ಕಾನೂನಿನ ಮೂಲಕ ದೊರೆಯುವ ‘ಪಿತೃತ್ವದ ಹಕ್ಕು’ ದೇವದಾಸಿಯರ ಮಕ್ಕಳ ಭವಿಷ್ಯಕ್ಕೆ ಪೂರಕವಾಗಿದೆ. ಆದರೆ, ಈ ಹಕ್ಕು ಸವಾಲುಗಳಿಗೆ ಕಾರಣ ಆಗಲೂಬಹುದು.
ಕಣ್ಣೆದುರಿಗೆ ಇದ್ದರೂ ಇವರೇ ‘ಅಪ್ಪ’ ಎಂದು ಕರೆಯಲಾಗದ ಸ್ಥಿತಿ ಮಕ್ಕಳದು. ಇವನೇ ನನ್ನ ಸಂಗಾತಿ, ಗಂಡ ಎಂದು ಎಲ್ಲರೆದುರೂ ಧೈರ್ಯವಾಗಿ ಹೇಳಲಾಗದ ಸಂಕಟ ಅಮ್ಮನದು. ಕತ್ತಲಿನಲ್ಲಿ ಜೊತೆಗಿರುವ ಆತ, ಬೆಳಗ್ಗೆ ಅವಳು ಅಪರಿಚಿತಳೇನೋ ಎಂಬಂತೆ ವರ್ತಿಸುತ್ತಾನೆ. ಇದು ದೇವದಾಸಿಯರ ಕುಟುಂಬದಲ್ಲಿ ಸಾಮಾನ್ಯ ಎನ್ನುವಂತಿರುವ ಸಂಕಟ, ಒಳಗುದಿ.
‘ಅಪ್ಪ ಎಂದರೆ ಆಕಾಶ; ಅಪ್ಪನ ಪ್ರೀತಿ ಜಗದಗಲ’ ಎನ್ನುವ ಮಾತುಗಳು ದೇವದಾಸಿಯರ ಮಕ್ಕಳಿಗೆ ಅಕ್ಷರಶಃ ಕೈಗೆಟುಕದ ಪದಪುಂಜಗಳು.
ಸ್ನೇಹಿತರು, ಸಂಬಂಧಿಕರು, ಶಾಲಾ ಮಾಸ್ತರು– ಅಷ್ಟು ಮಾತ್ರವಲ್ಲ, ಯಾವುದೇ ದಾಖಲಾತಿಯಲ್ಲಿ ಧುತ್ತೆಂದು ಎದುರಾಗಿ ಬೆಚ್ಚಿಬೀಳಿಸುವ ‘ಅಪ್ಪನ ಕಾಲಂ’ ಅನ್ನು ದಾಟಿ ಹೋಗಲಾರದ ಅಸಹಾಯಕತೆ ಆ ಮಕ್ಕಳದು. ಓರಗೆಯವರಿಗೆ ದೊರೆಯುವ ಅಪ್ಪಂದಿರ ಪ್ರೀತಿಯನ್ನು ಕಂಡು, ‘ನಂಗೆ ಅಪ್ಪ ಇಲ್ಲವೇನಮ್ಮಾ’ ಎಂದು ಕೇಳುವ ಮಕ್ಕಳ ಆರ್ದ್ರ ಪ್ರಶ್ನೆ, ರಾಜ್ಯದ ಸಮಸ್ತ ದೇವದಾಸಿಯರ ಕುಟುಂಬಗಳಲ್ಲಿ ಅನುರಣಿಸುತ್ತಿರುತ್ತದೆ.
ಬಡತನ, ಅನಕ್ಷರತೆ, ಜಾತಿ ವ್ಯವಸ್ಥೆ, ಮೂಢನಂಬಿಕೆಯ ಫಲವಾಗಿ ತಮ್ಮದಲ್ಲದ ತಪ್ಪಿಗೆ ದೇವದಾಸಿಯರಾಗಿ ರೂಪುಗೊಂಡ ಮಹಿಳೆಯರದ್ದು ಒಂದು ಪಾಡಾದರೆ, ಅವರ ಮಕ್ಕಳು ತಂದೆಯಿದ್ದೂ ಇಲ್ಲದಂತಾಗಿ ಅನಾಥರಾಗಿ ಬಾಳುತ್ತಿರುವ, ಅನುಭವಿಸುತ್ತಿರುವ ನೋವಿನದು ಬೇರೆಯದ್ದೇ ತೂಕ; ಅದು ಅಕ್ಷರಗಳ ಭಾಷೆಗೆ ನಿಲುಕದ ವೇದನೆ.
ಇತ್ತೀಚೆಗೆ ರಾಜ್ಯ ಸರ್ಕಾರ, ‘ಕರ್ನಾಟಕ ದೇವದಾಸಿ ಪದ್ಧತಿ ತಡೆ ಮಸೂದೆ–2025’ ರೂಪಿಸುವ ಮೂಲಕ ದೇವದಾಸಿಯರ ಮಕ್ಕಳ ನೋವಿಗೆ ಮುಲಾಮು ಹಚ್ಚುವ ಪ್ರಯತ್ನಕ್ಕೆ ಮುಂದಾಗಿದೆ. ನೂತನ ಮಸೂದೆಯು ದೇವದಾಸಿಯರನ್ನು ಲೈಂಗಿಕವಾಗಿ ಬಳಸಿಕೊಂಡು ಅವರ ಮಕ್ಕಳಿಗೆ ಪಿತೃತ್ವದ ಹಕ್ಕು, ಮಮತೆ ನೀಡಲು ಹಿಂದೇಟು ಹಾಕುತ್ತಿದ್ದ ಪುರುಷರಿಗೆ ಚಾಟಿ ಬೀಸುವಂತಿದೆ. ಅಷ್ಟೇ ಅಲ್ಲ, ದೇವದಾಸಿ ಪದ್ಧತಿಯನ್ನು ತಡೆಗಟ್ಟುವಲ್ಲಿ ಮಹತ್ವದ ಪಾತ್ರವನ್ನೂ ವಹಿಸಲಿದೆ. ಈ ಹಿಂದೆ ಧಾರ್ಮಿಕ ಕಟ್ಟುಪಾಡೋ, ಸಾಮಾಜಿಕ ನೆಲೆಯೋ, ಜಾತಿ ವ್ಯವಸ್ಥೆಯ ಭಾಗವಾಗಿಯೋ ದೇವದಾಸಿ ಎನ್ನುವ ಅನಿಷ್ಟ ಪದ್ಧತಿಗೆ ಪ್ರೋತ್ಸಾಹ ಕೊಡುತ್ತಿದ್ದವರಿಗೆ ಮಸೂದೆ ನೇರವಾಗಿಯೇ ಕಡಿವಾಣ ಹಾಕಲಿದೆ.
ಶೇ 99ರಷ್ಟು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹೆಣ್ಣುಮಕ್ಕಳೇ ಇಂಥ ಅನಿಷ್ಟ ಪದ್ಧತಿಗೆ ಬಲಿಯಾಗಿ, ಘನತೆ ಮತ್ತು ಗೌರವದಿಂದ ಬಾಳಲಾಗದ ಸ್ಥಿತಿಯಲ್ಲಿದ್ದಾರೆ. ಅಂಥ ನತದೃಷ್ಟ ಮಹಿಳೆಯರ ಬದುಕನ್ನು ಸುಧಾರಿಸುವ ನಿಟ್ಟಿನಲ್ಲಿ ಮಸೂದೆ ಪರಿಣಾಮ ಬೀರಬಲ್ಲದು.
ಹೊಸ ಮಸೂದೆಯು ‘ಡಿಎನ್ಎ ಪರೀಕ್ಷೆ’ ಮೂಲಕ ಪಿತೃತ್ವದ ಹಕ್ಕನ್ನು ಪ್ರತಿಪಾದಿಸಲು ನೆರವಾಗಬಲ್ಲದು ಎಂಬುದೇನೋ ನಿಜ. ಆದರೆ, ಬಲವಂತವಾಗಿ ಇಂಥ ಪರೀಕ್ಷೆ ಮಾಡಿಸಿ, ಆ ಮಕ್ಕಳು ಕೌಟುಂಬಿಕ ಚೌಕಟ್ಟಿನ ನೆಲೆಯಲ್ಲಿ ದೊರಕಬಹುದಾದ ಅಪ್ಪನ ಪ್ರೀತಿಯನ್ನು ಪಡೆಯಲು ಸಾಧ್ಯವೇ ಎಂಬ ಪ್ರಶ್ನೆಯನ್ನೂ ನಾವು ಗಮನಿಸಬೇಕು. ಅಷ್ಟಕ್ಕೂ ಗಂಡಸೊಬ್ಬ ತನಗೆ ಹುಟ್ಟಿದ ಮಕ್ಕಳನ್ನು ತನ್ನವು ಎಂದು ಹೇಳಿಕೊಳ್ಳಲು ಇಂಥ ಪರೀಕ್ಷೆಗಳ ಅವಶ್ಯಕತೆ ಇಲ್ಲ. ಕಣ್ಣರಿಯದಿದ್ದರೂ, ಕರುಳರಿಯಲಾರದೇ?
ಶಾಲಾ– ಕಾಲೇಜು ದಾಖಲಾತಿ, ಪಾಸ್‌ಪೋರ್ಟಿನ ಅರ್ಜಿಗಳಲ್ಲಿ, ಉದ್ಯೋಗ ಮತ್ತಿತರ ದಾಖಲಾತಿಗಳಲ್ಲಿ ಅಪ್ಪನ ಹೆಸರು ನಮೂದಿಸಿದ ಮಾತ್ರಕ್ಕೆ ದೇವದಾಸಿಯರ ಮಕ್ಕಳಿಗೆ ಹೆತ್ತಪ್ಪನ ನಿಜದ ನೆಲೆಯ ಪ್ರೀತಿ, ಮಮತೆ ದೊರೆಯಲು ಸಾಧ್ಯವೇ? ಒಬ್ಬರಿಗಿಂತ ಹೆಚ್ಚು ಸಂಗಾತಿಗಳ ಒಡನಾಟ ಹೊಂದಿದ ದೇವದಾಸಿ, ದೇಹಕ್ಕಿಂತಲೂ ಮಾನಸಿಕವಾಗಿ ಹತ್ತಿರವಾದ ಸಂಗಾತಿಯನ್ನೇ ತನ್ನ ಮಕ್ಕಳಿಗೆ ತಂದೆ ಎಂದು ಪರಿಚಯಿಸಿರುವ ಸಾಧ್ಯತೆ ಇರುವಾಗ, ಜೈವಿಕ ಕಾರಣಕ್ಕಾಗಿ ನೀಡಲಾಗುವ ಪಿತೃತ್ವದ ಹಕ್ಕು ತಾಕಲಾಟಕ್ಕೆ ಕಾರಣವಾಗಲಾರದೇ? ಒಬ್ಬ ದೇವದಾಸಿಗೆ ಇಬ್ಬರು ಸಂಗಾತಿಗಳೊಂದಿಗೆ ಸಾಂಗತ್ಯವಿದ್ದು, ಆ ಇಬ್ಬರಿಗೂ ಬೇರೆ ಬೇರೆ ಮಕ್ಕಳು ಹುಟ್ಟಿದಲ್ಲಿ, ಆ ಮಕ್ಕಳು ಪಿತೃತ್ವದ ಹಕ್ಕು ಪಡೆಯುವಾಗ ಎದುರಿಸುವ ಮಾನಸಿಕ ತಳಮಳಗಳಿಗೆ ಸಮಾಧಾನ ತಂದುಕೊಳ್ಳುವುದು ಹೇಗೆ? ಅಷ್ಟಕ್ಕೂ ತಂದೆಯ ಹೆಸರನ್ನು ಪ್ರತಿಪಾದಿಸುವುದು ಪಿತೃಪ್ರಧಾನ ವ್ಯವಸ್ಥೆಯ ಭಾಗವಾಗಿ, ಲಿಂಗ ತಾರತಮ್ಯದ ಮುಂದುವರಿಕೆ ಅನಿಸುವುದಿಲ್ಲವೇ ಎಂಬ ಪ್ರಶ್ನೆಯೂ ಮೂಡುತ್ತದೆ.
ಪ್ರಶ್ನೆಗಳ ನಡುವೆಯೂ, ನೂತನ ಮಸೂದೆಯಿಂದಾಗಿ, ಕನಿಷ್ಠ ತಂದೆಯ ಹೆಸರು ಮತ್ತು ಮಕ್ಕಳಿಗೆ ಕಾನೂನು ರೀತ್ಯ ಒದಗಿಬರುವ ಜೀವನಾಂಶ ಹಾಗೂ ಆಸ್ತಿ ಹಕ್ಕಿಗಾದರೂ ಪಿತೃತ್ವದ ಹಕ್ಕು ನೆರವಾಗಬಲ್ಲದೆಂಬ ನಿರೀಕ್ಷೆ ಇದೆ.
ಪಿತೃತ್ವದ ಹಕ್ಕಿನ ಜತೆಗೇ ಮಸೂದೆಯು ದೇವದಾಸಿ ಪದ್ಧತಿಯನ್ನು ಪ್ರೋತ್ಸಾಹಿಸುವವರಿಗೆ ಜಾಮೀನುರಹಿತ ಅಪರಾಧ ಎಂಬ ಶಿಕ್ಷೆಯನ್ನು ವಿಧಿಸುವ ಅವಕಾಶ ಮಾಡಿಕೊಡುವಂತೆ ಇದ್ದಿದ್ದರೆ ಮಸೂದೆ ಮತ್ತಷ್ಟು ಪರಿಣಾಮಕಾರಿ ಹಾಗೂ ಪ್ರಬಲವಾಗುವ ಸಾಧ್ಯತೆ ಇತ್ತು. ದೇವದಾಸಿಯರ ಮಕ್ಕಳನ್ನು ಶೈಕ್ಷಣಿಕ, ಔದ್ಯೋಗಿಕ ಮತ್ತು ಸಾಮಾಜಿಕತೆಯ ಮೂಲಕ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವಂಥ ಸಾಧ್ಯತೆಗಳನ್ನೂ ಮಸೂದೆ ಒಳಗೊಂಡಿದ್ದರೆ ಹೆಚ್ಚು ಅರ್ಥಪೂರ್ಣ ಆಗುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.