ಬೆಂಗಳೂರಿನ ಹೊರವಲಯದ ಅಪಾರ್ಟ್‌ಮೆಂಟ್‌ಗೆ ನೆಂಟರೊಬ್ಬರನ್ನು ಭೇಟಿಯಾಗಲು ಇತ್ತೀಚೆಗೆ ಹೋಗಿದ್ದೆ. ಅಲ್ಲಿನ ಇಕ್ಕಟ್ಟಾದ ನೆಲಹರವನ್ನೇ ಮೈದಾನವಾಗಿಸಿಕೊಂಡಿದ್ದ ಮಕ್ಕಳು ಕನ್ನಡವನ್ನಲ್ಲದೆ ತೆಲುಗು, ತಮಿಳು, ಇಂಗ್ಲಿಷ್, ಹಿಂದಿಯಲ್ಲೂ ಮಾತನಾಡುತ್ತ ಆಡಿಕೊಳ್ಳುತ್ತಿದ್ದರು. ಅರೆ! ಹೀಗೂ ಉಂಟೆ ಎಂಬ ನನ್ನ ಅಚ್ಚರಿಯನ್ನು ನೆಂಟರು ಭೇದಿಸಿದ್ದರು.
ಹೇಗೂ ಮಕ್ಕಳಿಗೆ ತಮ್ಮ ತಮ್ಮ ಮನೆಭಾಷೆ ಗೊತ್ತಿರುತ್ತದೆ. ಕುತೂಹಲದಿಂದ ಅವರು ಪರಸ್ಪರ ಆಲಿಸುವುದರಿಂದ ಸರಿಯಾದ ಅರ್ಥ ಮತ್ತು ಉಚ್ಚಾರಣೆಯೊಂದಿಗೆ ಪರಭಾಷೆಯ ಪದಗಳು ಹತ್ತಿರವಾಗುತ್ತವೆ. ‘...ಮಕ್ಕಳಿಗೆ ಅನ್ಯಭಾಷಾ ಮಾಧ್ಯಮ ಉರುಳಾಗಿ ಪರಿಣಮಿಸುತ್ತಿದೆ’ ಎಂದು ಲೇಖಕಿ ಮಧುರಾ ಅಶೋಕ್ ಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ (ಪ್ರ.ವಾ., ನ. 22).
ಮಕ್ಕಳ ಶಿಕ್ಷಣಕ್ಕೆ ಮಾತೃಭಾಷೆಯೇ ಯುಕ್ತ ಮಾಧ್ಯಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಶಾಲಾಪೂರ್ವ ಅವಧಿಯಲ್ಲೇ ದ್ವಿತೀಯ ಭಾಷೆಯನ್ನು ಅವರಿಗೆ ಪರಿಚಯಿಸುವುದು ಉತ್ತಮವೆ. ಮಾತೃಭಾಷೆಯೊಂದಿಗೆ ಮಕ್ಕಳು ಇನ್ನೊಂದು ಭಾಷೆ ಕಲಿತರೆ ಅರಿವಿನ ಬೆಳವಣಿಗೆ ವರ್ಧಿಸುತ್ತದೆ. ಸರಿ-ತಪ್ಪು ವಿಚಾರ ಕೌಶಲಗಳನ್ನು ಅವರು ರೂಢಿಸಿಕೊಳ್ಳುತ್ತಾರೆ, ಅನ್ಯ ಸಂಸ್ಕೃತಿಗಳನ್ನು ಗೌರವಯುತವಾಗಿ ಕಾಣುವ ತೆರೆದ ಮನಸ್ಸಿನವರಾಗುತ್ತಾರೆ. ಮಾತೃಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುವುದೇ ಮಕ್ಕಳಿಗೆ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಒಂದೇನು, ಅದಕ್ಕೂ ಹೆಚ್ಚಿನ ಭಾಷೆಗಳನ್ನು ಏಕಕಾಲದಲ್ಲಿ ಕಲಿಯಲು ಆಕರವಾಗು
ತ್ತದೆ. ದಣಿವು, ತಬ್ಬಿಬ್ಬಿಲ್ಲದೆ ಅವರು ಭಾಷಾ ವೈವಿಧ್ಯಕ್ಕೆ ತೆರೆದುಕೊಳ್ಳುತ್ತಾರೆ, ಬಹುಭಾಷಿಕರಾಗಲು ತಯಾರಾಗುತ್ತಾರೆ. ದ್ವಿತೀಯ ಭಾಷೆ ಕಲಿತರೆ ಅದೇ ಶ್ರದ್ಧೆ ಇನ್ನಷ್ಟು ಭಾಷೆಗಳ ಪರಿಚಯಕ್ಕೆ ಸೋಪಾನವಾಗುತ್ತದೆ. ಎರಡು ಅಥವಾ ಮೂರು ಭಾಷೆಗಳನ್ನು ತಿಳಿದವರು ಶೈಕ್ಷಣಿಕವಾಗಿಯೂ ಯಶಸ್ವಿಯಾಗಬಲ್ಲರು.
ಮಕ್ಕಳು ಪರಭಾಷೆಗಳಿಗೆ ಒಡ್ಡಿಕೊಳ್ಳುವ ಕಾಲ ಪ್ರಮಾಣಕ್ಕಿಂತ ಆ ಸಾಮಗ್ರಿಯ ಸಾಂಸ್ಕೃತಿಕ ಮತ್ತು ಭಾಷಿಕ ದ್ರವ್ಯದ ಗುಣಮಟ್ಟವೇ ಮುಖ್ಯವಾಗುತ್ತದೆ. ಮನುಷ್ಯನ ಮೆದುಳು ಅಗಾಧಕ್ಕಿಂತ ತಾಜಾತನಕ್ಕೆ ಮಹತ್ವ ನೀಡುತ್ತದೆ. ಎಂದಮೇಲೆ, ತರಗತಿಯಲ್ಲಿನ ತನ್ಮಯತೆಗೂ ಮೀರಿ ಅದರಾಚೆಗಿನ ಗ್ರಹಣಶೀಲತೆ ಮೆರೆಯಬೇಕಿದೆ. ‘ಅನ್ಯಭಾಷೆ’ ಎಂದು ಹೇಳುವಾಗಲೇ ನಮಗರಿವಿಲ್ಲದಂತೆ ಮಾತೃಭಾಷೆಗೆ ಹೊರತಾದ ಭಾಷೆಯೊಂದರ ಆವಾಹನೆಯತ್ತ ಹೊರಟಿರುತ್ತೇವೆ. ಹಾಗಾಗಿ, ಅನ್ಯಭಾಷೆ ಬೇರೆ ಯಾವುದೂ ಅಲ್ಲ, ನಮ್ಮ ಮನೆಯ ಅಂಗಳದಲ್ಲಿ ಆಡುವ, ನಾವು ಮುದ್ದಿಸಬಹುದಾದ ನೆರೆಮನೆಯ ಕೂಸು.
ಮಕ್ಕಳು ಒಂದೇ ಒಂದು ಭಾಷೆಯನ್ನು ಕಲಿಯುವಂತೆ ಅವರ ಮೆದುಳಿನ ರಚನೆಯಾಗಿಲ್ಲ. ಪ್ರಕೃತಿಯು ಬಹುಭಾಷಿಕರಾಗಲು ಉತ್ತೇಜಿಸು ತ್ತದೆ. ಇಟಲಿಯ ಸರ್ಬಿಯಾ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕಿ ಅಲೆಸ್ಸಾಂಡ್ರಾ ವಿಸೆಂಟ್ನಿ ‘ಮಕ್ಕಳು ಕನಿಷ್ಠ ಪರಿಶ್ರಮದಿಂದ ಗರಿಷ್ಠ ಫಲ ಪಡೆಯಲು ಹವಣಿಸುತ್ತಾರೆ. ಭಾಷೆ ಕಲಿಯುವಲ್ಲಿ ಮಕ್ಕಳು ಮಿತವ್ಯಯಿಗಳು. ಏಕೆಂದರೆ ನಿರಾಯಾಸವಾಗಿ ಅವರು ಗರಿಷ್ಠ ಫಲ ಬಯಸುತ್ತಾರೆ’ ಎನ್ನುತ್ತಾರೆ. ಇನ್ನು ನಮ್ಮ ಇತಿಮಿತಿಯಲ್ಲಿ ಅಷ್ಟೊಇಷ್ಟೊ ವಿದೇಶಿ ಭಾಷೆಗಳನ್ನು ತಿಳಿದರಂತೂ ನಮ್ಮ ಪಾಲಿಗೆ ವಿಶ್ವದ ನೋಟವೇ ಬದಲಾಗುತ್ತದೆ. ಔದಾರ್ಯ, ಹೊಂದಾಣಿಕೆ ಮತ್ತು ಸಹಿಷ್ಣುತೆಗೆ ಮಾರ್ಗವಾಗುತ್ತದೆ. ಅಪನಂಬಿಕೆಯಿಲ್ಲದೆ ನಿರ್ಭಯವಾಗಿ ಉಲ್ಲಸಿತ ಪ್ರವಾಸ ಕೈಗೆಟಕುತ್ತದೆ.
ಶತಮಾನಗಳ ಹಿಂದೆ ಭಾರತಕ್ಕೆ ಬಂದ ವಿದೇಶಿಯರ ಉದ್ದೇಶವು ಪ್ರವಾಸವೊ, ವ್ಯಾಪಾರವೊ, ಆಕ್ರಮಣವೊ ಹೇಗೂ ಇರಲಿ. ಅವರಿಗೆಲ್ಲ ಭಾರತೀಯ ಭಾಷೆಗಳು ಅಡ್ಡಿಯಾಗಲಿಲ್ಲ. ಅವರು ತಮ್ಮ ದೇಶದಲ್ಲೇ ತರಬೇತಿ ಪಡೆದ ಬಹುಭಾಷಾ ದೂತರಾಗಿದ್ದರು ಎನ್ನೋಣವೇ? ಈಸ್ಟ್ ಇಂಡಿಯಾ ಕಂಪನಿಯಲ್ಲಿ, ಸ್ಥಳೀಯ ಭಾಷೆ ತಕ್ಕಮಟ್ಟಿಗೆ ತಿಳಿದವರೇ ಉದ್ಯೋಗಿ ಗಳಾಗಿದ್ದರು.
ಜರ್ಮನಿ ಸಂಜಾತರಾದರೂ ಭಾರತಕ್ಕೆ ಬಂದ ಮೊದಲ ಇಪ್ಪತ್ತು ವರ್ಷಗಳಲ್ಲಿ ಕನ್ನಡ, ಸಂಸ್ಕೃತ, ಮರಾಠಿ, ತಮಿಳು ಕಲಿತ ಧೀಮಂತ ಫರ್ಡಿನಾಂಡ್ ಕಿಟೆಲ್. ಕರ್ನಾಟಕದಾದ್ಯಂತ ಸಂಚರಿಸಿ ಮೊದಲ ‘ಕನ್ನಡ- ಇಂಗ್ಲಿಷ್’ ನಿಘಂಟನ್ನು ಕನ್ನಡಿಗರ ಕೈಗಿತ್ತ ಅವರದು ಸಾಧನೆಯೊ? ಪವಾಡವೊ? ಅವರು ಧಾರವಾಡ, ಹುಬ್ಬಳ್ಳಿ, ಮಂಗಳೂರು, ಮಡಿಕೇರಿಯನ್ನು ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡರು. ಈ ಶಬ್ದಸಂತ ಕುದುರೆಯೇರಿ ಸಂತೆಗೆ ಹೊರಡುತ್ತಿದ್ದರು. ಅಲ್ಲಿನ ವರ್ತಕರಿಗೆ ಕನ್ನಡದ ಪದಗಳಿಗೆ ಇಂಗ್ಲಿಷಿನಲ್ಲಿ, ಇಂಗ್ಲಿಷಿನ ಪದಗಳಿಗೆ ಕನ್ನಡದಲ್ಲಿ ಸಮಾನ ಪದಗಳನ್ನು ಹೇಳುವಂತೆ ಕಾಡಿಬೇಡುತ್ತಿದ್ದರು. ಇಂಗ್ಲಿಷ್ ತನ್ನ ಭಾಷೆಯೂ ಅಲ್ಲ, ಅದು ಕನ್ನಡಿಗರದೂ ಅಲ್ಲ. ಅದನ್ನು ಕಟ್ಟಿಕೊಂಡು ತನಗೇನಾಗಬೇಕೆಂದು ಅವರು
ತೆಪ್ಪಗಿದ್ದಿದ್ದರೆ ನಮ್ಮ ಗ್ರಂಥಾಲಯಗಳಿಗೆ ಅನಾಥಪ್ರಜ್ಞೆ ಕಾಡುತ್ತಿತ್ತು. ಅಲ್ಲದೆ ಕೇಶಿರಾಜನ ‘ಶಬ್ದಮಣಿ ದರ್ಪಣ’ ವ್ಯಾಕರಣ ಕೃತಿಯನ್ನು ಇಂಗ್ಲಿಷ್ ವ್ಯಾಖ್ಯಾನಸಮೇತ ಕಿಟೆಲ್ ಸಂಪಾದಿಸಿದರು. ಅಂದಿನ ಮದ್ರಾಸು ಸರ್ಕಾರದ ಕೋರಿಕೆಯಂತೆ ಅವರು ಕನ್ನಡ ಪದ್ಯ ಗಳು, ಕರ್ನಾಟಕ ಸಂಗೀತ ಕುರಿತ ಕಿರುಹೊತ್ತಿಗೆಗಳು ಹಾಗೂ ಶಾಲಾ ಪಠ್ಯಪುಸ್ತಕಗಳನ್ನು ಬರೆದು
ಕೊಟ್ಟರು. ಬ್ರಿಟನ್ನಿನಿಂದ ಬಂದ ಎಡ್ವರ್ಡ್ ಪಿ. ರೈಸ್ ಬೆಂಗಳೂರು ಮತ್ತು ಚಿಕ್ಕಬಳ್ಳಾಪುರದ ಮಿಷನರಿ
ಗಳಲ್ಲಿ ಕ್ರೈಸ್ತ ಧರ್ಮಪ್ರಚಾರಕರಾಗಿದ್ದರು. 1921ರಲ್ಲಿ ‘ಎ ಹಿಸ್ಟರಿ ಆಫ್ ಕೆನರೀಸ್ ಲಿಟ್ರೇಚರ್’ ಎಂಬ ಕೃತಿ ರಚಿಸಿದರು. ಇದು ಡಿಜಿಟಲೀಕರಣಗೊಂಡಿದ್ದು, ಉಪಯುಕ್ತ ಪರಾಮರ್ಶನ ಗ್ರಂಥವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.