ADVERTISEMENT

ತಾತ್ವಿಕ ಭಿನ್ನಮತ ಮತ್ತು ಕಾಂಗ್ರೆಸ್‌ ಭವಿಷ್ಯ

ಜನಪರವಾದ ಎಲ್ಲ ಧ್ವನಿಗಳೂ ಪಕ್ಷದಲ್ಲಿ ಅಸ್ತಿತ್ವ ಪಡೆಯಬೇಕಿದೆ

ಡಾ.ಕಿರಣ್ ಎಂ ಗಾಜನೂರು ಶಿವಮೊಗ್ಗ
Published 22 ಆಗಸ್ಟ್ 2019, 20:39 IST
Last Updated 22 ಆಗಸ್ಟ್ 2019, 20:39 IST
   

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶಕ್ಕೆ ಆಧುನಿಕ ರಾಜಕಾರಣದ ಪರಿಭಾಷೆಯನ್ನು ಪರಿಚಯಿಸಿದ ಪಕ್ಷವೊಂದು, ಇಂದು ಹೆಚ್ಚಿನ ರಾಜ್ಯಗಳಲ್ಲಿ ಅಧಿಕೃತ ವಿರೋಧ ಪಕ್ಷವಾಗಿಯೂ ಕಾರ್ಯನಿರ್ವಹಿಸಲು ಆಗದಿರುವ ಸ್ಥಿತಿಗೆ ತಲುಪಿರುವುದು ಸೋಜಿಗದ ಸಂಗತಿಯಾಗಿದೆ. ಈ ಕಾರಣಕ್ಕಾಗಿಯೇ ಚಿಂತಕ ಯೋಗೇಂದ್ರ ಯಾದವ್ ‘ತನ್ನದೇ ಚಾರಿತ್ರಿಕ ತಪ್ಪುಗಳ ಕಾರಣಕ್ಕೆ ಕಾಂಗ್ರೆಸ್ ಸಾಯಬೇಕಿದೆ’ ಎಂಬ ಅರ್ಥದ ಅಭಿಪ್ರಾಯವನ್ನು ಲೋಕಸಭಾ ಚುನಾವಣಾ ಫಲಿತಾಂಶದ ನಂತರ ವ್ಯಕ್ತಪಡಿಸಿದ್ದರು.

ಭಾರತದ ರಾಜಕೀಯ ಪಕ್ಷಗಳ ಇತಿಹಾಸ ತಿಳಿದಿರುವ ಯಾರೂ ಈಗ ಕಾಂಗ್ರೆಸ್‌ಗೆ ಒದಗಿರುವ ಸ್ಥಿತಿಯನ್ನು, ಬರೀ ಅದೊಂದು ಪಕ್ಷವೊಂದರ ಏಳು-ಬೀಳಿನ ಪ್ರಶ್ನೆ ಎಂಬ ಸರಳ ಮತ್ತು ಶುಷ್ಕ ರಾಜಕೀಯ ಅರ್ಥದಲ್ಲಿ ಗ್ರಹಿಸಲು ಸಾಧ್ಯವಿಲ್ಲ. ಈ ಬೆಳವಣಿಗೆಯನ್ನು
ದೇಶದ ಜನರ ಬದಲಾಗುತ್ತಿರುವ ಪ್ರಜಾಸತ್ತಾತ್ಮಕ ತೀರ್ಮಾನಗಳ ಸಂಗತಿಯಾಗಿಯೂ ನೋಡಬೇಕಿದೆ.

ಬಹುಸಂಸ್ಕೃತಿಯ ದೇಶದಲ್ಲಿ ಪ್ರಾತಿನಿಧಿತ್ವದ ನಿಜವಾದ ಅರ್ಥ ‘ಜನಸಮುದಾಯಗಳ ವಿಭಿನ್ನ ಹಿತಾಸಕ್ತಿಗಳನ್ನು ಪ್ರತಿನಿಧಿಸುವುದು ಮಾತ್ರವಲ್ಲ, ಪರಸ್ಪರ ವಿರುದ್ಧ ಹಿತಾಸಕ್ತಿಗಳನ್ನು ಸಮನ್ವಯಗೊಳಿಸಿ ಸರ್ವಸಮ್ಮತ ಸಾರ್ವತ್ರಿಕ ಅಭಿಪ್ರಾಯ ರೂಪಿಸುವುದು’ ಎಂಬ
ಸೈದ್ಧಾಂತಿಕ ತಿಳಿವಿನ ತಳಹದಿಯ ಮೇಲೆ ಸಾಂವಿಧಾನಿಕ ರಾಜಕಾರಣವನ್ನು ನಿರೂಪಿಸಿದ ಶ್ರೇಯಸ್ಸು ಕಾಂಗ್ರೆಸ್ಸಿನಲ್ಲಿದ್ದ ಚಿಂತಕರಿಗೆ ಸಲ್ಲುತ್ತದೆ. ಹಾಗಾಗಿಯೇ ದಲಿತ, ಹಿಂದುಳಿದ, ಮಹಿಳೆ ಮತ್ತು ಅಲ್ಪಸಂಖ್ಯಾತರು ಪ್ರಜಾತಾಂತ್ರಿಕ ವ್ಯವಸ್ಥೆಯ ಭಾಗವಾಗಬೇಕು ಎಂಬ ರಾಜಕಾರಣವನ್ನು ಕಾಂಗ್ರೆಸ್‌ ಬಹುಕಾಲ ತನ್ನ ಆಲೋಚನೆಯ ಕೇಂದ್ರವಾಗಿ ಇರಿಸಿಕೊಂಡಿತ್ತು.

ADVERTISEMENT

ಧರ್ಮಾಧಾರಿತ ರಾಷ್ಟ್ರೀಯತೆ ಮತ್ತು ಮುಕ್ತಮಾರುಕಟ್ಟೆಯನ್ನು ಪ್ರತಿಪಾದಿಸುವ ಅಭಿವೃದ್ಧಿಯ ಮಾದರಿಗಳೇ ಇಂದು ಭಾರತದ ಭವಿಷ್ಯಕ್ಕೆ ಇರುವ ದಾರಿ ಎಂಬ ಏಕಮುಖ ನಿರೂಪಣೆಗಳ ಭಾಗವಾಗಿಯೇ ನಾವು ಕಾಂಗ್ರೆಸ್ ಅವಸಾನದ ಹಾದಿಯ ಕುರಿತ ಚರ್ಚೆಯನ್ನು ನಿರ್ವಹಿಸಲೇಬೇಕಿದೆ. ಈ ಕುರಿತು ಯೋಚಿಸಿದಾಗ ಕೆಲವು ಮುಖ್ಯ ಅಂಶಗಳನ್ನು ಗುರುತಿಸಬಹುದಾಗಿದೆ.

ಮೊದಲನೆಯದು, 1950-60 ಮತ್ತು 70ರ ದಶಕಗಳಲ್ಲಿ, ನಾಯಕರು ತೆಗೆದುಕೊಳ್ಳುತ್ತಿದ್ದ ನಿರ್ಣಯಗಳನ್ನು ಸೈದ್ಧಾಂತಿಕ ಭಿನ್ನತೆಗಳ ಕಾರಣಕ್ಕೆ ಗಟ್ಟಿಯಾಗಿ ವಿರೋಧಿಸುವಂತಹವರು ಕಾಂಗ್ರೆಸ್‌ನಲ್ಲಿದ್ದರು. ತಾತ್ವಿಕ ಭಿನ್ನತೆಯ ಕಾರಣಕ್ಕೆ ಪಕ್ಷದಿಂದ ಹೊರಬಂದವರೂ ಇದ್ದರು. ಇದರ ಅರ್ಥ, ಕಾಂಗ್ರೆಸ್‌ಗೆ ಬರುತ್ತಿದ್ದ ಕಟು ವಿಮರ್ಶೆಗಳು ಪಕ್ಷದ ಒಳಗಿನಿಂದಲೇ ಬರುತ್ತಿದ್ದವು ಅಥವಾ ಆಗತಾನೆ ಭಾರತೀಯ ಚಿಂತಕರನ್ನು ಪ್ರಭಾವಿಸಿ ಬೆಳೆಯುತ್ತಿದ್ದ ಗಾಂಧಿವಾದ, ಸಮಾಜವಾದ, ಎಡಪಂಥೀಯ ಚಿಂತನಧಾರೆಯ ಕಡೆಯಿಂದ ಬರುತ್ತಿದ್ದವು. ಅಂತಹ ವಿಮರ್ಶೆಗಳನ್ನುಚಾರಿತ್ರಿಕವಾಗಿ ಸಂಪೂರ್ಣವಾಗಿ ಒಳಗೊಳ್ಳಲು ಸೋತಿದ್ದರೂ ಆ ಮಾದರಿಯ ಚರ್ಚೆಗಳಿಗೆ ಅವಕಾಶ ನೀಡುವ ಮುಕ್ತತೆ ಪಕ್ಷದ ವ್ಯಾಪ್ತಿಯಲ್ಲಿ ಸಾಧ್ಯವಿತ್ತು. ಆ ಕಾರಣಕ್ಕೆ ಪಕ್ಷದ ಒಳಗೇ ಸಮಾಜವಾದಿಗಳು, ಸಮತಾವಾದಿಗಳು, ಸಂಪ್ರದಾಯವಾದಿ ಹಿನ್ನೆಲೆಯ ನಾಯಕರು ತಾತ್ವಿಕ ಭಿನ್ನತೆಯ ಜೊತೆಗೆ ಒಟ್ಟಿಗೆ ಇರಲು ಸಾಧ್ಯವಿತ್ತು. ನಿಜವಾದ ಅರ್ಥದಲ್ಲಿ ಈ ಧೋರಣೆ ಪಕ್ಷದ ಶಕ್ತಿಯಾಗಿತ್ತು. ಈ ಅಂಶ, ಕಾರ್ಯಕರ್ತರಲ್ಲಿ ಭಿನ್ನತೆಯಿದ್ದರೂ ಬೆರೆಯಬಹುದಾದ ಲೋಕದೃಷ್ಟಿಯೊಂದನ್ನು ರೂಪಿಸಿತ್ತು.

ಆದರೆ 90ರ ದಶಕದ ನಂತರ ಉದಾರವಾದಿ ಆರ್ಥಿಕತೆಯನ್ನು ದೇಶದ ನೀತಿಯಾಗಿಸ್ವತಃ ಕಾಂಗ್ರೆಸ್ ಜಾರಿಗೊಳಿಸಿದ ಮೇಲೆ ಮಾರುಕಟ್ಟೆ ಒತ್ತಡದ ಕಾರಣಕ್ಕೆ, ಪಕ್ಷದ ಸೈದ್ಧಾಂತಿಕ ಬೆಳವಣಿಗೆಯ ಬಹಳ ಮುಖ್ಯ ಆಧಾರವಾಗಿದ್ದ ಭಿನ್ನ ತಾತ್ವಿಕ ನೆಲೆಯ ನಾಯಕ
ರನ್ನು ಮೂಲೆಗುಂಪು ಮಾಡಲಾಯಿತು. ಅವರ ಜಾಗದಲ್ಲಿ, ಉದಾರವಾದಿ ಆರ್ಥಿಕತೆಯನ್ನು ಪ್ರಶ್ನಾತೀತವಾಗಿ ಬೆಂಬಲಿಸುವ ಉದ್ಯಮಿಗಳು ಸೇರಿಕೊಂಡರು. ಇದರ ಪರಿಣಾಮ, ಇಂದು ಕಾಂಗ್ರೆಸ್ಸಿನ ಬಹುತೇಕ ನಾಯಕರ ಪಾಲಿಗೆ ತಮ್ಮ ಹಲವು ಉದ್ಯಮಗಳಲ್ಲಿ ರಾಜಕೀಯವೂ ಒಂದು ಉದ್ಯಮವಾದಂತಿದೆ.

ಹೀಗಾಗಿ, ಕಳೆದ 20 ವರ್ಷಗಳಲ್ಲಿ ಕಾಂಗ್ರೆಸ್ ಕುರಿತಾಗಿ ಬಂದಿರುವ ವಿಮರ್ಶೆಯು ಬಲಪಂಥೀಯ ರಾಜಕಾರಣದ ಟೀಕೆಗಳಿಂದಲೇ ತುಂಬಿಹೋಗಿದೆ. ಹೀಗಾಗಿ ಅವು ವಸ್ತುನಿಷ್ಠವಾಗಿರುವುದಕ್ಕಿಂತ ಹೆಚ್ಚಾಗಿ ಜಾಳು ಜಾಳಾಗಿ ಕಾಣುತ್ತವೆ, ಸತ್ಯಕ್ಕಿಂತ ಹೆಚ್ಚಾಗಿ ಊಹೆಯನ್ನು ಆಧರಿಸಿವೆ. ಇಂತಹ ಟೀಕೆಗಳನ್ನೆಲ್ಲ ಸಮರ್ಥವಾಗಿ ಎದುರಿಸಬೇಕಿದ್ದ ಕಾಂಗ್ರೆಸ್ ನಾಯಕತ್ವ ಅದರಲ್ಲಿ ಸಂಪೂರ್ಣ ಸೋತಿದೆ. ಇದಕ್ಕೆ ಮುಖ್ಯ ಕಾರಣ, ಪಕ್ಷದ ಮಟ್ಟದಲ್ಲಿ ಸೈದ್ಧಾಂತಿಕ ಬದ್ಧತೆ ಇಲ್ಲದಿರುವವರು ನಾಯಕರಾಗಿರುವುದು!

ಇನ್ನು ಕಾಂಗ್ರೆಸ್‌ನ ಪತನದ ಹಾದಿಗೆ ಕಾರಣವಾದ ಎರಡನೆಯ ಅಂಶ ಅದರ ಹೈಕಮಾಂಡ್. ಒಂದು ಕಾಲದಲ್ಲಿ ಕಾಂಗ್ರೆಸ್‌ಗೆ ಯಾವುದು ಬಲ ಆಗಿತ್ತೋ, ಇಂದು ಅದೇ ಅದರ ಮಿತಿಯಾಗಿದೆ. ಆದರೆ ಅದು ಕಾಂಗ್ರೆಸ್ ನಾಯಕತ್ವಕ್ಕೆ ಅರ್ಥವಾಗುತ್ತಿರುವಂತೆ ಕಾಣುತ್ತಿಲ್ಲ.

ನಿಜವಾದ ಅರ್ಥದಲ್ಲಿ ಕಾಂಗ್ರೆಸ್ ಬದಲಾಗಬೇಕಾದರೆ ಮತೀಯ ಮತ್ತು ಫ್ಯಾಸಿಸ್ಟ್ ಶಕ್ತಿಗಳನ್ನು ವಿರೋಧಿಸುವ ಸಮಾಜದ ಎಲ್ಲಾ ತಾತ್ವಿಕತೆಯನ್ನು ಪಕ್ಷದ ಕಕ್ಷೆಯೊಳಗೆ ತರಬೇಕಿದೆ. ಭಿನ್ನವಿದ್ದೂ ಬೆರೆಯಬಹುದಾದ ಹಳೆಯ ಲೋಕದೃಷ್ಟಿಯನ್ನು ಮತ್ತೆ ಅಳವಡಿಸಿಕೊಳ್ಳಬೇಕಿದೆ. ಆಗ ಮಾತ್ರವೇ ಕಾಂಗ್ರೆಸ್ಸಿಗೆ ಭವಿಷ್ಯವಿದೆ. ಇಲ್ಲವಾದರೆ, ಚುನಾವಣೆ ಗೆದ್ದರೂ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಅಸಾಧ್ಯವಾಗುವ ಸ್ಥಿತಿಗೆ ಪಕ್ಷ ತಲುಪುತ್ತದೆ. ಅದರ ಲಕ್ಷಣಗಳನ್ನು ಕರ್ನಾಟಕ ಸೇರಿದಂತೆ ಬಹುತೇಕ ಕಡೆ ಈಗಾಗಲೇ ಕಾಣುತ್ತಿದ್ದೇವೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.