ADVERTISEMENT

ಸಂಗತ | ‘ಔಷಧಿ’ ಬೇಕಾಗಿದೆ ಅಪ್ಪ– ಅಮ್ಮನಿಗೆ!

ಶಾಲಾ ಕಾಲೇಜು ‘ಪರೀಕ್ಷಾ ಜ್ವರ’ದಿಂದ ಮಕ್ಕಳಿಗಿಂತ ಹೆಚ್ಚಾಗಿ ಬಳಲುತ್ತಿರುವ ಅಪ್ಪ– ಅಮ್ಮ , ಒತ್ತಡ ನಿರ್ವಹಣೆಯ ಕೌಶಲವನ್ನು ಅರಿಯಬೇಕಿದೆ

ಡಾ.ಕೆ.ಎಸ್.ಪವಿತ್ರ
Published 23 ಮಾರ್ಚ್ 2022, 19:45 IST
Last Updated 23 ಮಾರ್ಚ್ 2022, 19:45 IST
   

ಕೋವಿಡ್ ಪಾಸಿಟಿವ್, ನೆಗೆಟಿವ್ ಎಂದು ತಲೆಕೆಡಿಸಿಕೊಳ್ಳುತ್ತಿದ್ದ ಅಪ್ಪ-ಅಮ್ಮ-ಶಾಲೆಗಳು ಈಗ ಪರೀಕ್ಷೆಯಲ್ಲಿ ಮಕ್ಕಳ ಅಂಕ, ಪಾಸಾ, ಫೇಲಾ ಎಂಬ ಬಗ್ಗೆ ಚಿಂತಿಸುವ ಧಾವಂತದಲ್ಲಿದ್ದಾರೆ. ಆನ್‍ಲೈನ್ ಪಾಠ ನಡೆದಿದ್ದರೂ, ಆನ್‍ಲೈನ್ ಪರೀಕ್ಷೆಗಳಿಗೂ ಆಫ್‍ಲೈನ್ ಪರೀಕ್ಷೆಗಳಿಗೂ ಇರುವ ವ್ಯತ್ಯಾಸವಂತೂ ಈಗ ಮತ್ತಷ್ಟು ಸ್ಪಷ್ಟವಾಗುತ್ತಿದೆ.

ಇತ್ತೀಚೆಗೆ ಹೊರಬಿದ್ದ ಸಿಬಿಎಸ್‍ಇ ಮೊದಲ ಹಂತದ ಹತ್ತನೇ ತರಗತಿಯ ಫಲಿತಾಂಶವನ್ನೇ ನೋಡಬಹುದು. ಪರೀಕ್ಷೆ ಆನ್‍ಲೈನ್ ಇದ್ದಾಗ 40ಕ್ಕೆ 40 ಅಂಕ ತೆಗೆದ ಕೆಲ ವಿದ್ಯಾರ್ಥಿಗಳು ಈಗ ತೆಗೆದಿರುವುದು 4-5 ಅಂಕಗಳನ್ನಷ್ಟೆ! ಆನ್‍ಲೈನ್ ಕ್ಲಾಸು, ಆನ್‍ಲೈನ್ ಪರೀಕ್ಷೆಗಳ ಜೊತೆಗೆ ಆನ್‍ಲೈನ್ ಕಾಪಿ ಹೊಡೆಯುವ ವಿಧಾನಗಳ ಬಗೆಗೂ ನಾವು ಅಧ್ಯಯನ ಮಾಡಲೇಬೇಕಾದ ಪರಿಸ್ಥಿತಿ!

ದೇಶದ ಬಹುತೇಕ ಶಾಲೆಗಳು ನೇರವಾಗಿ ಆರಂಭವಾಗಿದ್ದರೂ ‘ಆನ್‍ಲೈನ್’ ಎಂಬ ಆಯ್ಕೆಯನ್ನೂ ನೀಡಲಾಗಿದೆ. ನಗರಗಳಲ್ಲಿ ಶಾಲಾ ಬಸ್ಸುಗಳಲ್ಲೇ ಮಕ್ಕಳನ್ನು ಕಳಿಸುತ್ತಿದ್ದ ತಂದೆ- ತಾಯಿಗಳಿಗೆ ಈಗ ಹೊಸ ತಲೆನೋವು. ಶಾಲಾ ಬಸ್ಸುಗಳು ಬಹುಕಡೆಗಳಲ್ಲಿ ಇನ್ನೂ ಆರಂಭವಾಗಿಲ್ಲ. ಏಕೆ? ಶಾಲೆಗಳಿಗೆ ಬರಬೇಕಾದ ‘ಫೀಸು’ ಬಂದಿಲ್ಲ. ಫೀಸು ಕಟ್ಟಬಹುದಾದ ಅಪ್ಪ-ಅಮ್ಮ ಯೋಚನೆ ಮಾಡಿದ್ದು ‘ಇನ್ನು ಕೆಲ ತಿಂಗಳಿಗೆ ಫೀಸು ಕಟ್ಟುವುದಾದರೂ ಏಕೆ?’ ಹಾಗೆಂದು ಬೆಂಗಳೂರಿನಂತಹ ನಗರಗಳಲ್ಲಿ ಶಾಲೆಗೆ-ಮನೆಗೆ ಮಕ್ಕಳನ್ನು ಬಿಡುವುದು, ಕರೆತರುವುದು ಸುಲಭಸಾಧ್ಯವೇ? ಹಾಗಾಗಿ ಇನ್ನೂ ಬಹುಮಕ್ಕಳು ಆನ್‍ಲೈನ್ ಶಾಲೆಯಲ್ಲಿಯೇ ಓದುತ್ತಿದ್ದಾರೆ.

ADVERTISEMENT

ಶಾಲೆ ಆನ್‍ಲೈನ್- ಆಫ್‍ಲೈನ್ ಏನೇ ಆಗಲಿ, ‘ಪರೀಕ್ಷೆ’ಯ ಗೀಳು ಮಾತ್ರ ನಮ್ಮನ್ನು ಬಿಟ್ಟಿಲ್ಲ. ಶಾಲೆಗಳಿಗೂ ಪರೀಕ್ಷೆ ಬೇಕೇ ಬೇಕು. ಏಕೆಂದರೆ ಫೀಸು ಕಟ್ಟಲು ಬಡಪೆಟ್ಟಿಗೆ ಕೇಳದ ಅಪ್ಪ-ಅಮ್ಮ, ಪರೀಕ್ಷೆಯ ಹಾಲ್ ಟಿಕೆಟ್ ಕೊಡುವುದಿಲ್ಲ ಎಂದರೆ, ಫೀಸು ಕಟ್ಟಲು ಮುಂದಾಗುತ್ತಾರೆ. ಹೀಗಾಗಿ ಪರೀಕ್ಷೆ ಎಂಬುದು ಮಕ್ಕಳ ಕಲಿಕೆಗೆ ಬೇಕೋ ಬೇಡವೋ ಆದರೆ ಶಾಲೆಗಳಿಗೆ ಮತ್ತು ಅಪ್ಪ-ಅಮ್ಮನಿಗಂತೂ ಬೇಕೇ ಬೇಕು!

ಕೋವಿಡ್‍ಗೆ ಮೊದಲೂ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ಪರೀಕ್ಷಾ ಕ್ರಮಗಳ ಬಗ್ಗೆ ಹಲವು ಚರ್ಚೆಗಳು ನಡೆದಿವೆ. ಕೋವಿಡ್ ನಂತರದ ದಿನಗಳಲ್ಲಿ ಈ ಪ್ರಶ್ನೆಗಳು ಮತ್ತಷ್ಟು ಜಟಿಲವಾಗಿವೆ. ಹೊಸ ಸವಾಲುಗಳನ್ನು ನಮ್ಮ ಮುಂದಿಡುತ್ತವೆ.

ಈ ಹಿಂದೆ ಪರೀಕ್ಷೆಯ ಹಿಂದಿನ ದಿನಗಳಲ್ಲಿ ಮನೋವೈದ್ಯರ ಬಳಿ ಬರುವ ಮಕ್ಕಳ ಸಂಖ್ಯೆ ಹಠಾತ್ ಏರುತ್ತಿತ್ತು. ತಲೆನೋವು, ಪರೀಕ್ಷಾ ಭಯ, ವಾಂತಿ, ಸತತ ಅಳುವಿನಂತಹ ವಿವಿಧ ಸಮಸ್ಯೆಗಳು ಮಕ್ಕಳಲ್ಲಿ ಕಂಡುಬರುತ್ತಿದ್ದವು. ಕಳೆದ ಎರಡು ವರ್ಷಗಳಲ್ಲಿ ಆನ್‍ಲೈನ್ ಪರೀಕ್ಷೆಗಳು- ಹಾಗೆಯೇ ‘ಪಾಸ್’ ಎಂಬ ಕಾರಣಗಳಿಂದ ಇರಬಹುದು, ಈ ಸಂಖ್ಯೆ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಾಗಿತ್ತು. ಆದರೆ ಪ್ರಸ್ತುತ ಪರಿಸ್ಥಿತಿ ಅದು ‘ಬಿರುಗಾಳಿಯ ಮುನ್ನ ತೋರುವ ಮೇಲ್ನೋಟದ ಸ್ತಬ್ಧತೆ’ಯಷ್ಟೇ ಎಂದು
ತಿಳಿಯಪಡಿಸುತ್ತಿದೆ.

ಹೆಚ್ಚಿನ ಶಾಲೆಗಳು ಆನ್‍ಲೈನ್ ಪರೀಕ್ಷೆ ನಡೆಸುತ್ತಿದ್ದದ್ದು ಹೇಗೆ? ಪ್ರಶ್ನೆಪತ್ರಿಕೆಯನ್ನು ವಾಟ್ಸ್ಆ್ಯಪ್‍ನಲ್ಲಿ ಅಥವಾ ಗೂಗಲ್ ಕ್ಲಾಸ್ ರೂಂನಲ್ಲಿ ಹಾಕುವುದು, ನಿಗದಿತ ಅವಧಿಯಲ್ಲಿ ಮಕ್ಕಳು ಉತ್ತರಿಸಿ ‘ಅಪ್‍ಲೋಡ್’ ಮಾಡಬೇಕು ಅಥವಾ ನಿರ್ದಿಷ್ಟ ದಿನದಂದು ಅಪ್ಪ-ಅಮ್ಮ ಅದನ್ನು ಶಾಲೆಗೆ ಹೋಗಿ ನೀಡಬೇಕು. ಸಾಮಾನ್ಯವಾಗಿ ಆನ್‍ಲೈನ್ ಪರೀಕ್ಷೆಗಳಲ್ಲಿ ನಡೆಯುವುದು-ಅಪ್ಪ-ಅಮ್ಮಂದಿರ ಪರೀಕ್ಷೆ!

‘ಅಂಕಗಳು ಹೇಗಾದರೂ ಬಂದರೆ ಸಾಕು’ ಎಂಬ ಚಡಪಡಿಕೆಯಲ್ಲಿ ಅಪ್ಪ-ಅಮ್ಮ ಉತ್ತರ ಹೇಳಿಕೊಡುವುದು, ಪುಸ್ತಕವನ್ನೇ ಮುಂದಿಟ್ಟು ‘ಓಪನ್ ಬುಕ್ ಪರೀಕ್ಷಾ ವ್ಯವಸ್ಥೆ’ಯಾಗಿಸಿಬಿಡುವುದು ಇವು ಹೆಚ್ಚಿನ ಮಕ್ಕಳಿಗೆ ಅಪ್ಪ-ಅಮ್ಮ ಪರೀಕ್ಷೆಯಲ್ಲಿ ಸಹಾಯ ಮಾಡಿರಬಹುದಾದ ವಿಧಗಳು. ಇದರ ನೇರ ಪರಿಣಾಮವೆಂದರೆ, ಇದೀಗ ಪರೀಕ್ಷೆಯನ್ನು ನೇರವಾಗಿ, ಶಾಲೆಗೆ ಬಂದು, ಶಿಕ್ಷಕರ ಎಚ್ಚರದ ಕಣ್ಣುಗಳ ಮುಂದೆ ಬರೆಯುತ್ತಿರುವ ಮಕ್ಕಳಲ್ಲಿ ಅತೀವವಾಗಿ ಹೆಚ್ಚಿರುವ ಆತಂಕ. ಬರೆಯುವ ಕೌಶಲ ಮಕ್ಕಳಲ್ಲಿ ಕಡಿಮೆಯಾಗಿರುವುದರ ಬಗೆಗಿನ ಆತಂಕ ನಮ್ಮನ್ನು ಈಗಾಗಲೇ ಕಾಡಿದೆ. ಅದರೊಂದಿಗೆ ‘ಪರೀಕ್ಷಾ ಕೌಶಲ’ಗಳ ಕೊರತೆಯೂ ಮಕ್ಕಳನ್ನು ಕಾಡತೊಡಗಿದೆ.

ಎರಡೂವರೆ ಗಂಟೆಗಳಲ್ಲಿ ಬರೆಯಲಾಗುತ್ತಿದ್ದ ಪರೀಕ್ಷೆಯ ಅರ್ಧ ಪತ್ರಿಕೆಯನ್ನೂ ಇಂದು ಪೂರ್ಣ ಮಾಡಲು ಮಕ್ಕಳಿಗೆ ಕಷ್ಟ ಎನಿಸುತ್ತಿದೆ. ಹಾಗಾಗಿಯೇ ‘ಸಿಬಿಎಸ್‍ಇ ಪರೀಕ್ಷೆಯನ್ನೇ ನಡೆಸಬಾರದು’ ಎಂಬ ಮನವಿಯನ್ನು ಕೋರ್ಟಿಗೆ ಕೆಲ ಮಕ್ಕಳು ಮಾಡಿರುವುದು! (ಆ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಲಿಲ್ಲ ಎಂಬುದು ಗಮನಾರ್ಹ).

ಹಾಗಿದ್ದರೆ ಮಾಡಬೇಕಾದ್ದೇನು? ಕೋವಿಡ್ ನಂತರ ಆರೋಗ್ಯ- ಆರ್ಥಿಕತೆ- ಸಮಾಜ ಚೇತರಿಸಿಕೊಳ್ಳಲು ಸಮಯ ಬೇಕಷ್ಟೆ. ಹಾಗೆಯೇ ಶಿಕ್ಷಣ ವ್ಯವಸ್ಥೆಯೂ! ಮಕ್ಕಳಿಗೂ ಕಲಿಕೆಗೆ ಸಮಯವೂ ಬೇಕು, ಸಹಾಯವೂ ಬೇಕು. ಅಪ್ಪ ಅಮ್ಮ ನೆರವಾಗಬೇಕಾದ್ದು ಪರೀಕ್ಷೆಗಿಂತ ಹೆಚ್ಚಾಗಿ ಕಲಿಕೆಯಲ್ಲಿ ಎಂಬುದನ್ನು ನಾವು ಮನಗಾಣಬೇಕು. ಹಾಗಾಗಿ ಮಕ್ಕಳ ಪರೀಕ್ಷೆಗಳನ್ನು ಒಂದಿಷ್ಟು ಸಹಾನುಭೂತಿಯಿಂದ ನೋಡುವ, ತಾವೂ ಒತ್ತಡಕ್ಕೆ ಒಳಗಾಗಿ, ಅವರನ್ನೂ ಒತ್ತಡಕ್ಕೆ ತಳ್ಳುವುದನ್ನು ತಡೆಯುವ ಕೌಶಲಗಳು ಅಪ್ಪ- ಅಮ್ಮಂದಿರಿಗೆ ಇಂದು ಹಿಂದೆಂದಿಗಿಂತ ಹೆಚ್ಚು ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.