ಹವಾಮಾನ ಬದಲಾವಣೆ ತಂದೊಡ್ಡಿರುವ ಬಿಕ್ಕಟ್ಟು ಎಲ್ಲ ಕ್ಷೇತ್ರಗಳಂತೆ ನಿಧಾನವಾಗಿ ಕೃಷಿ ವಲಯವನ್ನೂ ಆವರಿಸಿಕೊಳ್ಳುತ್ತಿದೆ. ವಾಸ್ತವವಾಗಿ ಈ ಪಿಡುಗಿನಿಂದ ಹೆಚ್ಚು ಹಾನಿ ಅನುಭವಿಸುತ್ತಿರುವವರು ರೈತರೇ. ಬಿರುಬೇಸಿಗೆಯಲ್ಲೂ ಧಾರಾಕಾರ ಮಳೆ, ಮಳೆಗಾಲದಲ್ಲಿ ಬಿರುಬಿಸಿಲು ಕೃಷಿಕರನ್ನು ಹೈರಾಣ ಮಾಡಿವೆ. ಕುತೂಹಲದ ವಿಷಯವೆಂದರೆ, ಪ್ರಾಕೃತಿಕ ಏರುಪೇರಿನ ಹಂಗಾಮುಗಳಲ್ಲಿ ತಕ್ಕಮಟ್ಟಿಗೆ ಇಳುವರಿ ಕೊಡುತ್ತಿರುವುದು ದೇಸಿ ತಳಿಗಳೇ ಆಗಿವೆ!
ಅಧಿಕ ಇಳುವರಿಯ ತಳಿಗಳು ಕೃಷಿ ಕ್ಷೇತ್ರಕ್ಕೆ ಕಾಲಿಟ್ಟ ಕೆಲವೇ ದಶಕಗಳಲ್ಲಿ ಸಾಂಪ್ರದಾಯಿಕ ತಳಿಗಳು ಹೊಲ- ಗದ್ದೆಗಳಿಂದ ಕಾಣೆಯಾದವು. ಸಾವಿರಾರು ವರ್ಷಗಳಿಂದ ಆಯಾ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುತ್ತಿದ್ದ ಜವಾರಿ ತಳಿಗಳು, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾಯಿತು. ಹೆಚ್ಚು ಇಳುವರಿ ಕೊಡುವ ತಳಿಗಳನ್ನು ರೈತರು ಹೆಚ್ಚೆಚ್ಚು ಅವಲಂಬಿಸಿದ್ದರಿಂದ, ಜವಾರಿ ತಳಿಗಳು ಆಸಕ್ತರ ಹೊಲದಲ್ಲಷ್ಟೇ ‘ಜೀವ’ ಉಳಿಸಿಕೊಂಡವು.
ಇಂಥ ಸಾಂಪ್ರದಾಯಿಕ ತಳಿಗಳ ಬಿತ್ತನೆ ಬೀಜಗಳನ್ನು ಉಳಿಸಿ, ಬೆಳೆಸುತ್ತಿರುವುದೇ ನಾಡಿನಾದ್ಯಂತ ಅಲ್ಲಲ್ಲಿ ಚದುರಿದಂತೆ ಇರುವ ಸಾವಯವ ಕೃಷಿಕರು. ತಳಿಸಂರಕ್ಷಣೆಯನ್ನು ಜತನದಿಂದ ನಿರ್ವಹಿಸುತ್ತ, ಒಂದೊಂದು ಬೆಳೆಯಲ್ಲೂ ಹತ್ತಾರು ತಳಿಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ರವಾನಿಸುತ್ತಿದ್ದಾರೆ. ಇಂಥವರ ಜವಾರಿ ಪ್ರೀತಿಯಿಂದಾಗಿಯೇ ಒಂದೊಂದು ಬೆಳೆಯಲ್ಲೂ ಹತ್ತಾರು, ನೂರಾರು ತಳಿಗಳು ಈವರೆಗೆ ಉಳಿದಿವೆ. ಪ್ರಾದೇಶಿಕ ಮಟ್ಟದಲ್ಲಿ ಆಸಕ್ತ ರೈತರಿಗೆ ದೇಸಿ ಬೀಜಗಳನ್ನು ಒದಗಿಸಿ, ತಳಿ ಸಂರಕ್ಷಣೆ ಮಾಡುವ ಕೆಲಸವನ್ನು ಸಮುದಾಯ ಬೀಜ ಬ್ಯಾಂಕುಗಳು ನಿರ್ವಹಿಸುತ್ತಿವೆ. ಅದರಲ್ಲೂ ಮಹಿಳಾ ಸಂಘಗಳ ಪಾತ್ರ ಇಲ್ಲಿ ಗಮನಾರ್ಹ. ತಳಿ ಆಯ್ಕೆ, ಬೀಜೋತ್ಪಾದನೆ, ಶುದ್ಧತೆ, ಪ್ಯಾಕಿಂಗ್ ಹಾಗೂ ವಿತರಣೆಯನ್ನು ಮಹಿಳಾ ಸಂಘಗಳು ಯಶಸ್ವಿಯಾಗಿ ಮಾಡುತ್ತಿವೆ.
ಈವರೆಗೆ ಹೈಬ್ರಿಡ್ ತಳಿಗಳ ‘ಜಪ’ ಮಾಡುತ್ತಿದ್ದ ಆಧುನಿಕ ಕೃಷಿ ವಿಜ್ಞಾನದ ಗಮನ ದೇಸಿ ತಳಿಗಳತ್ತ ಹರಿಯುತ್ತಿದೆ. ಸಾಂಪ್ರದಾಯಿಕ ತಳಿಗಳ ತಾಕತ್ತು ಗಮನಿಸಿದರೆ, ಅವುಗಳನ್ನು ರೈತ ಸಮುದಾಯ ಹೊಗಳುವುದರಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ. ಕೃಷಿ ಸಂಘಟನೆಗಳ ಒತ್ತಾಸೆ, ಸಾವಯವ ಕೃಷಿಕರ ಮನವಿಯ ಪರಿಣಾಮವಾಗಿ, ಕರ್ನಾಟಕ ಸರ್ಕಾರವು ಹೋದ ವರ್ಷ ಸಮುದಾಯ ಬೀಜ ಬ್ಯಾಂಕ್ ಸ್ಥಾಪನೆಗೆ
₹ 5 ಕೋಟಿಯನ್ನು ಬಜೆಟ್‍ನಲ್ಲಿ ಮೀಸಲಿಟ್ಟಿರುವುದು ಶ್ಲಾಘನೀಯ.
ಸರ್ಕಾರದ ಮಟ್ಟದಲ್ಲಿ ಯೋಜನೆಯೊಂದಕ್ಕೆ ಹಣ ಕಾಯ್ದಿಡಲಾಗಿದೆ ಎಂದರೆ, ಅದನ್ನು ವೆಚ್ಚ ಮಾಡಲು ಹತ್ತಾರು ದಾರಿಗಳು ತನ್ನಿಂತಾನೇ ತೆರೆದುಕೊಳ್ಳುತ್ತವೆ. ಆ ಕಾರಣದಿಂದ ಸಮುದಾಯ ಬೀಜ ಬ್ಯಾಂಕಿಗೆ ಮೀಸಲಿಟ್ಟ ₹ 5 ಕೋಟಿ ಹೇಗೆಲ್ಲ ‘ಖರ್ಚಾಗುತ್ತದೆ’ ಎಂಬುದು ಮುಖ್ಯವಾಗುತ್ತದೆ. ಎರಡು ವರ್ಷಗಳ ಹಿಂದೆ ನೈಸರ್ಗಿಕ ಕೃಷಿಗೆ ಮೀಸಲಿಟ್ಟಿದ್ದ ಮೊತ್ತವನ್ನು ಹೇಗೆ ವೆಚ್ಚ ಮಾಡಲಾಯಿತು ಎಂಬುದನ್ನೊಮ್ಮೆ ಪರಿಶೀಲಿಸಬೇಕು.
ಈವರೆಗೆ ತಳಿ ಸಂರಕ್ಷಣೆಯಲ್ಲಿ ಶ್ರಮಿಸಿದ ಬೀಜಮಾತೆಯರು, ಮಹಿಳಾ ಸಂಘಗಳು ಹಾಗೂ ಸಾವಯವ ಕೃಷಿಕರನ್ನು ಗುರುತಿಸಿ, ಈ ಯೋಜನೆಯಲ್ಲಿ ಒಳಗೊಳ್ಳುವಂತೆ ಮಾಡಬೇಕು. ದೇಸಿ ಬೀಜಗಳನ್ನು ವಾಣಿಜ್ಯ ಮಟ್ಟದಲ್ಲಿ ರೈತರಿಗೆ ಉತ್ಪಾದಿಸಿ ಕೊಡುತ್ತಿರುವ ‘ರೈತ ಉತ್ಪಾದಕ ಕಂಪನಿ’ಗಳೂ ಈ ಯೋಜನೆಯಲ್ಲಿ ಪಾಲುದಾರಿಕೆ ಹೊಂದಬೇಕು. ಹೈಬ್ರಿಡ್ ತಳಿಗಷ್ಟೇ ಆದ್ಯತೆ ಕೊಡುತ್ತಾ, ರೈತರಿಗೆ ಅವುಗಳನ್ನೇ ಶಿಫಾರಸು ಮಾಡುವ ಕೃಷಿ ವಿಜ್ಞಾನ ಕೇಂದ್ರಗಳೂ ಕೃಷಿ ವಿಶ್ವವಿದ್ಯಾಲಯಗಳೂ ಬಹಳಷ್ಟಿವೆ. ಅದರ ಮಧ್ಯೆಯೇ, ದೇಸಿ ಪ್ರೀತಿಯ ಒಂದಷ್ಟು ಕೃಷಿ ವಿಜ್ಞಾನಿಗಳು ಸಾಂಪ್ರದಾಯಿಕ ತಳಿ ಗುಣಲಕ್ಷಣ ದಾಖಲಿಸುತ್ತ, ತಮ್ಮ ಸೀಮಿತ ಮಟ್ಟದಲ್ಲಿ ದೇಸಿ ಬೀಜೋತ್ಪಾದನೆ ಮಾಡಿ ಆಸಕ್ತ ರೈತರಿಗೆ ವಿತರಿಸುತ್ತಿದ್ದಾರೆ. ಅಂಥ ವಿಜ್ಞಾನಿ
ಗಳನ್ನು ಗುರುತಿಸಿ, ಅವರಿಗೆ ತಳಿಶುದ್ಧತೆ ಕಾಯ್ದುಕೊಳ್ಳುವುದು ಮತ್ತು ಬೀಜೋತ್ಪಾದನೆಯ ಉಸ್ತುವಾರಿ ವಹಿಸಬೇಕು. ಉಳಿದಂತೆ, ಪ್ರಾದೇಶಿಕವಾರು ಬೆಳೆಗಳನ್ನು ನಿಗದಿ ಮಾಡಿ, ಅವುಗಳ ತಳಿ ಸಂರಕ್ಷಣೆ ಹಾಗೂ ಬೀಜೋತ್ಪಾದನೆಯ ಹೊಣೆಯನ್ನು ಬೀಜ ಸಂರಕ್ಷಕರಿಗೆ ವಹಿಸಬೇಕು. ಕೃಷಿ ವಿಶ್ವವಿದ್ಯಾಲಯ ಮಟ್ಟದಲ್ಲಿ ದೇಸಿ ತಳಿಗಳ ವೈಶಿಷ್ಟ್ಯ ದಾಖಲಿಸುವ ಕೆಲಸ ನಡೆಯಬೇಕು.
ಒಡಿಶಾ, ಜಾರ್ಖಂಡ್, ಆಂಧ‍್ರಪ್ರದೇಶ ಸರ್ಕಾರಗಳು ವೈವಿಧ್ಯಮಯ ಯೋಜನೆಗಳ ಮೂಲಕ ನೈಸರ್ಗಿಕ ಕೃಷಿ ಹಾಗೂ ದೇಸಿ ಬೀಜ ಸಂರಕ್ಷಣೆಗೆ ಪ್ರೋತ್ಸಾಹ ಕೊಡುವಲ್ಲಿ ಮುಂಚೂಣಿಯಲ್ಲಿ ಕಾಣುತ್ತಿವೆ. ಉತ್ತಮ ದೇಸಿ ತಳಿಗಳ ಬಿಡುಗಡೆ, ಸಿರಿಧಾನ್ಯ ಕೃಷಿ, ಗೆಡ್ಡೆ-ಗೆಣಸು, ಮರೆತ ಆಹಾರ ಪದಾರ್ಥಗಳನ್ನು ಮುಂಚೂಣಿಗೆ ತರುವ ಪ್ರಯತ್ನಕ್ಕಾಗಿ ಬಜೆಟ್‍ನಲ್ಲಿ ಹೆಚ್ಚು ಹಣವನ್ನು ಮೀಸಲಿಟ್ಟಿವೆ. ಆದರೆ ಇಂಥ ಗಟ್ಟಿ ಪ್ರಯತ್ನಗಳಿಲ್ಲದೇ ಕರ್ನಾಟಕದಲ್ಲಿ ಬರೀ ಅಂತರರಾಷ್ಟ್ರೀಯ ವಹಿವಾಟು ಮೇಳಗಳಷ್ಟೇ ನಡೆಯುತ್ತಿವೆ.
ಪ್ರಾಕೃತಿಕ ವಿಕೋಪದಿಂದ ಬಸವಳಿದ ರೈತ ಸಮುದಾಯಕ್ಕೆ ಅಲ್ಪವಾದರೂ ಪರಿಹಾರ ದೇಸಿ ತಳಿಗಳಲ್ಲಿದೆ. ಆದರೆ ಅದಕ್ಕೊಂದು ವ್ಯವಸ್ಥಿತ ಚೌಕಟ್ಟು ಬೇಕಷ್ಟೇ. ಹಾಗೆ ನೋಡಿದರೆ, ಸಾವಯವ ಕೃಷಿ ನೀತಿಯನ್ನು ದೇಶದಲ್ಲೇ ಮೊದಲ ಬಾರಿಗೆ ಪ್ರಕಟಿಸಲಾದ ಕರ್ನಾಟಕಕ್ಕೆ, ಬೀಜ ಬ್ಯಾಂಕ್ ಸ್ಥಾಪನೆಯಂಥ ವಿಶಿಷ್ಟ ಪ್ರಯೋಗಗಳು ಮತ್ತಷ್ಟು ಆತ್ಮವಿಶ್ವಾಸ ಕೊಡಬಲ್ಲವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.