ADVERTISEMENT

ಸಂಗತ: ಹಂಪಿ ವಿಶ್ವವಿದ್ಯಾಲಯ– ಅಸ್ಮಿತೆ ಉಳಿಯಲಿ

ನಾಡಿನ ಅಸ್ಮಿತೆಯನ್ನು ಎತ್ತಿ ತೋರಿಸುವ ಶಿಖರದಂತೆ ಇರುವ ಹಂಪಿ ವಿಶ್ವವಿದ್ಯಾಲಯಕ್ಕೆ ಆರ್ಥಿಕ ನೆರವನ್ನು ಒದಗಿಸಲು ಸಾಧ್ಯವಾಗದಷ್ಟು ಬಡವಾಯಿತೇ ಕರ್ನಾಟಕ? 

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2024, 19:10 IST
Last Updated 11 ಡಿಸೆಂಬರ್ 2024, 19:10 IST
<div class="paragraphs"><p>ಸಂಗತ: ಹಂಪಿ ವಿಶ್ವವಿದ್ಯಾಲಯ– ಅಸ್ಮಿತೆ ಉಳಿಯಲಿ</p></div>

ಸಂಗತ: ಹಂಪಿ ವಿಶ್ವವಿದ್ಯಾಲಯ– ಅಸ್ಮಿತೆ ಉಳಿಯಲಿ

   

ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಗಲುವ ಖರ್ಚನ್ನು ಮಿತಗೊಳಿಸಿ, ಆರ್ಥಿಕ ಸಂಕಷ್ಟದಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ನೆರವು ನೀಡುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರು ಮಂಡ್ಯ ಜಿಲ್ಲಾಧಿಕಾರಿಗೆ ಸಲಹೆ ನೀಡಿರುವುದು ಕಳವಳ ಮೂಡಿಸುವ ಮತ್ತು ವಿಷಾದಕ್ಕೆ ಕಾರಣವಾಗುವ ಸಂಗತಿ. ಇಂತಹ ಸಲಹೆಯ ಹಿನ್ನೆಲೆಯಲ್ಲಿ ಅವ್ಯಕ್ತವಾಗಿ ಗೋಚರಿಸುತ್ತಿರುವ ಕರ್ನಾಟಕದ ಶೈಕ್ಷಣಿಕ ವಲಯದ ಸಮಸ್ಯೆಗಳ ಬಗ್ಗೆ ಸರ್ಕಾರ, ಸಾರ್ವಜನಿಕರು ಹಾಗೂ ಶೈಕ್ಷಣಿಕ ವಲಯದ ಫಲಾನುಭವಿಗಳು ಗಂಭೀರವಾಗಿ ಆಲೋಚಿಸಬೇಕಾದ ತುರ್ತಿನ ಸಂದರ್ಭ ಇದಾಗಿದೆ.

ಕನ್ನಡ ಭಾಷೆಯ ಆಮೂಲಾಗ್ರ ಅಧ್ಯಯನಕ್ಕಾಗಿಯೇ ಮೀಸಲಿರುವ ಏಕೈಕ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾದದ್ದು ಕನ್ನಡ ವಿಶ್ವವಿದ್ಯಾಲಯ. ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಆಧರಿಸಿ ಬೆಳೆದ ಕಲೆ, ಸಂಸ್ಕೃತಿ, ವಾಸ್ತುಶಿಲ್ಪದಂತಹವನ್ನು ಅಭ್ಯಸಿಸುವುದರೊಂದಿಗೆ ಈ ನಾಡಿನ ಭಾಷೆ ಮತ್ತು ಇತಿಹಾಸಕ್ಕೆ ಸಂಬಂಧಿಸಿದ ಶಾಸನಗಳು, ಪುರಾವೆಗಳನ್ನು ಸಂಗ್ರಹಿಸಿ, ಸಂಶೋಧಿಸಿ ನಾಡಿನ ಐತಿಹಾಸಿಕ-ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಗುರುತರ ಜವಾಬ್ದಾರಿಯನ್ನು ವಿಶ್ವವಿದ್ಯಾಲಯ ನಿಭಾಯಿಸುತ್ತಾ ಬಂದಿದೆ. ಹಾಗೆಯೇ ನಾಡಿನ ದೇಶಿ ಪರಂಪರೆಯಲ್ಲಿ ಹುಟ್ಟಿಕೊಂಡಿರುವ ಮಣ್ಣಿನ ವಿಜ್ಞಾನ, ಖಗೋಳ ವಿಜ್ಞಾನ, ಸಿದ್ಧವೈದ್ಯದಂತಹ ವಿಜ್ಞಾನವನ್ನು ಆಧುನಿಕ ವಿಜ್ಞಾನದಂತೆ ಅಧ್ಯಯನಕ್ಕೆ ಒಳಪಡಿಸಿ, ದೇಶಿ ಜ್ಞಾನಮಾರ್ಗಗಳನ್ನು ಶೋಧಿಸುವ ಕನಸನ್ನು ಹೊತ್ತಿರುವುದು ಈ ವಿಶ್ವವಿದ್ಯಾಲಯದ ವಿಶಿಷ್ಟ ಕುರುಹಾಗಿದೆ.

ADVERTISEMENT

ಇದರ ಜೊತೆಗೆ ನಾಡು-ನುಡಿ, ನೆಲ-ಜಲ, ಗಡಿ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಗ್ರಮಾನ್ಯ ಸೇವೆ ಸಲ್ಲಿಸಿರುವ ಸಾಧಕರು, ಗಣ್ಯರಿಗೆ– ಕವಿ ರವೀಂದ್ರನಾಥ ಟ್ಯಾಗೋರ್ ಅವರ ಶಾಂತಿನಿಕೇತನದಲ್ಲಿ ನೀಡಲಾಗುತ್ತಿರುವ ‘ದೇಶಿಕೋತ್ತಮ’ ಪದವಿಯಿಂದ ಪ್ರೇರಣೆ ಪಡೆದು- ಕನ್ನಡದ ಆದಿಕವಿ ಪಂಪನಿಗೆ ಸಂಬಂಧಿಸಿದ್ದು ಎಂಬ ಹೆಗ್ಗಳಿಕೆಗೆ ಪಾತ್ರವಾದ ನಾಡೋಜ ಪದವಿಯನ್ನು ಕೊಡಮಾಡುತ್ತಾ ಬಂದಿದೆ.

ನಾಡಿನ ಅಸ್ಮಿತೆಯನ್ನು ಎತ್ತಿ ತೋರಿಸುವ ಶಿಖರದಂತೆ ಇರುವ ಇಂಥ ಒಂದು ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳಲು ಆರ್ಥಿಕ ನೆರವನ್ನು ಒದಗಿಸಲು ಸಾಧ್ಯವಾಗದಷ್ಟು ಕರ್ನಾಟಕ ಬಡವಾಯಿತೇ? ಹೀಗೆ ಮಾಡಿದರೆ ಕನ್ನಡ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗುತ್ತದೆಯೇ? ರಾಜ್ಯ ರಾಜಕಾರಣದಲ್ಲಿ ಘಟಿಸುವ ವಿರೋಧಾಭಾಸಗಳು, ದಿನಬೆಳಗಾದರೆ ಸಾಲು ಸಾಲಾಗಿ ಕೇಳಿಬರುವ ಭ್ರಷ್ಟಾಚಾರಗಳ ನಡುವೆ ವಿದ್ಯೆಯನ್ನು ನೀಡುವ ಮತ್ತು ಹೊಸ ಜ್ಞಾನ ಸೃಷ್ಟಿಸುವ ಕೇಂದ್ರಗಳಾದ ವಿಶ್ವವಿದ್ಯಾಲಯಗಳ ಬಗ್ಗೆ ಆಳುವವರ ಧೋರಣೆ, ಕಾಳಜಿ ಎಂತಹದು ಎಂದೊಮ್ಮೆ ಗಂಭೀರವಾಗಿ ಆಲೋಚಿಸಬೇಕಾಗಿದೆ.

ಹಲವು ಕಾರಣಗಳಿಂದಾಗಿ ಹಂಪಿ ವಿಶ್ವವಿದ್ಯಾಲಯದ ಸಿಬ್ಬಂದಿಗೆ ಕೆಲವು ತಿಂಗಳುಗಳಿಂದ ಸಂಬಳ ನೀಡಲಾಗಿಲ್ಲ. ವಿದ್ಯಾರ್ಥಿವೇತನ ಸಿಗದೆ ಸಂಶೋಧನೆಯ ಕೆಲಸ ಕುಂಠಿತಗೊಂಡಿದೆ... ಹಾಗಾದರೆ ಸಾಹಿತ್ಯ ಸಮ್ಮೇಳನದ ಖರ್ಚನ್ನು ಕಡಿತಗೊಳಿಸಿ ಉಳಿಸಿದ ಹಣದಿಂದ, ಆ ವಿಶ್ವವಿದ್ಯಾಲಯಕ್ಕೆ ಎಷ್ಟು ದಿನ ಆರ್ಥಿಕ ನೆರವು ನೀಡಬಹುದು? ಈ ಸಮಸ್ಯೆಗೆ ಇದು ಸರಿಯಾದ ಪರಿಹಾರವೇ? ಈ ವಿಶ್ವವಿದ್ಯಾಲಯವನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಲ್ಲವೇ? ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದವರು ಹೀಗೆ ಸಲಹೆ ನೀಡುವುದೆಂದರೆ, ಆಡಳಿತಾರೂಢ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸಿದಂತೆ ಅಲ್ಲವೇ?

ಕರ್ನಾಟಕದ ಅಸ್ಮಿತೆಯಾಗಿರುವ ವಿಶ್ವವಿದ್ಯಾಲಯವೊಂದು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವುದನ್ನು ನೋಡಿದರೆ, ಮಾರ್ಟಿನ್ ಲೂಥರ್ ಕಿಂಗ್ ಅವರು ಹೇಳಿದ್ದ ಮಾತೊಂದು ನೆನಪಿಗೆ ಬರುತ್ತದೆ. ಅಮೆರಿಕದಲ್ಲಿ ಕಪ್ಪುಜನ ಅನುಭವಿಸುತ್ತಿದ್ದ ಅಮಾನವೀಯ ನೋವು, ಸಂಕಟದ ಬಗ್ಗೆ ಮಾತನಾಡಿದ್ದ ಅವರು ‘ಅಮೆರಿಕ ಎಂಬ ಸಿರಿ ಸಂಪತ್ತಿನಿಂದ ತುಂಬಿಹೋದ ಸಮುದ್ರದ ಮಧ್ಯೆ, ಬಡತನವೆಂಬ ಏಕಾಂಗಿ ದ್ವೀಪದಲ್ಲಿ ಅದೇ ದೇಶದ ಕಪ್ಪುಜನ ನರಳುತ್ತಿದ್ದಾರೆ’ ಎಂದಿದ್ದ ಅವರ ಮಾತು ಬಹುಶಃ ಕರ್ನಾಟಕದ ಶಿಕ್ಷಣ ವ್ಯವಸ್ಥೆಗೂ ಅನ್ವಯಿಸುತ್ತದೆ. ಆರ್ಥಿಕವಾಗಿ ಸಬಲವಾಗಿರುವ ಕರ್ನಾಟಕದಲ್ಲಿ ಇಡೀ ಶಿಕ್ಷಣ ವ್ಯವಸ್ಥೆಯು ಸಿಗಬೇಕಾದ ಅನುದಾನ ಸಿಗದೇ ಸೊರಗುತ್ತಿರುವುದು ದುರಂತವೇ ಸರಿ.

ಸರ್ಕಾರಿ ಕನ್ನಡ ಶಾಲೆಗಳು ವರ್ಷದಿಂದ ವರ್ಷಕ್ಕೆ ಆತಂಕಕಾರಿ ಸಂಖ್ಯೆಯಲ್ಲಿ ಮುಚ್ಚುತ್ತಿರುವುದು, ಎಲ್ಲ ಹಂತದ ಶೈಕ್ಷಣಿಕ ಸಂಸ್ಥೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ, ಶಿಕ್ಷಕರ ಕೊರತೆ, ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಚಟುವಟಿಕೆಗಳನ್ನು ಒಳಗೊಂಡಂತೆ ಸಂಶೋಧನೆಯಂತಹ ಕಾರ್ಯಗಳಿಗೆ ಬೇಕಾದ ಅನುದಾನದ ಕೊರತೆ ಕಣ್ಣಿಗೆ ರಾಚುವಂತೆ ಕಾಣಿಸುತ್ತವೆ.

ಗಂಭೀರವಾದ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಮಾರ್ಗೋಪಾಯಗಳ ಬಗ್ಗೆ ಆಲೋಚಿಸಿ, ಚರ್ಚಿಸಿ ಕಾರ್ಯೋನ್ಮುಖರಾಗಬೇಕಾಗಿದೆ. ದೇಶದ ಅಭಿವೃದ್ಧಿ, ರಾಷ್ಟ್ರ ನಿರ್ಮಾಣ, ಸುಸ್ಥಿರ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಶಿಕ್ಷಣ ನಮ್ಮ ಆದ್ಯತೆಯಾಗಬೇಕಾಗಿದೆ. ಈ ದಿಸೆಯಲ್ಲಿ ಸರ್ಕಾರ, ಸಾರ್ವಜನಿಕರು ಕೈಜೋಡಿಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ. 

ಲೇಖಕ: ಸಹಾಯಕ ಪ್ರಾಧ್ಯಾಪಕ, ವಿಜಯ ಪ್ರಥಮ ದರ್ಜೆ ಕಾಲೇಜು, ಪಾಂಡವಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.