ADVERTISEMENT

ಸಂಗತ: ಬೇಕಾಗಿರುವುದು ಒಂಟಿತನವಲ್ಲ, ಏಕಾಂತ

ಒಂಟಿತನವನ್ನು ಆತ್ಮಸಾಂಗತ್ಯವನ್ನಾಗಿ ಬದಲಾಯಿಸಲು ಸಾಧ್ಯವೇ?

ಡಾ.ಜ್ಯೋತಿ
Published 25 ಮೇ 2022, 19:18 IST
Last Updated 25 ಮೇ 2022, 19:18 IST
.
.   

ಗೌತಮ ಬುದ್ಧ ಮನುಷ್ಯ ಜೀವನದ ಅರ್ಥ ಹುಡುಕುತ್ತಾ ಅರಿತುಕೊಂಡ ಸತ್ಯವೆಂದರೆ, ‘ನಿನಗೆ ನೀನೇ ದಾರಿದೀಪ’. ಪ್ರಾಪಂಚಿಕ ಸುಖಗಳ ಹಂಗು ತೊರೆದು ಅಲೆಮಾರಿಯಾಗಿ, ಜನರೊಂದಿಗೆ ಚರ್ಚಿಸುತ್ತಾ ಬುದ್ಧನಿಗೆ ಅಂತಿಮವಾಗಿ ಅರಿವಾದದ್ದೇನೆಂದರೆ, ಬ್ರಹ್ಮಾಂಡದ ಅಂತಃಸತ್ವ ಪ್ರತಿಯೊಬ್ಬ ಮನುಷ್ಯನ ಒಳಗಿದೆಯೇ ವಿನಾ ಅವನ ಪ್ರಾಪಂಚಿಕ ಚಟುವಟಿಕೆಗಳಲ್ಲಿ ಅಲ್ಲ. ಅಂದರೆ, ಮನುಷ್ಯ ಅಂತರ್ಮುಖಿಯಾಗಿ ತನ್ನನ್ನು ಮತ್ತು ತನ್ನ ಬದುಕನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡಲ್ಲಿ, ಬಾಹ್ಯ ಪ್ರಪಂಚದ ಏಳುಬೀಳುಗಳು ಮನಸ್ಸನ್ನು ವಿಚಲಿತಗೊಳಿಸುವುದಿಲ್ಲ. ಆದರೆ, ಮನುಷ್ಯ ತನ್ನನ್ನು ತಾನು ಅರಿತುಕೊಳ್ಳುವ ಪ್ರಕ್ರಿಯೆಗೆ ನಿಶ್ಶಬ್ದದ ಏಕಾಂತತೆ ಬೇಕು. ಸಾಮಾನ್ಯವಾಗಿ, ಅದು ಸದ್ದುಗದ್ದಲದ ಜಗತ್ತಿನಲ್ಲಿ ಅಲಭ್ಯ ಎನ್ನಬಹುದು. ಇದಕ್ಕೆ ಪ್ರಕೃತಿಯ ಆಪ್ತತೆ ಬೇಕು.

ಮೊದಲನೆಯದಾಗಿ, ನಮಗೆ ಏಕಾಂತ ಮತ್ತು ಒಂಟಿತನದ ನಡುವಿನ ವ್ಯತ್ಯಾಸದ ಅರಿವಿನ ಕೊರತೆ ಇದೆ ಎನ್ನಬಹುದು. ಏಕಾಂತವೆಂದರೆ ಒಂಟಿತನವಲ್ಲ. ಮನುಷ್ಯನಿಗೆ ಒಂಟಿತನ ಕಾಡುವಾಗ, ಮನಸ್ಸು ಬಾಹ್ಯ ಪ್ರಪಂಚದ ನಂಟಿಗಾಗಿ ಹಾತೊರೆಯುತ್ತಿರುತ್ತದೆ. ಇಂತಹ ಸ್ಥಿತಿಯಲ್ಲಿ, ಅಕಸ್ಮಾತ್ ಪ್ರಪಂಚ ನಮ್ಮನ್ನು ಕೈಬಿಟ್ಟಿದೆ ಎನಿಸಿದರೆ ಮನಸ್ಸು ತೀವ್ರ ಹತಾಶೆಯಿಂದ ಖಿನ್ನತೆಗೆ ಒಳಗಾಗಬಹುದು. ಆದರೆ, ಏಕಾಂತದ ಆತ್ಮ ಸಾಂಗತ್ಯ, ಬಾಹ್ಯ ಪ್ರಪಂಚದ ಒಪ್ಪಿಗೆಯ ಹಂಗನ್ನು ನಗಣ್ಯಗೊಳಿಸುತ್ತದೆ. ಈ ದಿಸೆಯಲ್ಲಿ, ತನ್ನ ಏಕಾಂತವನ್ನು ಆನಂದಿಸುವುದು ಮನುಷ್ಯನ ಅತ್ಯುನ್ನತ ಸಾಧನೆ ಎನ್ನಬಹುದು.

ಮನುಷ್ಯ ಸಂಘಜೀವಿ ಎಂಬ ಮಾತನ್ನು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ನಿಜ, ಮಾನವನಿರ್ಮಿತ ವ್ಯವಸ್ಥೆಗಳ ಮುಂದುವರಿಕೆಗಾಗಿ, ಮನುಷ್ಯ ಜಗತ್ತಿನೊಂದಿಗೆ ನಿರಂತರ ಸಂಪರ್ಕ ಸಾಧಿಸುವುದು ಮುಖ್ಯ. ಆದರೆ, ಜನರೊಂದಿಗೆ ಅತಿ ಹೆಚ್ಚು ಸಮಯ ಕಳೆಯುವುದರ ಸಮಸ್ಯೆಯೆಂದರೆ, ಮನುಷ್ಯನ ಸ್ವಚಿಂತನೆ, ಬದುಕಿನ ಅರ್ಥದ ಹುಡುಕಾಟ ಮತ್ತು ಜ್ಞಾನಾರ್ಜನೆಯ ಹಾದಿಯಲ್ಲಿ ಅದೊಂದು ಪ್ರಬಲ ಅಡ್ಡಗೋಡೆ ಎನ್ನಬಹುದು. ನಾವು ವ್ಯವಸ್ಥೆಗೆ ಅಂಟಿಕೊಳ್ಳುವುದರಿಂದ ಅದರ ಪೂರಕ ಚಟುವಟಿಕೆಗಳಲ್ಲಿ ಎಷ್ಟು ಮುಳುಗಿ ಹೋಗಿರುತ್ತೇವೆಂದರೆ, ನಮಗೆ ಸ್ವಚಿಂತನೆಗೆ ಸಮಯ ಸಿಗುವುದಿಲ್ಲ. ಆದರೂ, ಅರ್ಥಪೂರ್ಣ ಬದುಕಿನ ಹುಡುಕಾಟದಲ್ಲಿ ಇರುವವರಿಗೆ ಮತ್ತು ಮಾನಸಿಕ ಯೋಗಕ್ಷೇಮಕ್ಕಾಗಿ ಜಗತ್ತಿನ ಗದ್ದಲಗಳ ನಡುವೆ ಏಕಾಂತದ ಸ್ವಚಿಂತನೆ ಬಹಳ ಮುಖ್ಯ.

ADVERTISEMENT

ಏಕಾಂತವು ಮನುಷ್ಯನ ಸೃಜನಶೀಲತೆ, ಉತ್ಪಾದಕತೆ ಹೆಚ್ಚಿಸಿಕೊಳ್ಳಲು, ಮಾನಸಿಕ ಒತ್ತಡ, ಖಿನ್ನತೆ ಕಡಿಮೆ ಮಾಡಲು, ಕನಸುಗಳು, ಗುರಿಗಳನ್ನು ಸಾಧ್ಯವಾಗಿಸಲು ಮತ್ತು ದೈನಂದಿನ ಜಂಜಾಟದಿಂದ ಮುಕ್ತವಾಗಿ ಪುನಶ್ಚೇತನಗೊಳ್ಳಲು ಸಹಾಯಕ ಎಂದು ಅಧ್ಯಯನಗಳು ದೃಢಪಡಿಸಿವೆ. ಈ ಏಕಾಂತದಲ್ಲಿ ಮನುಷ್ಯನಿಗೆ ನಿಜವಾದ ಆಪ್ತ ಸ್ನೇಹಿತ ಎನ್ನಬಹುದಾದ ಪ್ರಕೃತಿಯಲ್ಲಿರುವ ಸಸ್ಯ ಮತ್ತು ಪ್ರಾಣಿ ಸಂಕುಲಗಳು ಕಲಿಸುವ ಅಮೂಲ್ಯ ಜೀವನಪಾಠಗಳನ್ನು ಮನುಷ್ಯ ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿಲ್ಲ. ನಮಗೆ ಪ್ರಕೃತಿ ಇನ್ನೂ ನಿಗೂಢ ವಿಸ್ಮಯವಾಗಿಯೇ ಉಳಿದಿದೆ. ಈ ಹಿನ್ನೆಲೆಯಲ್ಲಿ, ಪ್ರಕೃತಿಯು ತನ್ನ ಒಂಟಿತನವನ್ನು ಹೇಗೆ ಮನೋಲ್ಲಾಸದ ಏಕಾಂತವನ್ನಾಗಿ ಬದಲಾಯಿಸಿತು ಎನ್ನುವ ಸ್ವಅನುಭವವನ್ನು ಇಂಗ್ಲಿಷ್‌ ಕವಿ ವಿಲಿಯಂ ವರ್ಡ್ಸ್‌ವರ್ಥ್ 1804ರಲ್ಲಿ ರಚಿಸಿದ ಕವನ ‘ಡ್ಯಾಫೋಡಿಲ್ಸ್’ನಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾನೆ.

ಇಲ್ಲಿ ನಿರೂಪಕ ಒಂಟಿತನದಲ್ಲಿ ಬಳಲುತ್ತಿರುತ್ತಾನೆ. ಅವನೇ ಹೇಳುವಂತೆ- ‘ನಾನು ಬೆಟ್ಟ, ಕಣಿವೆಗಳ ಮೇಲೆ ತೇಲಾಡುವ ಮೋಡದಂತೆ ದಿಕ್ಕುದೆಸೆಯಿಲ್ಲದೆ ಒಂಟಿಯಾಗಿ ಓಡಾಡುತ್ತಿದ್ದೆ. ಆಕಸ್ಮಿಕವಾಗಿಸರೋವರದ ಪಕ್ಕದಲ್ಲಿ, ಮರಗಳ ಕೆಳಗೆ, ತಂಗಾಳಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಚಿನ್ನದ ಬಣ್ಣದ ಡ್ಯಾಫೋಡಿಲ್ ಹೂವುಗಳ ಒಂದು ದೊಡ್ಡ ಸಮೂಹವನ್ನು ನೋಡಿದೆ. ಕ್ಷೀರಪಥದಲ್ಲಿ ಮಿನುಗುವ ಅಸಂಖ್ಯಾತ ನಕ್ಷತ್ರಗಳಂತೆ ಅವು ಹೊಳೆಯುತ್ತಿದ್ದವು. ಇಂತಹ ವಿಸ್ಮಯ ನೋಡುವಾಗ ಯಾವುದೇ ಕವಿಯ ಮನಸ್ಸು, ಮಾತು ಮರೆತು ಮೌನವಾಗುವುದು ಸಹಜ. ಆದರೆ, ನಿಧಾನವಾಗಿ ಯೋಚಿಸಿದಾಗ, ಈ ಅನುಭವ ಕ್ಷಣಿಕವಲ್ಲ, ಶಾಶ್ವತವಾದುದು ಎನಿಸಿತು. ಪ್ರಕೃತಿಯ ಈ ಪ್ರದರ್ಶನವು ವರ್ಣಿಸಲಾಗದ ಅಪಾರ ಸಂಪತ್ತನ್ನು ದಯಪಾಲಿಸಿದೆ ಎನಿಸಿತು. ಆ ಸಂಪತ್ತೆಂದರೆ, ಮುಂದಿನ ದಿನಗಳಲ್ಲಿ ನನ್ನ ಏಕಾಂತದಲ್ಲಿ ಆ ದೃಶ್ಯದ ಮರುಕಳಿಕೆಯಾದಾಗಲೆಲ್ಲ, ನನ್ನ ಹೃದಯ ಮತ್ತು ಮನಸ್ಸು ಅತೀವ ಸಂತೋಷದಿಂದ ತುಂಬಿ, ಡ್ಯಾಫೋಡಿಲ್‌ಗಳಂತೆ ನರ್ತಿಸುತ್ತಿದ್ದವು’. ಹೀಗೆ, ಕವಿಯ ಒಂಟಿತನವನ್ನು ಸವಿನೆನಪಿನ ಏಕಾಂತವನ್ನಾಗಿ ಡ್ಯಾಫೋಡಿಲ್‌ ಬದಲಾಯಿಸಿತು.

ಈ ರೀತಿ, ಮನುಷ್ಯನ ಒಂಟಿತನವನ್ನು ಹೋಗಲಾಡಿಸಿ, ಸ್ವಚಿಂತನೆಗಳೊಂದಿಗೆ ಕಾಲಕಳೆಯುವ ಅನುಭವವನ್ನು ಆನಂದಮಯವಾಗಿಸುವ ಶಕ್ತಿ ಪ್ರಕೃತಿಗಿದೆ. ಡ್ಯಾಫೋಡಿಲ್ ಮಾತ್ರವಲ್ಲ, ಪ್ರಕೃತಿಯಲ್ಲಿರುವ ಪ್ರತಿಯೊಂದು ಸಸ್ಯ ಮತ್ತು ಪ್ರಾಣಿ ಜೀವ ವೈವಿಧ್ಯಗಳೂ ವ್ಯಾವಹಾರಿಕ ಪ್ರಪಂಚದ ನಡುವೆಯೂ ಮನಸ್ಸಿಗೆ ಅಪರಿಮಿತ ಆನಂದವನ್ನು ನೀಡಬಲ್ಲವು. ಅಲ್ಲಿನ ವಿಸ್ಮಯಗಳಿಗೆ ಪಂಚೇಂದ್ರಿಯಗಳನ್ನು ತೆರೆದುಕೊಂಡಷ್ಟೂ ಮನುಷ್ಯನ ಸ್ವಅರಿವು ಜಾಗೃತವಾಗುತ್ತದೆ ಮತ್ತು ಜ್ಞಾನ ವೃದ್ಧಿಯಾಗುತ್ತದೆ. ಅದಕ್ಕಾಗಿಯೇ, ಇಂಗ್ಲಿಷ್‌ ಕವಿ ಜಾನ್ ಕೀಟ್ಸ್ ಹೇಳಿರುವುದು,‘ದಿನದ ಒಂದು ಗಂಟೆಯಾದರೂ ಪ್ರಕೃತಿಯೊಂದಿಗೆ ಕಾಲ ಕಳೆಯಿರಿ. ಹೀಗೆ ಮಾಡಿದಲ್ಲಿ, ಉಳಿದ ಅವಧಿಯಲ್ಲಿ ಲವಲವಿಕೆಯಿಂದ ಇರುತ್ತೀರಿ’. ಆದರೆ, ಮನುಷ್ಯನ ಬದುಕಿನ ಜೀವನಾಡಿಯಾದ ಪೃಕ್ರತಿಯನ್ನು ನಾವು ಬೃಹತ್ ಪ್ರಮಾಣದ ಅಭಿವೃದ್ಧಿಯ ಹೆಸರಲ್ಲಿ ಸಂಪೂರ್ಣವಾಗಿ ನಾಶ ಮಾಡುತ್ತಿದ್ದೇವಲ್ಲಾ?ಈ ವಿವೇಕಹೀನತೆಗೆ ಏನೆನ್ನಬೇಕು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.