ADVERTISEMENT

ಸಂಗತ | ಪೋಕ್ಸೊ: ಸಮಗ್ರ ಚರ್ಚೆಗೆ ಸಕಾಲ

2012ರಲ್ಲಿ ಜಾರಿಗೆ ತರಲಾದ ಪೋಕ್ಸೊ ಕಾಯ್ದೆಯ ಸಾಧಕ–ಬಾಧಕ ಕುರಿತು ಕೂಲಂಕಷವಾಗಿ ಚರ್ಚಿಸುವ ಅಗತ್ಯ ಇದೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2022, 22:30 IST
Last Updated 19 ಡಿಸೆಂಬರ್ 2022, 22:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಯ ಜೊತೆಗಿನ ‘ಒಪ್ಪಿತ’ ಲೈಂಗಿಕ ಚಟುವಟಿಕೆಯನ್ನೂ ‘ಪೋಕ್ಸೊ’ (The Protection of Children from Sexual Offences Act) ಕಾಯ್ದೆಯಡಿ ಅಪರಾಧ ಎಂದು ಪರಿಗಣಿಸಲಾಗಿದೆ. 1940ರಿಂದಲೂ ಹದಿನಾರರ ನಂತರದ ವಯೋಮಾನದವರ ಒಪ್ಪಿತ ಲೈಂಗಿಕ ಕ್ರಿಯೆಯನ್ನು ಕಾನೂನು ಮಾನ್ಯಗೊಳಿಸಿತ್ತು. ಆದರೆ, 2012ರ ನಿರ್ಭಯಾ ಪ್ರಕರಣದ ನಂತರದಲ್ಲಿ ಈ ವಯೋಮಿತಿಯನ್ನು ಹದಿನೆಂಟು ವರ್ಷಕ್ಕೆ ಏರಿಸಲಾಯಿತು.

ಪೋಕ್ಸೊ ಪ್ರಕರಣಗಳ ಪೈಕಿ ನಾಲ್ಕರಲ್ಲಿ ಒಂದು ‘ಪರಸ್ಪರ ಪ್ರೇಮ’ ಪ್ರಕರಣವಾಗಿರುತ್ತದೆ ಎಂಬುದನ್ನು ಬೆಂಗಳೂರು ಮೂಲದ ಎನ್‌ಫೋಲ್ಡ್ ಪ್ರೊಆ್ಯಕ್ಟಿವ್ ಹೆಲ್ತ್ ಟ್ರಸ್ಟ್ ನಡೆಸಿದ ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ. ಅಲ್ಲದೆ ಇಂತಹ ಪ್ರಕರಣಗಳ ವಿಲೇವಾರಿಗೆ ಸರಾಸರಿ 1.4 ವರ್ಷದಿಂದ 2.3 ವರ್ಷ ಹಿಡಿಯುತ್ತದೆ ಎಂಬುದು ಕಳವಳಕಾರಿ ಅಂಶ! ಈ ಕಾಯ್ದೆಯು ಹದಿಹರೆಯದವರು ಮತ್ತು ಅವರ ಕುಟುಂಬದವರ ಮೇಲೆ ಉಂಟು ಮಾಡುವ ಶಾಶ್ವತ ಪರಿಣಾಮಗಳ ಕುರಿತಾಗಿ ವಿವಿಧ ಹೈಕೋರ್ಟ್‌ಗಳ ತೀರ್ಪಿನಲ್ಲಿ ಆತಂಕ ವ್ಯಕ್ತವಾಗಿದೆ.

ಮೂಲತಃ ಪೋಕ್ಸೊ ಕಾಯ್ದೆ ‘ಜೆಂಡರ್ ನ್ಯೂಟ್ರಲ್’. ಇದನ್ನು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಮತ್ತು ತಪ್ಪಿತಸ್ಥರನ್ನು ಶಿಕ್ಷಿಸಲು ಜಾರಿಗೆ ತರಲಾಗಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕನನ್ನೂ ಇಲ್ಲಿ ಬಾಧಿತ ಎಂದು ಪರಿಗಣಿಸಲಾಗುತ್ತದೆ. ಲೈಂಗಿಕ ಹಲ್ಲೆಯನ್ನು ಹೆಣ್ಣೊಬ್ಬಳು ಮಾಡಿದ್ದರೆ ಆಕೆಯನ್ನೂ ಈ ಕಾಯ್ದೆ ವ್ಯಾಪ್ತಿಗೆ ತರಲಾಗುತ್ತದೆ.

ADVERTISEMENT

ಆದರೆ ಪೋಕ್ಸೊ ಪ್ರಕರಣದಲ್ಲಿನ ಗಂಡು ಮತ್ತು ಹೆಣ್ಣು ಇಬ್ಬರೂ ಚಿಕ್ಕವರಾಗಿದ್ದು (18 ವರ್ಷ ತುಂಬದವರು) ಪರಸ್ಪರ ಆಕರ್ಷಣೆಗೆ ಒಳಗಾಗಿ ಮಿಲನವಾದರೆ ಯಾರನ್ನು ತಪ್ಪಿತಸ್ಥರೆಂದು ತೀರ್ಮಾನಿಸುವುದು?! ಇಂತಹ ಶಾಸನಾತ್ಮಕ ಗೊಂದಲ ಮತ್ತು ಗೋಜಲುಗಳು ಅಪರಾಧ ನ್ಯಾಯ ವ್ಯವಸ್ಥೆಯನ್ನುಕಾಡುತ್ತವೆ. ವಾಸ್ತವವಾಗಿ ಪ್ರಾಸಿಕ್ಯೂಷನ್‌ ವ್ಯವಸ್ಥೆಯು ಬಾಲಕನನ್ನು ಆರೋಪಿಯನ್ನಾಗಿಸಿ (ಕಾನೂನಿನ ಜೊತೆ ಸಂಘರ್ಷಕ್ಕೆ ಒಳಗಾದವ), ಬಾಲಕಿಯನ್ನು ಸಂತ್ರಸ್ತೆಯನ್ನಾಗಿಸುತ್ತದೆ. ಇದು ಪೋಕ್ಸೊ ಕಾಯ್ದೆಯ ಲಿಂಗ ನಿರಪೇಕ್ಷ ನಿಲುವನ್ನು ತಾರ್ಕಿಕವಾಗಿ ಪ್ರಶ್ನಿಸುತ್ತದೆ.

...ಜೈನ್ ಮತ್ತು ಸ್ಟೇಟ್ ಆಫ್ ಕರ್ನಾಟಕ ನಡುವಿನ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ನಾಗಪ್ರಸನ್ನ ಅವರು ನೀಡಿರುವ ತೀರ್ಪು ಇಂತಹ ಪ್ರಕರಣದಲ್ಲಿ ವ್ಯವಸ್ಥೆ ತುಳಿಯಬೇಕಾದ ಹಾದಿಯನ್ನು ತೋರಿಸಿಕೊಟ್ಟಿದೆ. ಬಾಲಕ, ಬಾಲಕಿ ಹದಿನಾರರ ಅಸುಪಾಸಿನಲ್ಲಿದ್ದು, ತಮ್ಮ ನಿರ್ಧಾರ ಮತ್ತು ನಿಲುವುಗಳು ಉಂಟುಮಾಡಬಹುದಾದ ತೀವ್ರ ಪರಿಣಾಮಗಳ ಅರಿವು ಇರದೇ ಕೈಗೊಂಡ ಕ್ರಮಗಳನ್ನು ಅಪರಾಧವೆಂದು ಪರಿಗಣಿಸಿ, ಪೋಕ್ಸೊ ಕಾಯ್ದೆಯಡಿ ವಿಚಾರಣೆ ನಡೆಸುವುದು ಸರಿಯಲ್ಲ ಎಂದು ಈ ತೀರ್ಪಿನಲ್ಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಹೈಕೋರ್ಟ್‌ನ ವಿಭಾಗೀಯ ಪೀಠವು ಸ್ಟೇಟ್ ಆಫ್ ಕರ್ನಾಟಕ ಮತ್ತು ಬಸವರಾಜ ನಡುವಣ ಪ್ರಕರಣದಲ್ಲಿ ನೀಡಿರುವ ತೀರ್ಪು ಕೂಡಾ ಈ ದಿಸೆಯಲ್ಲಿ ಮಹತ್ವ ಪಡೆದಿದೆ. ಸಂಗಾತಿಯೊಂದಿಗೆ ಕಣ್ಮರೆಯಾಗಿ ಮದುವೆಯಾಗುವ ಹದಿನಾರಕ್ಕಿಂತ ಹೆಚ್ಚಿನ ವಯೋಮಾನದ ಬಾಲಕಿಯರ ಪ್ರಕರಣಗಳು ತೀವ್ರವಾಗಿ ಹೆಚ್ಚಳವಾಗುತ್ತಿರುವುದನ್ನು ಮನಗಂಡ ವಿಭಾಗೀಯ ಪೀಠವು ವಾಸ್ತವವನ್ನು ಅರಿತು ಒಪ್ಪಿತ ಲೈಂಗಿಕ ಕ್ರಿಯೆಯ ವಯೋಮಿತಿಯನ್ನು ಪುನರ್‌ ಪರಿಶೀಲಿಸುವಂತೆ ಭಾರತ ಕಾನೂನು ಆಯೋಗಕ್ಕೆ ಸಲಹೆ ನೀಡಿದೆ. ಅಲ್ಲದೆ ಒಂಬತ್ತನೇ ತರಗತಿಯ ನಂತರ ಮಕ್ಕಳಿಗೆ ಶಾಲೆಯಲ್ಲಿ ಲೈಂಗಿಕ ಶಿಕ್ಷಣ ಮತ್ತು ಪೋಕ್ಸೊ ಕಾಯ್ದೆ ಕುರಿತು ಪಠ್ಯವನ್ನು ಅಳವಡಿಸುವ ದಿಸೆಯಲ್ಲಿ ರಾಜ್ಯವು ಕ್ರಮ ಕೈಗೊಳ್ಳುವಂತೆ ಆದೇಶಿಸಿರುವುದು ಗಮನಾರ್ಹ.

ಯುರೋಪಿನ ಬಹುತೇಕ ದೇಶಗಳು ಒಪ್ಪಿತ ಲೈಂಗಿಕ ಕ್ರಿಯೆಯ ವಯೋಮಿತಿಯನ್ನು 14ರಿಂದ 16 ವರ್ಷಗಳಿಗೆ ನಿಗದಿಗೊಳಿಸಿವೆ. ಪಕ್ಕದ ಶ್ರೀಲಂಕಾ ಕೂಡ 16 ವರ್ಷವನ್ನು ‘ಏಜ್‌ ಆಫ್‌ ಕನ್ಸೆಂಟ್‌’ ಎಂದು ನಿಗದಿಪಡಿಸಿದ್ದು, ಅಳಿವಿನ ಅಂಚಿನಲ್ಲಿರುವ ಮೂರ್ ಮತ್ತು ಮಲಯೈ ಬುಡಕಟ್ಟು ಜನಾಂಗಗಳ ಹೆಣ್ಣುಮಕ್ಕಳ ಮದುವೆಯ ಕನಿಷ್ಠ ವಯೋಮಿತಿಯನ್ನು 12ಕ್ಕೆ ನಿಗದಿಗೊಳಿಸಿದೆ.

ಬಾಲ್ಯವಿವಾಹ ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವ ನೆಪದಲ್ಲಿ ಸರ್ಕಾರದ ವಿವಿಧ ಇಲಾಖೆಗಳು, ಸ್ವಯಂ ಸೇವಾ ಸಂಸ್ಥೆಗಳು ಕೂಡಾ ಪೋಕ್ಸೊ ಕಾಯ್ದೆಯ ಅಡಿಯಲ್ಲಿ ವ್ಯಾಪಕವಾಗಿ ಪ್ರಕರಣಗಳನ್ನು ಹೂಡುತ್ತಿವೆ. ಸೂಕ್ತ ಕಾನೂನಿನ ಅರಿವು ಲಭಿಸದ ಹಳ್ಳಿಗಾಡಿನ ಮುಗ್ಧ ಜನರು ಇದರಿಂದ ಸುದೀರ್ಘ ಕಾಲವನ್ನು ಮತ್ತು ಆರ್ಥಿಕ ಸಂಪನ್ಮೂಲವನ್ನು ನ್ಯಾಯಾಲಯದ ವ್ಯಾಜ್ಯಗಳಿಗೆ ಕಳೆಯಬೇಕಾಗಿದೆ.

ಕಾನೂನು ಎಂದಿಗೂ ನಿಂತ ನೀರಲ್ಲ. ಪ್ರತೀ ಕಾಲಘಟ್ಟದ ವಾಸ್ತವವನ್ನು ಮತ್ತು ನೆಲ ಮೂಲದ ಸ್ವಾಭಾವಿಕ ಅಂಶಗಳನ್ನು ಗಮನದಲ್ಲಿಟ್ಟು ಕಾನೂನು ಸುಧಾರಣೆಯಾಗಬೇಕು. 2012ರಲ್ಲಿ ಜಾರಿಗೆ ತರಲಾದ ಪೋಕ್ಸೊ ಕಾಯ್ದೆಯ ಆಶಯಗಳು ಎಷ್ಟರಮಟ್ಟಿಗೆ ಫಲಪ್ರದವಾಗಿವೆ ಎಂಬುದರ ಕುರಿತು ಸಮಗ್ರವಾಗಿ ಚರ್ಚಿಸಲು ಇದು ಸಕಾಲ.

ಲೇಖಕ: ಹೈಕೋರ್ಟ್‌ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.