ADVERTISEMENT

ಚುರುಮುರಿ: ರೆವಿನ್ಯೂ ಐಡಿಯಾ

ಸುಧೀಂದ್ರ
Published 17 ಫೆಬ್ರುವರಿ 2021, 19:31 IST
Last Updated 17 ಫೆಬ್ರುವರಿ 2021, 19:31 IST
   

ಮುಂದಿನ ಆರ್ಥಿಕ ವರ್ಷದಲ್ಲಿ ವರಮಾನ ಹೆಚ್ಚಿಸುವ ಹೊಸ ಐಡಿಯಾಗಳಿಗಾಗಿ ಬಿಬಿಎಂಪಿ ಕಮಿಷನರ್ ತಮ್ಮ ಥಿಂಕ್‍ಟ್ಯಾಂಕ್ ಸದಸ್ಯರನ್ನು ಕರೆದಿದ್ದರು. ‘ನಮ್ಮ ತಾತನ ಕಾಲದಲ್ಲಿ ಸೈಕಲ್‍ಗೂ ಕಾರ್ಪೊರೇಶನ್‍ನವ್ರು ಲೈಸೆನ್ಸ್ ಕೊಡ್ತಿದ್ರು, ಅದನ್ನು ರಿವೋಕ್ ಮಾಡೋಣ್ವಾ?’ ಅಂದ್ರು ಟ್ರಾಫಿಕ್ ಮ್ಯಾನೇಜ್‍ಮೆಂಟ್ ಇನ್‍ಚಾರ್ಜ್ ಗುಂಡಣ್ಣ.

ಇದರಿಂದ ಖುಷಿಯಾದ ಎ.ಸಿ.ಪಿ. ರಂಗನಾಥ್, ‘ಲೈಸೆನ್ಸ್ ಇಲ್ಲದ ಸೈಕಲ್‍ಗಳನ್ನು ಟೂ ವೀಲರ್‌ಗಳ ಜೊತೆನೇ ನಮ್ಮ ಟೈಗರ್‌ಗಳಲ್ಲಿ ದಬ್ಬಾಕೊಂಡು ಬರಬೋದು’ ಎಂದರು. ಪಕ್ಕದಲ್ಲೇ ಇದ್ದ ಆರ್.ಟಿ.ಒ. ‘ನಮ್ಮ ಬೆಂಗ್ಳೂರಲ್ಲಿ ಸೈಕಲ್ ಯಾರ‍್ರೀ ಓಡಿಸ್ತಾರೆ?’ ಅಂದ್ರು.

‘ಹಾಗಿದ್ರೆ ಟೂ-ವೀಲರ್‌ಗಳಿಗೇ...’ ಅಂತ ಗುಂಡಣ್ಣನವರು ರಾಗ ಎಳೆದಾಗ, ಟ್ರಾನ್ಸ್‌ಪೋರ್ಟ್ ಕಮಿಷನರ್‌ಗೆ ರೇಗ್ಹೋಯ್ತು. ‘ಈಗಾಗಲೇ ಆರ್.ಸಿ. ಫೀ, ಲೈಫ್‍ಟೈಮ್ ಟ್ಯಾಕ್ಸ್ ಹಾಕ್ತಿದೀವಿ. ಹೊಸತಾಗಿ ಏನಾದ್ರೂ ಹಾಕಕ್ಕೋದ್ರೆ, ಜನ ಟೋಲ್‍ಗಳಲ್ಲಿ ಮಾಡ್ತಿರೋ ಹಂಗೆ ದಂಗೆ ಏಳ್ತಾರೆ ಅಷ್ಟೆ’ ಅನ್ನುತ್ತಾ ಜಾಯಿಂಟ್ ಕಮಿಷನರ್ ರೆವಿನ್ಯೂ ಕಡೆ ತಿರುಗಿದರು.

ADVERTISEMENT

ಅದುವರೆಗೂ ಸುಮ್ಮನಿದ್ದ ಡೆಪ್ಯುಟಿ ಕಮಿಷನರ್‌ಗೆ ಒಂದು ಬ್ರಿಲಿಯಂಟ್ ಐಡಿಯಾ ಹೊಳೀತು. ‘ಪಾರ್ಕಿಂಗ್ ಅನ್ನೋ ಬೋರ್ಡ್ ಇಲ್ಲದೆ ಇರೋ ಜಾಗವೆಲ್ಲವನ್ನೂ ನೋ ಪಾರ್ಕಿಂಗ್ ಝೋನ್ ಅಂತ ನಾವು ನೋಟಿಫೈ ಮಾಡಿಬಿಡೋಣ. ಆಗ ಇಡೀ ಬೆಂಗಳೂರಿನ ತೊಂಬತ್ತು ಭಾಗ ವೆಹಿಕಲ್‍ಗಳೆಲ್ಲಾ ನೋ ಪಾರ್ಕಿಂಗ್‍ ಝೋನ್‍ನೊಳಗೇ ಇರತ್ವೆ, ಏನಂತೀರಿ?’ ಎಂದರು.

ತಕ್ಷಣವೇ ಚುರುಕಾದ ಅಸಿಸ್ಟೆಂಟ್ ಕಮಿಷನರ್ ‘ಬೇಗ ಒಂದು ಲೀಗಲ್ ಒಪೀನಿಯನ್ ತಗೊಂಡು, ಡ್ರಾಫ್ಟ್ ರೆಸಲ್ಯೂಶನ್ ರೆಡಿ ಮಾಡ್ಬಿಡ್ತೀನಿ ಸರ್’ ಅಂತ ಘೋಷಿಸಿದರು.

ಟ್ರಾಫಿಕ್ ಡಿ.ಸಿ.ಪಿ. ‘ನಮ್ಮ ಟೈಗರ್‌ಗಳ ಸಂಖ್ಯೆಯನ್ನ ತಕ್ಷಣವೇ ಜಾಸ್ತಿ ಮಾಡ್ಕೊತೀವಿ’ ಅಂದರು. ಲೆಕ್ಕ ಹಾಕ್ತಾ ಕೂತಿದ್ದ ಫೈನಾನ್ಸ್ ಅಡ್ವೈಸರ್, ‘ಬಿಬಿಎಂಪಿ ಆದಾಯ ಮೂರು ಪಟ್ಟು ಹೆಚ್ಚಾಗಲಿದೆ’ ಎನ್ನುತ್ತಾ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.