿ ಅವರನ್ನು ಆಸ್ಪತ್ರೆಯತ್ತ ಸೆಳೆಯಬೇಕೆ?

ಭಯವನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವುದು ಈ ಕಾಲದ ವ್ಯಾಪಾರದ ಒಂದು ಹೊಸ ಗುಣ. ‘ಕನ್ನಡ ಮಾಧ್ಯಮದಲ್ಲಿ ಓದಿದರೆ ನಿಮ್ಮ ಮಕ್ಕಳಿಗೆ ಬದುಕಿಲ್ಲ’ ಎಂದು ಹೆದರಿಸಿ ಸೆಳೆಯುವ ಇಂಗ್ಲಿಷ್ ಶಾಲೆಗಳು, ಭವಿಷ್ಯ ಹೇಳಿ ಹೆದರಿಸುವುದು, ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡವರ ಸಾಲಿಗೆ ಈಗ ವೈದ್ಯಕೀಯ ರಂಗವೂ ಸೇರುತ್ತಿದೆಯೇ?

ADVERTISEMENT

ಅನುಮಾನವೇ ಇಲ್ಲ, ಆಸ್ಪತ್ರೆಗಳು ದೇವಾಲಯಗಳೇ ಸರಿ. ಸಾವಿನ ಬಾಗಿಲು ಬಡಿಯುವವ ರನ್ನು ವೈದ್ಯರು ದೇವರೊಂದಿಗೆ ಜಗಳವಾಡಿದಂತೆ ಕಾಯಿಲೆಯೊಂದಿಗೆ ಹೋರಾಡಿ ಜೀವ ಉಳಿಸಿದ ಎಷ್ಟೋ ಉದಾಹರಣೆಗಳಿವೆ. ಆರೋಗ್ಯದ ಬಗ್ಗೆ ಸರಿಯಾದ ಅರಿವು ಮೂಡಿಸುವ ಅಸಂಖ್ಯಾತ ವೈದ್ಯರು ನಮ್ಮ ನಡುವೆ ಇದ್ದಾರೆ. ಆದರೆ ಕೆಲವು ಆಸ್ಪತ್ರೆಗಳಿಗೆ ಈ ಪೋಸ್ಟರ್‌ನಂತಹ ಅಪಸವ್ಯಗಳು ಬೇಕೆ? ಅನುಮಾನವೇ ಇಲ್ಲ, ಇಂತಹ ಪೋಸ್ಟರ್‌ಗಳು ಮನುಷ್ಯನೊಳಗೆ ನಕಾರಾತ್ಮಕ ಭಾವನೆಗಳಿಗೆ ಕುಮ್ಮಕ್ಕು ನೀಡುತ್ತವೆ.

ಅದು ರೋಗಿಗೆ ಕೊಡುವ ಮುಂಜಾಗ್ರತೆ, ಅರಿವು, ಕಾಯಿಲೆಯೊಂದರ ಲಕ್ಷಣದ ಕುರುಹು ಎಂದು ವಾದಿಸಬಹುದು. ಆದರೆ ಮನುಷ್ಯನ ಮನಸ್ಸು ಹೇಗೆ ಎಂಬುದು ಎಲ್ಲರಿಗೂ ಗೊತ್ತು. ಎರಡು ದಿನ ಕಾಡುವ ತಲೆನೋವನ್ನು ದೊಡ್ಡಬೇನೆ ಎಂದು ಯೋಚಿಸುವ ಜನರ ನಡುವೆ ಇಂತಹ ಪೋಸ್ಟರ್ ಯಾವ ಮಟ್ಟದ ಭಯ ಮತ್ತು ತಪ್ಪು ತಿಳಿವಳಿಕೆ ಹುಟ್ಟುಹಾಕಬಹುದು? ಆಸ್ಪತ್ರೆಗಳು ತಮ್ಮ ಪ್ರಚಾರವನ್ನು ಜನರಲ್ಲಿ ಆತ್ಮವಿಶ್ವಾಸ ತುಂಬುವ ಪೋಸ್ಟರ್‌ಗಳ ಮೂಲಕ ಮಾಡಬೇಕೆ ವಿನಾ ಭಯ ಹುಟ್ಟಿಸುವ ಮೂಲಕ ಅಲ್ಲ. ಕೆಲವು ಕಡೆ ಅಂತಹ ಒಳ್ಳೆಯ ಆಸ್ಪತ್ರೆಗಳೂ ಇಲ್ಲದಿಲ್ಲ.

ಅರ್ನೆಸ್ಟ್ ಹೆಮಿಂಗ್‌ವೆ ಅವರ ‘ಎ ಡೇಸ್‌ ವೇಟ್’ ಅನ್ನುವ ಕಥೆ ಇದೆ. ಅದರಲ್ಲಿ ಒಬ್ಬ ಹುಡುಗ ಹಾಸಿಗೆ ಮೇಲೆ ಮಲಗಿ ಸಾವಿಗಾಗಿ ಕಾಯುತ್ತಿರುತ್ತಾನೆ.ಆ ಯೋಚನೆಯಲ್ಲಿ ಅವನು ಮತ್ತಷ್ಟು ಬಳಲಿದ್ದಾನೆ. 44 ಡಿಗ್ರಿ ಜ್ವರ ಬಂದರೆ ಬದುಕುವುದು ಕಷ್ಟ ಅನ್ನುವುದು ಹುಡುಗನಿಗೆ ಅವನ ಗೆಳೆಯ ಹೇಳಿದ್ದ ಮಾತು. ಆದರೆ ತನಗೆ ಈಗ 102 ಡಿಗ್ರಿ ಜ್ವರವಿದೆ, ಸಾವು ನಿಶ್ಚಿತ ಎಂಬುದು ಹುಡುಗನ ಎಣಿಕೆ. ತನಗೆ ಇದ್ದಿದ್ದು 102 ಡಿಗ್ರಿ ಸೆಲ್ಸಿಯಸ್ ಜ್ವರ ಎಂದು ಹುಡುಗ ಭಾವಿಸಿದ್ದ. ಆದರೆ ಅವನಿಗಿದ್ದದ್ದು102 ಡಿಗ್ರಿ ಫ್ಯಾರನ್‌ಹೀಟ್. ತಂದೆ ಮಾತಿನ ಮಧ್ಯೆ ಫ್ಯಾರನ್‌ಹೀಟ್ ಮತ್ತು ಸೆಲ್ಸಿಯಸ್ ನಡುವಿನ ವ್ಯತ್ಯಾಸ ತಿಳಿಸಿ ಹೇಳುತ್ತಾರೆ. ಹುಡುಗ ಆಗ ತನ್ನ ಸಾವಿನ ಯೋಚನೆಯಿಂದ ಹೊರಬರುತ್ತಾನೆ. ಅದು ತಿಳಿಯದೇ ಹೋಗಿದ್ದರೆ ಅವನು ಜ್ವರದ ಭಯದಲ್ಲೇ ಸತ್ತು ಹೋಗುತ್ತಿದ್ದ.

ಎರಡು ವರ್ಷದ ಹಿಂದೆ ನಮ್ಮ‌ ಪಕ್ಕದ ಹಳ್ಳಿಯಲ್ಲಿ ಒಬ್ಬ ಮಹಿಳೆಗೆ ಹೊಟ್ಟೆಯಲ್ಲಿ ಗಡ್ಡೆಯಾಗಿತ್ತು. ಪರೀಕ್ಷೆಯಲ್ಲಿ ಅದು ಕ್ಯಾನ್ಸರ್ ಎಂದು ಗೊತ್ತಾಗಿತ್ತು. ಅವಳು ಅನಕ್ಷರಸ್ಥೆ. ಕ್ಯಾನ್ಸರ್ ಎಂದರೆ ಗಂಭೀರ ಕಾಯಿಲೆ ಎಂಬ ಅರಿವು ಅವಳಿಗಿರಲಿಲ್ಲ. ಮೂರನೇ ಹಂತಕ್ಕೆ ಹತ್ತಿರವಿದ್ದ ಕ್ಯಾನ್ಸರ್ ಅದು. ಕಿದ್ವಾಯಿಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಅವಳಿಗೆ ‘ಇದೊಂದು ಬರೀ ಗಡ್ಡೆ, ಅದರಿಂದ ಏನಾದೀತು’ ಎಂಬ ಭಾವ. ಆ ಭಾವವೇ ಅವಳನ್ನು ರಕ್ಷಿಸಿದೆ. ಚಿಕಿತ್ಸೆ ಫಲಕಾರಿಯಾಗಿದೆ. ಗುಣಮುಖಳಾಗಿ ಈಗ ಹೊಲದಲ್ಲಿ ಕೆಲಸ ಮಾಡಿಕೊಂಡು ಆರಾಮಾಗಿದ್ದಾಳೆ. ಅವಳನ್ನು ಉಳಿಸಿದ್ದು ಔಷಧಿ ಅಷ್ಟೇ ಅಲ್ಲ, ಅವಳ ಸಕಾರಾತ್ಮಕ ಭಾವವೂ!

ಮನುಷ್ಯನ ಎಲ್ಲಾ ಭಯಗಳಿಗಿಂತ ದೊಡ್ಡ ಭಯ ಸಾವಿನದು. ಸಣ್ಣ ಅನಾರೋಗ್ಯವೂ ಅವನಿಗೆ ಸಾವಿನ ಯೋಚನೆ ತರುತ್ತದೆ. ಆ ಅನಾರೋಗ್ಯದ ಬಗ್ಗೆ ಕೊಡುವ ತಪ್ಪು ಮಾಹಿತಿ ಅವನ ಕಾಯಿಲೆಯನ್ನು ಇನ್ನಷ್ಟು ಗಂಭೀರಗೊಳಿಸಬಹುದು. ಲಕ್ಷಣಗಳನ್ನಿಟ್ಟು ಕೊಂಡೇ ಬರೆಯುವ, ವೈದ್ಯರಲ್ಲದವರು ಗೂಗಲ್ ಮಾಡಿ ಬರೆಯುವ ಕೆಲವು ವೈದ್ಯಕೀಯ ಲೇಖನಗಳು, ಭಯ ಹುಟ್ಟಿಸುವ ಪೋಸ್ಟರ್‌ಗಳು ಆರೋಗ್ಯವಂತರನ್ನುಕಂಗೆಡಿಸುತ್ತವೆ. ಈ ಎಲ್ಲಕ್ಕೂ ಒಂದು ಕಾಯಕಲ್ಪದ ಅವಶ್ಯಕತೆ ಇದೆ. ಜನರನ್ನು ಬರೀ ಕಾಯಿಲೆಯಿಂದಲ್ಲ, ಕಾಯಿಲೆಯ ಭೀತಿಯಿಂದಲೂ ರಕ್ಷಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.