ADVERTISEMENT

ಸಂಗತ | ಶಿಕ್ಷಣ: ನೈತಿಕ ಮೌಲ್ಯಗಳ ‘ಬಾಪು ಪಥ’

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 23:38 IST
Last Updated 29 ಜನವರಿ 2026, 23:38 IST
_
_   

‘ಸಾ ವಿದ್ಯಾ ಯಾ ವಿಮುಕ್ತಯೇ’ ಎಂಬುದು ಭಾರತೀಯ ಪರಂಪರೆಯಲ್ಲಿ ಪ್ರಸಿದ್ಧವಾದ ಸೂಕ್ತಿ. ವಿದ್ಯೆ ಅಥವಾ ಶಿಕ್ಷಣದ ಉದ್ದೇಶವನ್ನು ಈ ಸೂಕ್ತಿಯಿಂದ ಅರಿಯಬಹುದು. ಶಿಕ್ಷಣದ ಉದ್ದೇಶವು ಸಂಕುಚಿತವಾಗಿರಬಾರದು. ಅದು ವ್ಯಕ್ತಿಯನ್ನು ಕ್ರಿಯಾಶೀಲಗೊಳಿಸಬೇಕು; ಸಾಮಾಜಿಕವಾಗಿ, ನೈತಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ವ್ಯಕ್ತಿಯನ್ನು ಸಮೃದ್ಧಗೊಳಿಸಬೇಕು. ಹಾಗೆಯೇ ವ್ಯಕ್ತಿಯಲ್ಲಿ ಆಧ್ಯಾತ್ಮಿಕ ಶಕ್ತಿಯನ್ನು ಜಾಗೃತಗೊಳಿಸ
ಬೇಕು. ಈ ದಿಸೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಶೈಕ್ಷಣಿಕ ವಿಚಾರಗಳು ಗಮನಾರ್ಹವಾಗಿವೆ.

ಗಾಂಧೀಜಿ ಅವರು ಬದುಕಿರುವಾಗಲೇ ದಂತಕಥೆಯಾಗಿದ್ದವರು. ಹಾಗಾಗಿ, ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯಲ್ಲಿ ಅವರಿಗೊಂದು ವಿಶಿಷ್ಟ ಸ್ಥಾನವಿದೆ. ಅವರು ಆಧುನಿಕ ಭಾರತದ ಶಿಕ್ಷಣತಜ್ಞರಲ್ಲಿ ಒಬ್ಬರು. ರಾಷ್ಟ್ರೀಯವಾದವನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದ ಅವರು ಶಿಕ್ಷಣದ ವಿಷಯದಲ್ಲಿ ತಮ್ಮ ವಿಚಾರಗಳನ್ನು ಸಾಂದರ್ಭಿಕವಾಗಿ ಅಭಿವ್ಯಕ್ತಗೊಳಿಸಿದ್ದಾರೆ. ಶಿಕ್ಷಣವನ್ನು ಕೇವಲ ಅಕ್ಷರಾಭ್ಯಾಸವೆಂದು ಪರಿಗಣಿಸ
ಬಾರದು. ಸಾಕ್ಷರತೆ ಎಂಬುದು ಶಿಕ್ಷಣದ ಆದಿಯೂ ಅಲ್ಲ, ಅಂತ್ಯವೂ ಅಲ್ಲ. ಅದು ವ್ಯಕ್ತಿಯ ಸಾಮಾಜಿಕ, ನೈತಿಕ ಮತ್ತು ಆಧ್ಯಾತ್ಮಿಕ ವಿಕಾಸದ ಸಾಧನವಾಗಿದೆ ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು.

ಶಿಕ್ಷಣ ಕೇವಲ ಔಪಚಾರಿಕ ಜ್ಞಾನದ ಮಾಧ್ಯಮವಾಗಿರದೆ, ಅದು ಜೀವನ ದರ್ಶನ, ಚಾರಿತ್ರ್ಯ ನಿರ್ಮಾಣ ಹಾಗೂ ಸಾಮಾಜಿಕ ಪರಿವರ್ತನೆಯ ಸಶಕ್ತ ಸಾಧನವಾಗಿದೆ. ಶಿಕ್ಷಣದ ಉದ್ದೇಶ ಆಡಳಿತಯಂತ್ರ ನಡೆಸುವ
ಗುಮಾಸ್ತರನ್ನು ತರಬೇತುಗೊಳಿಸುವುದಲ್ಲ. ಅದು ಮನುಷ್ಯನ ಆಂತರಿಕ ಶಕ್ತಿಯನ್ನು ಹೆಚ್ಚಿಸಬೇಕು. ಕೌಶಲಾಭಿವೃದ್ಧಿ ಮತ್ತು ಪರಿಪೂರ್ಣ ವ್ಯಕ್ತಿತ್ವದ ನಿರ್ಮಾಣ ಮಾಡುವಂತಿರಬೇಕು ಮತ್ತು ಇಂತಹ ಶಿಕ್ಷಣದಿಂದಲೇ ರಾಷ್ಟ್ರವು ಸ್ವಾವಲಂಬಿಯಾಗುವುದು ಎಂದವರು ನಂಬಿದ್ದರು.

ADVERTISEMENT

ಗಾಂಧೀಜಿಯವರು ಶಿಕ್ಷಣದ ವಿಷಯದಲ್ಲಿ ಸಾಂದರ್ಭಿಕವಾಗಿ ಹೇಳಿದ ವಿಚಾರಗಳನ್ನು ಕ್ರೋಡೀಕರಿಸಿ ಹೇಳುವುದಾದರೆ, ಶಿಕ್ಷಣದಿಂದ ಸಾಂಸ್ಕೃತಿಕ ವಾತಾವರಣ ಸೃಷ್ಟಿ ಆಗಬೇಕು. ವ್ಯಕ್ತಿಯ ಚಾರಿತ್ರ್ಯದ ವಿಕಾಸವಾಗಬೇಕು. ವ್ಯಕ್ತಿಯ ವ್ಯಕ್ತಿತ್ವವು ಪರಿಪೂರ್ಣವಾಗುವುದರ ಜತೆಗೆ ವ್ಯಸನಮುಕ್ತವಾದ ಸರ್ವಾಂಗಸುಂದರ ಸಮಾಜ ನಿರ್ಮಾಣಗೊಳ್ಳಬೇಕು. ಅವರು ತಮ್ಮ ಆತ್ಮಚರಿತ್ರೆಯಲ್ಲಿ, ‘ನಾನು ಯಾವಾಗಲೂ ಹೃದಯದ ಸಂಸ್ಕೃತಿ ಹಾಗೂ ಚಾರಿತ್ರ್ಯ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡುತ್ತ ಬಂದಿದ್ದೇನೆ. ನನ್ನ ದೃಷ್ಟಿಯಲ್ಲಿ ಚಾರಿತ್ರ್ಯ ನಿರ್ಮಾಣಕ್ಕೆ ಶಿಕ್ಷಣವೇ ಆಧಾರ’ ಎಂದು ಹೇಳಿದ್ದಾರೆ.

ವ್ಯಕ್ತಿಯು ಶಿಕ್ಷಣದಿಂದ ತನ್ನ ಬದುಕಿನ ನಿರ್ವಹಣೆಯನ್ನು ತಾನೇ ಮಾಡಿಕೊಳ್ಳುವುದರ ಜತೆಗೆ ಉತ್ತಮ ಚಾರಿತ್ರ್ಯವನ್ನೂ ನಿರ್ಮಿಸಿಕೊಳ್ಳಬೇಕು. ಚಾರಿತ್ರ್ಯನಿರ್ಮಾಣ ಮಾಡದ ಶಿಕ್ಷಣ ನಿಷ್ಪ್ರಯೋಜಕ. ಶಿಕ್ಷಣದ ಉದ್ದೇಶ ಜ್ಞಾನಾಭಿವೃದ್ಧಿಯಷ್ಟೇ ಅಲ್ಲ, ಹಾರ್ದಿಕ ಮತ್ತು ಕಾಯಕ ಸಂಸ್ಕೃತಿಯ ವಿಕಾಸವೂ
ಆಗಿದೆ. ಶಿಕ್ಷಣಕ್ಕೆ ಸದಾಚಾರ ಮತ್ತು ನೈತಿಕತೆ ಆಧಾರವಾಗಬೇಕು. ಆದರೆ, ಇಂದಿನ ಶಿಕ್ಷಣವು ಭೌತಿಕತೆ ಹಾಗೂ ಹಿಂಸೆಗೆ ಉತ್ತೇಜನ ನೀಡುತ್ತಿರುವುದು ವಿಪರ್ಯಾಸ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದು, ಆರ್ಥಿಕವಾಗಿ ಅವರನ್ನು ಆತ್ಮನಿರ್ಭರರನ್ನಾಗಿಸುವುದು ಮತ್ತು ಹೊಣೆಗಾರಿಕೆಯುಳ್ಳ ಕ್ರಿಯಾಶೀಲ ನಾಗರಿಕರನ್ನಾಗಿ ರೂಪಿಸುವುದು ಶಿಕ್ಷಣದ ಉದ್ದೇಶ.

ಗಾಂಧೀಜಿಯವರ ದೃಷ್ಟಿಯಲ್ಲಿ, ಶಿಕ್ಷಣದಿಂದ ಬರೀ ಬೌದ್ಧಿಕ ವಿಕಾಸ ಆಗುವುದಾದರೆ ಪ್ರಯೋಜನವಿಲ್ಲ. ಬೌದ್ಧಿಕ ವಿಕಾಸದೊಂದಿಗೆ ನಮ್ಮ ಸಕಲ ಇಂದ್ರಿಯಗಳನ್ನು ಸದುಪಯೋಗಪಡಿಸಿಕೊಳ್ಳುವ ಶಿಕ್ಷಣ ಬಹಳ ಮುಖ್ಯ. ಇಂದಿನ ಶಿಕ್ಷಣವು ಮನುಷ್ಯನಿಗೆ ಅವನ ಕಣ್ಣು, ಕಿವಿ, ಮೂಗು, ಬಾಯಿ, ಕೈ-ಕಾಲುಗಳನ್ನು ಸದುಪಯೋಗ ಮಾಡಿಕೊಳ್ಳುವುದನ್ನು ಕಲಿಸುತ್ತಿಲ್ಲ. ಗಾಂಧೀಜಿಯವರು ಪ್ರತಿಪಾದಿಸಿರುವುದು ಕಾಯಕ ಕೇಂದ್ರಿತ, ಮೌಲ್ಯಾಧಾರಿತ ಮತ್ತು ಸಮಾಜಮುಖಿ ಶಿಕ್ಷಣವಾಗಿದೆ. ಮಾದರಿ ಶಿಕ್ಷಣ ಕುರಿತಂತೆ ಗಾಂಧೀಜಿ ಅವರ ಕೆಲವು ಸಲಹೆಗಳು ಹೀಗಿವೆ:

  • ದೇಶದಲ್ಲಿ ಹುಟ್ಟಿದ ಪ್ರತಿಯೊಂದು ಮಗುವೂ ಮೌಲಿಕ ಶಿಕ್ಷಣ ಪಡೆಯುವಂತಾಗಲು ಪ್ರೌಢಶಾಲಾ ಹಂತದವರೆಗೆ ಮಗುವಿಗೆ ಶುಲ್ಕರಹಿತ ಶಿಕ್ಷಣ ನೀಡಬೇಕು. ಇದು ಜಾರಿಯಾಗದಿದ್ದರೆ ಸಮಾಜದಲ್ಲಿ ಅಸಮಾನತೆ ಉಂಟಾಗಲಿದೆ.

  • ಮಗುವು ಪ್ರಾಥಮಿಕ ಶಿಕ್ಷಣವನ್ನು ತನ್ನ ಮಾತೃಭಾಷೆಯಲ್ಲಿಯೇ ಪಡೆಯಬೇಕು. ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ಮಗುವು ವಿಷಯವನ್ನು ಚೆನ್ನಾಗಿ ಅರ್ಥೈಸಿಕೊಳ್ಳುತ್ತದೆ, ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಜತೆಗೆ ಸಂಬಂಧ ಬೆಳೆಸಿಕೊಳ್ಳುತ್ತದೆ. ಭಾಷೆ ಕೇವಲ ಅಭಿವ್ಯಕ್ತಿಯ ಮಾಧ್ಯಮವಲ್ಲ. ಅದು ಸಂಸ್ಕೃತಿ ಮತ್ತು ಸಭ್ಯತೆಯ ವಾಹಕವಾಗಿರುವುದನ್ನು ಗಮನಿಸಬೇಕು.

  • ಶಿಕ್ಷಣ ಪಡೆದ ವಿದ್ಯಾರ್ಥಿಯು ಸರ್ಕಾರಿ ನೌಕರಿಗಾಗಿ ಅಲೆದಾಡುವಂತಾಗಬಾರದು. ನೌಕರಿ ಸಿಗದಿದ್ದರೆ ಬದುಕಿನ ನಿರ್ವಹಣೆಗಾಗಿ ಯಾವುದೇ ಭ್ರಷ್ಟ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಬಾರದು. ಹಾಗೆಯೇ ಶಿಕ್ಷಣದಿಂದ ವಿದ್ಯಾರ್ಥಿಯು ಭ್ರಮಾಧೀನ ಆಗಬಾರದು. ಶಿಕ್ಷಣವು ವ್ಯಕ್ತಿಯನ್ನು ಸ್ವಾವಲಂಬಿಯಾಗಿಸಬೇಕು. ಸ್ವಾವಲಂಬನೆ ಎಂಬುದು ಕೇವಲ ಆರ್ಥಿಕ ಸ್ವಾತಂತ್ರ್ಯದ ತಳಹದಿಯಲ್ಲ. ಅದು ಮಾನವೀಯತೆಯನ್ನು ಉನ್ನತೀಕರಿಸುವುದಕ್ಕೆ ಮತ್ತು ಆತ್ಮಗೌರವದಿಂದ ಬದುಕುವುದಕ್ಕೆ ಮೂಲಾಧಾರವಾಗಿದೆ.

ಗಾಂಧೀಜಿ ಅವರ ಶಿಕ್ಷಣವನ್ನು ಕುರಿತಾದ ವಿಚಾರಗಳು ವ್ಯಕ್ತಿ ಸ್ವಾವಲಂಬಿಯಾಗಿ ಮತ್ತು ಸ್ವಾಭಿಮಾನದಿಂದ ಬದುಕುವುದನ್ನು ಕಲಿಸುತ್ತವೆ. ಸತ್ಯ, ಅಹಿಂಸೆ, ನಿರ್ಭಯ ಮತ್ತು ಸತ್ಯಾಗ್ರಹಗಳು ಗಾಂಧೀಜಿ ಅವರ ಜೀವನ ದರ್ಶನದ ತತ್ತ್ವಗಳಾಗಿವೆ. ಇವುಗಳ ಅನುಷ್ಠಾನದಿಂದ ವ್ಯಕ್ತಿಯ ಚಾರಿತ್ರ್ಯನಿರ್ಮಾಣವೂ ಸಾಧ್ಯವಾಗುತ್ತದೆ ಹಾಗೂ ದೇಶಾಭಿಮಾನವೂ ಬೆಳೆಯುತ್ತದೆ. ಈ ದಿಸೆಯಲ್ಲಿ ಗಾಂಧೀಜಿ ಅವರ ಶೈಕ್ಷಣಿಕ ಕೊಡುಗೆಗಳನ್ನು ಕುರಿತು ಅಧ್ಯಯನ ಮಾಡುವುದು ಮತ್ತು ಮುಂದಿನ ಪೀಳಿಗೆಗೆ ಅವರ ವಿಚಾರಗಳನ್ನು ತಲಪಿಸುವುದು ಇಂದಿನ ಅಗತ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.