ADVERTISEMENT

ಸಂಗತ: ರಸ್ತೆಗಳು ಕಟ್ಟಿಕೊಡುವ ‘ಸಂಸ್ಕೃತಿ ಕಥನ’

‘ರಸ್ತೆ ಸಂಸ್ಕೃತಿ’ ನಮ್ಮಲ್ಲಿನ್ನೂ ವಿಕಸನಗೊಳ್ಳಬೇಕಾದ ಬಹು ಮುಖ್ಯವಾದ ಅರಿವು. ಈ ಅರಿವಿಗೆ ರಾಜಕೀಯ ಇಚ್ಛಾಶಕ್ತಿಯೊಂದಿಗೆ ಸಮಾಜದ ಸ್ಪಂದನವೂ ಅಗತ್ಯ.

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 23:30 IST
Last Updated 29 ಸೆಪ್ಟೆಂಬರ್ 2025, 23:30 IST
Road Culture
Road Culture   

ದೆಹಲಿಯಲ್ಲಿ ನಡೆದ ಆಪಘಾತವೊಂದರಲ್ಲಿ, ಮೋಟಾರ್ ಸೈಕಲ್‌ಗೆ ಬಿಎಂಡಬ್ಲ್ಯೂ ಕಾರು ಗುದ್ದಿ ಸರ್ಕಾರಿ ಅಧಿಕಾರಿ ಒಬ್ಬರು ಸೆ. 14ರಂದು ಮೃತಪಟ್ಟರು. ಇಂಥ ಘಟನೆಗಳು ವರದಿಯಾದಾಗಲೆಲ್ಲ, ಭಾರತದ ನಗರಗಳಲ್ಲಿ ರಸ್ತೆಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಕಾಡುತ್ತದೆ. ಹೈ ಪ್ರೊಫೈಲ್ ಪ್ರಕರಣಗಳ ಮಾತು ಹಾಗಿರಲಿ; ನಿತ್ಯವೂ ಸಂಭವಿಸುವ ಇಂತಹ ಅಪಘಾತಗಳನ್ನು ಗಮನಿಸದೆ ಇರುವವರೇ ಹೆಚ್ಚು. ಅಲ್ಲೊಂದು ಇಲ್ಲೊಂದು ನಡೆಯುವ ಅವಘಡ ಎಂದು ಉದಾಸೀನ ಮಾಡುವ ಸಮಸ್ಯೆ ಇದಲ್ಲ; ರಚನಾತ್ಮಕ ಹಾಗೂ ಸಾಂಸ್ಕೃತಿಕ ವ್ಯವಸ್ಥೆ ವಿಫಲವಾಗುತ್ತಿರುವ ಢಾಳಾದ ಸೂಚನೆ ಇದು.

2001 ಹಾಗೂ 2020ರ ನಡುವೆ ನೋಂದಾಯಿತ ವಾಹನಗಳ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಒಟ್ಟಾರೆ ಉದ್ದವು ಮೂರು ಪಟ್ಟುಹೆಚ್ಚಾಗಿದೆ. ಇದೇ ಅವಧಿಯಲ್ಲಿ ರಾಜ್ಯ ರಸ್ತೆಗಳ ಧಾರಣಾ ಸಾಮರ್ಥ್ಯವು ಶೇ 41ರಷ್ಟು ಮಾತ್ರ ಹೆಚ್ಚಾಗಿದೆ. ಇದರ ಪರಿಣಾಮವೇ ನಗರದ ರಸ್ತೆಗಳಲ್ಲಿ ವಾಹನಗಳು ಇಡುಕಿರಿದಿರುವುದು; ತರಹೇವಾರಿ ವಾಹನಗಳ ಮಿಶ್ರ ಸಂಚಾರದಿಂದ ಟ್ರಾಫಿಕ್ ಇನ್ನಷ್ಟು ಮತ್ತಷ್ಟು ತೆವಳುತ್ತಿರುವುದು.

ದ್ವಿಚಕ್ರ ವಾಹನಗಳು ಹಾಗೂ ಕಾರುಗಳು, ಆಟೊರಿಕ್ಷಾ ಹಾಗೂ ಬಸ್‌ಗಳಿಗಿಂತ ಶೇ 33–66ರಷ್ಟು ಹೆಚ್ಚು ವೇಗವಾಗಿ ಸಂಚರಿಸಬಲ್ಲವು. ಆದರೆ, ನಿಧಾನವಾಗಿ ಸಾಗುವ ಆಟೊದಂತಹ ವಾಹನ ಅಡ್ಡ ಬಂದರೆ, ಯಾವ ಕಾರೂ ತೆವಳಲೇಬೇಕು. 

ADVERTISEMENT

ರಸ್ತೆ ಬದಿಯ ಒತ್ತುವರಿಗಳನ್ನು ನೋಡಿ: ಅಂಗಡಿಗಳು, ತಳ್ಳುಗಾಡಿಗಳು, ಪಾರ್ಕ್ ಮಾಡಿದ ವಾಹನಗಳು ಇವೆಲ್ಲವೂ ರಸ್ತೆಯನ್ನು ಭಾಗಶಃ ಆಕ್ರಮಿಸಿಕೊಳ್ಳುತ್ತವೆ. ಆಗ ಜನರೂ ಅನಿವಾರ್ಯವಾಗಿ ವಾಹನಗಳು ಸಾಗುವ ಭಾಗದಲ್ಲೇ ನಡೆಯಬೇಕಾಗುತ್ತದೆ. ಇದರಿಂದ ವಾಹನ ದಟ್ಟಣೆ ಇನ್ನೂ ಹೆಚ್ಚಾಗುವುದಲ್ಲದೆ, ಅಪಾಯಕ್ಕೂ ಆಹ್ವಾನ ನೀಡಿದಂತೆ.

ಸಂಚಾರ ನಿಯಮ ಉಲ್ಲಂಘನೆಗೆ ದಂಡವಿಧಿಸುವಂತಹ ಕಾನೂನು ಇದೆಯಾದರೂ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಬೇಕಾದೀತು ಎಂದು ಹೆದರಿ ಅದನ್ನು ಸಮರ್ಪಕವಾಗಿ ಜಾರಿಗೊಳಿಸುತ್ತಿಲ್ಲ. ಅದರಲ್ಲೂ ರಸ್ತೆ ಒತ್ತುವರಿಯನ್ನು ತೆರವುಗೊಳಿಸುವುದು ಜನರ ಬದುಕಿನ ಮೇಲೆ ಪರಿಣಾಮ ಬೀರುವ ಸಂಗತಿ. ರಾಜಕೀಯವಾಗಿ ಅನುಕೂಲಕರ ಅಲ್ಲದ ತೆರವುಗೊಳಿಸುವ ಕ್ರಿಯೆಯು
ನೈತಿಕ ವಾಗಿಯೂ ಸಮರ್ಥನೀಯವಲ್ಲ.

2024ರಲ್ಲಿ ದೇಶದಾದ್ಯಂತ ನಡೆಸಲಾಗಿದ್ದ ಸಮೀಕ್ಷೆಯೊಂದರ ಪ್ರಕಾರ ₹12 ಸಾವಿರ ಕೋಟಿ ಮೊತ್ತವನ್ನು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕೆ ದಂಡವಾಗಿ ನಿಗದಿಪಡಿಸಲಾಗಿದೆ. ಆದರೆ, ಇದರಲ್ಲಿ ₹9000 ಕೋಟಿ ಮೊತ್ತ ಇನ್ನೂ  ವಸೂಲಾಗಿಲ್ಲ. ನಿಯಮ ಉಲ್ಲಂಘನೆ ತಡೆಯುವ ಕ್ರಿಯೆಯು ಎಷ್ಟು ದುರ್ಬಲವಾಗಿದೆ ಎನ್ನುವುದಕ್ಕೆ ಇದು ಕನ್ನಡಿ ಹಿಡಿಯುತ್ತದೆ.

ಮೂಲಸೌಕರ್ಯ, ಕಾನೂನು ಜಾರಿಯ ಸಂಗತಿಗೂ ಮೀರಿ ಚಾಲನಾ ಧೋರಣೆಯೊಂದು ಇದೆ. ಇದನ್ನೇ ‘ರಸ್ತೆ ಸಂಸ್ಕೃತಿ’ ಎಂದು ಕರೆಯುತ್ತಾರೆ. ಖಾಲಿ ರಸ್ತೆಗಳಲ್ಲಿಯೂ ನಿಯಮ ಗಾಳಿಗೆ ತೂರಿ ಕೆಂಪು ಸಿಗ್ನಲ್ ದಾಟುವುದು, ಲೇನ್ ಬಿಟ್ಟು ಸಂಚರಿಸುವುದು, ವೇಗಮಿತಿಗೆ ಕುರುಡುಗಣ್ಣಾಗುವುದು ನಡೆದೇ ಇದೆ. ಇವೆಲ್ಲವೂ ಸಾಮಾಜಿಕ ನಡವಳಿಕೆಯನ್ನು ಅಭಿವ್ಯಕ್ತಿಸುತ್ತವೆ. ನಿಯಮ ಇರುವುದೇ ಮುರಿಯುವುದಕ್ಕೆ ಎನ್ನುವ ಭಂಡತನದ ಪರಿಣಾಮ ಇದು. 

ವಾಹನಗಳ ಮಾಲೀಕತ್ವವನ್ನು ಸಿಂಗಪುರದಲ್ಲಿ ಕಠಿಣ ನಿಯಮಗಳ ವ್ಯಾಪ್ತಿಯಲ್ಲಿ ಇಡಲಾಗಿದೆ. ಸಂಚಾರ ನಿಯಮ ಉಲ್ಲಂಘನೆಗೆ ಅಲ್ಲಿ ದೊಡ್ಡ ಮೊತ್ತದ ದಂಡ ವಿಧಿಸುತ್ತಾರೆ. ಹೀಗಾಗಿಯೇ ಅಲ್ಲಿ ಸಂಚಾರ ಸರಾಗ.

ರಸ್ತೆಗಳು ನಗರ ಸಂಸ್ಕೃತಿಯ ಬಿಂಬಗಳೇ ಅಥವಾ ಅವು ಸಂಸ್ಕೃತಿಯನ್ನು ರೂಪಿಸುತ್ತವೆಯೇ ಎನ್ನುವ ಪ್ರಶ್ನೆ ಮುಖ್ಯವಾಗುತ್ತದೆ. ಸಮಾಜ ವಿಜ್ಞಾನಿ ಇರ್ವಿಂಗ್ ಗಾಫ್ಮನ್ ಪ್ರಕಾರ, ಈ ಪ್ರಶ್ನೆಗೆ ‘ಹೌದು’ ಎನ್ನುವುದೇ ಉತ್ತರ. ನಿಯಮಗಳನ್ನು ಎದ್ದುಕಾಣುವಂತೆ ಮುರಿಯುವುದು ಕಾನೂನಿನ ಉಲ್ಲಂಘನೆ ಒಪ್ಪಿತ ಎನ್ನುವುದರ ಬಿಂಬವೆನ್ನುವ ಸಿದ್ಧಾಂತ ಇರ್ವಿನ್‌ರದ್ದು. ಇದನ್ನು ‘ಬ್ರೋಕನ್ ವಿಂಡೋಸ್ ಥಿಯರಿ’ ಎನ್ನುತ್ತಾರೆ.

ರಸ್ತೆ ಸಂಸ್ಕೃತಿಯು ಹಸನಾದರೆ ವಿಶಾಲ ದೃಷ್ಟಿಯಲ್ಲಿ ಸಾಮಾಜಿಕ ನಂಬಿಕೆಯೂ ಹರಡುತ್ತದೆ ಎನ್ನುವುದು ರಟ್ಗರ್ಸ್ ವಿಶ್ವವಿದ್ಯಾಲಯದ ಸಂಶೋಧನೆಯಿಂದ ಗೊತ್ತಾಗಿದೆ. ಪ್ರಯಾಣದ ಅವಧಿ ಕಡಿತಗೊಳಿಸುವುದು ಅಥವಾ ಅಪಘಾತ ಪ್ರಮಾಣ ಕಡಿಮೆ ಮಾಡುವುದನ್ನೂ ಮೀರಿದ  ವಿದ್ಯಮಾನ ರಸ್ತೆ ಸಂಸ್ಕೃತಿ. ರಸ್ತೆಯಲ್ಲಿ ಸದ್ವರ್ತನೆ ತೋರುವವರು ಹೆಚ್ಚಾದರೆ, ಅದು ಕಚೇರಿ, ಶಾಲೆಗಳಿಗೂ ಹಬ್ಬುತ್ತದೆ. 

ಮೊದಲಿಗೆ, ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸುವ ಮಾದರಿ ರಸ್ತೆಗಳನ್ನು ಪ್ರಚುರಪಡಿಸಬೇಕು. ಇದರಿಂದ ಪ್ರೇರೇಪಿತರಾಗಿ ಜನರು ಇನ್ನಷ್ಟು ಮಾದರಿ ರಸ್ತೆಗಳನ್ನು ಸೃಷ್ಟಿಸುತ್ತಾರೆ. ಎರಡನೆಯದಾಗಿ, ಸಂಚಾರ ನಿಯಮ ಉಲ್ಲಂಘಿಸಿದವರಿಗೆ ದೊಡ್ಡ ಪ್ರಮಾಣದ ದಂಡ ಹಾಕುವುದು ಪರಿಹಾರವಲ್ಲ. ಆಗ ಭ್ರಷ್ಟಾಚಾರ ಹೆಚ್ಚಾಗುತ್ತದೆ. ಜನರು ದಂಗೆ ಏಳುವ ಅಪಾಯವೂ ಇದೆ. ತರ್ಕಬದ್ಧವಾದ ದಂಡ ಜಾರಿಗೊಳಿಸಬೇಕು. ನಿಯಮ ಉಲ್ಲಂಘಿಸಿದರೆ
ಸಮಾಜದಲ್ಲಿ ನಿಕೃಷ್ಟವಾಗಿ ನೋಡುತ್ತಾರೆ ಎನ್ನುವ ಪ್ರಜ್ಞೆ ಜನರಲ್ಲಿ ಮೂಡುವಂತೆ ಕಾರ್ಯಕ್ರಮಗಳನ್ನು ರೂಪಿಸಬೇಕು. ರಾಜಕೀಯ ಇಚ್ಛಾಶಕ್ತಿಯೂ ಬೆರೆತು ಇಷ್ಟೆಲ್ಲ ಆದರೆ ಆಗ ಅನುಕರಣೀಯ ರಸ್ತೆ ಸಂಸ್ಕೃತಿ ನಮ್ಮದಾಗಬಹುದು.

(ಲೇಖಕರು ಜಾಗತಿಕ ಯೋಜನಾ ಪರಿಣತರು
ಹಾಗೂ ಟೋನಿ ಬ್ಲೇರ್ ಸಂಸ್ಥೆಯಲ್ಲಿ ನಿರ್ದೇಶಕರು.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.