ADVERTISEMENT

ಮಹಿಳೆಯರಿಗೂ ಇದು ಪರಿಷತ್ತು ಆಗಲಿ

ಒಂದು ಸಂಸ್ಥೆಯ ರಾಚನಿಕ ಸ್ವರೂಪದಲ್ಲೇ ಮಹಿಳೆ ಅದೃಶ್ಯಳಾಗಿರುವಾಗ ಹೆಣ್ಣು ಭುವನೇಶ್ವರಿ ದೇವಿಯಾಗಿ ರಥವೇರಿ ಸುಮ್ಮನಿರುವುದು ಬಿಟ್ಟರೆ ಬೇರೇನಾಗಲು ಸಾಧ್ಯ?

ಎಚ್.ಎಸ್.ಅನುಪಮಾ
Published 11 ಜನವರಿ 2019, 19:30 IST
Last Updated 11 ಜನವರಿ 2019, 19:30 IST
   

ಮಹಿಳಾ ದೃಷ್ಟಿಕೋನ ಎಲ್ಲ ಕ್ಷೇತ್ರಗಳನ್ನೂ ಮರುಪೂರಣಗೊಳಿಸುತ್ತಿರುವ ಕಾಲವಿದು. ಇತ್ತೀಚಿನ ದಶಕಗಳಲ್ಲಿ ಅನೇಕ ಸೂಕ್ಷ್ಮ ಬರಹಗಾರ್ತಿಯರಿಂದ ವಿಪುಲ, ವೈವಿಧ್ಯಮಯ ಹಾಗೂ ಮೌಲಿಕ ಕನ್ನಡ ಸಾಹಿತ್ಯ ರಚನೆಯಾಗಿದೆ. ಆದರೇನು, 1915ರಲ್ಲಿ ಹುಟ್ಟಿಕೊಂಡ ಕನ್ನಡ ಸಾಹಿತ್ಯ ಪರಿಷತ್ತು ಎಂದರೆ ಮಹಿಳೆಯರಿಗೆ ಭಯ, ಅನಾದರ, ತಿರಸ್ಕಾರ ಮೂಡುವಂತಾಗಿದೆ. ಏಕೆಂದರೆ ಇತರ ಪುರುಷಪಾರಮ್ಯದ ಸಾಂಸ್ಥಿಕ ವ್ಯವಸ್ಥೆಗಳು ಹೇಗೋ ಪರಿಷತ್ತು ಕೂಡ ಹಾಗೆಯೇ ಇದೆ. ಕನ್ನಡ ಸಾಹಿತ್ಯವು ಮಹಿಳಾ ಭಾಗವಹಿಸುವಿಕೆಯಿಂದ ಸಮೃದ್ಧಗೊಂಡಿದ್ದರೂ ಶತಮಾನೋತ್ಸವ ಕಂಡ ಕನ್ನಡ ಸಾಹಿತ್ಯ ಪರಿಷತ್ತು ಮಾತ್ರ ಮಹಿಳಾ ಸಾಹಿತಿಗಳನ್ನು ತೀರಾ ಅವಜ್ಞೆಗೊಳಪಡಿಸಿದೆ.

ಈ ನೂರು ವರ್ಷಗಳಲ್ಲಿ ಕಸಾಪ 25 ಅಧ್ಯಕ್ಷರನ್ನು ಪಡೆದಿದ್ದು ಅದರಲ್ಲಿ ಒಬ್ಬರೂ ಮಹಿಳೆಯಿಲ್ಲ! 84 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಒಟ್ಟು ನಾಲ್ವರು ಮಹಿಳೆಯರಷ್ಟೇ ಅಧ್ಯಕ್ಷರಾಗಿದ್ದಾರೆ! 1974ರಲ್ಲಿ ಜಯದೇವಿ ತಾಯಿ ಲಿಗಾಡೆ (ಮಂಡ್ಯ ಸಮ್ಮೇಳನ), ಬಾಗಲಕೋಟೆಯ 68ನೇ ಸಮ್ಮೇಳನಕ್ಕೆ ಶಾಂತಾದೇವಿ ಮಾಳವಾಡ, ಮೂಡುಬಿದಿರೆಯ 71ನೇ ಸಮ್ಮೇಳನಕ್ಕೆ ಕಮಲಾ ಹಂಪನಾ ಹಾಗೂ ಗದಗಿನ 76ನೇ ಸಮ್ಮೇಳನಕ್ಕೆ ಗೀತಾ ನಾಗಭೂಷಣ ಬಿಟ್ಟರೆ ಮತ್ಯಾವ ಮಹಿಳೆಯೂ ಇದುವರೆಗೆ ಸಾಹಿತ್ಯ ಪರಿಷತ್ತಿನ ಕಣ್ಣಿಗೆ ಬಿದ್ದಿಲ್ಲ. ಇನ್ನು ಪರಿಷತ್ತಿನ ಕಾರ್ಯಕಾರಿ ಸಮಿತಿ ನೋಡಿದರೆ ಅಲ್ಲೂ ಕೆಲವೇ ಮಹಿಳೆಯರು. ಒಂದು ಸಂಸ್ಥೆಯ ರಾಚನಿಕ ಸ್ವರೂಪದಲ್ಲೇ ಮಹಿಳೆ ಅದೃಶ್ಯಳಾಗಿರುವಾಗ ಹೆಣ್ಣು ಭುವನೇಶ್ವರಿ ದೇವಿಯಾಗಿ ರಥವೇರಿ ಸುಮ್ಮನಿರುವುದು ಬಿಟ್ಟರೆ, ಕುಂಭವನ್ನು ತಲೆ ಮೇಲಿಟ್ಟುಕೊಂಡು ಮೆರವಣಿಗೆಯಲ್ಲಿ ಭಾಗವಹಿಸುವುದು ಬಿಟ್ಟರೆ ಬೇರೇನು ಮಾಡಲು ಸಾಧ್ಯ?

ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಮ್ಮೇಳನಗಳಲ್ಲೂ ಪುರುಷರದ್ದೇ ಮೇಲುಗೈ. ಉದ್ಘಾಟನಾ ಸಮಾರಂಭ, ವಿಚಾರ ಗೋಷ್ಠಿಗಳು, ಸಮಾನಾಂತರ ವೇದಿಕೆಗಳ ಗೋಷ್ಠಿಗಳು, ಸನ್ಮಾನ, ಕವಿಗೋಷ್ಠಿ, ಸಮಾರೋಪ ಸಮಾರಂಭ ಎಲ್ಲೆಲ್ಲೂ ಮಹಿಳೆಯರ ಭಾಗವಹಿಸುವಿಕೆ ನಗಣ್ಯ. ಪರಕಾಯ ಪ್ರವೇಶ ಮಾಡಿ ತನ್ನದಲ್ಲದ ನೋವು, ಸಂಕಟಗಳನ್ನು ಅಕ್ಷರವಾಗಿ ಅಭಿವ್ಯಕ್ತಿಸಬಲ್ಲ ಸೂಕ್ಷ್ಮಜ್ಞ ಸಾಹಿತಿಗಳಲ್ಲೇ ಇಷ್ಟು ಲಿಂಗ ಅಸೂಕ್ಷ್ಮತೆ ಇರುವುದರಿಂದಲೇ ಭಾರತೀಯ ಸಮಾಜ 21ನೇ ಶತಮಾನದಲ್ಲೂ ಹೀಗಿದೆ.

ADVERTISEMENT

ಹೀಗೆ ಮಹಿಳಾ ಒಳಗೊಳ್ಳುವಿಕೆಯ ಪ್ರಶ್ನೆಯೆತ್ತಿದ ಕೂಡಲೇ ಕರ್ನಾಟಕ ಲೇಖಕಿಯರ ಸಂಘದತ್ತ ಬೊಟ್ಟು ಮಾಡಲಾಗುತ್ತದೆ. ಅಲ್ಪಸಂಖ್ಯಾತ ಮತ್ತು ದಲಿತ ಸಮುದಾಯಗಳ ಪ್ರಾತಿನಿಧ್ಯ, ಅವಕಾಶದ ವಿಷಯದಲ್ಲೂ ಇದೇ ಆಗುತ್ತದೆ. ಆದರೆ ಮಹಿಳೆ ಕೇಳುತ್ತಿರುವುದು ಪ್ರತ್ಯೇಕ ಸಂಘ, ಪರಿಷತ್ತು, ಸಮ್ಮೇಳನಗಳೆಂಬ ಮೀಸಲಾತಿಯಷ್ಟೇ ಅಲ್ಲ. ಬದಲಾಗಿ ಸಮಾನ ಅವಕಾಶ, ಸಹಭಾಗಿತ್ವ ಹಾಗೂ ಸಮಾನ ಗೌರವ.

ಎಲ್ಲಿಯವರೆಗೆ ರಾಜಕೀಯ ನಾಯಕರು, ಧಾರ್ಮಿಕ ವ್ಯಕ್ತಿಗಳ ಇರುವಿಕೆಯೇ ದಿವ್ಯ ಸಾನ್ನಿಧ್ಯವೆಂದು ಸಾಹಿತ್ಯ ಪರಿಷತ್ತು ಬಗೆಯುವುದೋ ಅಲ್ಲಿಯವರೆಗೆ ಮಹಿಳೆಯನ್ನು ನಾಮಮಾತ್ರವಾಗಿ ಬಳಸಿಕೊಳ್ಳುವುದು ಮುಂದುವರೆಯುತ್ತದೆ. ಸರ್ಕಾರದ ಕೃಪಾಕಟಾಕ್ಷದಲ್ಲಿ ನಡೆಯುವವರೆಗೆ ಸ್ವಾಯತ್ತ ನಿರ್ಧಾರಗಳು ಮಾಯವಾಗಿರುತ್ತವೆ. ಎಂದೇ ಬದಲಾದ ಕಾಲದ ನಾಡುನುಡಿಯ ಸವಾಲುಗಳಿಗೆ ತಕ್ಕಂತೆ ನೀತಿನಿಯಮ, ಬೈಲಾಗಳನ್ನು ಕಸಾಪ ಬದಲಿಸಿಕೊಳ್ಳಲಿ. ಕನಿಷ್ಠ ಮೂರು ಅವಧಿಗೊಬ್ಬರು ಅಧ್ಯಕ್ಷೆಯಾಗುವಂತೆ, ಎಲ್ಲ ಸಮಿತಿ -ಗೋಷ್ಠಿಗಳಲ್ಲಿ ಕನಿಷ್ಠ ಮೂರನೆಯ ಒಂದು ಭಾಗ ಮಹಿಳೆಯರಿರುವಂತೆ, ಮೂರು ಸಮ್ಮೇಳನಗಳಲ್ಲಿ ಒಂದಕ್ಕೆ ಮಹಿಳೆ ಸರ್ವಾಧ್ಯಕ್ಷತೆ ವಹಿಸುವಂತೆ ನೀತಿನಿಯಮಗಳಿಗೆ ತಿದ್ದುಪಡಿ ತರಲಿ. ಮಹಿಳೆಯರೂ ಪರಿಷತ್ತಿನ ರಚನೆ, ಕಲಾಪ, ಆಗುಹೋಗುಗಳಲ್ಲಿ ರಚನಾತ್ಮಕವಾಗಿ ಭಾಗವಹಿಸಲು ಸಾಧ್ಯವಾಗುವ ಸ್ನೇಹ ವಾತಾವರಣ ಅಲ್ಲಿ ಮೂಡಲಿ.

ಇದಲ್ಲದೆ ಪ್ರತಿಬಾರಿಯೂ ಸ್ಮರಣಿಕೆಯೆಂದು ಪ್ಲಾಸ್ಟಿಕ್ ಫಲಕ ನೀಡುವ ಬದಲು ಆಯಾ ಪ್ರದೇಶದ ಕಲೆ- ಸಂಸ್ಕೃತಿಗೆ ಸಂಬಂಧಪಟ್ಟ ಕೈಕೆಲಸದ ವಸ್ತು ನೀಡುವುದು; ಸಮ್ಮೇಳನದ ಆವರಣದಲ್ಲಿ ಪ್ಲಾಸ್ಟಿಕ್ ಬಳಸದಂತೆ, ಶೌಚಾಲಯಗಳನ್ನು ಗಲೀಜು ಮಾಡದಂತೆ, ಸಿಕ್ಕಸಿಕ್ಕಲ್ಲಿ ಕಸ ಎಸೆಯದೆ ಪೌರಕಾರ್ಮಿಕರನ್ನು ಗೌರವಿಸುವಂತೆ ಕನ್ನಡಿಗರ ಮನವೊಲಿಸುವುದು; ಸಮ್ಮೇಳನದ ಮೆರವಣಿಗೆಯಲ್ಲಿ ನಮ್ಮ ಆಶೋತ್ತರ, ಸ್ಫೂರ್ತಿಯ ಮೂಲವಾದ ಸಂವಿಧಾನವೂ ಸೇರಿದಂತೆ 1001 ಕನ್ನಡ ಪುಸ್ತಕಗಳನ್ನು ಸ್ತ್ರೀಪುರುಷರೆಲ್ಲರೂ ತಲೆ ಮೇಲೆ ಹೊತ್ತು ಸಾಗುವುದೇ ಮೊದಲಾದ ವಿಷಯಗಳು ಆದ್ಯತೆಯ ವಿಷಯವಾಗಿ ಬದಲಾವಣೆಯಾಗಲಿ. ಈಗ ಹೂಹಾಕಿ ಪೂಜಿಸುವುದೊಂದು ಬಾಕಿ, ಅಷ್ಟರಮಟ್ಟಿಗೆ ವ್ಯಕ್ತಿಪೂಜೆ ಸಾಹಿತ್ಯ ಸಮ್ಮೇಳನಗಳಲ್ಲಿ ವಿಜೃಂಭಿಸುತ್ತಿದೆ. ಸಾಹಿತ್ಯವೆಂದರೆ ಅಕ್ಷರವಲ್ಲ, ಶಕ್ತಿ. ಸಾಹಿತಿಗಳೆಂದರೆ ಅಕ್ಷರ ದೊರೆಗಳಲ್ಲ, ಅಕ್ಷರ ಸೇವಕರು. ಆದರೆ ಈ ವಿನೀತತೆಯನ್ನು ಅದೇಕೋ ಹಿರಿಯರು ಮರೆತುಬಿಟ್ಟಿದ್ದಾರೆ.

ಮುಂದಿನ ಸಮ್ಮೇಳನದ ಊಟದ ಮೆನು ಆಗಲೇ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕನ್ನಡಿಗರ ರಸನೆಯ ಪ್ರಜ್ಞೆಗೆ ಶರಣು. ಆದರೆ ಅದರ ಜೊತೆಗೆ ಮುಂದಿನ ಸಮ್ಮೇಳನಕ್ಕೆ ಒಬ್ಬ ಸಮರ್ಥ, ಸೂಕ್ಷ್ಮ ಮಹಿಳೆ ಸರ್ವಾಧ್ಯಕ್ಷತೆ ಸ್ಥಾನದಲ್ಲಿರಲೇಬೇಕು; ಮೇಲ್ಕಾಣಿಸಿದ ಬದಲಾವಣೆಗಳನ್ನು ಮುಂದಿನ ಬಾರಿಯಿಂದಲೇ ಜಾರಿಗೊಳಿಸಿ ಕಸಾಪ ನಾಡು-ನುಡಿಯ ಗೌರವ ಹೆಚ್ಚಿಸಬೇಕು; ಆ ಮೂಲಕ ನುಡಿಜಾತ್ರೆಗೊಂದು ಹೊಸ ಮೌಲ್ಯ ತರಬೇಕೆಂದು ಹಕ್ಕೊತ್ತಾಯದ ಅಭಿಯಾನ ಶುರುವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.