ADVERTISEMENT

ಮಾನವೀಯ ಮೌಲ್ಯದ ಬೆಳ್ಳಿಗೆರೆ

ಸಂಕಷ್ಟದ ಈ ಕಾಲಘಟ್ಟದಲ್ಲಿ, ದೀನರ ಪರ ಮಿಡಿಯುವ ಹೃದಯಗಳ ಅವಶ್ಯಕತೆ ಹಿಂದೆಂದಿಗಿಂತಲೂ ತುಸು ಹೆಚ್ಚಾಗಿದೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 19:30 IST
Last Updated 3 ನವೆಂಬರ್ 2020, 19:30 IST
ಬಾಬಾ ಕಾ ಡಾಬಾ ದಂಪತಿ 
ಬಾಬಾ ಕಾ ಡಾಬಾ ದಂಪತಿ    

ಸಾಲು ಸಾಲು ಹಬ್ಬದ ಸಂಭ್ರಮ ಒಂದು ಕಡೆ. ಇನ್ನೂ ಕಾಡುತ್ತಿರುವ ಕೊರೊನಾ ಸೋಂಕಿನ ಆತಂಕ ಇನ್ನೊಂದು ಕಡೆ. ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಹಾವಳಿಯಿಂದ ಪಡುತ್ತಿರುವ ಪಾಡು ಬೇರೆ. ಇದರ ಜೊತೆಗೆ ಆರ್ಥಿಕ ಹಿಂಜರಿತದ ಬರೆ. ಈ ನಡುವೆ ಮಾಧ್ಯಮಗಳಲ್ಲಿ ವರದಿಯಾದ ಎರಡು ಪ್ರಸಂಗಗಳು ಶ್ರೇಷ್ಠ ಮಾನವೀಯ ಮೌಲ್ಯಗಳ ಅಸ್ತಿತ್ವದ ಬೆಳ್ಳಿಗೆರೆ ಮೂಡಿಸಿದವು.

ಮೊದಲನೆಯ ಪ್ರಸಂಗ, ದೆಹಲಿಯ ಮಾಳವೀಯ ನಗರದಲ್ಲಿ ವೃದ್ಧ ದಂಪತಿ ನಡೆಸುತ್ತಿರುವ ಬಾಬಾ ಕಾ ಢಾಬಾದ ವ್ಯಥೆ. ಕೊರೊನಾ ಹೊಡೆತದಿಂದ ವ್ಯಾಪಾರವಿಲ್ಲದೆ ತೀವ್ರ ಸಂಕಷ್ಟಕ್ಕೊಳಗಾಗಿ ಅವರ ಬದುಕು ಅಕ್ಷರಶಃ ಅಸಹನೀಯವಾಗಿತ್ತು. ಈ ದಂಪತಿಯ ಅಸಹಾಯಕ ಕಣ್ಣೀರಿನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ ಮರುದಿನವೇ ಬಾಬಾನ ಢಾಬಾದ ಮುಂದೆ ಜನಸಾಗರವೇ ನೆರೆದಿತ್ತು. ಕೇವಲ ಒಂದು ವಿಡಿಯೊ ನೂರಾರು ಜನರ ಅಂತಃಕರಣವನ್ನು ಕಲಕಿ, ಆ ದಂಪತಿಯ ಮುಖದಲ್ಲಿ ಸಂತೋಷವನ್ನು ಮರಳಿ ತಂದಿತ್ತು.

ಎರಡನೆಯ ಪ್ರಸಂಗ, ಇದೇ ದಂಪತಿಯ ಬಗ್ಗೆ ಮಾಧ್ಯಮಗಳ ಮೂಲಕ ಮಾಹಿತಿ ಪಡೆದ ನೇತ್ರ ತಜ್ಞ ಡಾ. ಸಮೀರ್‌ ಸೂದ್, ಈ ಹಿರಿಜೀವಗಳ ಕಣ್ಣುಗಳನ್ನು ಪರೀಕ್ಷಿಸಿದರು. ನಂತರ ಅವರಿಗೆ ಉಚಿತವಾಗಿ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಯನ್ನು ಪೂರೈಸಿ ಅವರ ಬಾಳಿನಲ್ಲಿ ಬೆಳಕು ಮೂಡಿಸಿದರು. ನಾಗರಿಕ ಸಮಾಜದ ಈ ತ್ವರಿತಗತಿಯ ಸ್ಪಂದನೆ ಅನೇಕರ ಮೊಗದಲ್ಲಿ ಸಂತಸದ ಗೆರೆಗಳನ್ನು ಮೂಡಿಸಿ ಧನ್ಯತಾಭಾವ ಮೂಡಿಸಿತು.

ADVERTISEMENT

ಸದ್ಯದ ವಿಷಮ ಪರಿಸ್ಥಿತಿಯಲ್ಲಿ ಬದುಕಿನ ಬಂಡಿ ಅತ್ಯಂತ ಕಠಿಣ ಮಾರ್ಗದಲ್ಲಿ ಸಾಗುತ್ತಿದೆ. ಹಂಚಿಕೊಂಡು ತಿನ್ನುವ ಮತ್ತು ಕೈ ಹಿಡಿದು ಮೇಲೆತ್ತುವ, ದೀನರ ಪರ ಮಿಡಿಯುವ ಹೃದಯಗಳ ಅವಶ್ಯಕತೆ ಹಿಂದೆಂದಿಗಿಂತಲೂ ತುಸು ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಮುದ್ರಣ, ದೃಶ್ಯ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಪಾತ್ರ ಅತ್ಯಂತ ಹಿರಿದಾಗಿದ್ದು, ನಿರ್ದಿಷ್ಟ ವ್ಯಾಪ್ತಿಯಲ್ಲಿ ತಮ್ಮ ಜವಾಬ್ದಾರಿ
ಯನ್ನು ಅವು ನಿರ್ವಹಿಸುತ್ತಿವೆ.

ದೇಸಿ ಉತ್ಪನ್ನಗಳ ಪ್ರಚಾರ ಮತ್ತು ಮಾರಾಟಕ್ಕೆ ಸ್ವದೇಶಿ ಆಂದೋಲನವೇ ಮದ್ದು ಎಂಬುದು ಈಗೀಗ ಅನೇಕರಿಗೆ ಮನವರಿಕೆಯಾಗುತ್ತಿದೆ. ಪ್ರಾದೇಶಿಕವಾರು ಉತ್ಪಾದನೆಯಾಗುವ ಸಾಮಗ್ರಿಗಳಾದ ಆಹಾರ ಪದಾರ್ಥ, ಕರಕುಶಲ ವಸ್ತು, ಕೈಮಗ್ಗದ ಉಡುಪು, ಹಣ್ಣು, ತರಕಾರಿ, ಮಸಾಲೆ ಪದಾರ್ಥಗಳು, ಹೈನೋತ್ಪನ್ನ, ಚರ್ಮೋತ್ಪನ್ನ, ಮಣ್ಣಿನ ಪರಿಕರ, ಲೋಹದ ಉತ್ಪನ್ನಗಳನ್ನು ವೈಜ್ಞಾನಿಕ ರೀತಿಯಲ್ಲಿ ಮ್ಯಾಪಿಂಗ್ ಮಾಡುವುದು ಅತ್ಯವಶ್ಯಕವಾಗಿದೆ.
ತದನಂತರ ಆಯಾ ಉದ್ಯೋಗದ ಕೌಶಲದ ಅಧ್ಯಯನದ ಜೊತೆಗೆ ಅವುಗಳನ್ನು ಉತ್ತಮವಾಗಿ ಕಾಪಿಡುವ ಕಾರ್ಯವಾಗಬೇಕಿದೆ. ಅದರ ಜೊತೆಗೆ ಆಯಾ ಔದ್ಯೋಗಿಕ ವಲಯದ ಕುಂದುಕೊರತೆಗಳನ್ನು ನಿವಾರಿಸಲು ಕಾರ್ಯಯೋಜನೆ ಹಮ್ಮಿಕೊಳ್ಳಬೇಕು. ನಂತರದ್ದು ಬ್ರ್ಯಾಂಡಿಂಗ್‌ನ ಕೆಲಸ.

ಸ್ಥಳೀಯವಾಗಿ ಉತ್ಪಾದನೆಯಾಗುವ ಅನೇಕ ವಸ್ತುಗಳು ಗುಣಮಟ್ಟದಲ್ಲಿ ಅಗ್ರ ಶ್ರೇಯಾಂಕದ ವ್ಯಾಪ್ತಿಯಲ್ಲೇ ಬಂದರೂ ಪರಿಣಾಮಕಾರಿ ಬ್ರ್ಯಾಂಡಿಂಗ್ ಆಗದೇ ಮಾರುಕಟ್ಟೆಯಲ್ಲಿ ಸೋಲುತ್ತಿವೆ. ಉದಾಹರಣೆಗೆ, ನಮ್ಮ ಗಾಣಗಳಲ್ಲೇ ತಯಾರಾಗುವ ಅಡುಗೆಎಣ್ಣೆ ಅರೋಗ್ಯಕರವಾಗಿದ್ದು ಸಮಂಜಸ ಬೆಲೆಗೆ ಲಭ್ಯವಿದ್ದರೂ ಕೆಲವು ಬಹುರಾಷ್ಟ್ರೀಯ ಕಂಪನಿಗಳ ಅಡುಗೆ ಎಣ್ಣೆಗಳ ಆಕರ್ಷಕ ಬ್ರ್ಯಾಂಡಿಂಗ್‌ ಎದುರು ಕಿಮ್ಮತ್ತು ಕಳೆದುಕೊಳ್ಳುತ್ತಿವೆ. ಇಲ್ಲಿ ಗ್ರಾಹಕನ ಪಾತ್ರ ಮುಖ್ಯವಾದರೂ ಮಾರ್ಕೆಟಿಂಗ್ ತಂತ್ರಗಾರಿಕೆ ಸರ್ವಾಂತರ್ಯಾಮಿ ಆಗಿರುವುದರಿಂದ ಗುಣಮಟ್ಟಕ್ಕಿಂತ ಪ್ರಚಾರತಂತ್ರದ ಕೈ ಮೇಲಾಗುತ್ತಿದೆ.

ಸ್ಥಳೀಯ ಉತ್ಪನ್ನಗಳ ಬಲವರ್ಧನೆಗೆ ಸಮುದಾಯದ ಸಹಕಾರದ ಜೊತೆಗೆ ನೈತಿಕ ಬೆಂಬಲ ಅತ್ಯಗತ್ಯ. ನಮ್ಮದೇ ಆದ ಚನ್ನಪಟ್ಟಣದ ಗೊಂಬೆ, ಇಳಕಲ್‌ ಸೀರೆ, ಗುಳೇದಗುಡ್ಡದ ಖಣ, ಅರಸೀಕೆರೆ ತೆಂಗು, ಶಿರಸಿಯ ಅಡಿಕೆ, ಕಮಲಾಪುರದ ಕೆಂಪು ಬಾಳೆ, ದಾವಣಗೆರೆಯ ಬೆಣ್ಣೆ, ಮಂಡ್ಯದ ಬೆಲ್ಲದಂತಹ ವಸ್ತುಗಳ ಬಗ್ಗೆ ಸಂಪೂರ್ಣವಾದ ಅರಿವು ನಮ್ಮ ರಾಜ್ಯದಲ್ಲೇ ಅನೇಕರಿಗೆ ಇಲ್ಲ. ಇನ್ನು ಉಪಯೋಗಿಸುವ ಮಾತು ದೂರ. ತಂತ್ರಜ್ಞಾನದ ಲಭ್ಯತೆ ಅಗಾಧವಾಗಿರುವ ಈ ಕಾಲದಲ್ಲಿ ವಿದ್ಯಾವಂತ ಯುವಜನ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ, ಸ್ಥಳೀಯವಾಗಿ ದೊರೆಯುವ ಉತ್ಕೃಷ್ಟ ಗುಣಮಟ್ಟದ ಪದಾರ್ಥಗಳ ಬಗ್ಗೆ ನಿರಂತರ ಜಾಗೃತಿ ಮೂಡಿಸುವ ಕೆಲಸವಾಗಬೇಕು.

ಗಾಂಧೀಜಿಯ ಸ್ವದೇಶಿ ಚಳವಳಿಯ ಪುನರಾವರ್ತನೆ ವರ್ತಮಾನದ ಬೇಡಿಕೆಯಾಗಿದೆ. ನಮ್ಮ ಆರ್ಥಿಕತೆಗೆ ದೇಶದ ಉತ್ಪಾದನಾ ವಲಯದ ಕೊಡುಗೆ ಕೇವಲ ಶೇ 16ರಿಂದ 17. ಇದನ್ನು ಬಲಪಡಿಸಿ ಕನಿಷ್ಠ ಶೇ 5ರಷ್ಟನ್ನು ಹಿಗ್ಗಿಸಿದರೂ ಆಂತರಿಕ ವಹಿವಾಟು ಹೆಚ್ಚುವುದರ ಜೊತೆಗೆ ವಿದೇಶಿ ಆಮದಿನ ಮೇಲಿನ ಅವಲಂಬನೆ ಕಡಿಮೆಯಾಗಿ ಎಷ್ಟೋ ಉದ್ಯೋಗಗಳ ಸೃಷ್ಟಿಗೆ ಕಾರಣವಾಗುತ್ತದೆ. ಕೇವಲ ಸರ್ಕಾರದ ಸಬ್ಸಿಡಿ, ತೆರಿಗೆ ವಿನಾಯಿತಿ, ಸಾಲಮನ್ನಾದ ಮೇಲೆ ದೃಷ್ಟಿ ಹಾಯಿಸುವ ಬದಲು, ಅಣುಬಾಂಬಿನ ದಾಳಿಯಿಂದ ಎಚ್ಚೆತ್ತು ಅಗಾಧ ದೇಶಪ್ರೇಮ ಮೆರೆದ ಜಪಾನ್, ದಶಕಗಳ ಕಾಲ ನಿರಂತರ ದುಡಿಮೆಯಿಂದ ಜಗತ್ತಿನ ಆರ್ಥಿಕ ಬಲಶಾಲಿ ದೇಶವಾದ ಚೀನಾ ನಮಗೆ ಸ್ಫೂರ್ತಿಯಾಗಿ ಸದೃಢ, ಸ್ವಾವಲಂಬಿ ಭಾರತ ನಿರ್ಮಾಣದತ್ತ ದೇಶ ಮುನ್ನಡೆಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.