ಮತ್ತೊಂದು ವ್ಯಾಲೆಂಟೈನ್ಸ್ ಡೇ (ಫೆ. 14) ಬಂದಿದೆ. ಜಗತ್ತಿನಾದ್ಯಂತ ಅಸಂಖ್ಯ ಜನ ಈ ದಿನವನ್ನು ತಮ್ಮದೇ ರೀತಿಯಲ್ಲಿ ಆಚರಿಸುತ್ತಾರೆ. ಅಷ್ಟಾದರೂ ಈ ದಿನ ಮುಗಿದ ನಂತರ ‘ನಿಜಕ್ಕೂ ಪ್ರೀತಿ ಎಂದರೇನು’ ಎನ್ನುವ ಪ್ರಶ್ನೆ ಮಾತ್ರ ಹಾಗೇ ಉಳಿದುಬಿಡುತ್ತದೆ. ಸಂಗಾತಿಗಳ ನಡುವಿನ ಪ್ರೀತಿಯೇ ಇರಲಿ, ಪೋಷಕರು ಹಾಗೂ ಮಕ್ಕಳ ನಡುವಿನ ಪ್ರೀತಿಯೇ ಇರಲಿ, ಯಾವ ಸಂಬಂಧವೇ ಆಗಲಿ ಪ್ರೀತಿಯ ನಿರ್ದಿಷ್ಟ ವ್ಯಾಖ್ಯಾನ ಬಹಳ ಕಷ್ಟ.
ಗ್ಯಾರಿ ಚಾಪ್ಮನ್ ಎನ್ನುವ ಲೇಖಕ ‘ದಿ ಫೈವ್ ಲವ್ ಲ್ಯಾಂಗ್ವೇಜಸ್’ ಎನ್ನುವ ಪುಸ್ತಕದಲ್ಲಿ ಪ್ರೀತಿ ಹಾಗೂ ಅದನ್ನು ವ್ಯಕ್ತಪಡಿಸುವ ರೀತಿಗಳ ಬಗ್ಗೆ ಬರೆದಿದ್ದಾನೆ. ಪ್ರತಿ ವ್ಯಕ್ತಿಯೂ ಪ್ರೀತಿಯನ್ನು ಭಾವಿಸುವ ರೀತಿ ವಿಭಿನ್ನವಾಗಿರುತ್ತದೆ. ಕೆಲವರಿಗೆ ತಾವು ಪ್ರೀತಿಸುವ ವ್ಯಕ್ತಿ ತಮಗೆ ಉಡುಗೊರೆಗಳನ್ನು ನೀಡುವುದೇ ಪ್ರೀತಿ ಅನ್ನಿಸಬಹುದು. ಕೆಲವರಿಗೆ ಎಷ್ಟೇ ಉಡುಗೊರೆಗಳನ್ನು ತಂದು ಸುರಿದರೂ ಪ್ರೀತಿಯ ಭಾವನೆ ಬರದೇ ಹೋಗಬಹುದು. ಒಂದು ಮೆಚ್ಚುಗೆಯ ಮಾತು ದೊರೆತಾಗ, ತನ್ನೊಂದಿಗೆ ಗುಣಮಟ್ಟದ ಸಮಯ ಕಳೆದಾಗ ಸಂಗಾತಿಯ ಬಗ್ಗೆ ಪ್ರೀತಿ ಹೆಚ್ಚಾಗಿ, ತಾವು ಪ್ರೀತಿಸಲ್ಪಡುತ್ತಿದ್ದೇವೆ ಎನ್ನುವ ಭಾವನೆ ಮೂಡಬಹುದು. ಹೀಗೆ ಪ್ರೀತಿಯ ವಿವಿಧ ಆಯಾಮಗಳ ಬಗ್ಗೆ ಚರ್ಚಿಸುತ್ತಾರೆ ಗ್ಯಾರಿ ಚಾಪ್ಮನ್. ಇಲ್ಲಿ ಉಡುಗೊರೆಗಳನ್ನು ಬಯಸುವುದು ನಿಜವಾದ ಪ್ರೀತಿಯಲ್ಲವೆಂದು, ದುರಾಸೆಯೆಂದು ಬಗೆಯುವುದು ಪೂರ್ವಗ್ರಹಪೀಡಿತ ಯೋಚನೆಯಾಗುತ್ತದೆ. ಪ್ರೇಮಿ ಬಯಸಿದ್ದನ್ನು ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದನ್ನು ಪ್ರೀತಿ ಎನ್ನಬಹುದೇ?
ಪ್ರೀತಿಯಲ್ಲಿ ನಿರೀಕ್ಷೆಗಳಿರುವುದು ಸಹಜ. ಮಕ್ಕಳು ಚೆನ್ನಾಗಿ ಓದಲಿ ಎಂಬ ಪೋಷಕರ ನಿರೀಕ್ಷೆ, ಸಂಗಾತಿಗಳ ನಡುವಿನ ಪರಸ್ಪರ ನಿರೀಕ್ಷೆಗಳು ಅತ್ಯಂತ ಸಹಜ. ನಮ್ಮನ್ನು ಪ್ರೀತಿಸುವವರು ಬಯಸುವಂತೆ ಬದುಕಲು ಪ್ರಯತ್ನಿಸುವುದನ್ನು ಪ್ರೀತಿ ಅನ್ನೋಣವೇ? ಆದರೆ ಇದು ಎರಡು ಅಲಗಿನ ಕತ್ತಿಯಂತೆ. ಪ್ರೀತಿಸುವವರನ್ನು ನಿಯಂತ್ರಿಸಲು ಪ್ರಯತ್ನಿಸುವುದು, ತಮ್ಮ ತಾಳಕ್ಕೆ ತಕ್ಕಂತೆ ಕುಣಿದರೆ ಮಾತ್ರ ಪ್ರೀತಿ ಉಂಟು ಎಂದು ವಾದ ಮಾಡುವುದು ಪ್ರೀತಿಯೋ ಅಥವಾ ವಿಷಮಯ ಮನಃಸ್ಥಿತಿಯೋ?
ತನ್ನ ಸಂಗಾತಿ ಮಾತಿನ ಮೂಲಕ, ಉಡುಗೊರೆಗಳ ಮೂಲಕ ಎಷ್ಟೇ ಪ್ರೀತಿ ತೋರಿಸಲಿ ಹುಡುಗಿಗೆ ಸಂಪೂರ್ಣವಾಗಿ ಪ್ರೀತಿಸಲ್ಪಡುತ್ತಿರುವ ಭಾವ ಬರದೇ ಹೋಗಬಹುದು. ಒಟ್ಟಿಗೆ ಬದುಕುತ್ತಿರುವಾಗ ಸಂಗಾತಿ ಮನೆಗೆಲಸಗಳನ್ನು ಹಂಚಿಕೊಂಡು ಮಾಡಿದರೆ, ತನ್ನ ಹೊರೆಯನ್ನು ಕಡಿಮೆ ಮಾಡಿದರೆ ಅದು ಅವಳಿಗೆ ಉಡುಗೊರೆಗಿಂತಲೂ ಹೆಚ್ಚು ಆಪ್ಯಾಯಮಾನ ಅನ್ನಿಸಿ, ಪ್ರೀತಿಸಲ್ಪಡುತ್ತಿರುವ ಭಾವ ಬರಬಹುದು. ಇದು ಆಕೆಯ ಪ್ರೀತಿಯ ಭಾಷೆ. ಆ ಭಾಷೆಯನ್ನು ಅರ್ಥ ಮಾಡಿಕೊಂಡು ಸಂಗಾತಿಗೆ ಅರ್ಥವಾಗುವ ಪ್ರೀತಿಯ ಭಾಷೆಯ ಭಾವ ನೀಡುವುದು ಎಷ್ಟು ಹಿತ ಅಲ್ಲವೇ!
ಪ್ರೀತಿಸುವವರನ್ನು ಬದಲಾಯಿಸಲು ಪ್ರಯತ್ನಿಸುವುದು ಪ್ರೀತಿಯ ಒಂದು ಅಭಿವ್ಯಕ್ತಿಯೋ ಅಥವಾ ಅದನ್ನು ಭಾವನಾತ್ಮಕ ಬ್ಲ್ಯಾಕ್‍ಮೇಲ್ ಅನ್ನಬಹುದೋ? ಪ್ರೀತಿಸುವವರು ಬಯಸಿದಂತೆ ನಾವು ಬದಲಾಗಿ ಅದು ಅವರಿಗೆ ಹೆಚ್ಚು ಆಪ್ತ ಭಾವ ತಂದುಕೊಟ್ಟರೆ ಹಾಗೂ ಪ್ರೀತಿಯ ಭಾಷೆ ಹೆಚ್ಚು ಸ್ಪಷ್ಟವಾದರೆ ಎಲ್ಲ ಸರಾಗವಲ್ಲವೇ? ಇದು ಬರೀ ಸಂಗಾತಿಗಳ ನಡುವಿನ ಪ್ರೀತಿಗೇ ಅನ್ವಯವಾಗಬೇಕೆಂದೇನಿಲ್ಲ. ತಮ್ಮ ಮಗುವಿಗೆ ತಾವು ಎಲ್ಲ ಸೌಲಭ್ಯಗಳನ್ನು ನೀಡುತ್ತಿದ್ದರೂ ಅದು ತಮ್ಮ ಮಾತು ಕೇಳುತ್ತಿಲ್ಲ ಎಂದು ಅನೇಕ ಪೋಷಕರು ಕೊರಗುತ್ತಾರೆ. ಆದರೆ ಆ ಮಗು ಬಯಸುವ ಹಾಗೂ ಅದಕ್ಕೆ ಅರ್ಥವಾಗುವ ಪ್ರೀತಿಯ ಭಾಷೆ ಯಾವುದು ಎನ್ನುವ ಬಗ್ಗೆ ಪೋಷಕರು ಯೋಚಿಸಿದ್ದಾರೆಯೇ? ಮಗುವಿಗೆ ಸಮಯ ನೀಡುವುದು, ಮೆಚ್ಚುಗೆಯ ಮಾತುಗಳನ್ನಾಡುವುದು ಆ ಮಗುವಿಗೆ ಬೇಕಾದ ಪ್ರೀತಿಯ ಭಾಷೆ ಆಗಿರಬಹುದು ಅಲ್ಲವೇ?
ಪ್ರೀತಿ ಮಧುರ ಎನ್ನುತ್ತಾರೆ. ಒಲವೇ ಜೀವನ ಸಾಕ್ಷಾತ್ಕಾರ ಎನ್ನುವ ಹಾಡೇ ಇದೆ. ಆದರೆ ಅನಾದಿ ಕಾಲದಿಂದಲೂ ಪ್ರೀತಿಗೆ ಜಾತಿ, ಧರ್ಮಗಳ ಗೋಡೆ ಅಡ್ಡಿಯಾಗುತ್ತಲೇ ಬಂದಿದೆ. ಇಂತಹ ಸಾಮಾಜಿಕ ಕಟ್ಟಲೆಗಳು ಹೊಂದಿಕೆಯಾದರೆ ಮಾತ್ರ ಪ್ರೀತಿ ಮಧುರ, ಇಲ್ಲದಿದ್ದರೆ ಪ್ರೀತಿಸಿದವರ ಪಾಲಿಗೆ ಪ್ರೀತಿಯೇ ಭಯಂಕರವಾದ ಹತ್ತು ಹಲವು ಉದಾಹರಣೆಗಳಿವೆ.
ನಮ್ಮ ಒಲವಿನ ಕವಿ ಕೆ.ಎಸ್.ನರಸಿಂಹಸ್ವಾಮಿ ‘ಒಂದು ಹೆಣ್ಣಿಗೊಂದು ಗಂಡು ಹೇಗೊ ಸೇರಿ ಹೊಂದಿಕೊಂಡು... ದುಃಖ ಹಗುರವೆನುತಿರೆ, ಪ್ರೇಮವೆನಲು ಹಾಸ್ಯವೇ’ ಎಂದು ಬರೆದಿದ್ದಾರೆ. ಇದು ‘ಓಲ್ಡ್ ಸ್ಕೂಲ್ ಪ್ರೀತಿ’ ಎಂದು ಕೆಲವರಿಗೆ ಅನ್ನಿಸಬಹುದು. ಆದರೆ ಇಂದಿಗೂ ಇದು ಪ್ರಸ್ತುತವಾಗಿದೆ ಹಾಗೂ ಹಲವರ ಬದುಕಿನ ದಾರಿದೀಪವೂ ಆಗಿದೆ. ಕೆಲವರಿಗೆ ಮದುವೆ ಎನ್ನುವ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದಿರಬಹುದು ಹಾಗೂ ಸಾಂಪ್ರದಾಯಿಕ ಎನ್ನಬಹುದಾದ ಪ್ರೀತಿಯ ರೀತಿ ರಿವಾಜುಗಳು ಅಪ್ರಸ್ತುತ ಅನ್ನಿಸಬಹುದು. ‘ಅವರವರ ಭಾವಕ್ಕೆ, ಅವರವರ ಭಕುತಿಗೆ’ ಎನ್ನುವಂತೆ ಚಿಂತನೆಯ ವಿವಿಧ ಹರಿವುಗಳನ್ನು ಕುತೂಹಲದಿಂದ ನೋಡಬೇಕೇ ವಿನಾ ಭಿನ್ನ ಚಿಂತನೆಯೆಡೆ ಅಸಹನೆ ಬೆಳೆಸಿಕೊಳ್ಳುವುದು ತರವಲ್ಲ.
ಪ್ರೀತಿಯ ಬಗ್ಗೆ ಇಷ್ಟೆಲ್ಲಾ ಚಿಂತನ– ಮಂಥನ ನಡೆಸಿದ ಬಳಿಕ ಕೊನೆಗೂ ಪ್ರೀತಿ ಎಂದರೇನು ಎನ್ನುವುದರ ಸ್ಪಷ್ಟ ವ್ಯಾಖ್ಯಾನ ಸಾಧ್ಯವಿಲ್ಲವೇನೊ. ಆದರೂ ನೋವಿರುವ ಹಲ್ಲಿನೆಡೆಗೆ ನಾಲಿಗೆ ಹೊರಳುವಂತೆ ಮನುಷ್ಯ ಮತ್ತೆ ಮತ್ತೆ ಪ್ರೀತಿಯೆಡೆಗೆ ಹೊರಳುವುದು ಅನಿವಾರ್ಯ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.