‘ವಿಶ್ವವಿದ್ಯಾಲಯ: ಸಂಖ್ಯೆಯಷ್ಟೆ ಮುಖ್ಯವೇ?’ ಎಂಬ ಲೇಖನ (ಸಂಗತ, ಫೆ. 17) ಶಿಕ್ಷಣದ ಇಂದಿನ ಅಧೋಗತಿಯನ್ನು ಓದುಗರ ಮುಂದಿಟ್ಟಿದೆ. ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿರುವ, ವಿಶ್ವವಿದ್ಯಾಲಯ ಗಳೆಂಬ ಭ್ರಮೆ ಹುಟ್ಟಿಸುವ ಸ್ನಾತಕೋತ್ತರ ಕೇಂದ್ರಗಳು ನಮ್ಮ ವಿದ್ಯಾಭ್ಯಾಸದ ಅಸಲಿ ಅರ್ಥವನ್ನೇ ಪಲ್ಲಟಗೊಳಿಸುತ್ತಿರುವ ಹೊತ್ತು ಇದು.
ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯಲ್ಲಿ ನಾನು ಎಪ್ಪತ್ತರ ದಶಕದಲ್ಲಿ ತತ್ವಶಾಸ್ತ್ರ ಓದಿದೆ. ಅದೊಂದು ರಸಮಯ, ವೈಚಾರಿಕ, ಉಲ್ಲಾಸಮಯ ವಾತಾವರಣದ ಕಲಿಕೆ. ಆಕರ್ಷಕ ಹೆಸರಿನ ಮಾನಸ ಗಂಗೋತ್ರಿಯನ್ನು ರೂಪಿಸಿದವರು ಕವಿ ಕುವೆಂಪು. ಮನಸ್ಸನ್ನು ಪವಿತ್ರಗೊಳಿಸುವ, ಹೊಸ ಸಂವೇದನೆಗಳನ್ನು ರೂಢಿಸುವ, ಹೊಸ ವಿಚಾರಗಳನ್ನು ಆಲಿಸುವುದಷ್ಟೇ ಅಲ್ಲ ಅವುಗಳ ಮೇಲೆ ಪ್ರಭುತ್ವ ವನ್ನು ಸಾಧಿಸಲು ನೆರವಾಗುವ, ಲೋಕಜ್ಞಾನವನ್ನು ವಿಸ್ತರಿಸುವ, ವಿಶ್ವದ ನಾನಾ ಭಾಗಗಳಿಂದ ಕಲಿಯಲು ಬಂದ ವಿದ್ಯಾರ್ಥಿಗಳ ಜೊತೆ ಬೆರೆತು ಸಂವಾದಿಸುವ ಪರಿಕಲ್ಪನೆಯಾಗಿ ಕುವೆಂಪು ಅದನ್ನು ರೂಪಿಸಿದರು. ಈ ಕಾರಣದಿಂದ, ತಾವು ಕವಿಯಷ್ಟೇ ಅಲ್ಲ ಶ್ರೇಷ್ಠ ಶಿಕ್ಷಣ ತಜ್ಞ, ತತ್ವಜ್ಞಾನಿ ಎಂಬುದನ್ನೂ ಈ ಮೂಲಕ ತೋರಿಸಿಕೊಟ್ಟದ್ದು ಕರ್ನಾಟಕದ ಹೆಗ್ಗಳಿಕೆ.
ಇದೇ ಮಾದರಿಯನ್ನು ಮುಂದೆ ಬೆರಳೆಣಿಕೆಯ ವಿಶ್ವವಿದ್ಯಾಲಯಗಳು ಅಳವಡಿಸಿಕೊಂಡವು. ವಿಶ್ವ ವಿದ್ಯಾಲಯದ ಕಲ್ಪನೆ ಪೂರ್ಣ ಪ್ರಮಾಣದಲ್ಲಿ ಸಾಕಾರಗೊಳ್ಳಬೇಕೆಂದರೆ, ಬಹು ಮುಖ್ಯವಾಗಿ ಬೋಧನಾಂಗ, ಸಂಶೋಧನಾಂಗ ಮತ್ತು ಪ್ರಸಾರಾಂಗ ಇರಲೇಬೇಕು. ಈ ಎಲ್ಲ ಅಂಗಗಳೂ ಆ ಕಾಲಕ್ಕೆ ದೊಡ್ಡ ಪ್ರಮಾಣದಲ್ಲಿಯೇ ಕ್ರಿಯಾಶೀಲವಾಗಿದ್ದವು. ಬೋಧನಾಂಗದಲ್ಲಿ ರಾಧಾಕೃಷ್ಣನ್, ಟಿ.ಎಸ್.ವೆಂಕಣ್ಣಯ್ಯ, ಸಿಡಿಎನ್, ಕುವೆಂಪು, ಎಲ್.ಬಸವರಾಜು, ಹಾಮಾನಾ, ಅನಂತಮೂರ್ತಿ, ತೀನಂಶ್ರೀ ಅವರಂತಹ ಖ್ಯಾತಿವೆತ್ತ ಹಲವಾರು ಪ್ರಾಧ್ಯಾಪಕರು ಇದ್ದರು. ತಮ್ಮ ಸೃಜನಶೀಲ ಬೋಧನೆಯಿಂದ ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತಾ, ದೀಪ್ತ ಗೊಳಿಸುತ್ತಾ, ಉಜ್ವಲಗೊಳಿಸಬಲ್ಲವರಾಗಿದ್ದರು.
ಆಗಿನ ಪ್ರಸಾರಾಂಗವಂತೂ ಪ್ರಭುಶಂಕರ ಅವರ ಸಾರಥ್ಯದಲ್ಲಿ ಅಕ್ಷರಶಃ ಜೀವಂತವಾಗಿತ್ತು. ಅಲ್ಲಿ ಪ್ರಕಟಗೊಂಡ ಗ್ರಂಥಗಳು ವಿಶ್ವಮಾನ್ಯವಾದವು ಎಂದರೆ ಅತಿಶಯೋಕ್ತಿಯೇನೂ ಅಲ್ಲ. ಅದು ಮುಂದೆ ಉಳಿದ ವಿಶ್ವವಿದ್ಯಾಲಯಗಳಲ್ಲೂ ಪ್ರಸಾರಾಂಗ ಸಕ್ರಿಯವಾಗಲು ಪ್ರೇರಕವಾಯಿತು. ಸಂಶೋಧನಾಂಗ ಅಷ್ಟೊಂದು ಪ್ರಮಾಣದಲ್ಲಿ ಮುನ್ನೆಲೆಗೆ ಬಾರದಿದ್ದರೂ ತನ್ನ ಮಿತಿಯಲ್ಲಿ ಅದೂ ಕೆಲಸ ನಿರ್ವಹಿಸಿತು.
ಮಾನಸಗಂಗೋತ್ರಿ ಎಂಬ ಮಂತ್ರಸದೃಶ ಪರಿಸರ ಭೌತಿಕವಾಗಿಯೂ ತನ್ನ ಚೆಲುವಾದ ವಿನ್ಯಾಸದಿಂದ, ಭವ್ಯವಾದ ಕಟ್ಟಡಗಳಿಂದ, ಮಲೆನಾಡಿನ ಪ್ರಕೃತಿಯಂತೆ ಕಂಗೊಳಿಸುತ್ತಿದ್ದ ಹಸಿರಿನ ರಮ್ಯತೆಯಿಂದ, ಗಾಂಧಿ ವಿಚಾರಗಳನ್ನು ಹೊತ್ತ ಗಾಂಧಿ ಭವನದಿಂದ ‘ನೋಟ ಸೇರದು ಯಾರಿಗೆ?’ ಎನ್ನುವಂತೆ ಜ್ಞಾನ ಸಮೃದ್ಧಿಯ ಒಂದು ಶಾಂತಿನಿಕೇತನದಂತೆ ಇದ್ದುದೇ ಹೌದು.
ವಿಶ್ವದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ವಿಷಯಗಳನ್ನು ಕಲಿಯಲು ಬರುತ್ತಿದ್ದರು. ನಾನು ಕಲಿಯುತ್ತಿದ್ದ ತತ್ವಶಾಸ್ತ್ರ ವಿಭಾಗದಲ್ಲೇ ಅಮೆರಿಕ ಮತ್ತು ಥಾಯ್ಲೆಂಡಿನ ವಿದ್ಯಾರ್ಥಿಗಳಿದ್ದರು. ಹೀಗೆ ಎಲ್ಲ ವಿಭಾಗಗಳಲ್ಲೂ ಹೊರದೇಶಗಳ ವಿದ್ಯಾರ್ಥಿಗಳಿದ್ದರು. ಅದೊಂದು ಮಿನಿ ವಿಶ್ವವೇ ಆಗಿತ್ತು. ಹೊರದೇಶದ ವಿದ್ಯಾರ್ಥಿಗಳ ವಿಭಿನ್ನ ಸಂಸ್ಕೃತಿ, ಭಾಷೆ, ಧರ್ಮಗಳ ಪರಿಚಯ ನಮಗಾಗಿ, ನಮ್ಮೆಲ್ಲರಲ್ಲಿ ರೋಮಾಂಚನ ಮೂಡಿಸುವಂತಿತ್ತು. ವಿಶ್ವವಿದ್ಯಾಲಯವೆಂದರೆ ಹೀಗಿರಬೇಕಲ್ಲವೇ? ಅದರ ಪರಿಕಲ್ಪನೆ ಎಂದರೆ ಬೌದ್ಧಿಕ, ಮಾನಸಿಕ ವಿಕಸನವಲ್ಲವೇ? ಅದು ವಿಶ್ವ ಮಟ್ಟಕ್ಕೆ ವ್ಯಕ್ತಿತ್ವವನ್ನು ಎತ್ತರಿಸುವುದಲ್ಲವೇ? ಆದರೆ ಈಗೇನಾಗಿದೆ?
ಈಗಿನ ಪರಿಸ್ಥಿತಿ ಘನಘೋರ. ಈಗಿರುವ ವಿಶ್ವವಿದ್ಯಾಲಯ ಎಂಬ ಹೆಸರಿನ ಸಾಧಾರಣ ಕಾಲೇಜುಗಳು ಬಿದ್ದ ಮನೆಯ ಅವಶೇಷಗಳ ಮೇಲೆ ನಿಂತಂತೆ ಕಾಣಿಸುತ್ತವೆ. ಪದವಿ ಓದಿದ ಅಂಗಳದಲ್ಲೇ ಎರಡು, ಮೂರು ಅಥವಾ ಒಂದೇ ವಿಷಯವಾರು ಸ್ನಾತಕೋತ್ತರ ಕೇಂದ್ರ. ಆ ಪಾಪದ ವಿದ್ಯಾರ್ಥಿಗಳ ಮಾನಸಿಕ, ಬೌದ್ಧಿಕ ವಿಕಾಸ ಎಷ್ಟರಮಟ್ಟಿನದು ಎಂಬುದೇ ಸಂದೇಹಾಸ್ಪದ. ಸ್ವಸಾಮರ್ಥ್ಯದಿಂದ ಎಲ್ಲೋ ಬೆರಳೆಣಿಕೆಯ ವಿದ್ಯಾರ್ಥಿಗಳು ಸುಮಾರಾಗಿ ಲೋಕಜ್ಞಾನವನ್ನು ಗಳಿಸಿಯಾರು!
ಜಿಲ್ಲೆಗೊಂದು, ತಾಲ್ಲೂಕಿಗೊಂದು (ಮುಂದೆ ಹೋಬಳಿಗೊಂದು ಬಂದರೂ ಅಚ್ಚರಿಯಿಲ್ಲ) ಸ್ನಾತಕೋತ್ತರ ಕೇಂದ್ರಗಳಾಗುತ್ತಾ ಅವು ವಿಶ್ವವಿದ್ಯಾಲಯದ ಭ್ರಮೆ ಹುಟ್ಟಿಸಿ ನಮ್ಮ ಮಕ್ಕಳನ್ನು ಮತ್ತಷ್ಟು ಅಜ್ಞಾನಿಗಳನ್ನಾಗಿ ಮಾಡುವುದು ನಮ್ಮ ನಾಡಿಗಾಗುವ ಕೇಡು. ಇದನ್ನು ನಮ್ಮ ಶಿಕ್ಷಣ ತಜ್ಞರು, ರಾಜಕಾರಣಿಗಳು ಅರಿಯಬೇಕು.
ಜ್ಞಾನವೆಂಬುದು ಸತತ ಶ್ರಮದಿಂದ, ಅನವರತ ಕುತೂಹಲದಿಂದ, ಅದ್ಭುತವೆನಿಸುವ ಅಸಾಮಾನ್ಯ ಪರಿಸರದಿಂದ, ವಿಭಿನ್ನ ಸಂಸ್ಕೃತಿ, ಭಾಷೆ, ಧರ್ಮಕ್ಕೆ ಸೇರಿದ ವಿದ್ಯಾರ್ಥಿಗಳ ಒಡನಾಟದಿಂದ, ಆಟದಿಂದ, ಪರಸ್ಪರ ಜ್ಞಾನ ವಿನಿಮಯದಿಂದ ಗಳಿಕೆಯಾಗುತ್ತಾ ಕ್ರಮೇಣ ವಿಕಾಸಗೊಳ್ಳುತ್ತಾ ಮುಂದಿರುವ ಬದುಕಿನ ಪುಟ ತೆರೆಯುವುದಕ್ಕೆ ನೆರವಾಗುವಂತಹುದು.
ನನ್ನ ವಿಶ್ವವಿದ್ಯಾಲಯದ ವಿದ್ಯಾರ್ಜನೆ, ಅದರಿಂದ ಗಳಿಸಿದ ಲಾಭ ಎಣೆಯಿಲ್ಲದ್ದು. ಅಲ್ಲಿ ಕಲಿತ ನನ್ನ ಕಾಲದ ಪ್ರತಿಭಾವಂತ ವಿದ್ಯಾರ್ಥಿಗಳು ಇಂದು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದ್ದಾರೆ. ಯಾಕೆಂದರೆ ಅವರೆಲ್ಲ ನಿಜ ಅರ್ಥದ ವಿಶ್ವವಿದ್ಯಾಲಯದಲ್ಲಿ ಕಲಿತವರೇ ವಿನಾ ಸಂಖ್ಯಾ ವಿಶ್ವವಿದ್ಯಾಲಯದಲ್ಲಿ ಅಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.