
ಮಕ್ಕಳ ಸಾಹಿತ್ಯದಲ್ಲಿ ಕುವೆಂಪು ಅವರ ‘ಬೊಮ್ಮನಹಳ್ಳಿಯ ಕಿಂದರಜೋಗಿ’ಗೆ ಮುಂಚೂಣಿ ಸ್ಥಾನ. ಕಿಂದರಜೋಗಿ ಈಗ ನೂರರ ಹೊಸ್ತಿಲಲ್ಲಿ ನಿಂತಿದ್ದಾನೆ.
ಕನ್ನಡ ಬಲ್ಲ ಮಕ್ಕಳಿಗೆ ಪುಸ್ತಕ ಕೊಡಬೇಕೆಂದರೆ ನನಗೆ ಮೊದಲಿಗೆ ನೆನಪಿಗೆ ಬರುವ ಪುಸ್ತಕ, ಕುವೆಂಪು ಅವರ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’. ಕಳೆದೊಂದು ಶತಮಾನದಿಂದ ಕನ್ನಡದ ಮಕ್ಕಳ ಮನಸ್ಸನ್ನು ಸೂರೆಗೊಳ್ಳುತ್ತಿರುವ ‘ಬೊಮ್ಮನಹಳ್ಳಿ ಕಿಂದರಿಜೋಗಿ’ಗೆ ಈಗ ನೂರರ ಸಂಭ್ರಮ! ಇದೇ ನವೆಂಬರ್ 19ರಂದು ‘ಕಿಂದರಿಜೋಗಿ’ ನೂರನೇ ವರ್ಷಕ್ಕೆ ಕಾಲಿಡಲಿದ್ದಾನೆ.
‘ಇಲಿಗಳು! ಇಲಿಗಳು! ಇಲಿಗಳ ಹಿಂಡು!/ ಬಳ ಬಳ ಬಂದುವು ಇಲಿಗಳ ದಂಡು!’ ಎನ್ನುವ ಸಾಲುಗಳು ಕಿವಿಯ ಮೇಲೆ ಬಿದ್ದರೆ ಸಾಕು, ಸಾಹಿತ್ಯ ಪ್ರೀತಿಯ ಕನ್ನಡಿಗರ ಕಿವಿಗಳು ನಿಮಿರುತ್ತವೆ; ಮೈಮನಸ್ಸುಗಳು ಅರಳುತ್ತವೆ; ಕಿಂದರಿ ಹಿಡಿದ ಜೋಗಿ ಕಣ್ಣಮುಂದೆ ನರ್ತಿಸುತ್ತಾನೆ. ಮಕ್ಕಳ ನಾಲಗೆಯ ಮೇಲೆ ನಲಿಯುತ್ತಲೇ ಇರುವ ‘ಕಿಂದರಿಜೋಗಿ’ಗೆ ವಿಸ್ಮಯಕರ ಇತಿಹಾಸವಿದೆ.
ಆಗಿನ್ನೂ ಕುವೆಂಪು ಆಗಿರದ, ‘ಕಿಶೋರಚಂದ್ರವಾಣಿ’ ಮಾತ್ರವಾಗಿದ್ದ 22 ವರ್ಷದ ಯುವಕವಿ ಪುಟ್ಟಪ್ಪ, ವಿದ್ಯಾರ್ಥಿಯಾಗಿದ್ದಾಗ ಒಮ್ಮೆ ಅನಾರೋಗ್ಯಕ್ಕೆ ತುತ್ತಾಗಿ, ಮೈಸೂರಿನಿಂದ ಊರಿಗೆ ಹೊರಡುತ್ತಾರೆ. ವಾಡಿಕೆಯಂತೆ ಶಿವಮೊಗ್ಗದಲ್ಲಿ ದೇವಂಗಿ ರಾಮಣ್ಣಗೌಡರ ಅಡಿಕೆ ಮಂಡಿಯಲ್ಲಿ ಕೆಲವು ದಿನ ಉಳಿದುಕೊಳ್ಳುತ್ತಾರೆ. ಭೂಪಾಳಂ ಚಂದ್ರಶೇಖರಯ್ಯ ಮೊದಲಾದ ಗೆಳೆಯರ ಸಹವಾಸ ಮತ್ತು ದೇವಂಗಿ ಮಾನಪ್ಪನವರ ಆತಿಥ್ಯದಲ್ಲಿ ಅನಾರೋಗ್ಯದ ಆಯಾಸದಿಂದ ಚೇತರಿಸಿಕೊಳ್ಳುತ್ತಿರುತ್ತಾರೆ. ದೇಹ–ಮನಸ್ಸು ಪ್ರಫುಲ್ಲವಾದಂತೆ ಕವಿಗೆ ಬರೆಯುವ ಉತ್ಸಾಹ ಮೈದೋರುತ್ತದೆ. ಆ ಉತ್ಸಾಹದಲ್ಲಿ, 1926ರ ನ. 19ರಂದು ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ಎಂಬ ದೀರ್ಘ ಕವಿತೆಯ (14 ಭಾಗಗಳು; 428 ಸಾಲುಗಳು) ರಚನೆ ಕೇವಲ ನಾಲ್ಕು ಗಂಟೆಯಲ್ಲಿ ಮುಗಿದುಹೋಗುತ್ತದೆ! ರಚನೆಯ ಜೊತೆ ಜೊತೆಗೇ ಪ್ರತಿಯೆತ್ತುವ ಕೆಲಸವನ್ನು ಮಾನಪ್ಪ ಮಾಡುತ್ತಾರೆ. ಅಂದರೆ, ಇಡೀ ರಚನೆ, ಕವಿಯಿಂದ ಮರುಓದಿಗೆ, ತಿದ್ದುಪಡಿಗೆ ಒಳಪಡುವುದೇ ಇಲ್ಲ.
‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ನೀಳ್ಗವಿತೆಯ ರಚನೆಯ ಬಗೆಗೆ ಕವಿ, ‘ಬೆಳಿಗ್ಗೆ ಸ್ನಾನ, ಕಾಫಿ, ತಿಂಡಿ ಪೂರೈಸಿ ಉಪ್ಪರಿಗೆಗೆ ಹೋಗಿ, ಮೇಜಿನ ಮುಂದಿದ್ದ ಕುರ್ಚಿಯ ಮೇಲೆ ಕುಳಿತು, ಬಿಡಿ ಹಾಳೆಗಳಲ್ಲಿ ಬರೆಯತೊಡಗಿದೆ. ಒಂದೊಂದೇ ಹಾಳೆ ತುಂಬಿದಂತೆಲ್ಲ ಅದನ್ನು ಕೆಳಗೆ ಹಾಕುತ್ತಿದ್ದೆ. ಮಾನಪ್ಪ ಈಗ ನನ್ನ ಬಳಿ ಇರುವ ನೋಟುಬುಕ್ಕಿನ ಹಸ್ತಪ್ರತಿಗೆ ಅದನ್ನು ಕಾಪಿ ಮಾಡುತ್ತಾ ಹೋಗುತ್ತಿದ್ದ. ಮಧ್ಯಾಹ್ನದ ಊಟದ ಹೊತ್ತಿಗೆ ಬರೆಯುವುದೂ ಪೂರೈಸಿತ್ತು! ಅಂದರೆ ಅದರ ರಚನೆಗೆ ಸುಮಾರು ನಾಲ್ಕು–ಐದು ಗಂಟೆ ಹಿಡಿದಿತ್ತು’ ಎನ್ನುತ್ತಾರೆ.
‘ಬೊಮ್ಮನಹಳ್ಳಿಯ ಕಿಂದರಿಜೋಗಿ’ಯ ಕಂಪು, ಕವಿಗೋಷ್ಠಿಗಳ ಮೂಲಕ ಕರ್ಣಾಟಕದಾದ್ಯಂತ ಪಸರಿಸಿತು. ಕನ್ನಡ ಮಕ್ಕಳ ನಾಲಿಗೆಯಲ್ಲಿ ನಲಿಯತೊಡಗಿತು. 1928ರಲ್ಲಿ ಮೊದಲ ಬಾರಿಗೆ ಪ್ರಕಟವಾದಾಗ, ಅದನ್ನು ಬ್ರೌನಿಂಗ್ ಕವಿಯ ‘ಪೈಡ್ ಪೈಪರ್ ಆಫ್ ಹ್ಯಾಮಲಿನ್’ ಕವನದ ಭಾಷಾಂತರವೆಂದು ಕೆಲವರು, ಅನುವಾದವೆಂದು ಕೆಲವರು ವಾದಿಸತೊಡಗಿದರು. ಆದರೆ ಅದು ಅವೆರಡೂ ಆಗಿರಲಿಲ್ಲ!
‘ಅದು ಮೊದಲು ‘ಕಿರಿಯ ಕಾಣಿಕೆ’ಯಲ್ಲಿ ಮಹಾರಾಜಾ ಕಾಲೇಜಿನ ಕರ್ಣಾಟಕ ಸಂಘದಿಂದ 1928ರಲ್ಲಿ ಪ್ರಕಟವಾದಾಗ, ಅದು ‘ಬ್ರೌನಿಂಗ್ ಕವಿಯ ಕವಿತೆಯ ಆಧಾರದ ಮೇಲೆ ರಚಿತವಾದದ್ದು’ ಎಂಬ ಉಲ್ಲೇಖವಿದೆ. ಅದು ಯಾವ ದೃಷ್ಟಿಯಿಂದ ಪರಿಶೀಲಿಸಿದರೂ ಭಾಷಾಂತರವಾಗುವುದಿಲ್ಲ; ಕಡೆಗೆ, ಸಮೀಪದ ಅನುವಾದ ಕೂಡ ಆಗುವುದಿಲ್ಲ. ಅದನ್ನು ಬರೆಯುವಾಗ ಶಿವಮೊಗ್ಗದಲ್ಲಿ ನನ್ನ ಬಳಿ ಬ್ರೌನಿಂಗ್‌ರ ಕೃತಿ ಇರಲಿಲ್ಲ. ಅಷ್ಟೇ ಅಲ್ಲ, ಇಂಗ್ಲಿಷಿನಲ್ಲಿ ಅದನ್ನು ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ನಾನು ಐದನೇ ಫಾರಂನಲ್ಲಿ ಓದುತ್ತಿದ್ದಾಗ ಪಠ್ಯಪುಸ್ತಕದಲ್ಲಿ ಓದಿದ್ದೆನೇ ಹೊರತು, ಆಮೇಲೆ ಅದನ್ನು ಓದಿರಲೂ ಇಲ್ಲ. ಆದ್ದರಿಂದ ಅದು ಭಾಷಾಂತರವೂ ಅಲ್ಲ, ಅನುವಾದವೂ ಅಲ್ಲ. ಆ ಕಥೆಯ ನೆನಪಿನ ಆಧಾರದ ಮೇಲೆ ರಚಿತವಾದದ್ದು ಎಂದು ಹೇಳಬಹುದು’ ಎಂದಿದ್ದಾರೆ ಕುವೆಂಪು.
ಮುಂದೆ, ಕಿಂದರಜೋಗಿ ಪ್ರತ್ಯೇಕವಾಗಿ ಪ್ರಕಟವಾದಾಗ, ಅದಕ್ಕೆ ಪ್ರಸಿದ್ಧ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ಅವರು ರೇಖಾಚಿತ್ರಗಳನ್ನು ಬರೆದಿದ್ದು ಮತ್ತೊಂದು ವಿಶೇಷ!
ಮಕ್ಕಳ ಸಂಗದೊಳೆಚ್ಚರಗೊಳ್ಳಲಿ/ ಆನಂದದ ಆ ದಿವ್ಯ ಶಿಶು;/ ಹಾಡಲಿ ಕುಣಿಯಲಿ; ಹಾರಲಿ, ಏರಲಿ/ ದಿವಿಜತ್ವಕೆ ಈ ಮನುಜಪಶು!’ ಎಂಬ ಮುಂಬರಹ ‘ಕಿಂದರಿಜೋಗಿ’ಗಿದೆ. ಪ್ರತಿಯೊಬ್ಬರಲ್ಲೂ ಯಾವಾಗಲೂ (ನಿತ್ಯ ಕಿಶೋರತೆ) ಇರುವ ‘ಮಗು’ತ್ವ ಮಕ್ಕಳ ಸಂಗದಲ್ಲಿ ಪ್ರಕಟವಾಗುತ್ತದೆ. ಅದು ‘ಆನಂದದ ದಿವ್ಯ ಶಿಶು’ ಎಂಬುದು ಕವಿಯ ಅಭಿಪ್ರಾಯ.
ಶತಮಾನದ ಹೊಸ್ತಿಲಲ್ಲಿ ನಿಂತಿರುವ ‘ಕಿಂದರಿಜೋಗಿ’ ಐವತ್ತಕ್ಕೂ ಹೆಚ್ಚು ಮುದ್ರಣಗಳನ್ನು ಕಂಡಿದೆ. ಹಾಡುಗಬ್ಬವಾಗಿ, ರೇಡಿಯೊ ನಾಟಕವಾಗಿ, ರಂಗರೂಪವಾಗಿ, ನಾಟಕವಾಗಿ ಕನ್ನಡಿಗರ ಮನೆ ಮನ ತಲಪಿದೆ; ತಲಪುತ್ತಿದೆ. ಮೂರು ದಶಕಗಳ ಹಿಂದೆಯೇ, ಮೈಸೂರಿನ ರಂಗಾಯಣದ ಆವರಣದಲ್ಲಿ ಕಿಂದರಿಜೋಗಿಯ ಕಲಾಕೃತಿಯೊಂದನ್ನು ರಚಿಸಿ ಪ್ರದರ್ಶನಕ್ಕಿಡಲಾಗಿದ್ದು, ಅದು ಈಗಲೂ ಆಕರ್ಷಣೆಯ ಕೇಂದ್ರವಾಗಿದೆ. ಇಷ್ಟೊಂದು ವ್ಯಾಪಕವಾಗಿ ನಾಡಿನ ಮಕ್ಕಳನ್ನೂ ದೊಡ್ಡವರನ್ನೂ ತಲಪಿದ ಕನ್ನಡ ಶಿಶುಸಾಹಿತ್ಯ ಕೃತಿ ಮತ್ತೊಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.