ADVERTISEMENT

ಸಂಗತ: ಸರ್ಕಾರದ ನೆಮ್ಮದಿ ಕೆಡಿಸಿದ ಮೀನು!

ಶ್ರೀಗುರು
Published 22 ಫೆಬ್ರುವರಿ 2025, 0:23 IST
Last Updated 22 ಫೆಬ್ರುವರಿ 2025, 0:23 IST
<div class="paragraphs"><p>ಸಂಗತ: ಸರ್ಕಾರದ ನೆಮ್ಮದಿ ಕೆಡಿಸಿದ ಮೀನು!</p></div>

ಸಂಗತ: ಸರ್ಕಾರದ ನೆಮ್ಮದಿ ಕೆಡಿಸಿದ ಮೀನು!

   

ಹೆಚ್ಚುತ್ತಿರುವ ಸೊಳ್ಳೆಯ ಕಾಟದಿಂದ ಜನರನ್ನು ಪಾರು ಮಾಡಲು ಮಾಡಿದ ಪ್ರಯತ್ನವೊಂದು ಕೇಂದ್ರ ಸರ್ಕಾರವನ್ನು ಹಸಿರು ನ್ಯಾಯಮಂಡಳಿಯ ಕಟಕಟೆಗೆ ತಂದು ನಿಲ್ಲಿಸಿದೆ. ಕೆರೆ, ಕುಂಟೆ, ನಾಲೆ, ಹಿನ್ನೀರು ಮತ್ತು ನದಿಗಳಿಗೆ ಸೊಳ್ಳೆ ಮೀನು ಮತ್ತು ಗಪ್ಪಿ ಮೀನುಗಳನ್ನು ಸೇರಿಸಿ, ದೇಶದ ಹಲವು ರಾಜ್ಯಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕಾಗಿ ಮಾಡಿದ ಕೆಲಸವು ಪರಿಸರ ತಜ್ಞರಿಂದಲೂ ಟೀಕೆಗೆ ಒಳಗಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಿದ್ದು, ಚಟುವಟಿಕೆಯನ್ನು ಈ ಕೂಡಲೇ ನಿಲ್ಲಿಸಬೇಕು ಮತ್ತು ಸೂಕ್ತ ವಿವರಣೆ ನೀಡಬೇಕು ಎಂದು ತಾಕೀತು ಮಾಡಿದೆ.

ನಡೆದಿರುವುದು ಇಷ್ಟು. ಜನವಸತಿ ಪ್ರದೇಶಗಳಿಗೆ ಹತ್ತಿರವಿರುವ ನೀರಿನ ತಾಣಗಳಿಂದ ಸೊಳ್ಳೆಗಳು ಹರಡುವುದು ಸಾಮಾನ್ಯ ವಿದ್ಯಮಾನ. ಸೊಳ್ಳೆಗಳ ಕಚ್ಚುವಿಕೆಯಿಂದ ಜನರ ಆರೋಗ್ಯ ಹದಗೆಡುವುದು, ಅವರು ಆಸ್ಪತ್ರೆ ಸೇರುವುದು, ಕೆಲವು ಸಂದರ್ಭಗಳಲ್ಲಿ ಸೂಕ್ತ ಚಿಕಿತ್ಸೆ ದೊರಕದೆ ಪ್ರಾಣಹಾನಿ ಆಗುವುದು ನಡೆದೇ ಇರುತ್ತದೆ. ಕಾಲಕಾಲಕ್ಕೆ ಹೆಚ್ಚುವ ಸೊಳ್ಳೆಯ ಕಾಟದಿಂದ ಜನರನ್ನು ರಕ್ಷಿಸಲು ಮುಂದಾದ ಕೇಂದ್ರ ಸರ್ಕಾರವು ಸೊಳ್ಳೆಗಳನ್ನು ತಿಂದು ನಾಶ ಮಾಡುವ ಎರಡು ಬಗೆಯ ಮೀನುಗಳನ್ನು ನೀರಿನ ತಾಣಗಳಿಗೆ ಸೇರಿಸಲು ಮುಂದಾಯಿತು. ಯೋಜನೆಯೊಂದನ್ನು ಸಿದ್ಧಪಡಿಸಿ, ವಿವಿಧ ರಾಜ್ಯಗಳ ಸಹಯೋಗದೊಂದಿಗೆ ಸೊಳ್ಳೆ ಮೀನು (ಗಂಬೂಸಿಯ ಅಫಿನಿಸ್) ಮತ್ತು ಗಪ್ಪಿ (ಪೋಸಿಲಿಯ ರೆಟಿಕುಲಾಟ) ಪ್ರಭೇದದ ಮೀನುಗಳನ್ನು ಕರ್ನಾಟಕ, ಅಸ್ಸಾಂ, ಅರುಣಾಚಲ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರಪ್ರದೇಶ, ಆಂಧ್ರಪ್ರದೇಶ, ಪಂಜಾಬ್ ಮತ್ತು ಒಡಿಶಾ ರಾಜ್ಯಗಳ ನೀರಿನ ತಾಣಗಳಲ್ಲಿ ಬಿಡಲಾಯಿತು.

ADVERTISEMENT

ಈ ಸೊಳ್ಳೆ ಮೀನು ಮತ್ತು ಗಪ್ಪಿ ಮೀನುಗಳು ವಿಶ್ವದ ಅತ್ಯಂತ ಅಕ್ರಮಣಕಾರಿ ಮೀನುಗಳೆಂದೇ ಕುಖ್ಯಾತಿ ಪಡೆದಿವೆ. ಇವು ತಾವು ಪ್ರವೇಶಿಸುವ ನೀರಿನಲ್ಲಿರುವ ಸೊಳ್ಳೆಗಳನ್ನು ಆಪೋಶನ ತೆಗೆದುಕೊಳ್ಳುತ್ತವೆ. ಅಲ್ಲಿಗೆ ಸೊಳ್ಳೆಗಳ ನಿಯಂತ್ರಣವಾಗುತ್ತದೆ. ಇದು ಇಲ್ಲಿಗೇ ಮುಗಿಯುವುದಿಲ್ಲ. ಈ ಮೀನುಗಳು ಬೇರೆ ಜಾತಿಯ ಮೀನುಗಳ ಸಣ್ಣ ಮರಿಗಳನ್ನು ಹಿಡಿದು ತಿಂದುಬಿಡುತ್ತವೆ. ಸೊಳ್ಳೆಗಳ ನಿಯಂತ್ರಣಕ್ಕಾಗಿ ನೀರು ಸೇರುವ ಈ ಮೀನುಗಳು ಬೇರೆ ಮೀನುಗಳ ಸಂತತಿಯನ್ನು ನಾಶ ಮಾಡುತ್ತವೆ. ಇವು ಬಕಾಸುರನಂತೆ ಆಹಾರ ಸೇವಿಸುವುದರಿಂದ ದೇಸಿ ಮೀನುಗಳಿಗೆ ಆಹಾರದ ಕೊರತೆ ಉಂಟಾಗುತ್ತದೆ. ಇದರಿಂದಾಗಿ ನೀರಿನೊಳಗಿನ ಜೀವಿ ಆವಾಸದಲ್ಲಿ ದೊಡ್ಡ ಪಾರಿಸರಿಕ ಏರುಪೇರು ಸಂಭವಿಸುತ್ತದೆ. ಈ ಕಾರಣದಿಂದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಈ ಎರಡೂ ಜಾತಿಯ ಮೀನುಗಳಿಗೆ ಶಾಶ್ವತ ನಿಷೇಧ ಹೇರಿವೆ.

ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರವೇ ಈ ಎರಡು ಬಗೆಯ ಮೀನುಗಳನ್ನು ‘ಆಕ್ರಮಣಕಾರಿ’ ಮತ್ತು ‘ಪರಕೀಯ’ (ನಮ್ಮ ವಾತಾವರಣಕ್ಕೆ ಹೊಂದದ) ಪ್ರಭೇದಗಳು ಎಂದು ಘೋಷಿಸಿರುವಾಗ ಅದು ಹೇಗೆ ಅದೇ ಮೀನುಗಳನ್ನು ನಮ್ಮ ನೀರಿಗೆ ಸೇರಿಸಲಾಯಿತು ಎಂಬ ಪ್ರಶ್ನೆ ಎತ್ತಿರುವ ಹಸಿರು ನ್ಯಾಯಮಂಡಳಿಯು ಇಂತಹ ಕೆಲಸಗಳನ್ನು ನಿಯಂತ್ರಿಸಬೇಕಾದ ಸರ್ಕಾರವೇ ಹೀಗೆ ಮಾಡಬಹುದೇ ಎಂದು ಪ್ರಶ್ನಿಸಿದೆ. ಸ್ಥಳೀಯ ಜೀವಿ ಪರಿಸರಕ್ಕೆ ಧಕ್ಕೆ ಉಂಟುಮಾಡುವ ಯಾವುದೇ ಪ್ರಯತ್ನಕ್ಕೆ ಯಾರೂ ಮುಂದಾಗಕೂಡದು ಎಂದು ಎಚ್ಚರಿಕೆ ನೀಡಿದೆ.

ನೋಟಿಸ್‌ ಸ್ವೀಕರಿಸಿರುವ ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನ್ಯಾಷನಲ್ ಸೆಂಟರ್ ಫಾರ್ ವೆಕ್ಟರ್ ಬೋರ್ನ್‌ ಡಿಸೀಸಸ್ ಕಂಟ್ರೋಲ್‌ ಈಗ ಉತ್ತರ ನೀಡಬೇಕಿದೆ.

ಯಾವುದಾದರೂ ಒಂದು ಜೀವಿ ಪರಿಸರದಲ್ಲಿ ಕ್ರಿಮಿ, ಕೀಟ, ಪ್ರಾಣಿ, ಜೀವಿಗಳ ಸಂಖ್ಯೆ ಮಿತಿಮೀರಿದರೆ ಅವುಗಳ ನಿಯಂತ್ರಣಕ್ಕೆ ಹೊರಗಿನಿಂದ ಅಥವಾ ಆವಾಸಕ್ಕೆ ಹೊರತಾದ ಜೀವಿ ಪ್ರಭೇದಗಳನ್ನು ಸೇರಿಸುವುದು ಮತ್ತು ಮಿತಿಮೀರಿದ ಸಂಖ್ಯೆಯನ್ನು ಕಡಿಮೆ ಮಾಡುವುದು ಜೀವಜಾಲದಲ್ಲಿ ನಡೆಯುವ ಸಾಮಾನ್ಯ ಚಟುವಟಿಕೆ ಆಗಿರುತ್ತದೆ. ಈ ಕ್ರಮ ಯಶಸ್ವಿಯಾಗದಿದ್ದರೆ ಸಾಮೂಹಿಕ ವಧೆ ಮಾಡಲಾಗುತ್ತದೆ. ಐದು ವರ್ಷಗಳ ಹಿಂದೆ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ರೈತರ ಬೆಳೆಗಳನ್ನು ತಿಂದು ಮುಗಿಸುತ್ತಿದ್ದ ‘ನೀಲಗಾಯ್’ಗಳ ವಧೆಗೆ ರಾಜ್ಯ ಸರ್ಕಾರಗಳು ಮುಂದಾಗಿದ್ದವು. ಪರಿಸರ ಆಸಕ್ತರು ಮತ್ತು ನ್ಯಾಯಾಲಯಗಳ ಮಧ್ಯಪ್ರವೇಶದಿಂದ ಅದು ಸಾಧ್ಯವಾಗಲಿಲ್ಲ.

ಹತ್ತು ವರ್ಷಗಳ ಹಿಂದೆ ಉತ್ತರಪ್ರದೇಶದಲ್ಲಿ ಆಫ್ರಿಕಾದ ಕ್ಯಾಟ್‌ಫಿಶ್‌ ಕೃಷಿಯನ್ನು ನಿಷೇಧಿಸಲಾಗಿತ್ತು. ಈ ಮೀನುಗಳಲ್ಲಿ ಹೆಚ್ಚಿನ ಪ್ರೋಟೀನ್ ದೊರಕುತ್ತದೆ ಎಂಬ ಕಾರಣಕ್ಕೆ ಜನ ಕ್ಯಾಟ್‌ಫಿಶ್‌ಗಳನ್ನು ಸಾಕುತ್ತಿದ್ದರು ಮತ್ತು ಭಕ್ಷಿಸುತ್ತಿದ್ದರು. ತಮಿಳುನಾಡಿನಲ್ಲೂ ಕ್ಯಾಟ್‌ಫಿಶ್‌ ಕೃಷಿ ಜೋರಾಗಿತ್ತು. ಇವು ಸಹ ಇತರ ಮೀನುಗಳ ಆಹಾರವನ್ನು ಕಬಳಿಸಿ ದೇಸಿ ಮೀನುಗಳ ಆಹಾರದ ಕೊರತೆಗೆ ಕಾರಣವಾಗುತ್ತಿದ್ದವು. ಎರಡೂ ರಾಜ್ಯಗಳಲ್ಲಿ ಕ್ಯಾಟ್‌ಫಿಶ್‌ಗಳ ನಿಷೇಧ ಈಗಲೂ ಮುಂದುವರಿದಿದೆ.

ಜಗತ್ತಿನಲ್ಲಿ ಒಂದು ನೂರು ಬಗೆಯ ಆಕ್ರಮಣಕಾರಿ ಮೀನಿನ ಪ್ರಭೇದಗಳಿವೆ. ಈಗ ನಮ್ಮ ನೀರನ್ನು ಪ್ರವೇಶಿಸಿರುವ ಗಂಬೂಸಿಯ ಮತ್ತು ಪೋಸಿಲಿಯ ಮೀನುಗಳು ಇದೇ ಗುಂಪಿಗೆ ಸೇರಿವೆ. ಒಟ್ಟಿನಲ್ಲಿ ಸೊಳ್ಳೆಗಳ ಕಾಟ ಕಡಿಮೆ ಮಾಡಲು ಬಂದ ಮೀನುಗಳೀಗ ಸರ್ಕಾರದ ನೆಮ್ಮದಿ ಕೆಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.