ADVERTISEMENT

ಸಂಗತ: ಸಲ್ಲದ ಹೋಲಿಕೆ ಮಾಡುವುದೇಕೆ?

ರಾಜಕುಮಾರ ಕುಲಕರ್ಣಿ
Published 3 ಏಪ್ರಿಲ್ 2024, 23:52 IST
Last Updated 3 ಏಪ್ರಿಲ್ 2024, 23:52 IST
   

ಸಮಾರಂಭವೊಂದರಲ್ಲಿ ಭೇಟಿಯಾದ ಸ್ನೇಹಿತರೊಬ್ಬರು ತುಂಬ ವ್ಯಥೆಯಲ್ಲಿರುವಂತೆ ತೋರಿತು. ದಾಯಾದಿಗಳು ಹೊಸ ಮನೆ ಕಟ್ಟಿಸಿದ್ದು, ಸಂಬಂಧಿಕರ ಮಗನಿಗೆ ಅಮೆರಿಕದಲ್ಲಿ ನೌಕರಿ ಸಿಕ್ಕಿದ್ದು, ಸಹೋದ್ಯೋಗಿಗೆ ಕೆಲಸದಲ್ಲಿ ಬಡ್ತಿ, ಪಕ್ಕದ ಮನೆಯವರು ಕಾರು ಕೊಂಡಿದ್ದು ಹೀಗೆ ಮಾತಿನುದ್ದಕ್ಕೂ ಬೇರೆಯವರ ಪ್ರಗತಿ ವಿವರಿಸುತ್ತ, ತಮ್ಮಿಂದ ಇದೆಲ್ಲ ಸಾಧ್ಯವಾಗುತ್ತಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದರು.

ನನಗೆ ತಿಳಿದಿರುವಂತೆ, ನನ್ನ ಸ್ನೇಹಿತರದು ಅನುಕೂಲಸ್ಥ ಕುಟುಂಬ. ಸರ್ಕಾರಿ ಉದ್ಯೋಗದಲ್ಲಿದ್ದು
ಕೈತುಂಬ ಸಂಬಳ ಪಡೆಯುತ್ತಿದ್ದಾರೆ. ಹೀಗಿದ್ದೂ ಬೇರೆಯವರ ಬದುಕಿನೊಂದಿಗೆ ತಮ್ಮ ಬದುಕನ್ನು ಹೋಲಿಸಿ ವ್ಯಥೆಪಟ್ಟುಕೊಳ್ಳುವ ಖಯಾಲಿ ಅವರಿಗೆ ಚಟದಂತೆ ಅಂಟಿಕೊಂಡಿದೆ. ಉಂಡರೂ ಹಸಿವು, ಉಟ್ಟರೂ ಬೆತ್ತಲೆ ಎನ್ನುವಂಥ ಮನಃಸ್ಥಿತಿಯಿಂದ ಬದುಕಿನ ಸಂತೋಷದ ಕ್ಷಣಗಳನ್ನು ಅನುಭವಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ‘ಹುಲಿ ಮೈಬಣ್ಣ ನೋಡಿ ನರಿ ಮೈ ಸುಟಗೊಂಡಿತ್ತಂತ’ ಎಂಬ ಮಾತು ಜನಪದದಲ್ಲಿ ಚಾಲ್ತಿಯಲ್ಲಿದೆ. ಹುಲಿಯ ಮೈ ಬಣ್ಣಕ್ಕೆ ಮರುಳಾದ ನರಿಯೊಂದು ತಾನೂ ಅದರಂತಾಗಲು ಮೈಯನ್ನು ಸುಟ್ಟುಕೊಂಡು ಜೀವವನ್ನೇ ಬಲಿಕೊಟ್ಟ ಕಾಲ್ಪನಿಕ ಪ್ರಸಂಗವನ್ನು ಈ ಹೇಳಿಕೆ ಅರ್ಥೈಸುತ್ತದೆ.

ಸಾಮಾಜಿಕ ಬದುಕಿನಲ್ಲಿ ಮನುಷ್ಯ ಮನುಷ್ಯರ ನಡುವೆ ಭೌತಿಕವಾಗಿ ಮತ್ತು ಬೌದ್ಧಿಕವಾಗಿ ಅನೇಕ ರೀತಿಯ ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳನ್ನು ವೈವಿಧ್ಯಗಳೆಂದು ಭಾವಿಸಿ ಮನುಷ್ಯ ಮುನ್ನಡೆದರೆ ಅವನ ಪಯಣದ ಪಥದಲ್ಲಿ ಯಾವ ಆತಂಕಗಳಾಗಲೀ ವಿರೋಧಾಭಾಸಗಳಾಗಲೀ ಎದುರಾಗಲಾರವು. ದುರಂತವಿರುವುದು ಮನುಷ್ಯನು ವ್ಯತ್ಯಾಸಗಳನ್ನು ವೈವಿಧ್ಯಗಳೆಂದು ನೋಡದೆ ಸಂಕಷ್ಟಗಳೆಂದು ಭಾವಿಸುವುದರಲ್ಲಿದೆ. ಪರಿಣಾಮವಾಗಿ, ಮನುಷ್ಯ ಇನ್ನೊಬ್ಬರ ಬದುಕಿನೊಂದಿಗೆ ತನ್ನ ಬದುಕನ್ನು ಹೋಲಿಸಿಕೊಂಡು ಬದುಕನ್ನು ನರಕಗೊಳಿಸಿಕೊಳ್ಳುತ್ತಾನೆ. ಮನುಷ್ಯನ ಈ ಸ್ವಭಾವವನ್ನು ನೋಡಿಯೇ ಡಿವಿಜಿ ‘ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು‌‌| ಹರುಷಕದೆ ದಾರಿಯೆಲೊ ಮಂಕುತಿಮ್ಮ’ ಎಂದಿರುವರು.

ADVERTISEMENT

ಇತ್ತೀಚೆಗೆ ಮದುವೆ ಮನೆಯಲ್ಲಿ ತಾಯಂದಿರಿಬ್ಬರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕುರಿತು ಬಂಧುಗಳೊಡನೆ ಮಾತನಾಡುತ್ತಿದ್ದಾಗ, ಪರಸ್ಪರ ಸ್ಪರ್ಧೆಗೆ ಇಳಿದಿರುವಂತೆ ಭಾಸವಾಗುತ್ತಿತ್ತು. ಸಂತೋಷದಿಂದ ಆಟವಾಡಿಕೊಂಡಿದ್ದ ಮಕ್ಕಳಿಬ್ಬರನ್ನೂ ಕರೆದು ಅವರ ಪ್ರತಿಭೆಯನ್ನು ಅಲ್ಲಿ ನೆರೆದಿದ್ದವರೆದುರು ಬಲವಂತವಾಗಿ ಪ್ರದರ್ಶಿಸಲಾಯಿತು. ಸಹಜವೆನ್ನುವಂತೆ ಒಂದು ಮಗುವಿನ ಶೈಕ್ಷಣಿಕ ಪ್ರಗತಿಯು ಇನ್ನೊಂದು ಮಗುವಿನ ಪ್ರಗತಿಗಿಂತ ಒಂದಿಷ್ಟು ಹಿಂದಿತ್ತು. ಇದು ಆ ಮಗುವಿನ ತಾಯಿಗೆ ನಿರೀಕ್ಷಿಸಲಾಗದ ಸೋಲಿನಂತೆ ಭಾಸವಾಯಿತು. ವಾಚಾಮಗೋಚರವಾಗಿ ಬೈಯುತ್ತ ತನಗೆ ಬಂಧುಗಳೆದುರು ಅಪಮಾನವಾಯಿತೆಂದು ಮದುವೆ ಮನೆಯಲ್ಲೇ ಮಗುವನ್ನು ದೈಹಿಕವಾಗಿ ಶಿಕ್ಷಿಸಿದಳು. ಇದರಿಂದ, ಅದುವರೆಗೂ ಸಂಭ್ರಮದಿಂದ ಕೂಡಿದ್ದ ವಾತಾವರಣಕ್ಕೆ ಸೂತಕದ ಕಳೆ ಆವರಿಸಿದಂತಾಯಿತು.

ಮಕ್ಕಳ ಆಟ, ಪಾಠ, ಶಾಲೆ, ವೃತ್ತಿ ಹೀಗೆ ಪ್ರತಿಯೊಂದು ಹಂತದಲ್ಲಿ ಪಾಲಕರು ಬೇರೆಯವರೊಂದಿಗೆ ಹೋಲಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಬೇರೆಯವರ ನಿರ್ಧಾರಗಳ ಪ್ರಭಾವಕ್ಕೆ ಒಳಗಾಗುತ್ತಾರೆ. ದಾಯಾದಿಗಳು, ನೆರೆಹೊರೆಯವರು, ಬಂಧುಗಳು, ಪರಿಚಿತರ ಮಕ್ಕಳು ಏನನ್ನು ಕಲಿಯುತ್ತಿದ್ದಾರೆ ಎಂದು ಗಮನಿಸಿ ಅದನ್ನೇ ತಮ್ಮ ಮಕ್ಕಳಿಗೂ ಒದಗಿಸಲು ಮುಂದಾಗುತ್ತಾರೆ. ತಮಗೆ ಇಷ್ಟವಿರಲಿ ಇಲ್ಲದಿರಲಿ ಪಾಲಕರ ಆಸೆಯನ್ನು ಪೂರೈಸಲು ಮಕ್ಕಳು ತಮ್ಮ ಆಸಕ್ತಿಯನ್ನು ಬಲಿ ಕೊಡಬೇಕು. ಪಾಲಕರು ಅಪೇಕ್ಷಿಸಿದಂತೆ ಶೈಕ್ಷಣಿಕವಾಗಿ ಹೆಚ್ಚಿನದನ್ನು ಸಾಧಿಸಲು ವಿಫಲರಾಗುವ ಮಕ್ಕಳ ಬದುಕು ಕೆಲವೊಮ್ಮೆ ತೀವ್ರ ಸಂಕಷ್ಟದಲ್ಲಿ ಪರ್ಯವಸಾನಗೊಳ್ಳುವುದು ಸಾಮಾನ್ಯವಾಗಿದೆ.

ಕವಿ ಕೆ.ಎಸ್.ನರಸಿಂಹಸ್ವಾಮಿ ತಮ್ಮ ಕಾವ್ಯವನ್ನು ಅಡಿಗರ ಕಾವ್ಯದೊಂದಿಗೆ ಹೋಲಿಸಿ ಹೀಗೆ ಹೇಳಿರುವರು- ‘ಅಡಿಗರು ಒಮ್ಮೆ ಹೇಳಿದರು ನನ್ನ ಅನುಭವ ತೆಳುವೆಂದು, ಒಪ್ಪುತ್ತೇನೆ. ಅವರ ದನಿ ಯಕ್ಷಗಾನದ ರೀತಿ, ನನ್ನ ದನಿ ತಂಪಾದ ಸಂಜೆಯಲಿ ಗೆಳೆಯರಿಬ್ಬರು ಕೂತು ಎತ್ತರಕ್ಕೇರದೆಯೇ ಮಾತನಾಡುವ ರೀತಿ’. ಹೀಗೆ ಹೇಳುವುದರ ಮೂಲಕ ಹೋಲಿಕೆ ನಗಣ್ಯ ಎನ್ನುವ ನಿರ್ಧಾರಕ್ಕೆ ಕವಿ ಬಂದಂತಿದೆ. ತನ್ನತನವನ್ನು ಬಿಟ್ಟುಕೊಡದ ಕಠಿಣ ನಿಲುವು ಈ ಮಾತಿನಲ್ಲಿ ವ್ಯಕ್ತವಾಗುತ್ತದೆ.

ಪರಿಸರದಲ್ಲಿ ಮನುಷ್ಯನೊಬ್ಬನನ್ನು ಹೊರತುಪಡಿಸಿ ಬೇರೆ ಯಾವ ಪ್ರಾಣಿ, ಪಕ್ಷಿ, ಮರಗಿಡಗಳೂ ಒಂದು ಇನ್ನೊಂದನ್ನು ಹೋಲಿಸಿಕೊಂಡು ಸ್ಪರ್ಧೆಗೆ ಇಳಿಯಲಾರವು. ಯಶವಂತ ಚಿತ್ತಾಲರ ಕಥೆಯಲ್ಲಿ ಹೀಗೊಂದು ಮಾತಿದೆ-‘ಸೃಷ್ಟಿಯೊಳಗಿನ ಪ್ರತಿಯೊಂದು ಜೀವಸಂಗತಿ ಉಳಿದೆಲ್ಲ ಜೀವಸಂಗತಿಗಳೊಡನೆ ನಿಶ್ಶಬ್ದ ಮೌನದಲ್ಲಿ ಸಂವಾದ ನಡೆಸಿರುವಂಥದ್ದು- ಹುಟ್ಟುವಂತೆ, ಬೆಳೆಯುವಂತೆ, ಆರೋಗ್ಯ ಕಾಪಾಡಿ
ಕೊಳ್ಳುವಂತೆ ಒಂದು ಇನ್ನೊಂದರ ಜೀವನೋತ್ಸಾಹವನ್ನು ಎತ್ತಿಹಿಡಿಯುವಂತೆ ಸತತ ಕ್ರಿಯೆಯಲ್ಲಿ
ತೊಡಗಿಸಿಕೊಂಡಿರುವಂಥದ್ದು ಎಂಬ ಕಲ್ಪನೆಗೆ ಮೈನವಿರಿಗೊಳಗಾಯಿತು. ಮನುಷ್ಯ ಮಾತ್ರ ಈ ಕ್ರಿಯೆಗೆ ಹೇಗೆ ಹೊರತಾದನೋ ಎಂದು ದಿಗಿಲುಗೊಂಡೆ’.

ಈ ಆತಂಕ ನಮ್ಮೆಲ್ಲರ ಆತಂಕವಾಗಬೇಕು. ವಿವೇಚನಾಶಕ್ತಿ ಇರುವ ಮನುಷ್ಯನ ಬದುಕು ಹೋಲಿಕೆಯಿಂದ ನರಕವಾಗಬಾರದು. ಈ ವಿಷಯದಲ್ಲಿ ಮನುಷ್ಯನು ಪರಿಸರದಲ್ಲಿರುವ ಉಳಿದೆಲ್ಲ ಜೀವಸಂಗತಿ
ಗಳಿಂದ ಪಾಠ ಕಲಿಯಬೇಕಾದದ್ದು ಬಹಳಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.