‘ಪುಸ್ತಕಕ್ಕೂ ಒಂದು ದಿನವಿರುವುದು ಮಹತ್ವದ ಸಂಗತಿ. ಜನರಲ್ಲಿ ಈಗೀಗ ಪುಸ್ತಕಗಳ ಓದಿನ ಅಭಿರುಚಿ ಕ್ಷೀಣಿಸುತ್ತಿದೆ. ಮೊಬೈಲ್ ಫೋನ್ ಬಳಕೆಯಿಂದ ಯುವಜನ ಮಾತ್ರವಲ್ಲ ಎಲ್ಲ ವಯೋಮಾನದ ಓದುಗರೂ ಪುಸ್ತಕಗಳ ಓದಿನಿಂದ ವಿಮುಖರಾಗುತ್ತಿದ್ದಾರೆ. ಓದುಗರನ್ನು ಮತ್ತೆ ಪುಸ್ತಕಗಳತ್ತ ಕರೆತರಲು ಪುಸ್ತಕ ದಿನದ ಆಚರಣೆ ಈಗ ಹೆಚ್ಚು ಅಗತ್ಯವಾಗಿದೆ’ ಎಂದು ಅಪಾರ ಪುಸ್ತಕಪ್ರೀತಿಯನ್ನು ಮೈಗೂಡಿಸಿಕೊಂಡಿರುವ ನನ್ನ ಮಿತ್ರರೊಬ್ಬರು ತುಂಬ ಕಳಕಳಿಯಿಂದ ಹೇಳಿದರು.
ಫೇಸ್‍ಬುಕ್ ಮತ್ತು ವಾಟ್ಸ್‌ಆ್ಯಪ್‍ನಲ್ಲಿ ಕಳೆದು ಹೋಗಿರುವವರಿಗೆ ಪುಸ್ತಕ ದಿನದ ಆಚರಣೆ ಇದೆ ಎನ್ನುವ ಅರಿವು ಇಲ್ಲವಾಗಿದೆ. ಪ್ರತಿವರ್ಷ ಏಪ್ರಿಲ್ 23ರಂದು ‘ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ’ವನ್ನು ಆಚರಿಸಲಾಗುತ್ತದೆ. ಜನರಲ್ಲಿ ಪುಸ್ತಕಗಳ ಓದಿನ ಹವ್ಯಾಸವನ್ನು ಬೆಳೆಸುವ ಉದ್ದೇಶ ಈ ಆಚರಣೆಯ ಹಿಂದೆ ಇದೆ.
ಪುಸ್ತಕಗಳನ್ನು ಪ್ರಕಟಿಸಲು ಪ್ರಕಾಶನ ಸಂಸ್ಥೆಗಳಿವೆ. ಪ್ರಕಟಿತ ಪುಸ್ತಕಗಳನ್ನು ಓದುಗರಿಗೆ ತಲುಪಿಸಲೆಂದು ಪುಸ್ತಕ ಮಳಿಗೆಗಳು ಮತ್ತು ಗ್ರಂಥಾಲಯಗಳಿವೆ. ಪ್ರಕಟಿತ ಪುಸ್ತಕಗಳನ್ನು ವರ್ಣರಂಜಿತ ಸಮಾರಂಭ ಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಪ್ರಕಟಿತ ಪುಸ್ತಕಗಳ ಕುರಿತು ವಿಮರ್ಶೆಗಳು ಪ್ರಕಟವಾಗುತ್ತವೆ.
ಈಗೀಗ ಲೇಖಕರೇ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ತಮ್ಮ ಪುಸ್ತಕಗಳ ಪ್ರಚಾರಕ್ಕಾಗಿ ಅಖಾಡಕ್ಕೆ ಇಳಿಯುತ್ತಿದ್ದಾರೆ. ರಾಜಧಾನಿ ಮಾತ್ರವಲ್ಲದೆ ಜಿಲ್ಲೆ, ತಾಲ್ಲೂಕು, ಹೋಬಳಿಗಳಲ್ಲೂ ಪುಸ್ತಕಗಳಿಗೆ ಪ್ರಶಸ್ತಿ ನೀಡುವ ಸಂಘ-ಸಂಸ್ಥೆಗಳು ತಲೆ ಎತ್ತಿವೆ. ಇಷ್ಟೆಲ್ಲ ಪ್ರಯತ್ನಗಳು ನಡೆಯುತ್ತಿರುವಾಗ ಪುಸ್ತಕಗಳ ಓದಿನ ವ್ಯಾಪ್ತಿ ವಿಸ್ತರಿಸಿದೆಯೇ ಎನ್ನುವ ಪ್ರಶ್ನೆಗೆ ಉತ್ತರ ಮಾತ್ರ ಆಶಾದಾಯಕವಾಗಿಲ್ಲ.
ನಮ್ಮಲ್ಲಿ ಗುಣಾತ್ಮಕ ಪುಸ್ತಕಗಳ ಪ್ರಕಟಣೆಗೆ ಆದ್ಯತೆ ಸಿಗುತ್ತಿಲ್ಲ. ಹೆಚ್ಚಿನ ಪ್ರಕಾಶಕರು ಕಳಪೆ ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸಿ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ವಿಲೇವಾರಿ ಮಾಡುವುದರಲ್ಲೇ
ಮಗ್ನರಾಗಿದ್ದಾರೆ. ಸಾರ್ವಜನಿಕ ಗ್ರಂಥಾಲಯಗಳು ಈ ಮೊದಲಿನಂತೆ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಪುಸ್ತಕಗಳನ್ನು ಸಂಗ್ರಹಿಸಿಡುವ ಗೋದಾಮುಗಳಾಗಿವೆ. ಓದುಗರ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಪುಸ್ತಕ ಮಳಿಗೆಗಳು ಒಂದೊಂದಾಗಿ ಬಾಗಿಲು ಮುಚ್ಚುತ್ತಿವೆ. ವಿಮರ್ಶೆಗೆ ಕೊಡುಕೊಳ್ಳುವಿಕೆಯ ಮಾರುಕಟ್ಟೆ ಮೌಲ್ಯ ಪ್ರಾಪ್ತವಾಗಿರುವುದರಿಂದ ಟೊಳ್ಳು ಬರವಣಿಗೆ ಕೂಡ ಮೇಲ್ಪಂಕ್ತಿಗೆ ಬರುತ್ತಿದೆ.
ಪುಸ್ತಕದ ಜನಪ್ರಿಯತೆಯ ಮಾನದಂಡವಾಗಿ ಲೇಖಕರು ಹಲವು ಮುದ್ರಣವೆಂಬ ಗಿಮಿಕ್‍ನ ಮೊರೆ ಹೋಗಿದ್ದಾರೆ. ಪುಸ್ತಕವೊಂದು ಎಷ್ಟು ಪ್ರಮಾಣದಲ್ಲಿ ಓದಿಸಿಕೊಂಡಿದೆ ಎನ್ನುವುದನ್ನು ಅದರ ಆವೃತ್ತಿ ಸಂಖ್ಯೆಗಳನ್ನು ಆಧರಿಸಿ ಹೇಳಲು ಸಾಧ್ಯವಿಲ್ಲ. ಪುಸ್ತಕದ ಭೌತಿಕ ಸ್ವರೂಪವೇ ಅದನ್ನು ಹೇಳುತ್ತದೆ.
ಕೊರೊನಾ ವೈರಾಣು ಸೃಷ್ಟಿಸಿದ ಆತಂಕದ ಸನ್ನಿವೇಶ ದಲ್ಲಿ ಹಲವು ಉದ್ಯಮಗಳಂತೆ ಪುಸ್ತಕೋದ್ಯಮ ಕೂಡ ತನ್ನ ಮಗ್ಗುಲು ಬದಲಿಸಿತು. ಈ ಮೊದಲು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗಷ್ಟೇ ಸೀಮಿತವಾಗಿದ್ದ ಇ-ಪುಸ್ತಕ ಎನ್ನುವ ಪರಿಕಲ್ಪನೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ ಕಾಲಿಟ್ಟಿತು. ಲಾಕ್‍ಡೌನ್ ಅವಧಿಯಲ್ಲಿ ಪುಸ್ತಕ ಪ್ರಕಟಣೆಯ ಕೆಲಸ ಸ್ಥಗಿತಗೊಂಡಿದ್ದರಿಂದ ಕೆಲವು ಪ್ರಕಾಶಕರು ಇ-ಪುಸ್ತಕದ ಮೊರೆ ಹೋದರು. ಕೆಲವು ಪ್ರಕಾಶಕರು ತಮ್ಮ ಪ್ರಕಾಶನದ ಪುಸ್ತಕಗಳನ್ನು 50 ಪ್ರತಿಶತ ರಿಯಾಯಿತಿ ದರದಲ್ಲಿ ಇ-ಪುಸ್ತಕ ರೂಪದಲ್ಲಿ ಓದುಗರಿಗೆ ಒದಗಿಸುವ ವ್ಯವಸ್ಥೆ ಮಾಡಿದರು. ಈ ಯೋಜನೆ ಅನೇಕ ಪ್ರಕಾಶಕರಿಗೆ ಸ್ಫೂರ್ತಿ ನೀಡಿತು.
ಪ್ರಕಾಶಕರು ಇ-ಪುಸ್ತಕದ ಕುರಿತು ಆಸ್ಥೆ ತಳೆಯಲು ಕಾರಣಗಳಿಲ್ಲದಿಲ್ಲ. ಪುಸ್ತಕ ಪ್ರಕಟಣೆಗಾಗಿ ಬಳಸುವ ಕಚ್ಚಾ ಸಾಮಗ್ರಿಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರು ವುದರಿಂದ ಪ್ರಕಾಶಕರಿಗೆ ಪುಸ್ತಕ ಪ್ರಕಟಣೆ ಎನ್ನುವುದು ಆರ್ಥಿಕವಾಗಿ ಹೊರೆಯಾಗುತ್ತಿದೆ. ಕಾಗದ, ಮುದ್ರಣದ ಖರ್ಚು, ಲೇಖಕರಿಗೆ ಗೌರವಧನ, ಪುಸ್ತಕಗಳ ಸಾಗಣೆ ವೆಚ್ಚ ಇವನ್ನೆಲ್ಲ ಪ್ರಕಾಶಕರು ಭರಿಸಬೇಕಾಗಿದೆ.
ಸಾಹಿತ್ಯ ಕೃತಿಗಳನ್ನು ಪ್ರಕಟಿತ ಪುಸ್ತಕ ರೂಪದಲ್ಲಿ ಓದುವುದೇ ಚೆಂದದ ಸಂಗತಿ. ಅಲ್ಲಲ್ಲಿ ಸಾಲುಗಳ ಕೆಳಗೆ ಗೆರೆ ಎಳೆದು, ಪ್ರಶ್ನಾರ್ಥಕ ಚಿಹ್ನೆ ಮೂಡಿಸಿ, ಪಕ್ಕದ ಖಾಲಿಯಿರುವ ಮಾರ್ಜಿನ್‍ನಲ್ಲಿ ಟಿಪ್ಪಣಿ ಬರೆದು ಪುಸ್ತಕವನ್ನು ಓದಿದಾಗಲೇ ಅದರಲ್ಲಿನ ವಿಚಾರಗಳು ಅಂತರಾಳಕ್ಕೆ ಇಳಿಯಲು ಸಾಧ್ಯ ಎನ್ನುವ ಮನೋಭಾವದ ಓದುಗರ ಸಂಖ್ಯೆ ಬಹಳಷ್ಟಿದೆ. ಜೊತೆಗೆ ಕನ್ನಡ ಪುಸ್ತಕಗಳನ್ನು ಓದುವ ಓದುಗರ ವಯೋಮಾನವನ್ನು ಪರಿಗಣನೆಗೆ ತೆಗೆದುಕೊಂಡಾಗ ಅವರಲ್ಲಿ ವೃದ್ಧರು ಮತ್ತು ಮಧ್ಯವಯಸ್ಕರ ಸಂಖ್ಯೆಯೇ ಹೆಚ್ಚು. ಈ ವಯೋಮಾನದ ಓದುಗರನ್ನು ಇ-ಪುಸ್ತಕದ ಓದಿಗೆ ಹೊಂದಿಕೊಳ್ಳುವಂತೆ ಮಾಡುವುದು ಒಂದು ಸವಾಲಿನ ಕೆಲಸ. ಪುಸ್ತಕವನ್ನು ಕೈಯಲ್ಲಿ ಹಿಡಿದು ಅದರ ಹಾಳೆಗಳನ್ನು ಮಗುಚುತ್ತ ಓದುವಾಗ ದೊರೆಯುವ ಅನುಭೂತಿ ಅದೇ ಪುಸ್ತಕವನ್ನು ಕಂಪ್ಯೂಟರ್ ಪರದೆಯ ಮೇಲೆ ಓದುವಾಗ ಪ್ರಾಪ್ತವಾಗಲಾರದು.
ಲೇಖಕರು ಮತ್ತು ಪ್ರಕಾಶಕರು ಗಿಮಿಕ್‍ಗಳಿಂದ ಹೊರಬಂದು ಉತ್ತಮ ಕೃತಿಗಳನ್ನು ಓದುಗರಿಗೆ ನೀಡಬೇಕು. ಲೇಖಕರು, ಪ್ರಕಾಶಕರು ಮತ್ತು ಪುಸ್ತಕ ವ್ಯಾಪಾರಿಗಳ ಏನೆಲ್ಲ ವರಸೆಗಳ ನಡುವೆಯೂ ಓದುಗರು ಮೌಲ್ಯಯುತ ಪುಸ್ತಕಗಳನ್ನು ಓದಿಗಾಗಿ ಆಯ್ಕೆ ಮಾಡಿ ಕೊಳ್ಳುತ್ತಿರುವುದು ಸಂತಸದ ಸಂಗತಿ. ನಿರಾಸೆ ಎಂದರೆ ಇಂತಹ ಮನೋಭಾವದ ಓದುಗರ ಸಂಖ್ಯೆ ನಿರೀಕ್ಷಿತ ಪ್ರಮಾಣದಷ್ಟು ಇಲ್ಲ. ಲೇಖಕರು, ಪ್ರಕಾಶಕರು, ಪುಸ್ತಕ ವ್ಯಾಪಾರಿಗಳು ಮತ್ತು ಗ್ರಂಥಾಲಯಗಳು ಈ ದಿಸೆಯಲ್ಲಿ ಸಂಘಟಿತ ಪ್ರಯತ್ನ ಮಾಡಬೇಕಿದೆ. ಈ ಮೂಲಕ ಅತ್ಯುತ್ತಮ ಪುಸ್ತಕಗಳು ಪ್ರಕಟವಾಗಿ, ಸದಭಿರುಚಿಯ ಓದುಗರ ಸಂಖ್ಯೆ ಹೆಚ್ಚಿ ‘ವಿಶ್ವ ಪುಸ್ತಕ ದಿನ’ದ ಆಚರಣೆ ಸಾರ್ಥಕವಾಗಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.