ADVERTISEMENT

ಸಂಗತ | ಕಾಡು ತಣ್ಣಗಿರಲಿ, ಬೆಂಕಿಯ ಕಿಡಿ ತಾಗದಿರಲಿ!

ಬೇಸಿಗೆ ಸಮಯ ಕಾಡಿನ ಕಾಳಜಿ ಗರಿಷ್ಠ ಪ್ರಮಾಣದಲ್ಲಿ ಇರಬೇಕಾದ ಸಂದರ್ಭ. ಕಾಳ್ಗಿಚ್ಚು ಕಾಡನ್ನಷ್ಟೇ ಸುಡುವುದಿಲ್ಲ; ಅದರ ಬಿಸಿ ನಾಡನ್ನೂ ಬಾಧಿಸುತ್ತದೆ.

ಉಮೇಶ ಭಟ್ಟ ಪಿ.ಎಚ್.
Published 20 ಫೆಬ್ರುವರಿ 2026, 23:30 IST
Last Updated 20 ಫೆಬ್ರುವರಿ 2026, 23:30 IST
.
.   

ಹದಿನೈದು ವರ್ಷಗಳ ಹಿಂದಿನ ನೆನಪು. ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹೃದಯಭಾಗಕ್ಕೆ ಬೆಂಕಿ ಬಿದ್ದಿತ್ತು. ಅದೆಷ್ಟೋ ಜೀವಗಳು, ಮರಗಳು ಬೆಂಕಿಯಲ್ಲಿ ಉರಿದು ಹೋದವು. ಆನೆಗಳಿಗೆ ಆಹಾರವಾಗಿದ್ದ ಬಿದಿರುಮೆಳೆ ಸುಟ್ಟು ಹೋಯಿತು. ದುರಂತದ ಕಾರಣ ಪತ್ತೆಹಚ್ಚಲು ನಡೆದ ಸಿಐಡಿ ತನಿಖೆಯಲ್ಲಿ, ಅರಣ್ಯ ಇಲಾಖೆಯ ಸಿಬ್ಬಂದಿಯ ಸಹಕಾರದಿಂದ ಸ್ಥಳೀಯರೇ ಕಾಡಿಗೆ ಬೆಂಕಿ ಕೊಟ್ಟ ಆಘಾತದ ಸಂಗತಿ ಬಯಲಿಗೆ ಬಂತು.

ಭಾರತದ ಹಳೆಯ ಹುಲಿಧಾಮಗಳಲ್ಲಿ ಬಂಡೀಪುರವೂ ಒಂದು. ಅಲ್ಲಿ, ಇಲಾಖೆಯ ಅಧಿಕಾರಿಗಳ ಮೇಲಿನ ನೌಕರರ ಸಿಟ್ಟು ಬೆಂಕಿಯ ರೂಪ ತಾಳಿ, ಎರಡು ಬಾರಿ ಕಾಡನ್ನು ಬಾಧಿಸಿದೆ. ಪ್ರಕರಣವೊಂದರಲ್ಲಿ, ಬಂಡೀಪುರ ರಾಷ್ಟ್ರೀಯ ಉದ್ಯಾನದ ನಿರ್ದೇಶಕರಾಗಿದ್ದವರು ಸೇರಿದಂತೆ ಕೆಳಹಂತದ ಅಧಿಕಾರಿಗಳು ಅಮಾನತುಗೊಂಡಿದ್ದರು. ಕೆಲವರ ಕಿಚ್ಚಿಗೆ ಅರಣ್ಯ ಬಸವಳಿಯಿತು. ಇದು ನಾಗರಹೊಳೆ, ಬಂಡೀಪುರಕ್ಕೆ ಸೀಮಿತವಾದ ವಿದ್ಯಮಾನವಲ್ಲ. ರಾಜ್ಯದ ಹದಿನೈದಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಸಹಜವಾದ ಕಾಡಿನ ಬೆಂಕಿ ಕಾಣಿಸಿಕೊಂಡಿದೆ.

ಕರ್ನಾಟಕದ ಅರಣ್ಯ ಹಾಗೂ ಅರಣ್ಯದಂಚಿನ ಭಾಗದಲ್ಲಿ ಕಾಡಿನ ಬೆಂಕಿ ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಂಡು ಬರುತ್ತದೆ. ಡಿಸೆಂಬರ್‌ ಬಂತೆಂದರೆ, ಕಾಡಿನ ಬೆಂಕಿ ತಡೆ ಚಟುವಟಿಕೆಯನ್ನು ಅರಣ್ಯ ಇಲಾಖೆ ಆರಂಭಿಸುತ್ತದೆ. ಫೆಬ್ರುವರಿವರೆಗೂ ತಯಾರಿಯ ಸಮಯ. ಫೆಬ್ರುವರಿ ವೇಳೆಗೆ ಎಲೆಗಳು ಉದುರಿ ಕಾಡು ಬದಲಾವಣೆ ಪರ್ವದಲ್ಲಿ ನಿಂತಿರುತ್ತದೆ. ಈ ವೇಳೆ ಎಲ್ಲೆಡೆ ಒಣ ವಾತಾವರಣ ಇರುವುದರಿಂದ, ಸಣ್ಣ ಬೆಂಕಿ ಬಿದ್ದರೂ ಹೆಕ್ಟೇರ್‌ಗಟ್ಟಲೆ ಅರಣ್ಯ ನಾಶವಾಗುತ್ತದೆ.

ADVERTISEMENT

ರಾಜ್ಯದಲ್ಲಿ ಸದ್ಯ 43 ಸಾವಿರ ಚದರ ಕಿ.ಮೀ. ಅರಣ್ಯವಿದೆ. ಅಂದರೆ, ಒಟ್ಟು ಭೂ ಭಾಗದಲ್ಲಿ ಶೇ 22ರಷ್ಟು ಅರಣ್ಯ ಪ್ರದೇಶವಿದೆ. ಪಶ್ಚಿಮಘಟ್ಟದ
ನೀಲಗಿರಿ ಜೀವವೈವಿಧ್ಯ ತಾಣವೂ ಒಳಗೊಂಡು ನಿತ್ಯ ಹರಿದ್ವರ್ಣ ಅರಣ್ಯದ ಪ್ರಮಾಣ ನಮ್ಮಲ್ಲಿ ಹೆಚ್ಚಿದೆ. ಐದು ಹುಲಿ ಸಂರಕ್ಷಿತ ಪ್ರದೇಶಗಳಿದ್ದು, ಸುಮಾರು 6,300 ಚದರ ಕಿ.ಮೀ. ವ್ಯಾಪ್ತಿಯಿದೆ. ಹುಲಿ, ಆನೆ, ಚಿರತೆ, ಕಾಟಿ, ಕರಡಿ, ಕಡವೆ, ಜಿಂಕೆ, ಕಾಡು ಕುರಿಯಂತಹ ಪ್ರಾಣಿಗಳು, ನವಿಲು ಸೇರಿ ಹಲವು ಬಗೆಯ ಪಕ್ಷಿಗಳು ಅರಣ್ಯದಲ್ಲಿ ಬದುಕು ಕಟ್ಟಿಕೊಂಡಿವೆ. ನೂರಾರು ಪ್ರಭೇದಗಳ ಮರಗಳು ಕರುನಾಡ ಅರಣ್ಯದ ಸಮೃದ್ಧಿಯನ್ನು ಹೆಚ್ಚಿಸಿವೆ.

ಅರಣ್ಯ ಪ್ರದೇಶವನ್ನು ಶೇ 30ಕ್ಕೆ ವಿಸ್ತರಿಸಲು ರಾಜ್ಯದಲ್ಲಿ ನಿರಂತರ ಚಟುವಟಿಕೆಗಳು ನಡೆದಿದ್ದರೂ, ಗುರಿ ತಲಪಲು ಇದುವರೆಗೂ ಆಗಿಲ್ಲ. ಗುರಿಗೆ ಅಡ್ಡಿಯಾಗಿರುವ ಮುಖ್ಯ ಕಾರಣಗಳಲ್ಲೊಂದು– ಕಾಡಿನ ಬೆಂಕಿ!

ಅರಣ್ಯದಲ್ಲಿ ಮರಗಳ ನಡುವೆ ಘರ್ಷಣೆಯಾದಾಗ ಅದು ಬೆಂಕಿಯ ರೂಪ ಪಡೆಯಬಹು ದಾದರೂ, ಆ ಸಾಧ್ಯತೆ ಕಡಿಮೆ. ಕಾಡಿನ ಬೆಂಕಿಗೆ ಶೇ 99ರಷ್ಟು ಕಾರಣ ಮಾನವನೇ. ಅರಣ್ಯ ಇಲಾಖೆ ಮೇಲಿನ ಸಿಟ್ಟಿಗೋ, ಅಧಿಕಾರಿಗಳು ಇಲ್ಲವೇ ಸಿಬ್ಬಂದಿ ಮೇಲಿನ ಬೇಸರಕ್ಕೋ ಕಾಡಿಗೆ ಬೆಂಕಿ ಹಚ್ಚುವವರು ಹೆಚ್ಚು. ಇಲಾಖೆಯವರು ತಮ್ಮ ಜಾನುವಾರುಗಳನ್ನು ಮೇಯಿಸಲು ಬಿಡದೇ ಇದ್ದಾಗ, ಇಲ್ಲವೇ ಅರಣ್ಯ ಉತ್ಪನ್ನಗಳನ್ನು ತರಲು ಅಡ್ಡಿಪಡಿಸಿ ದಾಗ ಬೆಂಕಿ ನೀಡುವವರೂ ಇದ್ದಾರೆ. ಮಾರ್ಗಮಧ್ಯೆ ಹೋಗುವವರು ಎಸೆದ ಸಿಗರೇಟು, ಬೆಂಕಿಕಡ್ಡಿಯ ಕಿಡಿಯೂ ಅನಾಹುತಕ್ಕೆ ಕಾರಣವಾದ ಉದಾಹರಣೆಗಳಿವೆ.

ಅರಣ್ಯ ಇಲಾಖೆ ಸ್ಥಳೀಯರಿಗೆ ಕಾಡಿನ ಬೆಂಕಿ ನಿರ್ವಹಣೆ ಉದ್ಯೋಗವನ್ನು ನೀಡುವ ಪರಿಪಾಠ ರೂಢಿಸಿಕೊಂಡಿದೆ. ಸ್ಥಳೀಯವಾಗಿ ಗಿರಿಜನರು ಇಲ್ಲವೇ ಕಾಡುಕುರುಬ, ಸೋಲಿಗ ಸಮುದಾಯದವರಿಗೆ ಅಲ್ಲಿನ ಅರಣ್ಯದ ಮಾಹಿತಿ ಇರುವುದರಿಂದ, ಅವರು ಚೆನ್ನಾಗಿ ಮೇಲುಸ್ತುವಾರಿ ಮಾಡಬಲ್ಲರು. ಈ ಸಮುದಾಯದವರು ಕಾಡನ್ನು ದೇವರು ಎಂದೇ ನಂಬಿ ಅದನ್ನು ಕಾಪಾಡುತ್ತಾರೆ. ಆದರೆ, ಇವರಿಗೆ ಉದ್ಯೋಗ ಸಿಗದೇ ಇದ್ದಾಗ, ತೊಂದರೆಯಾದಾಗ ಕೆಲವರು ಬೆಂಕಿ ಕೊಟ್ಟು ಸಿಕ್ಕಿ ಹಾಕಿಕೊಂಡ ಉದಾಹರಣೆಗಳೂ ಇವೆ.

ಕರ್ನಾಟಕದಲ್ಲಿ ಕಳೆದ ಐದು ವರ್ಷದಲ್ಲಿ 20,920 ಕಾಡಿನ ಬೆಂಕಿ ಪ್ರಕರಣಗಳು ವರದಿಯಾಗಿವೆ. 2023ರಲ್ಲಿ 6,888 ಕಾಡಿನ ಬೆಂಕಿ ಪ್ರಕರಣಗಳು ದಾಖಲಾಗಿದ್ದರೆ, ಉಳಿದ ವರ್ಷಗಳಲ್ಲಿ 4,000ದ ಒಳಗೆ ಇವೆ. ಅರಣ್ಯ ಇಲಾಖೆ ಕಾಡಿಗೆ ಬೆಂಕಿ ಬೀಳದಂತೆ ತಡೆಯಲು ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ. ದೂರ ಸಂವೇದಿ ತಂತ್ರಜ್ಞಾನದ ಮೂಲಕ ಬೆಂಕಿ ಬಿದ್ದಿರುವ ಸ್ಥಳದ ನಿಖರ ಮಾಹಿತಿ ಪಡೆದು, ಬೆಂಕಿ ಆರಿಸಲು ಸಿಬ್ಬಂದಿ ನಿಯೋಜಿಸುತ್ತಿದೆ. ಅಮೆರಿಕದಂಥ ದೇಶದಲ್ಲಿ ಬೆಂಕಿ ಬಿದ್ದಾಗ ಹೆಲಿಕಾಪ್ಟರ್ ಬಳಸಲಾಗುತ್ತದೆ. ಅಂತಹ ಅವಕಾಶ ನಮ್ಮಲ್ಲಿಲ್ಲದೇ ಇದ್ದರೂ, ಇಲಾಖೆಯ ಸಿಬ್ಬಂದಿ ಜತೆಗೆ ಸ್ಥಳೀಯರು ಕೈ ಜೋಡಿಸಿ ಹೆಚ್ಚು ಅರಣ್ಯ ನಾಶವಾಗದಂತೆ ನೋಡಿಕೊಳ್ಳುತ್ತಾರೆ.

ಅರಣ್ಯ ಎಂದರೆ ಮರಗಳು, ವನ್ಯಜೀವಿಗಳಷ್ಟೇ ಅಲ್ಲ; ಅದೊಂದು ಸಂಸ್ಕೃತಿ. ಅರಣ್ಯ ಸಮೃದ್ಧವಾಗಿದ್ದರೆ ಪರಿಸರ ಸಮತೋಲನವೂ ಆಗಿ, ಮಳೆ ಬೆಳೆಗೆ ಪರೋಕ್ಷವಾಗಿ ನೆರವಾಗಲಿದೆ. ಒಂದು ಹುಲಿ ಇದ್ದರೆ ಆಹಾರ ಸರಪಳಿ ರೂಪದಲ್ಲಿ ಅದೆಷ್ಟೋ ಪ್ರಾಣಿಗಳಿಗೆ ಕಾಡು ನೆಲೆಯಾಗಬಲ್ಲದು.

ಕಾರಣ ಏನೇ ಇರಲಿ, ಆಕ್ರೋಶದಿಂದ ಕಾಡಿಗೆ ಬೆಂಕಿ ಹಚ್ಚಿದರೆ, ಅದು ನಮ್ಮ ಒಡಲಿಗೆ ನಾವೇ ಬೆಂಕಿ ಇಟ್ಟುಕೊಂಡಂತೆ. ‘ಕಾಡುಗಳಿಲ್ಲದ, ಕಾಡುಪ್ರಾಣಿಗಳಿಲ್ಲದ ಪರಿಸರವು ಸ್ಮಶಾನಕ್ಕಿಂತ ಭೀಕರವಾಗಿ ಕಾಣುತ್ತವೆ. ಕಾಡಿದ್ದರೆ ನಾವು ಎನ್ನುವ ಸತ್ಯ ನಮಗೆ ಅರ್ಥವಾಗಬೇಕು. ಕಾಡು ನಾಶವಾದರೆ, ಮನುಷ್ಯನ ಅವನತಿ ಪ್ರಾರಂಭವಾದಂತೆ’ ಎನ್ನುವ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಮಾತು ನಮ್ಮನ್ನು ಎಚ್ಚರಿಸಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.