ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಪರಿಚಿತರೊಬ್ಬರು ಸೇವೆಯಿಂದ ಅಮಾನತುಗೊಂಡಿ ದ್ದರು. ‘ಕೆಲಸದ ಸ್ಥಳದಲ್ಲಿ ಸರಿಯಾಗಿ ಇರುವುದಿಲ್ಲ, ಗಮನ ಕೊಟ್ಟು ಕೆಲಸ ಮಾಡುವುದಿಲ್ಲ, ಕೆಲಸದ ಅವಧಿಯಲ್ಲಿ ಉದ್ಯೋಗದ ಸ್ಥಳ ತೊರೆದು ಹೊರಗೆ ಹೋಗುತ್ತೀರಿ...’ ಎಂದು ಕಂಪನಿ ಅವರ ಮೇಲೆ
ಆಪಾದನೆಗಳನ್ನು ಹೊರಿಸಿ ನೋಟಿಸ್ ನೀಡಿತ್ತು.
ಅವರಿಗೆ ಇಬ್ಬರು ಮಕ್ಕಳು. ಇಬ್ಬರನ್ನೂ ಖಾಸಗಿ ಶಾಲೆಯೊಂದಕ್ಕೆ ಸೇರಿಸಿದ್ದಾರೆ. ಸಮಸ್ಯೆ ಎಂದರೆ ಆ ಶಾಲೆ ಮನೆಯಿಂದ ದೂರದಲ್ಲಿದೆ. ‘ಶಾಲೆ ಚೆನ್ನಾಗಿದೆ ಅಂತ ಹೇಳಿದರು. ಸೇರಿಸಿಬಿಟ್ಟಿದ್ದೇನೆ. ಆದರೆ, ಶಾಲೆಯ ಸಾರಿಗೆ ವ್ಯವಸ್ಥೆ ಸರಿಯಾಗಿಲ್ಲದ ಕಾರಣ, ಮಕ್ಕಳನ್ನು ಮುಂಜಾನೆ ಶಾಲೆಗೆ ಬಿಡುವುದು ಮತ್ತು ಸಂಜೆ ಕರೆದುಕೊಂಡು ಬರುವುದು ಅನಿವಾರ್ಯವಾಗಿದೆ. ಇದರಿಂದ ಹೈರಾಣ ಆಗಿದ್ದೇನೆ...’ ಎಂಬುದು ಅವರ ಅಳಲು. ಅವರ ಮನೆಯ ಸಮೀಪದಲ್ಲೇ ಸರ್ಕಾರಿ ಶಾಲೆ ಇದೆ. ಅನೇಕ ಪೋಷಕರಂತೆ ಅವರಿಗೂ ಆ ಶಾಲೆ ಬೇಡವಾಗಿದೆ. ಅದಕ್ಕೆ ಅವರದೇ ಆದ ತರ್ಕ ಇದೆ.
ಇದು, ಇವರೊಬ್ಬರ ಸಮಸ್ಯೆ ಮಾತ್ರವಲ್ಲ, ಬಹಳಷ್ಟು ಪಾಲಕರು ಅನುಭವಿಸುವ ಸಂಕಟವಾಗಿದೆ. ಮಕ್ಕಳನ್ನುಶಾಲೆಗೆ ಕಳಿಸಲು, ಮರಳಿ ಕರೆತರಲು, ಮಧ್ಯಾಹ್ನದ ಊಟ ಕೊಡಲು, ಶಾಲಾ ಅವಧಿಯ ನಂತರ ಮನೆ ಪಾಠಕ್ಕೆ ಬಿಟ್ಟು ಬರಲು ಪಾಲಕರು ಓಡಾಡುತ್ತಿರುತ್ತಾರೆ. ಈ ಒತ್ತಡದಲ್ಲಿ ಅವರು ಸಿಲುಕಿಕೊಂಡಿರುತ್ತಾರೆ. ಅದು ಕುಟುಂಬದ ನೆಮ್ಮದಿಯನ್ನು ಹಾಳುಮಾಡುತ್ತದೆ ಮಾತ್ರವಲ್ಲ, ಉದ್ಯೋಗದ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀರುತ್ತದೆ.
ವಿವಿಧ ಸಂಸ್ಥೆಗಳಲ್ಲಿ, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಕೆಲಸದ
ಅವಧಿಯಲ್ಲಿ ಮಕ್ಕಳ ಸ್ಕೂಲ್ ಡ್ಯೂಟಿ ಮಾಡುತ್ತಾರೆ ಎಂಬ ಆಪಾದನೆಗಳು ಕೇಳಿಬರುತ್ತವೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂಬುದು ಎಲ್ಲ ಪಾಲಕರ ಉದ್ದೇಶವಾಗಿರುತ್ತದೆ. ಆದರೆ ಅವರನ್ನು ಯಾವ ಶಾಲೆಗೆ ಸೇರಿಸಬೇಕು, ದೂರದ ಶಾಲೆಗೆ ಸೇರಿಸಿದರೆ ಆಗುವ ಅನನುಕೂಲಗಳೇನು, ಪ್ರತಿವರ್ಷ ಎಷ್ಟು ವೆಚ್ಚ
ಮಾಡಬೇಕಾಗುತ್ತದೆ, ಈ ಖರ್ಚನ್ನು ನಿಭಾಯಿಸುವುದು ಹೇಗೆ, ಮಗುವಿನ ಒಲವು ಏನು ಎಂಬಂತಹ ವಿಷಯಗಳ ಬಗ್ಗೆ ವಿಚಾರ ಮಾಡಿ, ಚೆನ್ನಾಗಿ ಪೂರ್ವ ಸಿದ್ಧತೆ ಮಾಡಿಕೊಳ್ಳುವುದು ಬಹಳ ಅವಶ್ಯ.
ಶಿಕ್ಷಣ ಸಂಸ್ಥೆ ದೊಡ್ಡದು, ಹೆಸರು ಚೆನ್ನಾಗಿದೆ, ಮಕ್ಕಳು ಅಂಕ ಹೆಚ್ಚಿಗೆ ಪಡೆಯುತ್ತಾರೆ ಎಂಬಂತಹ ಮಾಹಿತಿಗಳನ್ನು ಕೇಳಿ ಮಕ್ಕಳನ್ನು ದೂರದ ಶಾಲೆಗಳಿಗೆ ಪಾಲಕರು ಸೇರಿಸುತ್ತಾರೆ.
ಪ್ರಾಥಮಿಕ, ಮಾಧ್ಯಮಿಕ ಹಂತದಲ್ಲಿ ಓದುವ ಮಕ್ಕಳನ್ನು ಸಾಧ್ಯವಾದಷ್ಟೂ ಮನೆಯ ಸಮೀಪದ ಶಾಲೆಗೆ ಸೇರಿಸುವುದು ಉತ್ತಮ. ಮಕ್ಕಳು ತಮ್ಮಷ್ಟಕ್ಕೆ ತಾವೇ ಶಾಲೆಗೆ ನಡೆದುಕೊಂಡು ಹೋಗಿ ಬರುವುದಕ್ಕೆ ಸಾಧ್ಯವಾಗಬೇಕು. ಇದರಿಂದ ಅವರಲ್ಲಿ ಧೈರ್ಯ, ಆತ್ಮವಿಶ್ವಾಸ ಬೆಳೆಯುತ್ತದೆ. ಉಳಿದ ಮಕ್ಕಳೊಂದಿಗೆ ಮಾತನಾಡಿಕೊಂಡು ನಲಿಯುತ್ತಾ ಹೋಗುವುದು ಸಂತಸದ ಸಂಗತಿ. ಇದು ಕ್ರಮೇಣ ಅವರಲ್ಲಿ ಸಮಷ್ಟಿ ಪ್ರಜ್ಞೆಯನ್ನೂ ಬೆಳೆಸುತ್ತದೆ.
ಬಹಳಷ್ಟು ಪಾಲಕರು ತಮ್ಮ ವಾಹನಗಳಲ್ಲಿ ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತಾರೆ. ಮಕ್ಕಳು ಸ್ವತಂತ್ರ ವಾಗಿ ನಡೆದುಕೊಂಡು ಶಾಲೆಗೆ ಹೋಗುವುದು ಅಪರೂಪವಾಗಿದೆ. ಇದರಿಂದ ಅವರು ನಡಿಗೆಯ ಸಂಭ್ರಮವನ್ನೇ ಕಳೆದುಕೊಳ್ಳುತ್ತಿದ್ದಾರೆ. ‘ನಡಿಗೆ ಎಂಬುದು ಅರಿವಿನ ಹಾದಿ’ ಎನ್ನುತ್ತಿದ್ದರು ವಿಜಯಪುರದ ಸಿದ್ಧೇಶ್ವರ ಶ್ರೀಗಳು.
ಆರ್ಥಿಕ ಅನುಕೂಲ ಇರುವವರು ತಮ್ಮ ಮಕ್ಕಳನ್ನು ದೂರದ ವಸತಿಶಾಲೆಗಳಿಗೆ ಹೆಚ್ಚು ಹಣ ಕೊಟ್ಟು ಸೇರಿಸುತ್ತಾರೆ. ಅವರನ್ನು ಭೇಟಿಯಾಗುವುದಕ್ಕೆ ಕುಟುಂಬ ಸದಸ್ಯರು ತಿಂಗಳಲ್ಲಿ ಎರಡು– ಮೂರು ಬಾರಿ ಹೋಗಿ ಬರುತ್ತಾರೆ. ಆದರೆ ಕಡಿಮೆ ಆದಾಯದವರು ಇದನ್ನು ಅನುಕರಿಸಿ ಸಂಕಷ್ಟಕ್ಕೆ ಸಿಲುಕಿದ ಉದಾಹರಣೆಗಳು ಬಹಳಷ್ಟಿವೆ. ಮಕ್ಕಳ ಶಿಕ್ಷಣಕ್ಕಾಗಿ ಮೈಕ್ರೊಫೈನಾನ್ಸ್ ಕಂಪನಿಗಳಲ್ಲಿ, ಲೇವಾದೇವಿ ವ್ಯವಹಾರ ಮಾಡುವವರ ಬಳಿ ಸಾಲ ಮಾಡಿದವರೂ ಇದ್ದಾರೆ. ಅವರು ಮಕ್ಕಳ ಶಿಕ್ಷಣವನ್ನು ಮುಂದುವರಿ ಸುವುದಕ್ಕೆ ಅನುಭವಿಸುತ್ತಿರುವ ಕಷ್ಟ ಅಷ್ಟಿಷ್ಟಲ್ಲ.
ಕೆಲವು ಕಡೆ ಶಾಲಾ ವಾಹನಗಳು ಬಂದು ಮಕ್ಕಳನ್ನು ಕರೆದುಕೊಂಡು ಹೋಗುತ್ತವೆ. ಕೆಲವು ನಿಗದಿತ ಸ್ಥಳದಲ್ಲಿ ನಿಲ್ಲುತ್ತವೆ. ಪಾಲಕರು ಮಕ್ಕಳನ್ನು ಅಲ್ಲಿಯವರೆಗೆ ಕರೆದುಕೊಂಡು ಹೋಗಿ ವಾಹನಕ್ಕೆ ಹತ್ತಿಸಿ ಬರಬೇಕಾಗುತ್ತದೆ. ಶಾಲಾ ವಾಹನ ಬರುವ ಸಮಯಕ್ಕೆ ಮಕ್ಕಳು ಸಿದ್ಧವಾಗಿ ಇರದಿದ್ದರೆ ತಮ್ಮ ವಾಹನದಲ್ಲಿಯೇ ಕರೆದುಕೊಂಡು ಹೋಗಿ ಶಾಲೆಗೆ ಬಿಟ್ಟು ಬರುವುದು ಅನಿವಾರ್ಯವಾಗುತ್ತದೆ.
ವಿಜಯಪುರದ ವಕೀಲೆ ವಿದ್ಯಾ ಅಂಕಲಗಿ ಅವರು ‘ನಾ ಕಂಡ ಅಮೆರಿಕ’ ಎಂಬ ತಮ್ಮ ಪ್ರವಾಸ ಕಥನವನ್ನು ಪ್ರಕಟಿಸಿದ್ದಾರೆ. ಆ ದೇಶದಲ್ಲಿ ಮಕ್ಕಳನ್ನು ವಾಸದ ಮನೆಗೆ ಸಮೀಪದಲ್ಲಿರುವ ಶಾಲೆಗೇ ಸೇರಿಸಬೇಕು ಎಂಬ ಕಾನೂನು ಇದೆ. ದೂರದ ಶಾಲೆಗೆ ಸೇರಿಸುವುದಾದರೆ ಕಾರಣ ವಿವರಿಸಿ ಒಪ್ಪಿಗೆ ಪಡೆಯಬೇಕು. ಶಾಲಾ ಬಸ್ಸಿನಲ್ಲಿ ದೂರದ ಶಾಲೆಗೆ ಹೋಗುವ ಮಕ್ಕಳ ಸುರಕ್ಷಿತ ಪ್ರಯಾಣ ಮತ್ತು ಸೂಕ್ತ ರಕ್ಷಣೆ ವ್ಯವಸ್ಥೆಗಾಗಿ ಸರ್ಕಾರಕ್ಕೆ ಶುಲ್ಕ ಕಟ್ಟಬೇಕಾಗುತ್ತದೆ. ಇಂಥ ಕಾನೂನು ಅನೇಕ ದೇಶಗಳಲ್ಲಿ ಇದೆ ಎಂಬ ಸಂಗತಿಯನ್ನು ಅವರು ಹೇಳಿದ್ದಾರೆ.
ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುವಂತೆ ಮಾಡುವುದು ಪಾಲಕರ ಕರ್ತವ್ಯ. ಆದರೆ ಅದು ವಿಪರೀತ ಹೊರೆ
ಆಗಬಾರದು. ಸರಳ ಹಾದಿಯಲ್ಲಿ ಅದು ಯಶಸ್ವಿಯಾಗಿ ನಡೆಯುವಂತೆ ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.