ADVERTISEMENT

ಸಂಗತ: ನೋವಿಗೂ ಕರುಣೆಗೂ ಭಾಷೆ ಎಲ್ಲಿಯದು?

ಡಾ.ಮುರಳೀಧರ ಕಿರಣಕೆರೆ
Published 14 ಜನವರಿ 2026, 0:22 IST
Last Updated 14 ಜನವರಿ 2026, 0:22 IST
<div class="paragraphs"><p>ಸಂಗತ: ನೋವಿಗೂ ಕರುಣೆಗೂ ಭಾಷೆ ಎಲ್ಲಿಯದು?</p></div>

ಸಂಗತ: ನೋವಿಗೂ ಕರುಣೆಗೂ ಭಾಷೆ ಎಲ್ಲಿಯದು?

   

ಸೇವಾಸಂಸ್ಥೆಯೊಂದು ಅಂಗವಿಕಲರು, ಅನಾಥರು, ಅಸಹಾಯಕ ವೃದ್ಧರಿಗೆ ಆರ್ಥಿಕ ನೆರವು ಮತ್ತು ಸವಲತ್ತುಗಳ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಫಲಾನುಭವಿಗಳು, ದಾನಿಗಳು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಗಳಾಗಿದ್ದ ಆ ಕಾರ್ಯಕ್ರಮದಲ್ಲಿ, ಕಾರು ಚಾಲಕರೊಬ್ಬರ ಸ್ವಯಂಪ್ರೇರಿತ ನಡೆ ಸಭಿಕರ ಅಂತಃಕರಣವನ್ನು ತಟ್ಟಿತು.

ಅವರು ಬೆಂಗಳೂರಿನಿಂದ ತೀರ್ಥಹಳ್ಳಿಯ ಕಾರ್ಯಕ್ರಮಕ್ಕೆ ಅತಿಥಿಗಳನ್ನು ಕರೆತಂದವರು. ವಿವಿಧ ನಮೂನೆಯ ನ್ಯೂನತೆಗಳಿಂದ ಬಳಲುತ್ತಿರುವವರ ವೇದನೆ, ವಿಕಲಾಂಗ ಮಕ್ಕಳನ್ನು ಸಂಭಾಳಿಸಲು ತಾಯಂದಿರ ಪರದಾಟ, ಚಿಕಿತ್ಸೆಗಾಗಿ ತಮ್ಮಲ್ಲಿದ್ದ ಹಣವನ್ನೆಲ್ಲ ವ್ಯಯಿಸಿ ಸಾಲಕ್ಕೆ ಬಿದ್ದವರ ದಯನೀಯ ಸ್ಥಿತಿ, ಸಂಕಟ, ಯಾತನೆಗಳನ್ನು ಕಣ್ಣಾರೆ ಕಂಡುಹನಿಗಣ್ಣಾದ ಅವರು– ತಮ್ಮ ಜೇಬಿನಲ್ಲಿದ್ದ ದಿನದ ದುಡಿಮೆಯ 3 ಸಾವಿರ ರೂಪಾಯಿಗಳನ್ನು ಬಡ ತಾಯಿ
ಯೊಬ್ಬರಿಗೆ ನೀಡಿದಾಗ ಹಲವರ ಹೃದಯ ಒದ್ದೆಯಾಗಿತ್ತು!

ADVERTISEMENT

‘ಇವರು ಯಾರೋ ನನಗೆ ಗೊತ್ತಿಲ್ಲ. ದೊಡ್ಡ ಸಹಾಯ ಮಾಡುವಷ್ಟು ಸಾಮರ್ಥ್ಯ ನನಗಿಲ್ಲ. ನನಗೀಗ ನಲವತ್ತೈದು ವರ್ಷ. ಇಲ್ಲಿನ ದೃಶ್ಯ ನಿಜಕ್ಕೂ ನನ್ನ ಕಣ್ಣು ತೆರೆಸಿದೆ. ದಾನದ ಮಹತ್ವ ಅರಿವಾಗಿದೆ’ ಎಂಬ ಅವರ ಮಾತು ಆ ಕಾರ್ಯಕ್ರಮದ ಫಲಶ್ರುತಿಯನ್ನು ಸಾರುವುದರ ಜೊತೆಗೆ, ಹಲವರ ಮನಃಪರಿವರ್ತನೆಗೂ ಕಾರಣವಾಯಿತು. ಪ್ರಯತ್ನ ಪ್ರಾಮಾಣಿಕವಾಗಿದ್ದರೆ ಪರಮಾತ್ಮನೂ ಸಹಾಯ ಮಾಡುವನು ಎಂಬ ಜನಪದರ ನುಡಿ ನೆನಪಾಗಿತ್ತು.

ಅಗತ್ಯವಿರುವ ಎಲ್ಲರಿಗೂ ಆಹಾರ, ಆಸರೆ, ಆರೋಗ್ಯ, ಆಶ್ರಯದಂತಹ ಅಗತ್ಯ ಸೌಕರ್ಯ ಕಲ್ಪಿಸು
ವುದು ಯಾವುದೇ ಸರ್ಕಾರಕ್ಕೂ ಕಷ್ಟಸಾಧ್ಯ. ಸರ್ಕಾರದ ನೆರವಿನಿಂದ ವಂಚಿತರಾದ ದೀನ–ದುರ್ಬಲರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರಿಗೆ ಬದುಕು ಕಟ್ಟಿಕೊಳ್ಳಲು ಸಂಘ–ಸಂಸ್ಥೆಗಳ ನೆರವಿನ ಅಗತ್ಯ ಇದೆ. ಕಷ್ಟದಲ್ಲಿರುವವರಿಗೆ ನೆರವು ನೀಡುವ, ಅವರ ದುಃಖ ದುಮ್ಮಾನಗಳಿಗೆ ಸ್ಪಂದಿಸುವ ದಾನಿಗಳ ಸಂಖ್ಯೆಯೂ ದೊಡ್ಡದಿದೆ. ಇವರಲ್ಲಿ ಎಲ್ಲರೂ ಆರ್ಥಿಕವಾಗಿ ಸ್ಥಿತಿವಂತರೇನಲ್ಲ. ತಮ್ಮ ದುಡಿಮೆಯ ಒಂದು ಭಾಗವನ್ನು ಪರರಿಗೆ ಹಂಚುವ ಮನಃಸ್ಥಿತಿಯವರು. ತಾವು ನೀಡಿದ್ದು ಒಳ್ಳೆಯ ಉದ್ದೇಶಕ್ಕೆ ವಿನಿಯೋಗವಾಗಬೇಕೆಂದು ಇವರು ಸಹಜವಾಗಿಯೇ ಬಯಸುತ್ತಾರೆ. ಕೊಡುವ ಮನಸ್ಸಿದ್ದರೂ ಯಾರಿಗೆ ಕೊಡಬೇಕೆಂದು ಗೊತ್ತಾಗದೇ ತಮ್ಮ ಬಯಕೆಯನ್ನು ಮುಚ್ಚಿಟ್ಟುಕೊಳ್ಳುವವರೂ ಇದ್ದಾರೆ. ಈ ವಿಚಾರದಲ್ಲಿ ಉತ್ತಮ ನಡತೆಯ ಸೇವಾಸಂಸ್ಥೆಗಳಿದ್ದರೆ ದಾನಿಗಳು ದಾನ ಮಾಡಲು ಮುಂದೆ ಬರುತ್ತಾರೆ. ತನ್ಮೂಲಕ ಸಂತೋಷ, ತೃಪ್ತಿ ಅನುಭವಿಸುತ್ತಾರೆ.

ದೀನರು, ದುರ್ಬಲರಿಗೆ ನೆರವು ನೀಡುವ ಹಲವು ಸಂಘ–ಸಂಸ್ಥೆಗಳು ನಮ್ಮ ನಡುವೆ ಇವೆ. ಆದರೆ, ಕೆಲವು ಸಂದರ್ಭಗಳಲ್ಲಿ ಸಹೃದಯರಿಂದ ಪಡೆಯುವ ದಾನ–ದೇಣಿಗೆಯ ದುರುಪಯೋಗವಾಗುತ್ತಿದೆ. ಹೀಗಾದಾಗ ಕೊಡುವವರು ಹಿಂದೇಟು ಹಾಕು
ತ್ತಾರೆ. ಕೊಡುವವರಿದ್ದರೂ ಸರಿಯಾಗಿ ತಲಪಿಸುವವರು ಇಲ್ಲದಿದ್ದರೆ ಸಹಾಯದ ಅಗತ್ಯ ಇರುವವರಿಗೆ ಅನ್ಯಾಯವಾಗುತ್ತದೆ. ಸೇವಾರ್ಥ ಧರ್ಮಸಂಸ್ಥೆಗಳ ವ್ಯವಹಾರದಲ್ಲಿ ನಿಸ್ವಾರ್ಥತೆ, ಪ್ರಾಮಾಣಿಕತೆ, ಪಾರದರ್ಶಕತೆ, ಸದ್ವಿನಿಯೋಗ ತುಂಬಾ ಮುಖ್ಯ. ಕಾನೂನುಬದ್ಧವಾಗಿ ನೋಂದಾಯಿಸಿಕೊಂಡು, ನಿಯಮಬದ್ಧವಾಗಿ ಕಾರ್ಯ ಚಟುವಟಿಕೆ ನಡೆಸಬೇಕು. ಸಹಾಯ ಮಾಡುವವರು ಮತ್ತು ನಿಜವಾಗಿಯೂ ಅವಶ್ಯಕತೆ ಇರುವವರ ನಡುವೆ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸಬೇಕು.

ಅಂಗವಿಕಲರಿಗೆ ಸಮಾಜದ ಅನುಕಂಪದಿಂದ ಪ್ರಯೋಜನವಾಗದು. ಪದೇ ಪದೇ ದೌರ್ಬಲ್ಯದ ಬಗ್ಗೆಯೇ ಮಾತನಾಡುತ್ತಿದ್ದರೆ, ಮರುಕ ತೋರುತ್ತಿದ್ದರೆ ಅವರು ಮತ್ತಷ್ಟು ಮುದುಡುತ್ತಾರೆ, ಕೀಳರಿಮೆ ಬೆಳೆಯುತ್ತದೆ. ಹಿಂಜರಿಕೆಯ ಕಾರಣದಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲಾಗದು. ಪರಾವಲಂಬನೆಯಿಂದಾಗಿ ಮಾನಸಿಕವಾಗಿ ಮತ್ತಷ್ಟು ಕುಸಿಯುತ್ತಾರೆ. ಹಾಗಾಗಿ ಅವರಿಗೆ ವಿಶ್ವಾಸ ತುಂಬುವ ಕಾರ್ಯ ಮಾಡಬೇಕು, ಸ್ವಸಾಮರ್ಥ್ಯದ ಮೇಲೆ ನಂಬಿಕೆ ಬರಿಸಬೇಕು. ಒಂದು ಅಂಗವಿಕಲಗೊಂಡಿದ್ದರೂ ಉಳಿದ ಅಂಗಗಳ ಸಾಮರ್ಥ್ಯವನ್ನು ಮನಗಾಣಿಸಬೇಕು. ಬಹುವಿಧದ ಅಂಗವೈಕಲ್ಯ ಹೊಂದಿದ್ದರೂ, ನಿರಂತರ ಪ್ರಯತ್ನದಿಂದ ಸ್ವಾವಲಂಬಿ ಬದುಕು ಕಟ್ಟಿಕೊಂಡವರು, ಉತ್ತಮ ಉದ್ಯೋಗ ಮಾಡುತ್ತಿರುವವರು, ಸಾಹಸ–ಕ್ರೀಡೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿರುವವರ ಯಶೋಗಾಥೆಗಳನ್ನು ತಿಳಿಸಬೇಕು. ಶಿಕ್ಷಣದ ಮಹತ್ವವನ್ನು ಮನದಟ್ಟು ಮಾಡಿಸುವ ಜೊತೆಗೆ, ಪೂರಕ ಕೌಶಲಗಳ ಕಲಿಕೆಯ ವ್ಯವಸ್ಥೆ ಮಾಡುವುದು ಅಗತ್ಯವಾಗಿ ಆಗಬೇಕಿರುವ ಕಾರ್ಯ.

ಸೇವಾ ಮನೋಭಾವದ ಸಂಘಟನೆಗಳಾಗಲಿ, ಧರ್ಮಾರ್ಥ ಸಂಸ್ಥೆಗಳಾಗಲಿ ತಮ್ಮ ಪ್ರಾಮಾಣಿಕ ಉದ್ದೇಶ, ಚಟುವಟಿಕೆಗಳನ್ನು ಮನದಟ್ಟು ಮಾಡಿಸಲು ಕನಿಷ್ಠ ವರ್ಷಕ್ಕೊಮ್ಮೆಯಾದರೂ ಸಭೆ ನಡೆಸಿ ದಾನಿಗಳು, ಫಲಾನುಭವಿಗಳು, ಆಸಕ್ತ ಸಾರ್ವಜನಿಕರನ್ನು ಒಟ್ಟಿಗೆ ಸೇರಿಸಬೇಕು. ಕೊಡುವವರು ಪಡೆಯುವವರನ್ನು ನೇರವಾಗಿಭೇಟಿಯಾಗುವುದರಿಂದ ತಾವು ನೀಡುವ ಸಹಾಯ ಅರ್ಹರನ್ನು ತಲಪುತ್ತಿರುವುದನ್ನು ನೋಡಿ ತೃಪ್ತಿ ಪಡೆಯುತ್ತಾರೆ. ಇದು ಮತ್ತಷ್ಟು ನೀಡಲು ಪ್ರೇರಣೆ ನೀಡುತ್ತದೆ. ಅಲ್ಲಿ ಸೇರಿರುವ ಸಾರ್ವಜನಿಕರೂ ಸಹಾಯದ ಅಗತ್ಯವಿರುವವರ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಸ್ವಯಂಪ್ರೇರಣೆಯಿಂದ ನೆರವಾಗಲು ಮುಂದಾಗುತ್ತಾರೆ.

‘ನೊಂದವರ ನೋವು ನೋಯದವರೇನು ಬಲ್ಲರು’ಎಂಬುದು ಅಕ್ಕಮಹಾದೇವಿ ಮಾತು. ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಗಳಾದಾಗ ಮಾತ್ರ ನೊಂದವರ ನೋವು ನೋಯದವರ ಹೃದಯಕ್ಕೆ ಮುಟ್ಟುತ್ತದೆ. ಕೈಯೆತ್ತಿ ಕೊಡುವಂತೆ ಮನವನ್ನು ಪ್ರಚೋದಿಸುತ್ತದೆ. ದಯೆಯೆಂಬುದು ಕುರುಡರೂ ಕಾಣಬಹುದಾದ, ಕಿವುಡರೂ ಕೇಳಬಹುದಾದ ಮಾನವೀಯ ಭಾಷೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.