
ಕಾರ್ಯನಿಮಿತ್ತ ಹಳ್ಳಿಯೊಂದಕ್ಕೆ ಹೋದಾಗ ಮಹಿಳೆಯೊಬ್ಬಳು ಸಣ್ಣ ದನಿಯಲ್ಲಿ ಕೇಳಿದಳು. ‘ಸರ್, ಮರಗಟ್ಟಿಸೋದಕ್ಕೆ ಯಾವುದಾದ್ರೂ ಮಾತ್ರೆ ಬರೆದುಕೊಡ್ತೀರಾ?’. ‘ಮರಗಟ್ಟಿಸೋ ಮಾತ್ರೆ ಏನಕ್ಕಮ್ಮ?’ ಎಂದು ಕುತೂಹಲದಿಂದ ಕೇಳಿದೆ. ‘ನಮ್ಮನೆ ನಾಯಿಯ ಬಾಲ ಕಟ್ ಮಾಡ್ಬೇಕಿತ್ತು. ಆ ಜಾಗ ಮರಗಟ್ಟಿದ್ರೆ ಅದಕ್ಕೆ ನೋವು ಆಗಲ್ಲಲ್ವಾ...’ ಎಂದಾಗ, ಅವಳ ಉದ್ದೇಶ ಕೇಳಿ ಗಾಬರಿಯಾಗಿತ್ತು.
‘ಹಂಗೆಲ್ಲ ಮರಗಟ್ಟಿಸೋದಕ್ಕೆ ಮಾತ್ರೆ ಬರಲ್ಲ. ಅಲ್ದೇ ಹಾಗೆಲ್ಲ ಸುಮ್ಸುಮ್ನೇ ಬಾಲ ಕಟ್ ಮಾಡ್ಬಾರ್ದು. ಇದು ಕಾನೂನು ಪ್ರಕಾರವೂ ತಪ್ಪು. ಅಷ್ಟಕ್ಕೂ ಬಾಲ ಕಟ್ ಮಾಡೋದು ಯಾಕೆ?’ ಎಂದೆ. ನನ್ನ ಮಾತು ಇಷ್ಟವಾಗಲಿಲ್ಲವೆಂಬುದು ಅವಳ ವರ್ತನೆಯಲ್ಲೇ ಗೊತ್ತಾಗುವಂತಿತ್ತು. ‘ಅದ್ರ ಬಾಲ ಸುರುಳಿ ಸುತ್ತಿದೆ. ಅದರೊಳಗೆ ನೊಣ ದಾಟಬಾರ್ದು ಅಂತ ಹಿರಿಯರು ಹೇಳ್ತಾರೆ. ಹಂಗಾದ್ರೆ ಮನೆಗೆ ಕೆಡುಕಂತೆ’.
ಆಕೆಯ ಮೌಢ್ಯದ ಮಾತು ಕೇಳಿ ಮರುಕದಿಂದ, ‘ಅದೆಲ್ಲಾ ಬರೀ ಮೂಢನಂಬಿಕೆ. ಎಷ್ಟೋ ನಾಯಿಗಳಿಗೆ ಬಾಲ ಸುರುಳಿ ಸುತ್ಗಂಡಿರುತ್ತೆ. ಮನೆಯ ತೊಂದರೆ, ತಾಪತ್ರಯಗಳನ್ನು ಹೀಗೆ ನಾಯಿಬಾಲಕ್ಕೆ ಗಂಟು ಹಾಕ್ಬಾರ್ದಮ್ಮ’ ಎಂದೆ. ಜನರಲ್ಲಿ ಬಲವಾಗಿ ಬೇರೂರಿರುವ ಈ ಮೌಢ್ಯದ ಬಗ್ಗೆ ಆಕೆಗೆ ಮನದಟ್ಟು ಮಾಡಿಸಲು ಪ್ರಯತ್ನಿಸಿದೆ.
‘ಶಾಸ್ತ್ರ ಸುಮ್ನೆ ಮಾಡಲ್ಲ ಸರ್. ಮಾತ್ರೆ ಇಲ್ಲದಿದ್ರೆ ಹೋಗ್ಲಿ, ಹೆಂಗೂ ಬಾಲ ಅಲ್ವಾ, ಹಂಗೇ ಕಟ್ಮಾಡಿದ್ರೂ ಜಾಸ್ತಿ ನೋಯೋದಿಲ್ಲ ಅಲ್ವಾ?’ ಎಂದು ಪ್ರಶ್ನಿಸಿದಳು. ‘ನಿಮ್ಮ ಬೆರಳನ್ನು ಹಂಗೇ ತುಂಡು ಮಾಡಿದ್ರೆ ಎಷ್ಟು ನೋವಾಗುತ್ತೋ ಅಷ್ಟು ಆಗಬಹುದು’ ಎಂದೆ ನಗುತ್ತಾ. ನನ್ನನ್ನು ವಿಚಿತ್ರವಾಗಿ ನೋಡುತ್ತಾ ಅಲ್ಲಿಂದ ಹೊರಟು ಹೋದಳು.
ನಾಯಿಯ ಬಾಲಕ್ಕೆ ಸಂಬಂಧಿಸಿದಂತೆ ಇಂತಹ ಕಂದಾಚರಣೆ ಹಲವೆಡೆ ಇದೆ. ಜನರ ಈ ಮೌಢ್ಯಕ್ಕೆ ಬಲಿಯಾಗಿ ಹಲವು ನಾಯಿಗಳು ಬಾಲ ಕಳೆದುಕೊಂಡು ಅಂಗವಿಕಲಗೊಂಡಿವೆ. ನಾಯಿಗಳು ಸೇರಿದಂತೆ ಪಶುಗಳಿಗೆ ಬಾಲವೆಂಬುದು ಶರೀರದ ಒಂದು ಪ್ರಮುಖ ಭಾಗ. ತನ್ನ ಸಂಗಾತಿಗಳು, ಇತರೆ ಪ್ರಾಣಿಗಳೊಂದಿಗೆ ಸಂವಹನದ ಜೊತೆಗೆ ದೇಹದ ಸಮತೋಲನ ಕಾಯ್ದುಕೊಳ್ಳುವಲ್ಲಿ ಬಾಲದ್ದು ನಿರ್ಣಾಯಕ ಪಾತ್ರ. ವೇಗವಾಗಿ ಓಡುವಾಗ, ತಿರುವುಗಳಲ್ಲಿ ದೇಹದ ಸ್ಥಿರತೆ ಕಾಪಾಡಿಕೊಳ್ಳಲು, ಈಜುವಾಗ ದಿಕ್ಕು ಬದಲಿಸಲು, ಕೀಟಗಳನ್ನು ಓಡಿಸಲು, ದೇಹದ ಉಷ್ಣತೆ ಕಾಯ್ದುಕೊಳ್ಳಲು, ವಾಸನೆ ಹರಡಿಸಲು ಬಾಲ ಉಪಯುಕ್ತ. ನಾಯಿಯ ಬಾಲದ ಚಲನೆಯನ್ನು ಗಮನಿಸಿ ಅದರ ವರ್ತನೆ, ಮನಃಸ್ಥಿತಿ ಅರಿಯಬಹುದು. ಹೀಗೆ ಬಾಲಕ್ಕೆ ಹಲವು ಕಾರ್ಯಗಳಿದ್ದರೂ, ಬಾಲವೇ ಇಲ್ಲದ ಮನುಷ್ಯರ ದೃಷ್ಟಿಯಲ್ಲಿ ಅದೊಂದು ನಿರುಪಯುಕ್ತ ಅಂಗ! ಹಾಗಾಗಿಯೇ ಸುರುಳಿ ಬಾಲವಿದ್ದರೆ ಅಪಶಕುನವೆಂದು ತುಂಡರಿಸುತ್ತಾರೆ. ಮತ್ತೆ ಡಾಬರ್‌ಮನ್, ರಾಟ್‌ವೀಲರ್, ಬಾಕ್ಸರ್‌ನಂತಹ ಶ್ವಾನ ತಳಿಗಳಲ್ಲಿ ಅವುಗಳ ಸೌಂದರ್ಯ ಹೆಚ್ಚುತ್ತದೆ ಎಂಬ ಕಾರಣಕ್ಕೆ ಬಾಲ ತೆಗೆಯುತ್ತಾರೆ. ಬಾಲವಿಲ್ಲದ ನಾಯಿಗಳನ್ನು ಸಾಕುವುದೇ ಕೆಲವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ!
ಸುರುಳಿ ಬಾಲದ ಮೌಢ್ಯ ಗಟ್ಟಿಯಾಗಿ ತಲೆಯಲ್ಲಿ ಕೂತಿರುವ ಕಾರಣ ಹರಿತವಾದ ಕತ್ತಿಯಿಂದ ನಾಯಿಯ ಬಾಲ ಕತ್ತರಿಸಿ ಎಸೆಯುವವರು ಅವುಗಳಿಗಾಗುವ ನೋವು, ರಕ್ತಸ್ರಾವದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನರತಂತುಗಳು ಹೆಚ್ಚಿರುವ ಬಾಲಕ್ಕೆ ಗಾಯವಾದಾಗ ನೋವೂ ಹೆಚ್ಚಿರುತ್ತದೆ. ಇದಕ್ಕಿಂತ ಕ್ರೂರವಾದ ಆಚರಣೆಯೂ ಹಲವೆಡೆಯಿದೆ. ನಾಯಿಯ ಬಾಲದ ಬುಡಕ್ಕೆ ಬಿಗಿಯಾಗಿ ರಬ್ಬರ್ ಬ್ಯಾಂಡ್ ಹಾಕುವುದು. ಇದರಿಂದಾಗಿ ಆ ಭಾಗಕ್ಕೆ ರಕ್ತ ಸಂಚಾರ ನಿಂತು ನಂತರದಲ್ಲಿ ಬಾಲ ಒಣಗಿ ಉದುರಿ ಬೀಳುತ್ತದೆ. ಅಂಗವೊಂದಕ್ಕೆ ರಕ್ತಸಂಚಾರ ನಿಂತಾಗ ಆಗುವ ನೋವು, ಯಾತನೆ ಅಪಾರ. ಮೂಕ ಪ್ರಾಣಿ ಬಾಯಿಬಿಟ್ಟು ಹೇಳಲಾಗದೆ ಒದ್ದಾಡುವುದು ಕಂದಾಚಾರದ ಕುರುಡು ಕಣ್ಣುಗಳಿಗೆ ಕಾಣದು! ನಾಯಿಗಳಲ್ಲಿ ಬಾಲ ಕತ್ತರಿಸುವುದು, ಕಿವಿಗಳನ್ನು ಕತ್ತರಿಸಿ ನೇರವಾಗಿಸುವುದು, ಧ್ವನಿ ತಗ್ಗಿಸುವಿಕೆಯಂತಹ ಶಸ್ತ್ರಚಿಕಿತ್ಸೆಗಳು ಪ್ರಾಣಿ ಕ್ರೌರ್ಯ ತಡೆ ಕಾಯ್ದೆಯನ್ವಯ ಶಿಕ್ಷಾರ್ಹ ಅಪರಾಧ.
ನಾಯಿಗಳು ತಲೆಯೆತ್ತಿ ಊಳಿಡುವುದು ಅಪಶಕುನ ಎಂಬ ಗೊಡ್ಡು ನಂಬಿಕೆಯೂ ವ್ಯಾಪಕವಾಗಿದೆ. ಇದರಿಂದ ಆ ಮನೆಗೋ, ಊರಿಗೋ ಕೆಡುಕಾಗುವುದು ಎಂದು ನಂಬುವವರಿದ್ದಾರೆ. ಊಳಿಡುವ ನಾಯಿಗಳಿಗೆ ಹೊಡೆದು ಬಡಿದು ಸುಮ್ಮನಾಗಿಸಲು ಪ್ರಯತ್ನಿಸುತ್ತಾರೆ. ಹೀಗೆ ಆಕಾಶಕ್ಕೆ ಮುಖ ಮಾಡಿ ಊಳಿಡುವುದು ನಾಯಿಗಳಲ್ಲಿ ಸಂವಹನದ ಒಂದು ಮಾರ್ಗ. ಬೆದೆಯ ಸಮಯದಲ್ಲಿ, ಒಂಟಿಯಾಗಿದ್ದಾಗ, ಒತ್ತಡದಲ್ಲಿದ್ದಾಗ, ಗುಂಪಿನಿಂದ ಅಗಲಿದಾಗ ನಾಯಿಗಳು ಈ ವರ್ತನೆ ತೋರುತ್ತವೆ.
ದಿನವಿಡೀ ನಾಯಿಗಳನ್ನು ಮನೆಯಲ್ಲಿ ಒಂಟಿಯಾಗಿ ಕೂಡಿಹಾಕುವುದು, ಕಾಯಿಲೆ– ಚರ್ಮರೋಗದಿಂದ ಬಳಲುತ್ತಿರುವ ನಾಯಿಗಳನ್ನು ಬೀದಿಪಾಲು ಮಾಡುವುದು, ಕಚ್ಚುತ್ತದೆಯೆಂಬ ಕಾರಣಕ್ಕೆ ಎಲ್ಲೋ ಬಿಟ್ಟು ಬರುವುದು ಎಲ್ಲವೂ ಕ್ರೌರ್ಯವೇ. ಹೀಗೆ ಬೀದಿಪಾಲಾದ ನಾಯಿಗಳ ಆಕ್ರಮಣಕ್ಕೆ ದಾವಣಗೆರೆ ಜಿಲ್ಲೆಯಲ್ಲಿ ಅಮಾಯಕ ಹೆಣ್ಣುಮಗಳೊಬ್ಬಳು ಬಲಿಯಾದ ಇತ್ತೀಚಿನ ಘಟನೆ ನಮ್ಮ ಕಣ್ಣು ತೆರೆಯಿಸಬೇಕಿದೆ. ಸರಿಯಾಗಿ ಅರಿವು ಮೂಡಿದಾಗಲಷ್ಟೇ ಮಾನವನ ಡೊಂಕುಬಾಲ ನೆಟ್ಟಗಾದೀತು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.