ADVERTISEMENT

ಸಂಗತ | ಲೋಕದ ಕವಿ–ದಾರ್ಶನಿಕ ಕನಕದಾಸರು

ಕನ್ನಡ ಸಾಂಸ್ಕೃತಿಕ ಲೋಕದ ಮಹೋನ್ನತ ವ್ಯಕ್ತಿತ್ವಗಳಲ್ಲಿ ಒಬ್ಬರಾದ ಕನಕದಾಸರು, ತಮ್ಮ ಕೃತಿಗಳ ಮೂಲಕ ಕಟ್ಟಿಕೊಟ್ಟ ವಿವೇಕ ಎಲ್ಲ ಕಾಲಕ್ಕೂ ಪ್ರಸ್ತುತ.

ನಿಂಗಪ್ಪ ಮುದೇನೂರು
Published 8 ನವೆಂಬರ್ 2025, 2:18 IST
Last Updated 8 ನವೆಂಬರ್ 2025, 2:18 IST
ಕನಕದಾಸರು
ಕನಕದಾಸರು   

ಭಾರತದ ಭಕ್ತಿ ಸಾಹಿತ್ಯ ಪರಂಪರೆಯಲ್ಲಿ ಕನಕದಾಸರದು ಪ್ರಮುಖ ಸ್ಥಾನ. ಪುರಂದರ ದಾಸರಂತೆ ಕನಕದಾಸರೂ ಮಹಾಜ್ಞಾನಿಗಳು. ಅವರು ಬರೀ ಕವಿಯಷ್ಟೇ ಆಗಿರಲಿಲ್ಲ, ಸಮಾಜ ಸುಧಾರಕ, ದಾರ್ಶನಿಕ ಹಾಗೂ ಮಾನವತೆಯ ಸಾಕಾರವಾಗಿದ್ದರು. ಅವರ ಕೃತಿಗಳು ಭಕ್ತಿಯ ಪರಮೋನ್ನತ ಸ್ಥಿತಿಯನ್ನು ತೋರಿಸುವುದರ ಜೊತೆಗೆ, ಅದರ ಸಾಮಾಜಿಕ ಸಮಾನತೆ, ಮಾನವೀಯ ಮೌಲ್ಯಗಳು ಮತ್ತು ದೈವಭಕ್ತಿಯ ಸಾರ್ಥಕತೆಯ ಸಂದೇಶವನ್ನೂ ಸಾರಿನಿಂತಿವೆ.

ಕನಕದಾಸರ ಮೂಲ ಹೆಸರು ತಿಮ್ಮಪ್ಪ ನಾಯ್ಕ. ತಂದೆ ಬೀರಪ್ಪ; ತಾಯಿ ಬಚ್ಚಮ್ಮ. ಅವರ ಕಾಲದಲ್ಲಿ ಸಮಾಜ ವರ್ಣವ್ಯವಸ್ಥೆಯ ಕಟ್ಟಳೆಗಳಿಗೆ ಸಿಲುಕಿತ್ತು. ಆದರೆ, ಕನಕದಾಸರು ಆ ವ್ಯವಸ್ಥೆಯನ್ನು ತನ್ನ ಅಧ್ಯಾತ್ಮವಾದಿ ಬಂಡಾಯದಿಂದಲೇ ಎದುರಿಸಿದರು.

ಅವರ ಕೀರ್ತನೆಗಳಲ್ಲಿ ಸಾಮಾಜಿಕ ಮೇಲು-ಕೀಳು ಎಂಬ ತರತಮ ಭಾವನೆಗೆ ಸ್ಪಷ್ಟ ಉತ್ತರವಿದೆ. ಭಕ್ತಿಯ ಮೂಲಕವೇ ಸಮಾನತೆ, ಸಹೋದರತ್ವ, ದೈವಾನ್ವೇಷಣೆ ಮತ್ತು ದೈವದ ಜೊತೆ ಸಂವಾದದ ಮಾರ್ಗವನ್ನೂ ಅವರು ಬೋಧಿಸಿದರು.

ADVERTISEMENT

ಕನಕದಾಸರ ಸಾಹಿತ್ಯದಲ್ಲಿ ದಾಸರ ಪದಗಳೆನ್ನುವ ಕೀರ್ತನೆಯ ರಚನೆಗಳು ಪ್ರಮುಖವಾಗಿವೆ. ಹಾಗೇ ಅವರ ಪ್ರಸಿದ್ಧ ಕೃತಿಗಳೆನಿಸಿದ ‘ರಾಮಧಾನ್ಯ ಚರಿತೆ’, ‘ಮೋಹನ ತರಂಗಿಣಿ’, ‘ಹರಿಭಕ್ತಿಸಾರ’, ‘ನಳಚರಿತೆ’, ‘ನೃಪ ವಿಜಯ’ ಹಾಗೇ ಮುಂಡಿಗೆಗಳು ಮುಖ್ಯವಾದವು. ಈ ಕೃತಿಗಳು ಭಕ್ತಿಯ ತತ್ತ್ವ, ಧರ್ಮದ ಸಾರ, ಹಾಗೂ ಮನುಷ್ಯನ ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯುತ್ತಿವೆ.

ಕನಕ ನಿವೇದನೆಯ ತತ್ತ್ವದ ಮೂಲ ಹರಿಭಕ್ತಿಯಲ್ಲಿದೆ. ಆದರೆ, ಆ ಭಕ್ತಿ ಕೇವಲ ಆಚರಣೆಗಷ್ಟೇ ಸೀಮಿತವಾಗಿರದೇ ಸಾಮಾಜಿಕ ಕ್ರಾಂತಿಯ ರೂಪವನ್ನೂ ಪಡೆದಿದೆ. ‘ಆತ್ಮ ಯಾವ ಕುಲ ಜೀವ ಯಾವ ಕುಲ ಪಂಚೇಂದ್ರಿಯಗಳ ಕುಲವ ಪೇಳಿರಯ್ಯಾ?’ ಎಂಬ ಪ್ರಶ್ನೆಯಲ್ಲಿ ಅವರ ಆತ್ಮ ಸಾಕ್ಷಾತ್ಕಾರದ ಪ್ರಾಮಾಣಿಕ ಅಭಿವ್ಯಕ್ತಿ ವ್ಯಕ್ತವಾಗಿದೆ. ಕನಕದಾಸರು ದೈವ ಸಾಧನೆಗೆ ಯಾವುದೇ ವರ್ಣ, ಕುಲ ಭೇದಗಳು ಅಡ್ಡಿಯಾಗಬಾರದೆಂದು ಸಾರಿದರು. ಹಾಗೆ ಹರಿಯನ್ನೂ ದಾಸತ್ವದ ಮೂಲಕವೇ ಪ್ರಶ್ನಿಸಿದರು. ಈ ಸಂಗತಿಯೇ ಅವರ ‘ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ?’ ಎಂಬ ಪ್ರಸಿದ್ಧ ಕೀರ್ತನೆಯಲ್ಲಿ ಅಂತರ್ಗತವಾಗಿದೆ. ಉಡುಪಿ ಶ್ರೀಕೃಷ್ಣ ದೇಗುಲದ ‘ಕನಕ ಕಿಂಡಿ’ಯ ಕಥೆಯೇ ಇದಕ್ಕೆ ಸಾಕ್ಷಿ.

ಕನಕದಾಸರ ಕಾವ್ಯದ ದಾರ್ಶನಿಕತೆಯು ಭಕ್ತಿಯ ಬಾಹ್ಯಾಚರಣೆಗಿಂತ ಒಳಗಿನ ಶುದ್ಧತೆಯ ವಿಷಯದ ಮೇಲೆ ತನ್ನ ನಂಬಿಕೆಯನ್ನು ಕೇಂದ್ರೀಕರಿಸಿದೆ. ಅವರ ಕೃತಿಗಳಲ್ಲಿ ಅಜ್ಞಾನ, ಅಹಂಕಾರ, ಸ್ವಾರ್ಥ, ಅನ್ಯಾಯದ ವಿರುದ್ಧದ ಧ್ವನಿ ಹಾಗೂ ಸತ್ಯದ ಪರ ಇರುವ ವಿವೇಕದ ಬದ್ಧತೆ ಸ್ಪಷ್ಚವಾಗಿ ಕಾಣಿಸಿಕೊಂಡಿದೆ.

‘ಕಣ್ಣು ಕೆಟ್ಟ ಮೇಲೆ ಕಡುರೂಪ ಚೆಲ್ವಿಕೆಯೆ

ಬಣ್ಣಗುಂದಿದ ಮೇಲೆ ಬಹುಮಾನವೆ

ಪುಣ್ಯತೀರದ ಮೇಲೆ ಪರಲೋಕ ಸಾಧನವೆ

ಸುಣ್ಣವಿಲ್ಲದ ವೀಳ್ಯವದು ಸ್ವಾದುಮಯವೆ

ಕಿಲುಬಿನಾ ಬಟ್ಟಲೊಳು ಹುಳಿ ಕಲಿಸಿ ಉಣಬಹುದೆ

ಚಳಿಯುರಿಗೆ ಚಂದನದ ಲೇಪ ಹಿತವೆ

ಮೊಲೆ ಬಿದ್ದ ಹೆಣ್ಣಿನೊಳು  ಮೋಹಕ್ಕೆ ಸೊಗಸಹುದೆ

ಬೆಲೆಬಿದ್ದ ಸರಕಿನೊಳಗೆ ಲಾಭವುಂಟೇ

ಪಥ್ಯ ಸೇರದ ಮೇಲೆ ನಿತ್ಯ ಸುಖವೆನಬಹುದೆ

ಸತ್ವ ತಗ್ಗಿದ ಮೇಲೆ ಸಾಮರ್ಥ್ಯವೆ

ಪೃಥ್ವಿಯೊಳು ಕಾಗಿನೆಲೆಯಾದಿಕೇಶವ

ಭಕ್ತಿಯಿಲ್ಲದ ನರಗೆ ಮುಕ್ತಿಯಹುದೆ’

ಭಕ್ತಿಯಿಲ್ಲದ ಮುಕ್ತಿಯೊಳಗೆ ಇಂಥ ವರ್ತಮಾನವನ್ನಿರಿಸಿ ಮಾನವನನ್ನು ತಾತ್ವಿಕವಾಗಿ ಪ್ರಶ್ನಿಸುತ್ತಾರೆ ಕನಕದಾಸರು.

ಇನ್ನು ಕನಕದಾಸರ ಕಾವ್ಯಭಾಷೆ ಸರಳವಾಗಿದ್ದು, ಜಾನಪದೀಯವಾಗಿದೆ. ಅದು ನೇರವಾಗಿ ಜನಮನವನ್ನು ತಲುಪುತ್ತದೆ. ಅವರ ಪದ್ಯಗಳಲ್ಲಿರುವ ಸಂಗೀತಮಯತೆ, ನಾದಮಾಧುರ್ಯ ಮತ್ತು ದಾರ್ಶನಿಕ ಸಮನ್ವಯತೆಯ ಗುಣ ಈ ಲೋಕವೇ ಮೆಚ್ಚುವಂತಹದ್ದು.ಈ ಶೈಲಿಯು ಅವರನ್ನು ನಿತ್ಯಕಾಲೀನ ಸಂತ ಕವಿಯಾಗಿ ಮನಕ್ಕೆ ಕಾಣಿಸಿದೆ.

ಅವರ ಚಿಂತನೆಗಳು ಇಂದಿಗೂ ಪ್ರಸ್ತುತ. ಸಾಮಾಜಿಕ ಸಮಾನತೆ, ಮಾನವ ಧರ್ಮನಿಷ್ಠೆ, ಬಹುತ್ವದ ದೈವೋಪಾಸನೆ ಮತ್ತು ನೈತಿಕ ಬದುಕಿನ ಕುರಿತು ಅವರ ಸಂದೇಶವು ಇಂದಿನ ಸಮಾಜಕ್ಕೂ ದಾರಿದೀಪ. ಕನಕದಾಸರ ಕಾವ್ಯ ಕೇವಲ ಭಕ್ತಿಯ ನುಡಿಯ ಉಪಾಸನೆಯಲ್ಲ; ಅದು ದಾರ್ಶನಿಕತೆ, ಮಾನವತೆಯ ಶಕ್ತಿ ಮತ್ತು ಆತ್ಮಜ್ಞಾನಗಳ ಜೀವನ ಪಾಠವಾಗಿದೆ.

ಕನಕದಾಸರ ದಾರ್ಶನಿಕ ಕವಿತ್ವದ ಮಾರ್ಗದರ್ಶನ ಸಮ ಸಮಾಜದ ಜನಪದ ಕಟ್ಟಡಕ್ಕೆ ಭದ್ರಬುನಾದಿಯನ್ನು ಒದಗಿಸುತ್ತಿರಲಿ. ನಾಳಿನ ಯುವಪೀಳಿಗೆ ಹಿಂದಣ ಹೆಜ್ಜೆಯನರಿತು ಮುನ್ನಡೆಯಲಿ. ಹಾಗೇ ಮಾನವನನ್ನು ಉದ್ಧರಿಸುವ ಶಕ್ತಿಯಾಗಿ ಲೋಕದ ಎಲ್ಲ ದರ್ಶನಗಳ ವಿವೇಕವೂ ಸಮರಸವಾಗಿ ಒಗ್ಗೂಡಬೇಕು ಮತ್ತು ಇದೇ ಬಾಳಿನ ತತ್ತ್ವವೂ ಆಗಬೇಕು. ಇದಾದರೆ ಕನಕದಾಸರ ಆಚರಣೆ ಸಾರ್ಥಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.