ADVERTISEMENT

ಸಂಗತ: ಕನ್ನಡದ ಉಳಿವಿಗಾಗಿ ‘ಸ್ಕೂಲ್ ಕಾರಿಡಾರ್’

ಕನ್ನಡದ ಪುನರುತ್ಥಾನಕ್ಕೆ ಹೊಸತೊಂದು ತ್ರಿವಿಕ್ರಮ ಹೆಜ್ಜೆ ಇಡಬೇಕಾಗಿದೆ

ಚಂದ್ರಶೇಖರ ದಾಮ್ಲೆ
Published 1 ನವೆಂಬರ್ 2022, 20:00 IST
Last Updated 1 ನವೆಂಬರ್ 2022, 20:00 IST
ಸಂಗತ: ಕನ್ನಡದ ಉಳಿವಿಗಾಗಿ ‘ಸ್ಕೂಲ್ ಕಾರಿಡಾರ್’
ಸಂಗತ: ಕನ್ನಡದ ಉಳಿವಿಗಾಗಿ ‘ಸ್ಕೂಲ್ ಕಾರಿಡಾರ್’   

‘ನಿಮ್ಮ ಮಗುವನ್ನು ಯಾವ ಶಾಲೆಗೆ ಕಳಿಸುತ್ತಿದ್ದೀರಿ?’ ಹೀಗೆಂದು ಯಾರಾದರೂ ಕೇಳಿದಾಗ ‘ಇಂಗ್ಲಿಷ್ ಮೀಡಿಯಂಗೆ’ ಎಂದು ಹೇಳಬಲ್ಲ ಪೋಷಕರ ಮುಖದಲ್ಲಿ ಗೆಲುವಿನ ನಗೆ ಇರುತ್ತದೆ. ಪ್ರಶ್ನೆ ಕೇಳಿದವರಲ್ಲಿ ಮರುಪ್ರಶ್ನೆಗಳಿರುವುದಿಲ್ಲ. ಇನ್ನು, ‘ಮಕ್ಕಳನ್ನು ಕನ್ನಡ ಮೀಡಿಯಂಗೆ ಕಳಿಸುತ್ತೇವೆ’ ಎಂದು ಹೇಳಿದವರು ಬಡವರಾಗಿದ್ದರೆ, ಅವರಲ್ಲಿ ಕೇಳಬಹುದಾದ ಮರುಪ್ರಶ್ನೆಗಳಿರುವುದಿಲ್ಲ. ಆದರೆ ಅವರು ವಿದ್ಯಾವಂತರೂ ಶ್ರೀಮಂತರೂ ಆಗಿದ್ದರೆ ತಕ್ಷಣ ಮರುಪ್ರಶ್ನೆ ಬರುತ್ತದೆ: ‘ಯಾಕೆ ಮಗುವಿನ ಭವಿಷ್ಯವನ್ನು ಹಾಳು ಮಾಡುತ್ತಿದ್ದೀರಿ?’

ಇಂತಹ ಪ್ರಶ್ನೆಗಳು ಮಧ್ಯಮ ವರ್ಗದ ಪೋಷಕರಲ್ಲಿ ಆತಂಕವನ್ನು ಹುಟ್ಟಿಸುತ್ತವೆ, ಸಾಮಾಜಿಕ ಘನತೆ ಕುಗ್ಗಿಸಿದಂತಹ ಭಾವನೆ ಮೂಡಿಸುತ್ತವೆ. ಆಗ ಅವರು ಮಕ್ಕಳನ್ನು ಕನ್ನಡ ಶಾಲೆಯಿಂದ ಇಂಗ್ಲಿಷ್‌ ಮೀಡಿಯಂ ಶಾಲೆಗೆ ವರ್ಗಾಯಿಸುತ್ತಾರೆ. ಇದು, ಕಳೆದ ಮೂರು ದಶಕಗಳಲ್ಲಿ ಅಂದರೆ ಸುಮಾರು ಒಂದು ತಲೆಮಾರಿನಲ್ಲಿ ನಡೆದ ವಿದ್ಯಮಾನ.

ದೇಶವು ಸ್ವತಂತ್ರಗೊಂಡಾಗಿನಿಂದಲೂ ಕೇಂದ್ರ ಸರ್ಕಾರವಾಗಲೀ ರಾಜ್ಯ ಸರ್ಕಾರಗಳಾಗಲೀ ಶಿಕ್ಷಣವನ್ನು ಪರಿವರ್ತನೆಯ ಪ್ರಮುಖ ಕಾರಕವಾಗಿ ಪರಿಗಣಿಸಲೇ ಇಲ್ಲ. ‘ಆದ ಹಾಗೆ ಆಗಲಿ, ಹೋದ ಹಾಗೆ ಹೋಗಲಿ’ ಎಂಬುದೇ ಅವುಗಳ ಧೋರಣೆಯಾಗಿತ್ತು. ಆದ್ದರಿಂದಲೇ ಕೊಠಾರಿ ಆಯೋಗವನ್ನು ರಚಿಸಲು 1964ರ ತನಕ ತಡಮಾಡಿದರು. ಕೊಠಾರಿಯವರ ವರದಿ ಅತ್ಯುತ್ತಮ ಎಂದು ಈಗಲೂ ಗೌರವಿಸಲ್ಪಡುತ್ತದಾದರೂ, ಅದನ್ನು ಸಮರ್ಪಕವಾಗಿ ಅಳವಡಿಸದಿದ್ದುದು ಸರ್ಕಾರಗಳ ಇಚ್ಛಾರಹಿತ ವರ್ತನೆಗೆ ಸಾಕ್ಷಿ.

ADVERTISEMENT

ಕರ್ನಾಟಕದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಕಾನೂನು ಒಂದಿದೆ. ಸರ್ವರಿಗೂ ಸಮಾನ ಶಿಕ್ಷಣದ ಉದ್ದೇಶವನ್ನು ಅದರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೂ ವಿವಿಧ ಜಿಲ್ಲೆಗಳ ಶೈಕ್ಷಣಿಕ ಗುಣಮಟ್ಟದಲ್ಲಿ ಅಸಮಾನತೆ ಕಂಡುಬರಲು ಕಾರಣವೇನು? ‘ಹೋದಂತೆ ಹೋಗಲಿ’ ಎಂಬ ಧೋರಣೆಯೇ ಕಾರಣ. ಉದಾಹರಣೆಗೆ, ನಗರಗಳಲ್ಲಿ ಡೊನೇಷನ್ ಆಧಾರಿತ ಶಿಕ್ಷಣದ ವಾಣಿಜ್ಯೀಕರಣ ನಡೆದಷ್ಟು ವೇಗದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮತ್ತು ಉತ್ತರ ಕರ್ನಾಟಕದಲ್ಲಿ ನಡೆದಿಲ್ಲ. ಗುಣಮಟ್ಟದಲ್ಲಿ ಢಾಳಾಗಿ ಕಂಡುಬರುವ ಅಸಮಾನತೆಯನ್ನು ಹೋಗಲಾಡಿಸುವ ಚಿಂತನೆಯನ್ನೇ ಸರ್ಕಾರ ಮಾಡಿಲ್ಲ.

ಶಿಕ್ಷಣ ಇಲಾಖೆಯ ಅಧಿಕಾರಿಗಳಲ್ಲಿ ಕನ್ನಡ ಭಾಷಾ ಬದ್ಧತೆ ಇಲ್ಲ. ಅವರಿಗೆ ಶಿಕ್ಷಣದ ಮೂಲ ತತ್ವಗಳ ಬಗೆಗೆ ತಿಳಿವಳಿಕೆಯೂ ಇಲ್ಲ. ಖಾಸಗಿ ಶಾಲೆಗಳು ಗುಪ್ತವಾಗಿ ಇಂಗ್ಲಿಷ್ ಮೀಡಿಯಂನಲ್ಲಿ ತರಗತಿಗಳನ್ನು ನಡೆಸಲು ಶಿಕ್ಷಣಾಧಿಕಾರಿಗಳು ಅವಕಾಶ ನೀಡಿದರು. ಶಿಕ್ಷಣ ಮಾಧ್ಯಮದ ಆಯ್ಕೆಯು ಪೋಷಕರ ಹಕ್ಕೆಂಬ ತೀರ್ಮಾನವನ್ನು ಸುಪ್ರೀಂ ಕೋರ್ಟ್‌ ನೀಡಿದ ಬಳಿಕ, ಖಾಸಗಿ ಶಾಲೆಗಳು ಗುಪ್ತವಾಗಿ ನಡೆಸುತ್ತಿದ್ದ ಇಂಗ್ಲಿಷ್‌ ಮಾಧ್ಯಮವನ್ನು ಶಾಸನದ ಭಯವಿಲ್ಲದೆ ಮುಕ್ತವಾಗಿ ನಡೆಸಿದಾಗ ಕಣ್ಮುಚ್ಚಿ ಕುಳಿತರು. ಸರ್ಕಾರಿ ಅಧಿಕಾರಿಗಳು ಮತ್ತು ಶಿಕ್ಷಕರು ತಮ್ಮ ಮಕ್ಕಳನ್ನು ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಸೇರಿಸಿ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳು ಅನುಪಯುಕ್ತ ಎಂಬುದಕ್ಕೆ ತಾವೇ ಉದಾಹರಣೆಯಾದರು.

ಖಾಸಗಿ ಶಾಲೆಗಳನ್ನು ಸ್ಥಾಪಿಸುವ ಮೂಲಕ ಆದಾಯ ಮತ್ತು ಪ್ರಸಿದ್ಧಿಯ ಲಾಭಗಳನ್ನು ಕಂಡ ರಾಜಕಾರಣಿಗಳು ಶಾಲೆಗಳ ಮಾಲೀಕರಾಗಿ ಇರುವಾಗ ಸರ್ಕಾರದಲ್ಲಿ ಇಚ್ಛಾಶಕ್ತಿಯನ್ನು ನಿರೀಕ್ಷಿಸಲು ಸಾಧ್ಯವೇ?

ಕನ್ನಡದ ಪುನರುತ್ಥಾನಕ್ಕೆ ಹೊಸತೊಂದು ತ್ರಿವಿಕ್ರಮ ಹೆಜ್ಜೆ ಇಡಬೇಕಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರವು ಸರ್ಕಾರಿ ಶಾಲಾ ಕಾರಿಡಾರ್ ಯೋಜನೆಯನ್ನು ರೂಪಿಸಬೇಕು. ಕಾಶಿ, ಅಯೋಧ್ಯೆ ಮತ್ತು ಉಜ್ಜಯಿನಿಯಲ್ಲಿ ಕ್ಷೇತ್ರಾಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ‘ಟೆಂಪಲ್ ಕಾರಿಡಾರ್‌’ಗಳಂತೆ ರಾಜ್ಯ ಸರ್ಕಾರಗಳು ಶಾಲಾಭಿವೃದ್ಧಿಗಾಗಿ ‘ಸ್ಕೂಲ್ ಕಾರಿಡಾರ್‌’ಗಳನ್ನು ರೂಪಿಸಬೇಕು. ಅಂದರೆ ಪ್ರತಿಯೊಂದು ಕ್ಲಸ್ಟರ್‌ನ ಶಾಲೆಗಳನ್ನೆಲ್ಲ ಸಂಯೋಜಿಸಿ ಅವುಗಳ ಕೇಂದ್ರದಲ್ಲಿ ಒಂದು ಸಮಗ್ರ ಶಾಲೆ ಮಾಡಬೇಕು.ಕಲಿಸುವ ಸಂಪನ್ಮೂಲವನ್ನು ಅಲ್ಲಿ ಬಲಗೊಳಿಸಬೇಕು. ಮಕ್ಕಳನ್ನು ವಾಹನಗಳಲ್ಲಿ ಕರೆತರುವ ವ್ಯವಸ್ಥೆ ಆಗಬೇಕು.

ಕೇಂದ್ರ ಶಾಲೆಗಳಲ್ಲಿ ಸುಸಜ್ಜಿತ ತರಗತಿ ಕೊಠಡಿಗಳಿದ್ದು ಅತ್ಯುನ್ನತ ಗುಣಮಟ್ಟದಲ್ಲಿ ಶಿಕ್ಷಣ ನೀಡುವ ಪ್ರಕ್ರಿಯೆಯಲ್ಲಿ ತೊಡಗಬೇಕು. ಅಲ್ಲಿ ವಿದ್ಯಾರ್ಥಿ
ಗಳಿಗೆ ಸಂಪೂರ್ಣ ವ್ಯಕ್ತಿತ್ವ ವಿಕಸನದ ಶಿಕ್ಷಣ ದೊರೆಯುವಂತಾಗಬೇಕು. ಮಕ್ಕಳಲ್ಲಿರುವ ಕ್ರೀಡಾಸಕ್ತಿಯನ್ನು
ಪ್ರೋತ್ಸಾಹಿಸಲು ವಿಸ್ತಾರವಾದ ಕ್ರೀಡಾಂಗಣ ಇರಬೇಕು. ಸಭೆಗಳನ್ನು ನಡೆಸಲು ಪ್ರಾಥಮಿಕ ಹಂತದಿಂದಲೇ ಆಲಿಸು, ಮಾತಾಡು, ಓದು ಮತ್ತು ಬರೆ ಎಂಬ ವಿಧಾನದಲ್ಲಿ ಮಕ್ಕಳ ಅರಿವಿನ ವಿಸ್ತಾರಕ್ಕೆ ಗಟ್ಟಿ ತಳಹದಿ ನೀಡಬೇಕು. ಹೀಗೆ ಸುಂದರ ಮತ್ತು ಸುಭದ್ರ ಪರಿಸರದಲ್ಲಿ ಕಲಿಕಾ ಪ್ರಕ್ರಿಯೆ ನಡೆಯಬೇಕು. ಅದು ಎಂತಹ ಪರಿಣಾಮ ಉಂಟು ಮಾಡಬೇಕೆಂದರೆ ‘ಕನ್ನಡವಿಲ್ಲದೆ ಹೊಟ್ಟೆಗಿಲ್ಲ’ ಎಂಬ ಸ್ಥಿತಿ ಉಂಟಾಗಬೇಕು. ‘ಕನ್ನಡದಲ್ಲಿ ಕಲಿತಿದ್ದರೆ ಚೆನ್ನಾಗಿತ್ತು’ ಎಂಬ ಮಾತು ಯುವಜನರಿಂದ ಕೇಳಿಬರುವಂತಹ ವಾತಾವರಣ ನಿರ್ಮಾಣ ಆಗಬೇಕು. ಕಾಲಕ್ರಮೇಣ ಖಾಸಗಿ ಇಂಗ್ಲಿಷ್ ಮೀಡಿಯಂ ಶಾಲೆಗಳು ತಾವಾಗಿ ಬಾಗಿಲು ಹಾಕುವಂತಾಗಬೇಕು.

ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಇಂತಹ ಒಂದು ಶೈಕ್ಷಣಿಕ ವ್ಯವಸ್ಥೆಯನ್ನು ರೂಪಿಸದ ವಿನಾ ದೇಶೀಯ ಭಾಷೆಗಳಲ್ಲಿ ಶಿಕ್ಷಣ ಮಾಧ್ಯಮ ನೆಲೆಯೂರದು. ಇಂತಹದ್ದೊಂದು ಯೋಜನೆ ಜಾರಿಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅವಕಾಶವಿದೆ.

ಲೇಖಕ: ಶಿಕ್ಷಣ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.