ADVERTISEMENT

ಸಂಗತ: ಸಂವೇದನೆಗಳಿಗೆ ಮೊಬೈಲ್‌ ಗ್ರಹಣದ ಮಸಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 0:01 IST
Last Updated 12 ಸೆಪ್ಟೆಂಬರ್ 2025, 0:01 IST
ಸಂಗತ
ಸಂಗತ   

ಕೆಲವು ದಿನಗಳ ಹಿಂದೆ ಪರಿಚಿತರೊಬ್ಬರು ನಮ್ಮ ಮನೆಗೆ ಬಂದಿದ್ದರು. ಮನೆಯಲ್ಲಿ ಟಿ.ವಿ ಹಾಕದಿರುವುದನ್ನು ಕಂಡು, ‘ನೀವೂ ಟಿ.ವಿ ಹಾಕಲ್ವಾ?’ ಎಂದು ಕೇಳಿದರು. ‘ಟಿ.ವಿ ನೋಡುತ್ತೇವೆ. ಸ್ಪೋರ್ಟ್ಸ್‌, ಒಳ್ಳೆಯ ಸಿನಿಮಾ ನೋಡ್ತೇವೆ. ನ್ಯೂಸ್‌ ಚಾನೆಲ್‌ ಹಾಕುವುದೇ ಇಲ್ಲ’ ಎಂದೆ. ‘ನಾವು ಟಿ.ವಿ ಬಳಸುವುದೇ ಇಲ್ಲ’ ಎಂದರವರು.

ಟಿ.ವಿ ಬಳಸುವುದಿಲ್ಲ ಎನ್ನುವ ಅವರ ಮಾತು ಅಚ್ಚರಿ ಹುಟ್ಟಿಸಿತು. ಅವರು ಒಳ್ಳೆಯ ಕೆಲಸದಲ್ಲಿದ್ದರು. ಹೆಂಡತಿ ಕಣ್ಣಿನ ಡಾಕ್ಟರ್. ಅವರಿಗೆ ಹೈಸ್ಕೂಲ್‌ ಓದುವ ಇಬ್ಬರು ಮಕ್ಕಳಿರುವುದು ತಿಳಿದಿತ್ತು. ‘ಮಕ್ಕಳಿಗೆ ಓದಲು ತೊಂದರೆ ಆಗುತ್ತದೆಂದು ಟಿ.ವಿ ಬಳಸುವುದಿಲ್ಲವೆ?’ ಎಂದು ಕುತೂಹಲದಿಂದ ಕೇಳಿದೆ. ‘ಹಾಗಲ್ಲ. ಎಲ್ಲರ ಬಳಿಯೂ ಮೊಬೈಲ್‌ ಇದೆ. ಅವರಿಗೆ ಬೇಕಾದ್ದನ್ನು ಅದರಲ್ಲಿ ನೋಡುತ್ತಾರೆ. ನಾನು ಕ್ರಿಕೆಟ್‌ ನೋಡುತ್ತೇನೆ. ನನ್ನ ಹೆಂಡತಿ ಸಿನಿಮಾ ನೋಡುತ್ತಿರುತ್ತಾಳೆ. ಮಕ್ಕಳು ಮೊಬೈಲ್‌ನಲ್ಲೇ ಗೇಮ್ಸ್‌ ಆಡುತ್ತಾರೆ, ಕಾರ್ಟೂನ್‌ ನೋಡುತ್ತಿರುತ್ತಾರೆ. ಅದಕ್ಕೇ ಟಿ.ವಿ ಕನೆಕ್ಷನ್‌ ತೆಗೆಸಿಬಿಟ್ಟೆ’ ಎಂದವರು ಜಂಬದಿಂದ ಹೇಳಿದರು.

ಒಂದು ಕಾಲಕ್ಕೆ ಧಾರಾವಾಹಿಯನ್ನೋ, ಚಲನಚಿತ್ರ ವನ್ನೋ ನೋಡಲು ಮನೆ ಮಂದಿಯೆಲ್ಲ ಒಟ್ಟಾಗಿ ಟಿ.ವಿ ಮುಂದೆ ಕೂರುವುದಿತ್ತು. ತಮ್ಮ ಇಷ್ಟದ ಕಾರ್ಯಕ್ರಮಗಳಿಗಾಗಿ ಗಂಡ-ಹೆಂಡತಿ, ಅತ್ತೆ-ಸೊಸೆ, ಸೋದರ-ಸೋದರಿಯರು ಜಗಳ ಆಡುವುದಿತ್ತು. ಅನುಕೂಲವಿದ್ದವರ ಮನೆಯಲ್ಲಿ ರೂಮಿಗೊಂದು ಟಿ.ವಿಯೂ ಇತ್ತು. ಆದರೆ, ಈಗ ಟಿ.ವಿ ಆಲಂಕಾರಿಕ ವಸ್ತುವಾಗಿ ಬಿಟ್ಟಿದೆ. ತಮಗೆ ಯಾವುದು ಇಷ್ಟವೋ ಅದನ್ನು ಮೊಬೈಲ್‌ನಲ್ಲಿ ನೋಡುವ ಅವಕಾಶ ಜನರಿಗಿದೆ. ವ್ಯಕ್ತಿ ತನ್ನ ಕಣ್ಮನಗಳನ್ನು ಮೊಬೈಲ್‌ನಲ್ಲಿ ಹುದುಗಿಸಿ ತನ್ನ ಮನೆಯೊಳಗೇ ತಾನು ಪರಕೀಯನಾಗುತ್ತಾ, ಪರಸ್ಪರ ಸಂವಹನದ ಸಾಧ್ಯತೆ ಗಳನ್ನು ಕಳೆದುಕೊಳ್ಳುತ್ತಿದ್ದಾನೆ. ಆನಂದಪಡುವುದು, ನೋವು ನಲಿವುಗಳನ್ನು ಎಲ್ಲರ ಜೊತೆ ಹಂಚಿಕೊಳ್ಳುವುದು ಕಡಿಮೆಯಾಗುತ್ತಾ ಬಂದಿದೆ.

ADVERTISEMENT

ಒಟಿಟಿಗಳು ಜನಪ್ರಿಯವಾಗುವ ಮೊದಲು ಸಿನಿಮಾ ನೋಡಲು ಥಿಯೇಟರ್‌ಗಳಿಗೆ ಹೋಗಬೇಕಾಗಿತ್ತು. ಜನಪ್ರಿಯ ನಟರ ಚಿತ್ರಗಳಿಗೆ ನೂಕುನುಗ್ಗಲು. ಪರದೆ ಮೇಲೆ ನೆಚ್ಚಿನ ನಟ ಕಾಣಿಸಿಕೊಂಡಾಗ ಸಿಳ್ಳೆ, ಕೇಕೆ; ಜನ ನೋವು, ನಲಿವಿನ ಸನ್ನಿವೇಶಗಳಿಗೆ ಸಾಮೂಹಿಕವಾಗಿ ಸ್ಪಂದಿಸುತ್ತಾ ಸಂಭ್ರಮಿಸುತ್ತಿದ್ದರು. ಈಗ ಏಕಪರದೆಯಲ್ಲಿ ಚಿತ್ರಗಳನ್ನು ನೋಡುತ್ತಾ ಆನಂದಿಸುವ ಸಮೂಹ ಸಂಭ್ರಮ ಕಾಣೆಯಾಗಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಪಾಪ್‌ ಕಾರ್ನ್‌ ಮೆಲ್ಲುತ್ತಾ ಮುಗುಂ ಆಗಿ ಚಿತ್ರ ನೋಡುವುದು ಒಂದು ಬಗೆಯಾದರೆ, ಮೊಬೈಲ್‌ಗಳ ಮೂಲಕ ಸಿನಿಮಾಗಳನ್ನು ನೋಡುವುದು ಹೆಚ್ಚಾಗಿದೆ. ಒಂದು ಸಿನಿಮಾ ಚೆನ್ನಾಗಿದೆ ಎಂದು ಯಾರಾದರೂ ಹೇಳಿದರೆ ಒಟಿಟಿಗೆ ಯಾವಾಗ ಬರುತ್ತದೆ ಎನ್ನುವ ಪ್ರಶ್ನೆ ಮಾಮೂಲಾಗಿದೆ. ಒಟಿಟಿಯಲ್ಲಿ ಬಿಡುಗಡೆಯಾದರೂ ಮನೆ ಮಂದಿಯೆಲ್ಲ ಒಟ್ಟಾಗಿ ಟಿ.ವಿಯಲ್ಲಿ ನೋಡುತ್ತಾರೆ ಎನ್ನಲಾಗದು. ಅವರವರ ಸಮಯಾನುಸಾರ ಪ್ರಯಾಣ ಮಾಡುವಾಗಲೋ, ಕೆಲಸದ ಸಮಯದಲ್ಲೋ, ವಿರಾಮದ ವೇಳೆಯಲ್ಲೋ ಅಂಗೈಯ ಉಪಕರಣದಲ್ಲಿ ತುಂಡು ತುಂಡಾಗಿ ನೋಡುತ್ತಾರೆ. ಇದರಿಂದ ಒಮ್ಮೆಗೇ ದಕ್ಕಬೇಕಾದ- ಕೇಳುವ, ನೋಡುವ, ಮನ ಮುಟ್ಟುವ ಅನುಭವವೊಂದು ಜಾಳುಜಾಳಾಗಿ ರಸಹೀನವಾಗಿ ಬಿಡುತ್ತದೆ.

ಮೊಬೈಲ್‌ನಲ್ಲಿ ಹಿಂದೆ ಮುಂದೆ ಸರಿಸುವ ಅವಕಾಶ ಇರುವುದರಿಂದ, ನೋಡುವ ವ್ಯಕ್ತಿ- ಕೆಲವರು ಕಾದಂಬರಿ ಓದುವಾಗ ಕೊನೆಯ ಪುಟವನ್ನು ಓದುವಂತೆ- ಥ್ರಿಲ್ಲರ್‌ಗಳ ಅಂತ್ಯವನ್ನು ಮೊದಲೇ ನೋಡಿ ಬಿಡುತ್ತಾನೆ. ಚಲನಚಿತ್ರ ದಂತಹ ಸಮೂಹ ಮಾಧ್ಯಮವೊಂದು ಈ ರೀತಿಯಲ್ಲಿ ವ್ಯಕ್ತಿಗತವಾಗಿ, ಸಾಮೂಹಿಕ ಸ್ಪಂದನ ಕಳೆದುಕೊಳ್ಳುವುದರ ಬಗ್ಗೆ ಮಲಯಾಳ ಚಿತ್ರ ನಿರ್ದೇಶಕ ಜೀತು ಜೋಸೆಫ್‌ ಮತ್ತಿತರರು ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ.

ಮೊಬೈಲ್‌ಗಳು, ಗ್ಯಾಜೆಟ್‌ಗಳು ಬೀರುವ ಪರಿಣಾಮ ಕೇವಲ ಸಿನಿಮಾ ವೀಕ್ಷಣೆಗಷ್ಟೇ ಸೀಮಿತವಾಗಿಲ್ಲ. ಈಗಿನ ದಿನಮಾನದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನೇರವಾಗಿ ಪ್ರಸಾರಗೊಳ್ಳುವುದರಿಂದ ಯೂಟ್ಯೂಬ್‌ ನಲ್ಲಿ ವೀಕ್ಷಿಸಬಹುದು ಎನ್ನುವ ಕಾರಣಕ್ಕೆ ಖುದ್ದು ಹಾಜರಾತಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಆಯೋಜಕರು ಕಾರ್ಯಕ್ರಮಗಳಿಗೆ ಸಭಿಕರನ್ನು ಸೇರಿಸಲು ಆಪ್ತೇಷ್ಟರಿಗೆ ಕರೆ ಮಾಡಿ ಕರೆಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಜನ ಪರಸ್ಪರ ಸಂವಾದಿಸುವ, ಪರಸ್ಪರ ವಿಚಾರಗಳನ್ನು ಹಂಚಿಕೊಳ್ಳುವ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಬಸ್‌, ರೈಲು, ಮೆಟ್ರೊ ರೈಲುಗಳಲ್ಲಿ ಅತ್ತಿತ್ತ ನೋಡದೆ, ಮೊಬೈಲ್‌ಗಳಲ್ಲಿ ಕಣ್ಣು ನೆಟ್ಟು ಕೂತಿರುವ ದೃಶ್ಯಗಳು ಸಾಮಾನ್ಯ. ಅವರಿಗೆ ಮೊಬೈಲ್‌ನಲ್ಲಿ ಕಾಣುವ ಲೋಕಕ್ಕಿಂತ ಹೊರತಾದುದು ಯಾವುದೂ ಇಲ್ಲ. ಹಾಗೆಂದು ಮೊಬೈಲ್‌, ಗ್ಯಾಜೆಟ್‌ಗಳ ಅಗತ್ಯವನ್ನು ನಿರಾಕರಿಸಲಾಗದು. ಅವಶ್ಯಕತೆ, ಅನಿವಾರ್ಯತೆಗೆ ಅನುಸಾರ ಅವನ್ನು ಬಳಸುವುದರಲ್ಲಿ ತಪ್ಪಿಲ್ಲ; ಅವಲಂಬನೆ ಸಂವೇದನೆ, ಸಂವಹನಗಳನ್ನು ಕುಂಠಿತ ಗೊಳಿಸುತ್ತದೆ.

ಮೊನ್ನೆ ಚಂದ್ರಗ್ರಹಣದ ದಿನ ಮನೆಯಿಂದ ಹೊರಬಂದು ಗ್ರಹಣವನ್ನು ವೀಕ್ಷಿಸುತ್ತಿದ್ದೆ. ಮೋಡಗಳ ನಡುವೆಯೂ ಬಣ್ಣ ಗುಂದುತ್ತಿದ್ದ ಚಂದ್ರನನ್ನು ನೋಡಿ ಗೆಳೆಯರಿಗೆ ಕರೆ ಮಾಡಿ ನೋಡಲು ಹೇಳಿದೆ. ನಾಳೆ ಮೊಬೈಲ್‌ನಲ್ಲಿ ಸಿಗುತ್ತದಲ್ಲ, ಸುಮ್ಮನೆ ನಿದ್ದೆ ಯಾಕೆ ಕಳೆದುಕೊಳ್ಳಬೇಕು ಎಂದವರು ಹೇಳಿದಾಗ, ನಾವೇನು ಕಳೆದುಕೊಳ್ಳುತ್ತಿದ್ದೇವೆ ಎನ್ನುವುದು ನಮಗೆ ಅರಿವಾಗುತ್ತಿಲ್ಲವಲ್ಲ ಎಂದು ಬೇಸರವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.