ADVERTISEMENT

ಸಂಗತ: ವಿಜ್ಞಾನ ಸಾಕ್ಷರತೆ: ಸರ್ವರ ಅಗತ್ಯ

ವೈಜ್ಞಾನಿಕ ಪ್ರಜ್ಞೆ ಮೂಡಿಸದ ಶಿಕ್ಷಣ ಅಪೂರ್ಣವೇ ಸರಿ

ಯೋಗಾನಂದ
Published 27 ಫೆಬ್ರುವರಿ 2022, 21:45 IST
Last Updated 27 ಫೆಬ್ರುವರಿ 2022, 21:45 IST
   

ಎಲ್ಲಿಯವರೆಗೆ ವಿದ್ಯಾಲಯಗಳ ತರಗತಿಗಳು ಸಂವಾದದ ವೇದಿಕೆಗಳಾಗದೆ ‘ಪ್ರತಿಧ್ವನಿಗಳ ಕೊಠಡಿಗಳು’ ಆಗಿರುತ್ತವೋ ಅಲ್ಲಿತನಕ ಶಿಕ್ಷಣ ಕ್ರಮ ನಿಂತ ನೀರು. ವಿಜ್ಞಾನಕ್ಕಷ್ಟೇ ಅಲ್ಲ, ಎಲ್ಲ ವಿಷಯಗಳ ತರಗತಿಗಳಿಗೂ ಈ ಮಾತು ಅನ್ವಯಿಸುತ್ತದೆ.
ಏಕೆಂದರೆ ಸಮರ್ಥ ಕಲಿಕೆಗೆ ಚರ್ಚೆ, ಪ್ರಶ್ನೋತ್ತರಗಳದ್ದೇ ದರ್ಬಾರು. ಗಣಿತವೆಂಬ ಅಂಬಾರಿಯಲ್ಲಿ ವಿಶಿಷ್ಟ ಜ್ಞಾನವಾದ ವಿಜ್ಞಾನದ ಪಯಣ. ವಿಜ್ಞಾನವು ವಾಸ್ತವಿಕತೆಯ ಕಾವ್ಯ.

ಅದು ಪ್ರೌಢಶಾಲೆಯ ಭೌತವಿಜ್ಞಾನ ತರಗತಿ. ‘ಬೆಳಕು ಸೆಕೆಂಡಿಗೆ ಸುಮಾರು 3 ಲಕ್ಷ ಕಿ.ಮೀ. ವೇಗದಲ್ಲಿ ಧಾವಿಸುತ್ತದೆ’ ಎಂದು ಮಾಸ್ತರರು ವಿವರಿಸುತ್ತಿದ್ದರು. ಒಬ್ಬ ಬಾಲಕ ಥಟ್ಟನೆ ‘ಸಾರ್, ಹಾಗಾದರೆ ಕತ್ತಲೆಯ ವೇಗವೆಷ್ಟು?’ ಎಂದು ಕೇಳಿದ! ಕ್ಷಣ ಯೋಚಿಸಿದ ಗುರುಗಳಿಗೆ ಪ್ರಶ್ನೆ ಭರ್ಜರಿಯೇ ಅನ್ನಿಸಿರಬೇಕು. ‘ಬೆಳಕು ಹರಿದಂತೆ ಕತ್ತಲೆಯೂ ಅಷ್ಟೇ ವೇಗದಲ್ಲಿ ಕಂಬಿ ಕೀಳುತ್ತದೆ ಮಾರಾಯ’ ಎಂದು ಉತ್ತರಿಸಿದ್ದರು. ಬೋಧಕರು ಮಕ್ಕಳ ಕುತೂಹಲವನ್ನು ತಡೆಯದೆ ಉತ್ತೇಜಿಸಬೇಕು. ನಿಸರ್ಗದ ಅಚ್ಚರಿಗಳನ್ನು ಅವರೊಂದಿಗೆ ಹಂಚಿಕೊಂಡು ‘ಪುಟ್ಟ ವಿಜ್ಞಾನಿ’ಗಳ ಉಗಮಕ್ಕೆ ಅಡಿಪಾಯ ಹಾಕಬೇಕು.

ಎಡಿಸನ್ ಮೊದಲ ಬಾರಿಗೆ ‘ಮೇರಿ ಹ್ಯಾಡ್ ಎ ಲಿಟಲ್ ಲ್ಯಾಂಬ್’ ಧ್ವನಿಮುದ್ರಿತ ಹಾಡನ್ನು ತನ್ನ ಆಪ್ತರಿಗೆ ಕೇಳಿಸಿದಾಗ, ಅವರೆಲ್ಲ ‘ಪ್ರೇತ’ ಎಂದು ಓಡಿದ್ದರಂತೆ! ವೈಜ್ಞಾನಿಕ ವಿದ್ಯಮಾನಗಳನ್ನು ಕಿಂಚಿತ್ತಾದರೂ ಪರಿಚಯಿಸಿಕೊಳ್ಳದಿದ್ದರೆ ಅವು ಪವಾಡ, ಅಮಾನುಷ ಎನ್ನಿಸುವುದು ಸಹಜ. ವಿಜ್ಞಾನದ ಮೂಲಭೂತ ಅಂಶಗಳನ್ನು ತಿಳಿಯದ ಹೊರತು ಸಾಕ್ಷರತೆ ಅಪೂರ್ಣ.

ADVERTISEMENT

ಸರ್ವರೂ ವಿಜ್ಞಾನ ಸಾಕ್ಷರರಾಗಬೇಕು, ವಿಜ್ಞಾನಕ್ಕೆ ತೆರೆದುಕೊಳ್ಳಬೇಕು. ಮೊಬೈಲ್, ಬೈಕ್, ಜೆರಾಕ್ಸ್ ವಗೈರೆ ಕಾರ್ಯನಿರ್ವಹಿಸುವ ಹಿಂದಿನ ತತ್ವಗಳ ಸ್ಥೂಲ ಅರಿವಿರಬಹುದಲ್ಲ? ಅಡುಗೆ ಕೋಣೆಯು ಮನೆಯ ಅದ್ಭುತ ಪ್ರಯೋಗಾಲಯ. ಹಾಲು ಹೆಪ್ಪಾಗುವ, ಕುಕ್ಕರಿನಲ್ಲಿ ಕಾಳು ಬೇಯುವ ಅಥವಾ ಬಾಣಲೆಯಲ್ಲಿ ಪೂರಿ ಊದಿಕೊಳ್ಳುವ ಬಗೆ ಹೇಗೆಂದು ತಿಳಿಯುವುದೇ ರೋಚಕತೆ.

ವಿಜ್ಞಾನಿ ಸರ್ ಸಿ.ವಿ.ರಾಮನ್ ತಮ್ಮ ‘ರಾಮನ್ ಎಫೆಕ್ಟ್’ ಪ್ರಕಟಿಸಿದ್ದು 1928ರಲ್ಲಿ. ಅದಕ್ಕಾಗಿಯೇ ಪ್ರತಿವರ್ಷ ಫೆ. 28ರಂದು ನಾವು ‘ರಾಷ್ಟ್ರೀಯ ವಿಜ್ಞಾನ ದಿನ’ ಆಚರಿಸುತ್ತೇವೆ. ಏನಿದು ರಾಮನ್ ಪರಿಣಾಮ? ಪಾರಕ ಮಾಧ್ಯಮದ ಮೂಲಕ ಏಕವರ್ಣೀ ಬೆಳಕು ಹಾಯುವಾಗ ಅದರ ತರಂಗ ದೂರಕ್ಕೂ ಚದುರಿದ ಬೆಳಕಿನ ತರಂಗ ದೂರಕ್ಕೂ ವ್ಯತ್ಯಯ ಕಂಡುಬರುತ್ತದೆ. ಮಾಧ್ಯಮದ ಅಣುಗಳ ಭ್ರಮಣ ಮತ್ತು ಕಂಪನಶಕ್ತಿ ಬೆಳಕಿನ ಕಣಗಳ ಮೇಲೆ ವರ್ತಿಸುವುದರಿಂದ ಈ ವ್ಯತ್ಯಯವಾಗುವುದು. ಸೂರ್ಯನ ಬೆಳಕನ್ನು ಗಾಳಿಯ ಅಣುಗಳು ಚದುರಿಸುವುದೇ ಆಕಾಶವು ನೀಲಿಯಾಗಿ ಕಾಣಿಸಲು ಕಾರಣವೆಂದು ಸಾಬೀತುಪಡಿಸಿದ ಧೀಮಂತ ರಾಮನ್.

ಬೆಳಕು ಒಂದು ಅಣುವಿನೊಡನೆ ಪ್ರತಿಕ್ರಿಯಿಸುವಾಗ ತನ್ನ ಶಕ್ತಿಯ ಒಂದಂಶವನ್ನು ಅದಕ್ಕೆ ಹಸ್ತಾಂತರಿಸುತ್ತದೆ. ಹಾಗಾಗಿ ಬೆಳಕಿನ ಬಣ್ಣ ಬದಲಾಗುತ್ತದೆ. ಅಣು ನರ್ತನಗೈಯ್ಯುವುದು.

ಬೆಳಕಿನ ವರ್ಣ ಬದಲಾವಣೆಯೇ ಅಣುವಿನ ಹೆಗ್ಗುರುತಾಗುತ್ತದೆ. ರಾಮನ್ ‘ರೋಹಿತ ವಿಜ್ಞಾನ’ಕ್ಕೆ ಈ ಹೆಗ್ಗುರುತುಗಳೇ ಆಧಾರಗಳು. ಜಗತ್ತಿನಾದ್ಯಂತ ಪ್ರಯೋಗಾಲಯಗಳಲ್ಲಿ ವಿವಿಧ ರೋಗಗಳ ಪತ್ತೆಗೆ ವೈದ್ಯವಿಜ್ಞಾನಿಗಳು ರಾಮನ್‍ರ ಮಹತ್ವದ ಶೋಧವನ್ನೇ ಅವಲಂಬಿಸಿದ್ದಾರೆಂದರೆ ವಿಜ್ಞಾನಕ್ಕೆ ಭಾರತದ ಕೊಡುಗೆ ಕುರಿತು ಹೆಮ್ಮೆ ಮೂಡುತ್ತದೆ.

ತಮ್ಮ ಶೋಧಕ್ಕೆ ರಾಮನ್ 1930ರಲ್ಲಿ ನೊಬೆಲ್ ಪ್ರಶಸ್ತಿ ಪಡೆದರು. ಇದಕ್ಕೆ ಹಿಂದೆಯೇ ಅವರಿಗೆ ಬ್ರಿಟಿಷ್ ಸರ್ಕಾರ ‘ಸರ್’ ಪದವಿಯಿತ್ತು ಗೌರವಿಸಿತ್ತು. ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಗೆ ಅರ್ಹರಾದ ಮೊದಲ ಏಷ್ಯನ್ ಎಂಬ ಹಿರಿಮೆ ಕೂಡ ಅವರದು. ರಾಮನ್‍ ಅವರ ಈ ಶೋಧ ಬಹು ಉಪಯುಕ್ತವೆಂದು ಬೇರೆ ಹೇಳಬೇಕಿಲ್ಲ. ‘ನಾಸಾ’ದ ಮಂಗಳ ಗ್ರಹ ಅಭಿಯಾನದಲ್ಲೂ ಇದನ್ನು ಬಳಸಿಕೊಳ್ಳಲಾಗಿದೆ. ವಜ್ರ, ಹವಳ, ಮುತ್ತುಗಳ ಗುಣಮಟ್ಟ ನಿಷ್ಕರ್ಷೆಗೆ, ಕ್ಯಾನ್ಸರ್ ಗಡ್ಡೆಯ ತೀವ್ರತೆ ತಿಳಿಯಲು ಮಾತ್ರವಲ್ಲ ಪ್ರಾಗೈತಿಹಾಸಿಕ ವಿಜ್ಞಾನ ಅಧ್ಯಯನ, ಸಂಶೋಧನೆಗಳಿಗೂ ರಾಮನ್ ಪರಿಣಾಮ ಕೈಮರವಾಗಿದೆ.

‘ರಾಮನ್ ಪರಿಣಾಮ’ ಸಂಶೋಧನೆಗೆ ವೆಚ್ಚವಾದ ಹಣ ಕೇವಲ ₹ 200! ರಾಮನ್ ಮಿತಭಾಷಿ. ಹಾಸ್ಯಪ್ರವೃತ್ತಿಯು ಇವರು ನಿಜಕ್ಕೂ ವಿಜ್ಞಾನಿಯೇ ಎಂದು ಅಚ್ಚರಿಪಡುವಷ್ಟು ಗಾಢವಾಗಿತ್ತು. ಸ್ವೀಡನ್‌ನಲ್ಲಿ ನೊಬೆಲ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ಅವರು ಮೊನಚಿನಿಂದ ದೂರವಾಗೇನೂ ಇರಲಿಲ್ಲ. ಅಧಿಕೃತ ಸಭೆಗೆ ಮುನ್ನ ಏರ್ಪಾಡಾಗಿದ್ದ ಉಪಾಹಾರ ಕೂಟದಲ್ಲಿ ಗುಟುಕು ವೈನ್ ಎಲ್ಲರ ಮುಂದಿತ್ತು. ಮದ್ಯವೊಲ್ಲದ ರಾಮನ್ ‘ಯು ಹ್ಯಾವ್ ಸೀನ್ ದಿ ರಾಮನ್ ಎಫೆಕ್ಟ್ ಆನ್ ಆಲ್ಕೊಹಾಲ್. ಟುಡೇ ಪ್ಲೀಸ್ ಡೋಂಟ್ ಟ್ರೈ ಟು ಸೀ ದಿ ಆಲ್ಕೊಹಾಲಿಕ್ ಎಫೆಕ್ಟ್ ಆನ್ ರಾಮನ್!’ ಎಂದು ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದ್ದರು. ಭಾರತ ಸರ್ಕಾರವು ಸಿ.ವಿ.ರಾಮನ್‍ ಅವರಿಗೆ ದೇಶದ ಅತ್ಯುನ್ನತ ಗೌರವ ‘ಭಾರತ ರತ್ನ’ ಪ್ರಶಸ್ತಿ ನೀಡಿತು.

ವಿಜ್ಞಾನ ದಿನದ ಅರ್ಥಪೂರ್ಣತೆ ಇರುವುದು ಆಚರಣೆಗಿಂತಲೂ ಮಿಗಿಲಾಗಿ ವೈಜ್ಞಾನಿಕ ಮನೋಭಾವ ರೂಢಿಸಿಕೊಳ್ಳುವ ಪುನರ್‌ಸಂಕಲ್ಪದಿಂದ. ವಿಜ್ಞಾನದ ಫಲ ಸಾಕು, ವಿಜ್ಞಾನ ಒಲ್ಲೆ ಎಂದರಾದೀತೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.