
ಸಂಗತ: ಸರ್ಕಾರಿ ಯೋಜನೆಗಳ ಫಲಾನುಭವಿಗಳ ಬಗ್ಗೆ ಅಸಹನೆ ಏಕೆ?
ಇತ್ತೀಚೆಗೆ ಅಂಚೆ ಕಚೇರಿಗೆ ಹೋಗಿದ್ದಾಗ, ವೃದ್ಧಾಪ್ಯ ವೇತನ ಪಡೆಯಲೆಂದು ಅನೇಕ ಹಿರಿಯರು ಸರತಿಯಲ್ಲಿ ನಿಂತಿದ್ದನ್ನು ನೋಡಿದೆ. ಹಣ ಠೇವಣಿ ಇಡುವವರೊಂದಿಗೆ ಮತ್ತು ವೃದ್ಧಾಪ್ಯ ವೇತನ ಪಡೆಯಲು ಬಂದವರ ಜೊತೆಗೆ ವ್ಯವಹರಿಸುವಾಗ ಸಿಬ್ಬಂದಿಯ ವರ್ತನೆಯಲ್ಲಿ ವ್ಯತ್ಯಾಸ ಗೋಚರಿಸುತ್ತಿತ್ತು. ವೃದ್ಧಾಪ್ಯ ವೇತನ ಪಡೆಯಲು ಬಂದವರು ಭಿಕ್ಷೆ ಬೇಡಲು ಬಂದಿರುವವರೇನೋ ಎನ್ನುವಂತಹ ಅಸಹನೆ ಕಚೇರಿಯ ಸಿಬ್ಬಂದಿಯ ಮುಖದಲ್ಲಿತ್ತು.
ಸರ್ಕಾರದ ಯೋಜನೆಗಳ ಫಲಾನುಭವಿಗಳು ಎದುರಿಸುವ ಅವಮಾನ ಮತ್ತು ನೋವು ಅಪಾರ. ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರ ಮಾಸಾಶನ ಪಡೆಯುವಾಗಲೆಲ್ಲ ಫಲಾನುಭವಿಗಳು ವ್ಯಂಗ್ಯದ ನೋಟಕ್ಕೆ ಗುರಿಯಾಗುತ್ತಾರೆ. ಸಾರಿಗೆ ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರ ಬಗ್ಗೆ ಚಾಲಕರು ಮತ್ತು ನಿರ್ವಾಹಕರಲ್ಲಿ ಅಸಡ್ಡೆ ಮನೆಮಾಡಿದೆ. ‘ಗೃಹಲಕ್ಷ್ಮಿ’ ಯೋಜನೆಯಿಂದ ದೊರೆಯುತ್ತಿರುವ ಹಣದಿಂದ ಮಹಿಳೆಯರಲ್ಲಿ ಅಹಂಕಾರ ಮನೆಮಾಡಿದೆ ಎಂದು ದೂಷಿಸಲಾಗುತ್ತಿದೆ.
ಕೆಲವು ದಿನಗಳ ಹಿಂದೆ ವಿಜಯಪುರಕ್ಕೆ ಪ್ರಯಾಣ ಮಾಡುತ್ತಿರುವಾಗ ಬಸ್ ಮಾರ್ಗ ಮಧ್ಯ
ದಲ್ಲೇ ಕೆಟ್ಟು ನಿಂತಿತು. ವಿಜಯಪುರದತ್ತ ಹೊರಟಿದ್ದ ಬಸ್ ಅನ್ನು ನಿರ್ವಾಹಕರು ನಿಲ್ಲಿಸಿದರು. ಬಾಗಲಕೋಟೆಯಿಂದ ಸೊಲ್ಲಾಪುರಕ್ಕೆ ಹೊರಟಿದ್ದ ಆ ಬಸ್ ಹೊರರಾಜ್ಯಕ್ಕೆ ಹೋಗುತ್ತಿದ್ದುದ್ದರಿಂದ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶವಿರಲಿಲ್ಲ. ಕೆಲವು ಮಹಿಳೆಯರು ಟಿಕೆಟ್ ಖರೀದಿಸುವುದಾಗಿ ಹೇಳಿದರೂ, ಮಾರ್ಗಮಧ್ಯದಲ್ಲಿ ಟಿಕೆಟ್ ನೀಡುವುದು ನಿಯಮಬಾಹಿರ ಎಂದು ಮಹಿಳಾ ಪ್ರಯಾಣಿಕರನ್ನು ನಿರ್ವಾಹಕ ಹತ್ತಿಸಿಕೊಳ್ಳಲಿಲ್ಲ. ಉಚಿತ ಪ್ರಯಾಣದ ಫಲಾನುಭವಿಗಳಿಗಾದ ತೊಂದರೆ ಕುರಿತು ಒಂದು ಬಗೆಯ ಸಂತೋಷ ಚಾಲಕ ಮತ್ತು ನಿರ್ವಾಹಕರ ಮುಖದಲ್ಲಿ ಕಾಣಿಸುತ್ತಿತ್ತು.
ಸಮಾನ ಶಿಕ್ಷಣಕ್ಕಾಗಿ 2009ರಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ತರಲಾಯಿತು. ಈ ಕಾಯ್ದೆ ಅನ್ವಯ ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಶೇ 25ರಷ್ಟು ಪ್ರವೇಶವನ್ನು ಬಡಮಕ್ಕಳಿಗಾಗಿ ಕಾಯ್ದಿರಿಸಲಾಯಿತು. ಕಾಯ್ದೆ ಅನುಷ್ಠಾನಕ್ಕೆ ಬಂದ ಆರಂಭದ ದಿನಗಳಲ್ಲಿ ಕಾಯ್ದೆಯಡಿ ಪ್ರವೇಶ ಪಡೆದ ಮಕ್ಕಳನ್ನು ಶಾಲೆಗಳಲ್ಲಿ ಕೆಲವು ಶಿಕ್ಷಕರು ಮತ್ತು ಸಹಪಾಠಿಗಳು ಅಸ್ಪೃಶ್ಯರಂತೆ ನೋಡಿದ್ದು ಸುಳ್ಳಲ್ಲ. ಇಂತಹ ವರ್ತನೆ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಿ ಅದು ಅವರ ಕಲಿಕೆ ಕುಂಠಿತಗೊಳ್ಳಲು ಕಾರಣವಾಯಿತು.
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಲ್ಲಿನ ಮಕ್ಕಳು ಈಗಲೂ ಶಿಕ್ಷಣಕ್ಕಾಗಿ ನೆಚ್ಚಿಕೊಂಡಿರುವುದು ಸರ್ಕಾರಿ ಶಾಲೆಗಳನ್ನೆ. ಬಿಸಿಯೂಟದ ಯೋಜನೆಯಿಂದ ಹಾಗೂ ಉಚಿತ ಸಮವಸ್ತ್ರ ಮತ್ತು ಶೈಕ್ಷಣಿಕ ಪರಿಕರಗಳನ್ನು ಒದಗಿಸುವುದರಿಂದ ಬಡಕುಟುಂಬಗಳಿಗೆ ಮಕ್ಕಳ ಶಿಕ್ಷಣ ಹೊರೆಯಾಗುತ್ತಿಲ್ಲ. ಸಮಾಜದಲ್ಲಿ, ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳನ್ನು ದಡ್ಡರು ಎನ್ನುವಂತೆ ನೋಡಲಾಗುತ್ತಿದೆ. ಮಕ್ಕಳು ಸರ್ಕಾರಿ ಕನ್ನಡ ಶಾಲೆಗಳಲ್ಲಿ ಓದುತ್ತಿದ್ದಾರೆ ಎಂದು ಹೇಳಲು ಬಹುತೇಕ ಪಾಲಕರಿಗೆ ಕೀಳರಿಮೆ ಕಾಡುತ್ತಿದೆ.
ಕರ್ನಾಟಕ ಸರ್ಕಾರ ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆಯ ಸೌಲಭ್ಯ ಕಲ್ಪಿಸಿದೆ. ಇದು ಪುರುಷ ಉದ್ಯೋಗಿಗಳ ವ್ಯಂಗ್ಯ ಮತ್ತು ಚರ್ಚೆಗೆ ಆಹಾರವಾಗಿದೆ. ಸೌಲಭ್ಯದ ಫಲಾನುಭವಿಗಳಾದ ಮಹಿಳೆಯರನ್ನು ವಿಚಿತ್ರ ಪ್ರಾಣಿಗಳೆಂಬಂತೆ ನೋಡಲಾಗುತ್ತಿದೆ. ಸರ್ಕಾರ ಘೋಷಿಸಿರುವ ಈ ಸೌಲಭ್ಯವನ್ನು ಸ್ವಾಗತಿಸುವುದರಲ್ಲೇ ಪುರುಷ ಉದ್ಯೋಗಿಗಳ ಮಾನವೀಯತೆ ಅಡಕವಾಗಿದೆ. ಕೀಳು ಚರ್ಚೆ ಮತ್ತು ವ್ಯಂಗ್ಯದ ಮಾತುಗಳು ಸರಿಯಲ್ಲ.
ಯೋಜನೆಯ ಫಲಾನುಭವಿಗಳೊಂದಿಗೆ ಅನಾಗರಿಕವಾಗಿ ವರ್ತಿಸುವುದಕ್ಕಿಂತ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ಪ್ರಾಪ್ತವಾಗುತ್ತಿವೆಯೇ ಎಂದು ಯೋಚಿಸುವುದೊಳಿತು. ಬಡವರೊಂದಿಗೆ ಅನೇಕ ಬಲ್ಲಿದರೂ ಯೋಜನೆಗಳ ಲಾಭ ಪಡೆಯುತ್ತಿದ್ದಾರೆ. ವೃದ್ಧಾಪ್ಯ ವೇತನ, ವಿಧವಾ ವೇತನ, ಅನ್ನಭಾಗ್ಯ, ಗೃಹಲಕ್ಷ್ಮಿ, ಸ್ತ್ರೀಶಕ್ತಿ, ಗೃಹಜ್ಯೋತಿ ಇತ್ಯಾದಿ ಯೋಜನೆಗಳ ಫಲದಲ್ಲಿ ಆರ್ಥಿಕ ಸ್ಥಿತಿವಂತರೂ ಪಾಲುದಾರರಾಗಿದ್ದಾರೆ. ಶ್ರೀಮಂತ ರೈತರ ಬ್ಯಾಂಕ್ ಖಾತೆಗಳಿಗೆ ಬೆಳೆಪರಿಹಾರದ ಹಣ ಜಮೆಯಾಗುತ್ತಿದೆ.
ವಿವೇಕ ಶಾನಭಾಗರ ‘ಒಂದು ಬದಿ ಕಡಲು’ ಕಾದಂಬರಿ ಯಲ್ಲಿ ಒಂದು ಸನ್ನಿವೇಶವಿದೆ: ಯಾರನ್ನು ನೈವೇದ್ಯದ ಎಲೆಗೆ ಕೂರಿಸುವುದೆಂದು ನಿರ್ಧರಿಸಲು ವಾಸುದೇವ ಮಕ್ಕಳನ್ನೆಲ್ಲ ವೃತ್ತಾಕಾರ ನಿಲ್ಲಿಸಿ, ‘ಈಗ ಅಡಂ ತಡಂ, ತತ್ತರಬಾಜಾ ಆಟ ಆಡಿ, ಯಾರು ಕೊನೆಯಲ್ಲಿ ಉಳಿಯುತ್ತಾರೋ ಅವರಿಗೆ ನೈವೇದ್ಯದ ಎಲೆ’ ಅಂದ. ಗುಂಪಿನಲ್ಲಿ ಸೇರದೆ ದೂರನಿಂತ ಪುರಂದರನನ್ನು ಅವನು ಗಮನಿಸಿದರೂ ಕರೆಯಲಿಲ್ಲವೆಂದು ಸಾವಿತ್ರಿಗೆ ಅನಿಸಿತು. ಮಗನ ಹತ್ತಿರ ಹೋಗಿ ‘ನಿನಗೂ ನೈವೇದ್ಯದ ಎಲೆಯ ಮೇಲೆ ಕೂರಬೇಕೇನೋ?’ ಎಂದು ಕೇಳಿದಳು. ಅವನು ಇಲ್ಲವೆಂದು ತಲೆಯಾಡಿಸಿದ. ಮತ್ತೆ ಮತ್ತೆ ಕೇಳಿದ್ದಕ್ಕೆ ‘ನನಗೆ ಇಷ್ಟವಿಲ್ಲವಮ್ಮ’ ಅಂದುಬಿಟ್ಟ. ನಮ್ಮಂಥವರ ಮನೆಯ ಮಕ್ಕಳು ಬೇಗನೆ ದೊಡ್ಡವರಾಗಿ
ಬಿಡುತ್ತಾರೆ ಎಂದು ಅವಳಿಗನಿಸಿತು.
ಕಾದಂಬರಿಯಲ್ಲಿ ಹೇಳಿದ ‘ನಮ್ಮಂಥವರ’ ಎನ್ನುವುದು ಬಡವರನ್ನು, ನಿರ್ಗತಿಕರನ್ನು ಸಂಕೇತಿಸುತ್ತದೆ. ಸಮಾಜದಲ್ಲಿ ‘ನಮ್ಮಂಥವರ’ ಸಂಖ್ಯೆ ಹೇರಳವಾಗಿದೆ. ಸೀಮಿತ ಜನರಲ್ಲಿ ಹಣ ಕ್ರೋಡೀಕರಣಗೊಂಡಿದೆ. ಇಂತಹ ವಿಷಮ ಸನ್ನಿವೇಶದಲ್ಲಿ ಬಡವರು ಬದುಕುವುದಾದರೂ ಹೇಗೆ? ಪ್ರತಿಯೊಬ್ಬ ಮನುಷ್ಯನಿಗೂ ಘನತೆಯ ಬದುಕು ಹಕ್ಕಾಗಬೇಕು. ಸರ್ಕಾರದ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ತಲಪುವಂತಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.