ADVERTISEMENT

ಸಂಗತ: ಬೇಕಾಗಿದೆ ಒಳಗೊಳ್ಳುವಿಕೆಯ ಅಭಿವೃದ್ಧಿ

ಸರ್ಕಾರದ ಬಜೆಟ್ ನೀತಿಯು ಒಳಗೊಳ್ಳುವಿಕೆ ಅಭಿವೃದ್ಧಿಯ ಪರಿಕಲ್ಪನೆಯಿಂದ ದೂರ ಸರಿಯುತ್ತಿದೆ ಎಂಬ ಭಾವನೆ ಬರುವಂತಾಗಿದೆ. ಇದು ಅಪಾಯಕಾರಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 19:30 IST
Last Updated 27 ಜನವರಿ 2022, 19:30 IST
ಸಂಗತ
ಸಂಗತ   

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಒಳಗೊಳ್ಳುವಿಕೆಯುಳ್ಳ ಅಭಿವೃದ್ಧಿ ಅಗತ್ಯದ ಕುರಿತು ಫಿಲಿಪ್ಪೀನ್ಸ್ ದೇಶದ ಅಂಕಿಅಂಶ, ಪ್ರಯೋಗ ಮತ್ತು ಅನುಭವಗಳ ಬೆಳಕಿನಲ್ಲಿ ಆಳವಾದ ಸಂಶೋಧನೆ (2007) ನಡೆಸಿದವರು ಇಫ್ಜಾಲ್ ಅಲಿ ಮತ್ತು ಹ್ಯುನ್ ವಾ. ಸನ್. ಆರ್ಥಿಕ ಅಭಿವೃದ್ಧಿ ಸಾಧಿಸುವಾಗ ಸಮಾಜದ ಎಲ್ಲ ವರ್ಗಗಳು ನೆಮ್ಮದಿಯಿಂದ ಬದುಕಲು ಬೇಕಾದ ಹೊಸ ಅವಕಾಶಗಳನ್ನು ಸೃಷ್ಟಿಸುವುದರ ಜತೆಗೆ ಬಡವರಿಗೆ ಗರಿಷ್ಠ ಪ್ರಮಾಣದಲ್ಲಿ ಲಾಭವಾಗುವ ನೀತಿಗಳನ್ನು (ಬಜೆಟ್ ನೀತಿಯೂ ಸೇರಿದಂತೆ) ರೂಪಿಸಬೇಕೆಂದು ತಮ್ಮ ಸಿದ್ಧಾಂತದಲ್ಲಿ ಅವರು ಒತ್ತಿ ಹೇಳಿದ್ದಾರೆ. ಸಹಜವಾಗಿ ಇದು ಭಾರತದ ಸ್ಥಿತಿಗತಿಗೆ ಈಗಲೂ ಅನ್ವಯವಾಗುವ ಸಿದ್ಧಾಂತ.

ಭ್ರಷ್ಟಾಚಾರವು ಒಳಗೊಳ್ಳುವಿಕೆಯುಳ್ಳಅಭಿವೃದ್ಧಿಯ ಪರಮಶತ್ರು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಜರ್ಮನಿಯ ಟ್ರಾನ್ಸ್‌ಪರೆನ್ಸಿ ಇಂಟರ್‌ ನ್ಯಾಷನಲ್ ಸಂಸ್ಥೆ ಮೊನ್ನೆ ಮೊನ್ನೆ ಪ್ರಕಟಿಸಿದ 2021ರ ‘ಜಾಗತಿಕ ಮಟ್ಟದ ಭ್ರಷ್ಟಾಚಾರ ಗ್ರಹಿಕೆ’ ಸೂಚ್ಯಂಕವು ಭಾರತದಲ್ಲಿನ ಭ್ರಷ್ಟಾಚಾರದ ಕುರಿತು ಕಳವಳ ವ್ಯಕ್ತಪಡಿಸಿದೆ. ಪರ್ಸೆಂಟೇಜ್‌ ಹಾವಳಿ ವಿಪರೀತಕ್ಕೆ ಹೋಗಿರುವ ಕುರಿತ ಆರೋಪದ ದೂರು ದಿಲ್ಲಿ ಮುಟ್ಟುವ ಮಟ್ಟಕ್ಕೆ ಹೋಗಿದೆ. ಇದರಿಂದಾಗಿ, ರಾಜ್ಯ ಬಜೆಟ್ ಸೇರಿದಂತೆ ಅನೇಕ ನೀತಿಗಳು ಬುಡಮೇಲಾಗಿ ಶ್ರೀಸಾಮಾನ್ಯರಿಗೆ ಬೇಕಾದ ಒಳಗೊಳ್ಳುವಿಕೆ ಅಭಿವೃದ್ಧಿ ಸಾಧ್ಯತೆಯ ಬಾಗಿಲು ಮುಚ್ಚಿಹೋಗುತ್ತಿದೆ.

1991ರಲ್ಲಿ ತ್ರಿಕರಣಗಳ ಯುಗ ಶುರುವಾದ ಮೇಲೆ ಆರ್ಥಿಕ ಬೆಳವಣಿಗೆ ದರ ಏರಿಕೆಯಾದರೂ ಅಸಮಾನತೆ ತೀವ್ರಗೊಂಡ ಸತ್ಯಸಂಗತಿಯನ್ನು 11ನೇ ಪಂಚವಾರ್ಷಿಕ ಯೋಜನೆಯ ದಾಖಲೆಪತ್ರ ಪ್ರತಿಪಾದಿಸಿತ್ತು. ದುರ್ಬಲ ವರ್ಗಗಳಿಗೆ ನೆರವಾಗುವ ಒಳ
ಗೊಳ್ಳುವಿಕೆ ಅಭಿವೃದ್ಧಿಯ ಅಗತ್ಯವನ್ನು ಅದು ಒತ್ತಿ ಹೇಳಿತ್ತು. 2009ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಪ್ರಭಾವಶಾಲಿಯಾಗಿದ್ದ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ‘ಆರ್ಥಿಕ ಬೆಳವಣಿಗೆ ಸುದೀರ್ಘವಾಗಬೇಕಾದರೆ ಮುಂದೆ ಅದು ಎಲ್ಲರನ್ನೂ ಒಳಗೊಳ್ಳಬೇಕು. ಎಲ್ಲರನ್ನೂ ಒಳಗೊಳ್ಳುವುದು ಎಂದರೆ ಅತಿ ಹೆಚ್ಚಿನ ಸಂಖ್ಯೆಯ ಜನರ ಸಂತೃಪ್ತಿ ಎಂದು ಅರ್ಥೈಸಬೇಕಾದ ಅಗತ್ಯವೇ ಇಲ್ಲ. ಸತ್ಯವಾಗಿ ಇದು ಎಲ್ಲರ ಅಭ್ಯುದಯವಾಗಿದೆ’ ಎಂದು ಘೋಷಿಸಿಬಿಟ್ಟರು.

ADVERTISEMENT

2009ರ ಫೆಬ್ರುವರಿಯಲ್ಲಿ ಸಂಸತ್ತಿನಲ್ಲಿ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ, ಕೇಂದ್ರ ಹಣಕಾಸು ಸಚಿವರಾಗಿದ್ದ ಪ್ರಣವ್ ಮುಖರ್ಜಿ ಅವರು ಸೋನಿಯಾ ಅವರ ಹೇಳಿಕೆಯನ್ನು ಯಥಾವತ್ತಾಗಿ ಉದ್ಧರಿಸಿ ಪುಣ್ಯ ಕಟ್ಟಿಕೊಂಡರು. ನಂತರ, ರಾಷ್ಟ್ರ ರಾಜಕಾರಣದಲ್ಲಿದ್ದ ಮಹಾನಾಯಕರು ಸಹ ಮುಂದೆ ವಿವಿಧ ಮಹತ್ವದ ಸಂದರ್ಭಗಳಲ್ಲಿ ಸೋನಿಯಾ ಅವರ ಈ ಹೇಳಿಕೆಯನ್ನು ಉದ್ಧರಿಸಿ ನಿಷ್ಠೆ ಪ್ರದರ್ಶಿಸಿದರು. ಆತನಕ ಆದ ಆರ್ಥಿಕ ಬೆಳವಣಿಗೆಯ ಲಾಭಗಳಿಂದ ವಂಚಿತರಾದವರಿಗೆ ಈ ಲಾಭಗಳನ್ನು ತಲುಪಿಸುವುದು ಒಳಗೊಳ್ಳುವಿಕೆ ಅಭಿವೃದ್ಧಿಯ ಮತ್ತೊಂದು ಗುರಿಯಾಗಬೇಕೆಂದು ಹೇಳುವ ಗೋಜಿಗೆ ಯಾರೂ ಹೋಗಲೇ ಇಲ್ಲ.

2012ರಲ್ಲಿ ಪ್ರಾರಂಭವಾದ 12ನೇ ಪಂಚವಾರ್ಷಿಕ ಯೋಜನೆಯು ಹೆಚ್ಚಿನ ವೇಗವುಳ್ಳ ಒಳಗೊಳ್ಳುವಿಕೆ ಅಭಿವೃದ್ಧಿಯನ್ನು ಸಾಧಿಸುವ ಗುರಿ ಹೊಂದಿದ್ದರೂ 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆಡಳಿತ ಶುರುವಾದ ನಂತರ ಅದು ಮೂಲೆಗುಂಪಾಯಿತು. ಪಂಚವಾರ್ಷಿಕ ಯೋಜನೆಗೆ ಆರು ವರ್ಷಗಳ ಹಿಂದೆಯೇ ವಿದಾಯ ಹೇಳಿದ ಸರ್ಕಾರ, ಒಳಗೊಳ್ಳುವಿಕೆ ಅಭಿವೃದ್ಧಿಯ ಅಗತ್ಯದ ಕುರಿತು ಮಾತನಾಡುವುದನ್ನೇ ಈಗ ನಿಲ್ಲಿಸಿಬಿಟ್ಟಿದೆ. ಈಗ ಗೋಚರವಾಗುತ್ತಿರುವುದು ಒಳಗೊಳ್ಳುವಿಕೆ ಅಭಿವೃದ್ಧಿಯ ಗುರಿ ಸಾಧನೆಗೆ ಒಲವನ್ನೇ ತೋರದ ಖಾಸಗಿ ರಂಗದ ವೈಭವೀಕರಣ, ಖಾಸಗೀಕರಣದತ್ತ ಕೇಂದ್ರ ಸರ್ಕಾರದ ಭರ್ಜರಿ ಪ್ರಯಾಣ. ಇದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2021- 22ನೇ ಸಾಲಿನ ಬಜೆಟ್ ಭಾಷಣದ ಮೂರನೆಯ ಅನುಬಂಧದಲ್ಲಿ ಸ್ಪಷ್ಟವಾಗಿ ಮೂಡಿಬಂದಿದೆ. ಖಾಸಗಿ ರಂಗವನ್ನು ನಿರ್ಮಲಾ ಆಗಾಗ ಕೊಂಡಾಡುತ್ತಿದ್ದಾರೆ. ಸಾರ್ವಜನಿಕ ವಲಯದಲ್ಲಿರುವ ಹೆಚ್ಚಿನ ಉದ್ದಿಮೆಗಳ ಹುಟ್ಟು ಇರುವುದು ಖಾಸಗಿ ರಂಗದಲ್ಲೇ ಎನ್ನುವ ವಿಸ್ಮಯಕಾರಿ ಹೇಳಿಕೆಯೂ ಕೇಂದ್ರ ಸರ್ಕಾರದ ಹಣಕಾಸು ವಿಭಾಗದ ಪ್ರಮುಖ ಅಧಿಕಾರಿಯ ಜಿಹ್ವೆಯಿಂದಲೇ ಇತ್ತೀಚೆಗೆ ಹೊರಬಂದಿದೆ!

ಕೊರೊನಾ ಹಾವಳಿ ಹರಡಿದಂತೆ ಪರಸ್ಪರ ಸಂಬಂಧ ಹೊಂದಿದ ಹಳೆಯ ಸಮಸ್ಯೆಗಳಾದ ಬಡತನ, ಆರ್ಥಿಕ ಅಸಮಾನತೆ ಮತ್ತು ನಿರುದ್ಯೋಗ ತೀವ್ರ ಸ್ವರೂಪ ಪಡೆಯುತ್ತಿರುವುದು ಆತಂಕಕಾರಿಯಾಗಿದೆ. ಕೇವಲ ಒಂದೇ ವರ್ಷದ ಅವಧಿಯಲ್ಲಿ (2020-21) ಬಡವರ ಸಂಖ್ಯೆ 6 ಕೋಟಿಯಿಂದ 13.4 ಕೋಟಿಗೆ ಜಿಗಿದಿದ್ದು ಕಳವಳಕಾರಿ ಎಂದು ಪ್ಯೂ ಸಂಶೋಧನಾ ಕೇಂದ್ರ ವರದಿ ಮಾಡಿದೆ. 2022ರ ಜಾಗತಿಕ ಅಸಮಾನತೆ ವರದಿಯು ಭಾರತದಲ್ಲಿ ಆದಾಯ ವಿತರಣೆಯಲ್ಲಿ ತೀರ ಇತ್ತೀಚೆಗೆ ತಲೆದೋರಿರುವ ತೀವ್ರ ಅಸಮಾನತೆಯನ್ನು ಎತ್ತಿ ತೋರಿಸಿರುವುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷಿಸುವಂತಿಲ್ಲ.

ನಿರುದ್ಯೋಗದ ಪ್ರಮಾಣ ಶೇ 7ರಷ್ಟಾಗಿದ್ದು, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಈ ಸಮಸ್ಯೆ ಪರಿಹರಿಸುವ ಭರವಸೆಯನ್ನು 2014ರ ಚುನಾವಣೆ ಎದುರಿಸುತ್ತಿದ್ದಾಗ ಮೋದಿ ಅವರು ನೀಡಿದ್ದನ್ನು ಜನ ನೆನಪಿಸಿಕೊಳ್ಳುವುದು ಸಹಜ. ನಿರಾಶೆಯ ಸುಳಿಯಲ್ಲಿರುವ ಜನಸಮೂಹಕ್ಕೆ ಈಗ ಬೇಕಾಗಿರುವುದು ಒಳಗೊಳ್ಳುವಿಕೆ ಅಭಿವೃದ್ಧಿಗೆ ದಾರಿ ಮಾಡಿಕೊಡುವ ಕೇಂದ್ರ ಬಜೆಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.