ADVERTISEMENT

ಸಂಗತ: ಕಸಾಪ- ನಿರೀಕ್ಷೆಗಳ ಭಾರಕ್ಕೆ ಕುಸಿದೀತು!

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಈಗ ಪ್ರತಿನಿಧಿಸುತ್ತಿರುವುದೇನು?

​ಪ್ರಜಾವಾಣಿ ವಾರ್ತೆ
Published 28 ಜನವರಿ 2022, 19:31 IST
Last Updated 28 ಜನವರಿ 2022, 19:31 IST
ಸಂಗತ
ಸಂಗತ   

‘ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ’ ಎನ್ನುವ ಹಿರಿಮೆಯನ್ನು ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ನಮಗೆಲ್ಲ ಸಹಜವಾದ ಹೆಮ್ಮೆ ಇದೆ. ಆದರೆ, ಇತ್ತೀ ಚಿನ ವರ್ಷಗಳಲ್ಲಿ ಈ ಸಂಸ್ಥೆಯು ಇಡುತ್ತಿರುವ ಹೆಜ್ಜೆಗಳು ನಿಜಕ್ಕೂ ಕನ್ನಡಿಗರನ್ನು ಕಳವಳಕ್ಕೆ ಈಡು ಮಾಡಿವೆ. ಅದರಲ್ಲೂ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಮಹೇಶ್ ಜೋಶಿ ಅವರು ವ್ಯಕ್ತಪಡಿಸುತ್ತಿರುವ ವಿಚಾರಗಳನ್ನು ಕೇಳಿದರೆ, ಪರಿಷತ್ತಿನ ಭವಿಷ್ಯದ ಸ್ಥಿತಿಗತಿಯ ಬಗ್ಗೆ ಆತಂಕವಾಗುತ್ತದೆ.

ಜೋಶಿಯವರು ಅಧ್ಯಕ್ಷರಾಗಿ ಬಂದಮೇಲೆ ಚಿತ್ರ ವಿಚಿತ್ರ ಘೋಷಣೆಗಳನ್ನು ಮಾಡುತ್ತಿದ್ದಾರೆ. ಕಸಾಪ ಸದಸ್ಯರ ಸಂಖ್ಯೆಯನ್ನು 1 ಕೋಟಿಗೆ ಏರಿಸುವುದು, ಸದಸ್ಯತ್ವ ಶುಲ್ಕವನ್ನು ₹ 500ರಿಂದ ₹ 250ಕ್ಕೆ ಇಳಿಸುವುದು, ಸದಸ್ಯತ್ವ ಪಡೆಯುವವರು ಪರೀಕ್ಷೆ ಬರೆಯಬೇಕೆಂಬ ಪ್ರಸ್ತಾಪ, ನಿವೃತ್ತ ಸೈನಿಕರಿಗೆ ಗೌರವ ಸದಸ್ಯತ್ವ ಕೊಡುವುದು, ಜಿಲ್ಲಾ, ತಾಲ್ಲೂಕು ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರಿಗೆ ಒಂದು ಮಟ್ಟದ ಶಿಕ್ಷಣವನ್ನು ಕಡ್ಡಾಯಗೊಳಿಸುವುದು, ಚುನಾವಣೆಗೆ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿರುವವರು ಪುನಃ ಚುನಾವಣೆಗೆ ಸ್ಪರ್ಧಿಸದಂತೆ ಬೈಲಾ ತಿದ್ದುವ ಚಿಂತನೆ, ಮಹಿಳೆಯರು, ಅಂಗವಿಕಲರಿಗೆ ಉಚಿತವಾಗಿ ಕಸಾಪ ಸದಸ್ಯತ್ವ... ಇದರ ಜತೆಗೆ, ತಾವೇ ಸಂಪುಟ ದರ್ಜೆಯ ಸ್ಥಾನಮಾನ ಬಯಸಿ ಇದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವರ ಮೂಲಕ ಪತ್ರ ಬರೆಯಿಸಿದ್ದೂ ಆಗಿದೆ!

ಕನ್ನಡ ಸಾಹಿತ್ಯ ಪರಿಷತ್ತೆಂದರೆ, ಅದು ಕನ್ನಡ ನಾಡು-ನುಡಿಗಳ ಪರ ಒಂದು ಸರ್ಕಾರವು ಮಾಡ ಬೇಕಾದ ಕೆಲಸಕ್ಕೆ ಬೇಕಾದ ಬೌದ್ಧಿಕ ಚಿಂತನೆಯನ್ನು ಕಟ್ಟಿ ಕೊಟ್ಟು, ಆ ಕೆಲಸ ಆಗುವಂತೆ ಆಗ್ರಹಿಸಬೇಕಾದ ಮತ್ತು ಅನುಸರಣ ಕಾರ್ಯ (ಫಾಲೋಅಪ್) ಮಾಡಬೇಕಾದ ಸಂಸ್ಥೆ. ಅಂದರೆ, ಇದಕ್ಕೊಂದು ಸಾಂಸ್ಕೃತಿಕ ಚೌಕಟ್ಟು ಮತ್ತು ಗಾಂಭೀರ್ಯದ ವಾತಾವರಣ ಇರಬೇಕಾಗುತ್ತದೆ. ಕಸಾಪ ತನ್ನಲ್ಲಿ ದುಡ್ಡಿಲ್ಲದ ಕಾಲದಲ್ಲಿ ಇಂತಹ ಕೆಲಸಗಳನ್ನು ಮಾಡುತ್ತಿತ್ತು. ಮಹಾನ್ ಸಾಹಿತ್ಯ ಸಾಧಕರು, ಕನ್ನಡ ಪರಿಚಾರಕರು ಅಧ್ಯಕ್ಷರಾಗಿದ್ದಾಗ ಪರಿಷತ್ತಿಗೆ ಆರ್ಥಿಕ ಚೈತನ್ಯವೇ ಇರಲಿಲ್ಲ. ಆಗೆಲ್ಲ ಇದ್ದ ಸದಸ್ಯರ ಸಂಖ್ಯೆ ಕೆಲವು ಸಾವಿರ ಮಾತ್ರ. ಸರ್ಕಾರ ಕೊಡುತ್ತಿದ್ದ ನೆರವೂ ಅತ್ಯಲ್ಪ. ಆದರೂ ಅದು ತನ್ನ ಕನ್ನಡಪರ ಕೆಲಸ, ಚಿಂತನೆಗಳಿಂದ ನಾಡಿನ ಗಮನ ಸೆಳೆಯುತ್ತಿತ್ತು. ಸರ್ಕಾರ ಕಸಾಪವನ್ನು ಕನ್ನಡಿಗರ ದನಿ ಎಂದು ಗುರುತಿಸಿತ್ತು. ಆ ಕಾಲದಲ್ಲಿ ಕಸಾಪ ನಡೆಸುತ್ತಿದ್ದಸಂಶೋಧನಾ ಚಟುವಟಿಕೆಗಳು, ಕಾರ್ಯಕ್ರಮಗಳು, ಪ್ರಕಟಿಸುತ್ತಿದ್ದ ಪುಸ್ತಕಗಳು ಗೌರವದ ಭಾವನೆಯನ್ನು ಹುಟ್ಟಿಸುತ್ತಿದ್ದವು.

ADVERTISEMENT

ಆದರೆ ಈಗ ಕಸಾಪ ಬಳಿ ಬೇಕಾದಷ್ಟು ಹಣವಿದೆ, ಕಾಲಕಾಲಕ್ಕೆ ಸಭಾಂಗಣಗಳ ನವೀಕರಣ ಇತ್ಯಾದಿಗಳನ್ನು ಸರ್ಕಾರವೇ ಮಾಡಿಸುತ್ತಿದೆ, ಸಮ್ಮೇಳಗಳಿಗೆಂದು ಕೋಟ್ಯಂತರ ರೂಪಾಯಿ ಕೊಡುತ್ತದೆ. ಅಲ್ಲಿನ ಸಿಬ್ಬಂದಿ ವರ್ಗದ ವೇತನಕ್ಕೇನೂ ತೊಂದರೆ ಯಿಲ್ಲ. ದುರಂತವೆಂದರೆ, ಈಗ ಕೋಟಿ ಸದಸ್ಯರನ್ನು ಮಾಡುವಂತಹ ಬಾಲಿಶ ಮಾತು ಕೇಳಿಬರುತ್ತಿದೆ. ಪರಿಷತ್ತು ಈಗಾಗಲೇ 3 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು, ಇದೇ ಹೊರೆಯಾಗಿದೆ. ಈಗ ಕೋಟಿ ಸದಸ್ಯರಾದರೆ ಇಂತಹ ಒಂದು ಚಾರಿತ್ರಿಕವಾದ ಸಂಸ್ಥೆ ತನ್ನ ಭಾರಕ್ಕೆ ತಾನೇ ಕುಸಿಯುವುದು ನಿಚ್ಚಳ!ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎನ್ನುವ ಮನ್ನಣೆ ಪಡೆದಿದ್ದು ಸದಸ್ಯರ ಸಂಖ್ಯೆಯಿಂದಲ್ಲ, ಬದಲಿಗೆ ತನ್ನ ಮೌಲಿಕವಾದ ಕೆಲಸಗಳಿಂದ ಎಂಬು ದನ್ನು ಮರೆಯಬಾರದು.

ಕಸಾಪ ಸದಸ್ಯರಾಗಲು ಬಯಸುವವರು ಪರೀಕ್ಷೆ ಬರೆಯುವಂತಾಗಬೇಕು ಎನ್ನುವುದಂತೂ ಪ್ರಜ್ಞಾವಂತರು ಕಲ್ಪಿಸಿಕೊಳ್ಳಲೂ ಆಗದಂತಹ ವಿಚಾರವಾಗಿದೆ. ದೇಶದ ರಾಷ್ಟ್ರಪತಿ ಆಗಲು, ಪ್ರಧಾನಿಯಾಗಲು, ಮುಖ್ಯಮಂತ್ರಿ, ಶಾಸಕ, ಎಂಎಲ್‌ಸಿ, ಕಾರ್ಪೊರೇಟರ್, ಸ್ವತಃ ಕಸಾಪ ಅಧ್ಯಕ್ಷರಾಗಲು ಯಾವುದಾದರೂ ಪರೀಕ್ಷೆ ಇದೆಯೇ? ಒಂದು ವೇಳೆ, ಜೋಶಿಯವರು ಕಸಾಪ ಚುನಾವಣೆಯನ್ನು ಎದುರಿಸಲು ಪರೀಕ್ಷೆ ಬರೆಯುವುದನ್ನು ಕಡ್ಡಾಯ ಮಾಡಿದ್ದರೆ ಹೇಗಿರುತ್ತಿತ್ತು? ಕನ್ನಡ- ಕನ್ನಡಿಗ- ಕರ್ನಾಟಕದ ಬಗ್ಗೆ ಸ್ವೋಪಜ್ಞ ಚಿಂತನೆಗಳು ಇಲ್ಲದಿ ದ್ದರೆ ಮತ್ತು ಒಂದು ಸಂಸ್ಥೆಯಲ್ಲಿ ಬೌದ್ಧಿಕ ಪರಿಶ್ರಮ ಕಾಣೆಯಾಗಿ ಅದು ‘ಕಂಫರ್ಟ್ ಝೋನ್’ಗೆ ಬಂದರೆ ಏನಾಗುತ್ತದೆ ಎನ್ನುವುದಕ್ಕೆ ಇದೊಂದು ನಿದರ್ಶನವಾಗಿದೆ.

ಇನ್ನು ನಿವೃತ್ತ ಸೈನಿಕರಿಗೆ ಗೌರವ ಸದಸ್ಯತ್ವದ ವಿಚಾರಕ್ಕೆ ಬಂದರೆ, ಈ ಯೋಧರ ಬಗ್ಗೆ ಎಲ್ಲರಿಗೂ ಗೌರವವಿದೆ. ಅಧ್ಯಕ್ಷರು ಇದನ್ನು ವ್ಯಕ್ತಪಡಿಸಲು ಬೇಕಾದರೆ, ವರ್ಷಕ್ಕೆ ಐದೋ ಹತ್ತೋ ನಿವೃತ್ತ ಸೈನಿಕರಿಗೆ ಸಾಂಕೇತಿಕವಾಗಿ ಈ ಗೌರವ ಸದಸ್ಯತ್ವ ನೀಡಲಿ. ಅದನ್ನು ಬಿಟ್ಟು ಸಾಮೂಹಿಕವಾಗಿ ಉಚಿತ ಸದಸ್ಯತ್ವ ಕೊಡುವುದರಿಂದ ಪರಿಷತ್ತಿಗೆ ಆಗುವ ಪ್ರಯೋಜನವೇನು?

ಒಟ್ಟಿನಲ್ಲಿ, ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನರುಗಳಾದ ಸರ್ ಎಂ.ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಮುಂತಾದವರ ಯೋಗದಾನದಿಂದ ಬೆಳೆದ ಕನ್ನಡ ಸಾಹಿತ್ಯಪರಿಷತ್ತನ್ನು ಈಗ ಅದರ ಮೂಲ ಆಶಯಗಳೊಂದಿಗೆ ಮತ್ತೆ ಪ್ರತಿಷ್ಠಾಪಿಸಬೇಕಾಗಿದೆ. ಇಲ್ಲದಿದ್ದರೆ, ಈಗಾಗಲೇ ನಿಜವಾದ ಸಾಹಿತ್ಯಾಸಕ್ತರಿಂದ ದೂರವಾಗಿರುವ ಕಸಾಪ, ಅದೇ ಹಾದಿಯಲ್ಲಿ ಮುಂದುವರಿಯುತ್ತದೆ. ಸಾಹಿತ್ಯ ಪರಿಷತ್ತಿನ ನೆಲೆ-ಬೆಲೆಗಳಿಗೆ ಈಗಾಗಲೇ ಮುಕ್ಕು ಬಂದಿದೆ. ಹೀಗೆ ಕಳೆದುಹೋಗಿರುವ ಮನ್ನಣೆಯನ್ನು ಮತ್ತೆ ಗಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನಗಳು ಆಗಬೇಕು. ಇಲ್ಲದಿದ್ದರೆ, ಪರಿಷತ್ತಿನ ಕೆಲಸಗಳಿಗೂ ಚರುಪು ಹಂಚುವ ಕೆಲಸಕ್ಕೂ ಯಾವ ವ್ಯತ್ಯಾಸವೂ ಇರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.