ADVERTISEMENT

ಸಂಗತ | ಅತಿಥಿ ಉಪನ್ಯಾಸಕ: ಸರ್ಕಾರ ನೆರವಾಗಲಿ

ರಾಜಕುಮಾರ ಕುಲಕರ್ಣಿ
Published 10 ಸೆಪ್ಟೆಂಬರ್ 2025, 0:30 IST
Last Updated 10 ಸೆಪ್ಟೆಂಬರ್ 2025, 0:30 IST
   

ಉನ್ನತ ಶಿಕ್ಷಣ ಇಲಾಖೆಯು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುಮಾರು ಹನ್ನೊಂದು ಸಾವಿರ ಅತಿಥಿ ಉಪನ್ಯಾಸಕರನ್ನು ಕಳೆದ ಆಗಸ್ಟ್ ತಿಂಗಳಿನಲ್ಲಿ ಸೇವೆಯಿಂದ ಬಿಡುಗಡೆಗೊಳಿಸಿದೆ. ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳು ಕಳೆದರೂ ಇದುವರೆಗೂ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡಿಲ್ಲ. ರಾಜ್ಯದ ಒಟ್ಟು 430 ಸರ್ಕಾರಿ ಪದವಿ ಕಾಲೇಜುಗಳಲ್ಲಿನ ಚಿತ್ರಣವಿದು. ಆತಂಕದ ಸಂಗತಿ ಎಂದರೆ, ಸೇವೆಯಿಂದ ಬಿಡುಗಡೆಗೊಂಡವರಲ್ಲಿ 5,500 ಅತಿಥಿ ಉಪನ್ಯಾಸಕರು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ನಿಯಮಾವಳಿ ಪ್ರಕಾರ ನೇಮಕಾತಿಗೆ ಅರ್ಹತೆ ಹೊಂದಿಲ್ಲ. ಇವರಲ್ಲಿ ಅನೇಕರು ನಿವೃತ್ತಿ ವಯಸ್ಸಿಗೆ ಹತ್ತಿರದಲ್ಲಿದ್ದಾರೆ.

ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ನೀಗಿಸಲು ಅತಿಥಿ ಉಪನ್ಯಾಸಕರೆಂಬ ಪರ್ಯಾಯ ಮಾರ್ಗವನ್ನು ಶಿಕ್ಷಣ ಇಲಾಖೆ ಕಂಡುಕೊಂಡಿದೆ. ಈ ಮೊದಲು ಅರೆಕಾಲಿಕ ಉಪನ್ಯಾಸಕರೆಂದು ಅವರನ್ನು ಕರೆಯಲಾಗುತ್ತಿತ್ತು. ಕಾಯಂ ಉಪನ್ಯಾಸಕರು ಪಡೆಯುತ್ತಿರುವ ಸಂಬಳಕ್ಕೆ ಹೋಲಿಸಿದರೆ ಅತಿಥಿ ಉಪನ್ಯಾಸಕರ ಸಂಬಳ ಅತ್ಯಲ್ಪ. ಗಳಿಕೆ ರಜೆ, ಆರೋಗ್ಯ ವಿಮೆ ಮತ್ತು ನಿವೃತ್ತಿ ವೇತನದಂತಹ ಸೌಲಭ್ಯಗಳು ಅವರಿಗಿಲ್ಲ. ನೇಮಕಾತಿ ಆದೇಶ ಒಂದು ವರ್ಷದ ಅವಧಿಗೆ ಮಾತ್ರ ಸೀಮಿತವಾಗಿದ್ದು, ಪ್ರತಿವರ್ಷ ಹೊಸದಾಗಿ ನಿಯುಕ್ತಿಗೊಳ್ಳಬೇಕಾದ ನಿಯಮದ ಕಾರಣ, ಸದಾಕಾಲ ಅಭದ್ರತೆಯಲ್ಲಿ ಕೆಲಸ ಮಾಡಬೇಕು.

ಈ ನಡುವೆ, ಅತಿಥಿ ಉಪನ್ಯಾಸಕರು ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಇಲ್ಲವೇ ಪಿಎಚ್.ಡಿ ಪದವಿ ಪಡೆದಿರಬೇಕೆನ್ನುವ ನಿಯಮವನ್ನು ಯುಜಿಸಿ ಜಾರಿಗೆ ತಂದಿದೆ. ಸ್ನಾತಕೋತ್ತರ ಪದವಿಯನ್ನು ಮಾತ್ರ ಹೊಂದಿರುವ ಅತಿಥಿ ಉಪನ್ಯಾಸಕರಲ್ಲಿ ಅನೇಕರು ಕಳೆದ ಎರಡು ದಶಕಗಳಿಂದ ಬೋಧನೆಯಲ್ಲಿ ತೊಡಗಿಸಿಕೊಂಡಿರುವವರು. ಯುಜಿಸಿ ನಿಯಮಾವಳಿ ಚಾಲ್ತಿಗೆ ಬಂದರೆ ಕೆಲಸ ಕಳೆದುಕೊಳ್ಳುವ ಆತಂಕವನ್ನು ಅವರು ಎದುರಿಸುತ್ತಿದ್ದಾರೆ. ಕಡಿಮೆ ಸಂಬಳ ಮತ್ತು ಕೆಲಸದ ಒತ್ತಡದಿಂದಾಗಿ ಅತಿಥಿ ಉಪನ್ಯಾಸಕರಿಗೆ ಯುಜಿಸಿ ನಿಗದಿಪಡಿಸಿರುವ ಅರ್ಹತೆಯನ್ನು ಹೊಂದಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಉಪನ್ಯಾಸಕರು ಈಗಾಗಲೇ ಮಧ್ಯವಯಸ್ಸು ದಾಟಿದ್ದು, ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ಶೈಕ್ಷಣಿಕ ವೆಚ್ಚವನ್ನು ಸರಿದೂಗಿಸುವುದರ ನಡುವೆ ಜರ್ಜರಿತರಾಗಿದ್ದಾರೆ. ಮಕ್ಕಳ ಶಿಕ್ಷಣಕ್ಕೆಂದು ಖರ್ಚು ಮಾಡಬೇಕಾದ ವಯಸ್ಸಿನಲ್ಲಿ ತಮ್ಮ ಸ್ವಂತದ ಶಿಕ್ಷಣಕ್ಕೆ, ಅದೂ ಅತ್ಯಲ್ಪ ಸಂಬಳದಲ್ಲಿ ಖರ್ಚು ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ.

ADVERTISEMENT

ಕಡಿಮೆ ಸಂಬಳದಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕಾತಿ ಮಾಡಿಕೊಳ್ಳುವುದರಿಂದ ಸರ್ಕಾರದ ಬೊಕ್ಕಸಕ್ಕೆ ಆಗುವ ಆರ್ಥಿಕ ಹೊರೆಯನ್ನು ತಪ್ಪಿಸಿದಂತಾಗುತ್ತದೆ ಎಂದು ಯೋಚಿಸಿದರೆ ಅದು ತಪ್ಪು ಆಲೋಚನೆಯಾಗುತ್ತದೆ. ಸರ್ಕಾರದ ಈ ನಡೆ ನೇರವಾಗಿ ಶಿಕ್ಷಣದ ಗುಣಮಟ್ಟದ ಕುಸಿತಕ್ಕೆ ಕಾರಣವಾಗುತ್ತಿದೆ. ಅದೆಷ್ಟೋ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರಿಂದಲೇ ಪಾಠಗಳು ನಡೆಯುತ್ತಿವೆ.

ಪ್ರಸ್ತುತ, ವೃತ್ತಿಪರ ಕೋರ್ಸ್‌ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿರುವುದರಿಂದ ಪದವಿ ಹಾಗೂ ಸ್ನಾತಕೋತ್ತರ ಹಂತದಲ್ಲಿ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಜ್ಞಾನ ಶಾಖೆಗಳನ್ನು ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳನ್ನು ಅಭ್ಯಸಿಸಲು ಆಸಕ್ತಿ ತೋರುತ್ತಿರುವ ಹೊತ್ತಿನಲ್ಲಿ ವಿಜ್ಞಾನ, ಸಮಾಜ ವಿಜ್ಞಾನ, ಭಾಷೆ ಹಾಗೂ ಲಲಿತ ಕಲೆಗಳನ್ನು ಬೋಧಿಸಲು ಉಪನ್ಯಾಸಕರ ಕೊರತೆ ಎದುರಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈ ಮೊದಲು ಉಪನ್ಯಾಸಕರಿಗಷ್ಟೇ ಸೀಮಿತವಾಗಿದ್ದ ‘ಅತಿಥಿ’ ಪಟ್ಟ ಈಗ ಗ್ರಂಥಪಾಲಕ ವೃತ್ತಿಗೂ ವಿಸ್ತರಿಸಿದೆ. ಕಳೆದ ಕೆಲವು ವರ್ಷಗಳಿಂದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಗ್ರಂಥಪಾಲಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ನೇಮಕಾತಿಯ ಅವಧಿ ಒಂದು ವರ್ಷಕ್ಕೆ ಸೀಮಿತ. ಈ ಕಡಿಮೆ ಅವಧಿಯಲ್ಲಿ ಗ್ರಂಥಪಾಲಕರು ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸುವುದಾದರೂ ಹೇಗೆ? ಸರ್ಕಾರದ ನಿರ್ಲಕ್ಷ್ಯದಿಂದಾಗಿ ಹೆಚ್ಚಿನ ಪದವಿ ಕಾಲೇಜುಗಳಲ್ಲಿನ ಗ್ರಂಥಾಲಯಗಳು ಶೋಚನೀಯ ಸ್ಥಿತಿಯಲ್ಲಿವೆ.

ಶಿಕ್ಷಕರ ಕೊರತೆ ತೀವ್ರವಾಗಿರುವ ಹೊತ್ತಿನಲ್ಲಿ ಹೊಸ ಸರ್ಕಾರಿ ಕಾಲೇಜುಗಳನ್ನು ಮತ್ತು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಅಗತ್ಯವೇನು? ಹೊಸ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಸ್ಥಾಪನೆಗಾಗಿ ಮಾಡುವ ಖರ್ಚನ್ನು ಈಗಾಗಲೇ ಅಸ್ತಿತ್ವದಲ್ಲಿರುವ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾಯಂ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಬಳಸಿಕೊಳ್ಳುವುದು ಉತ್ತಮ.

ನೆಲ್ಸನ್ ಮಂಡೆಲಾ ಶಿಕ್ಷಣದ ಮಹತ್ವವನ್ನು ಹೀಗೆ ಹೇಳಿರುವರು: ‘ರಾಷ್ಟ್ರವನ್ನು ನಾಶಪಡಿಸಲು ಅಣುಬಾಂಬ್‌ಗಳಾಗಲೀ ಅಥವಾ ದೀರ್ಘವ್ಯಾಪ್ತಿಯ ಕ್ಷಿಪಣಿಗಳಾಗಲೀ ಬೇಕಿಲ್ಲ. ಶಿಕ್ಷಣದ ಗುಣಮಟ್ಟವನ್ನು ಕಡಿಮೆ ದರ್ಜೆಗೆ ಇಳಿಸಿದರೆ ಸಾಕು, ಅದು ದೇಶದ ನಾಶಕ್ಕೆ ನಾಂದಿ ಹಾಡುತ್ತದೆ’. ಶಿಕ್ಷಣದ ನೀತಿ ನಿಯಮಗಳನ್ನು ರೂಪಿಸುವವರು ಶಿಕ್ಷಕರ ಸ್ಥಿತಿಗತಿ ಕುರಿತು ವಿವೇಚಿಸಬೇಕಾದದ್ದು ಈ ಸಂದರ್ಭದ ತುರ್ತು ಅಗತ್ಯವಾಗಿದೆ.

ವಿದ್ಯಾರ್ಥಿಗಳಿಗಾಗಿ ತಮ್ಮ ಜೀವನವನ್ನೇ ಸವೆಸಿರುವ ಅತಿಥಿ ಉಪನ್ಯಾಸಕರು ಹೊಸ ನಿಯಮದ ಕಾರಣದಿಂದಾಗಿ ತೊಂದರೆಗೆ ಒಳಗಾಗಬಾರದು. ಅವರಿಗೆ ಎದುರಾಗಿರುವ ಸಂಕಷ್ಟವನ್ನು ಪರಿಹರಿಸಲು ರಾಜ್ಯ ಸರ್ಕಾರ ಮಧ್ಯಮ ಮಾರ್ಗವೊಂದನ್ನು ಕಂಡುಕೊಳ್ಳುವುದು ಅಗತ್ಯ. ಅತಿಥಿ ಉಪನ್ಯಾಸಕರ ಹಿತಾಸಕ್ತಿಯನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.