ಆಗಸ್ಟ್ 15ರ ಆಸುಪಾಸಿನಲ್ಲಿ ಲಾಲ್‌ಬಾಗ್‌ನಲ್ಲಿ ಫಲ–ಪುಷ್ಪ ಜಾತ್ರೆ. ಇದು, ‘ಕರ್ನಾಟಕದ ತೋಟಗಾರಿಕಾ ಪಿತಾಮಹ’ನ ಸ್ಮರಿಸುವ ಸಂದರ್ಭವೂ ಹೌದು.
‘ಮಹಾತ್ಮ ಗಾಂಧೀಜಿ ಅವರ ಜನ್ಮ ಶತಮಾನೋತ್ಸವದ (1969) ನೆನಪಿಗಾಗಿ ರಾಜ್ಯದಲ್ಲಿ ನೂರು ಹಣ್ಣಿನ ತೋಟಗಳನ್ನು ನಿರ್ಮಾಣ ಮಾಡಬೇಕೆನ್ನುವ ಸಂಕಲ್ಪ ಡಾ. ಎಂ.ಎಚ್. ಮರೀಗೌಡ ಅವರದಾಗಿತ್ತು. ಆ ಸಂಕಲ್ಪದ ಭಾಗವಾಗಿ, 1969ರಲ್ಲಿ ಕೋಲಾರ ಸಮೀಪದ ಟಮಕದಲ್ಲಿ ಹಲಸಿನ ತಳಿ ಸಂರಕ್ಷಣಾ ಕ್ಷೇತ್ರ ರೂಪುಗೊಂಡಿತು. ಮರೀಗೌಡರ ದೂರದೃಷ್ಟಿಯಿಂದ ಇಂತಹ ಹಲವು ತೋಟಗಳು ಕರ್ನಾಟಕದಲ್ಲಿ ನಿರ್ಮಾಣವಾದವು...’
ಕರ್ನಾಟಕ ಕಂಡ ಅಪ್ರತಿಮ ಕೃಷಿ ದಾರ್ಶನಿಕ ಎಂ.ಎಚ್. ಮರೀಗೌಡರ ಕುರಿತಾಗಿ, ತೋಟಗಾರಿಕಾ ವಿಜ್ಞಾನಿ ಡಾ. ಎಸ್.ವಿ. ಹಿತ್ತಲಮನಿ ಅವರು ಹೇಳಿರುವ ಮಾತಿದು. ಈ ಮಾತಿನ ನೈಜತೆ ಅರಿಯಬೇಕೆಂದರೆ, ಟಮಕಕ್ಕೆ ಹೋಗಬೇಕು. ಅಲ್ಲಿನ, ಹಲಸಿನ ತಳಿ ಸಂರಕ್ಷಣಾ ಕ್ಷೇತ್ರವು ಮರೀಗೌಡರ ಒಂದು ಸುಂದರ ಕನಸು ಸಾಕಾರಗೊಂಡಂತೆ ಕಾಣಿಸುತ್ತದೆ. ಆ ಕೇಂದ್ರದಲ್ಲಿರುವ ಹಲಸು ವೈವಿಧ್ಯ ನೋಡುಗರಲ್ಲಿ ಅಚ್ಚರಿ ಹುಟ್ಟಿಸುವಂತಿದೆ.
‘ಅಂಜನಾದ್ರಿ’ ಕಾವ್ಯನಾಮದಲ್ಲಿ ಸಾಕಷ್ಟು ಬರವಣಿಗೆ ಮಾಡಿರುವ ಡಿ.ಎಸ್. ಹನುಮಂತರಾವ್ ಅವರು, ಮರೀಗೌಡರ ಬಗ್ಗೆ ಸಾಕಷ್ಟು ನೆನಪುಗಳನ್ನು ಹಂಚಿಕೊಂಡಿದ್ದಾರೆ. ತೋಟಗಾರಿಕೆ ಅಧಿಕಾರಿಯೂ ಆಗಿದ್ದ ಅವರ ನೆನಪುಗಳು, ‘ಕರ್ನಾಟಕದ ತೋಟಗಾರಿಕೆ ಪಿತಾಮಹ’ ಎಂದು ಮರೀಗೌಡರನ್ನು ಏಕೆ ಕರೆಯಲಾಯಿತು ಎನ್ನುವುದಕ್ಕೆ ಸಾಕ್ಷ್ಯ ಒದಗಿಸುವಂತಿವೆ.
ಪ್ರಸ್ತುತ, ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ವಾಣಿಜ್ಯ ವಹಿವಾಟಿನ ರೂಪದಲ್ಲಿ ಸಂಘಟಿತವಾಗಿ ಮಾವು ಬೆಳೆಯುತ್ತಿರುವುದಕ್ಕೆ ಮರೀಗೌಡರ ಶ್ರಮ ಹಾಗೂ ದೂರದೃಷ್ಟಿಯೇ ಕಾರಣ. 1950–70ರ ಅವಧಿಯಲ್ಲಿ ಮರೀಗೌಡರು ಮುಂದಾಲೋಚನೆಯಿಂದ ಅನುಷ್ಠಾನಗೊಳಿಸಿದ ಯೋಜನೆಗಳಿಂದಾಗಿಯೇ ಕೋಲಾರದೊಂದಿಗೆ ಮಾವಿನ ಘಮ ಸೇರಿಕೊಂಡಿದೆ ಎನ್ನುತ್ತಾರೆ ಹಿತ್ತಲಮನಿಯವರು.
ರಾಜ್ಯದಲ್ಲಿ ಹಲಸು, ಗೋಡಂಬಿ, ನೇರಳೆ ಹಾಗೂ ಮಾವಿನ ತಳಿಗಳ ಸಂರಕ್ಷಣಾ ತೋಟಗಳನ್ನು (ಪ್ರೊಜಿನಿ ಆರ್ಚರ್ಡ್) ಮಾಡಬೇಕು. ಅಲ್ಲಿ ನಾಡಿನ ವಿವಿಧ ಭಾಗಗಳಲ್ಲಿನ ತಳಿಗಳನ್ನು ತಂದು ಬೆಳೆಸಬೇಕು. ಅದರಲ್ಲಿ ಉತ್ತಮ ಇಳುವರಿ ನೀಡುವ ಹಾಗೂ ಸವಿರುಚಿ ಹೊಂದಿರುವ ತಳಿಗಳನ್ನು ಆಯ್ಕೆ ಮಾಡಿ ಅಭಿವೃದ್ಧಿಪಡಿಸಿ ರೈತರಿಗೆ ವಿತರಿಸಬೇಕು ಎನ್ನುವುದು ಮರೀಗೌಡರ ದೂರದೃಷ್ಟಿಯ ಚಿಂತನೆಯಾಗಿತ್ತು. ಅದಕ್ಕೆ ತಕ್ಕಂತೆ ತೋಟಗಾರಿಕೆ ಇಲಾಖೆ– ಕೋಲಾರ, ಮೈಸೂರು ಸೇರಿದಂತೆ ಒಂದಷ್ಟು ಜಿಲ್ಲೆಗಳಲ್ಲಿ ಈ ಹಣ್ಣುಗಳ ತಳಿ ಸಂರಕ್ಷಣಾ ತೋಟಗಳನ್ನು ನಿರ್ಮಿಸಿದೆ.
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳು ಮಳೆಯ ಅವಕೃಪೆಗೆ ಪಾತ್ರವಾಗಿರುವ ಪ್ರದೇಶಗಳು. ‘ಬರಪೀಡಿತ’ ಎನ್ನುವುದು ಈ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಕಾಯಂ ವಿಶೇಷಣದಂತಿದೆ. ಈ ಪ್ರದೇಶದಲ್ಲಿ ಆಹಾರ ಧಾನ್ಯಗಳ ಬೆಳೆಯನ್ನಷ್ಟೇ ನಂಬಿ ಬದುಕುವುದು ಕೃಷಿಕರಿಗೆ ಕಷ್ಟ ಎಂದು ಅರಿತಿದ್ದ ಮರೀಗೌಡರು, ಕಡಿಮೆ ನೀರು ಕೇಳುವ ಬೆಳೆಗಳನ್ನು ಬೆಳೆಸುವ ಯೋಚನೆ ಮಾಡಿದರು. ಒಂದು ವರ್ಷ ಮಳೆ ಕಡಿಮೆಯಾದರೂ ಸಹಿಸಿಕೊಳ್ಳುವಂತಹ ‘ಹವಾಮಾನ ಸಹಿಷ್ಣು ಬೆಳೆ’ಗಳನ್ನು ಈ ಭಾಗಕ್ಕೆ ಪರಿಚಯಿಸಬೇಕೆಂದು ತೀರ್ಮಾನಿಸಿದರು. ಬಹುವಾರ್ಷಿಕ ಬರ ನಿರೋಧಕ ಬೆಳೆಗಳನ್ನೇ ಬೆಳೆಸಬೇಕೆನ್ನುವುದು ಅವರ ಕನಸಾಗಿತ್ತು.
ಬರಪೀಡಿತ ಪ್ರದೇಶಗಳಲ್ಲಿರುವ ರೈತರ ಸಂಕಷ್ಟವನ್ನು ನಿವಾರಿಸುವ ಹಾಗೂ ಆರ್ಥಿಕವಾಗಿ ಅವರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ– ಬರ ನಿರೋಧಕ ತೋಟಗಾರಿಕೆ ಬೆಳೆಗಳಾಗಿರುವ ಮಾವು, ನೇರಳೆ, ಹಲಸು, ಗೋಡಂಬಿ, ಹಲಸು ಗಿಡಗಳನ್ನು ರೈತರಿಗೆ ವಿತರಿಸಿ ಬೆಳೆಸಲು ಉತ್ತೇಜಿಸಿದರು. ಹೀಗೆ, ಒಂದು ಪ್ರದೇಶದ ರೈತರ ಆರ್ಥಿಕತೆಗೆ ದಾರಿಯೊಂದನ್ನು ತೋರಿಸಿದ ಸಾಧನೆ ಮರೀಗೌಡರದು.
ಬೆಂಗಳೂರಿನ ಶ್ವಾಸಕೋಶಗಳಂತೆ ಇರುವ ಲಾಲ್‌ಬಾಗ್ ಹಾಗೂ ಕಬ್ಬನ್ ಉದ್ಯಾನಗಳ ಅಭಿವೃದ್ಧಿಯಲ್ಲಿ, ವಿಶೇಷವಾಗಿ ಲಾಲ್‌ಬಾಗ್ ವಿಸ್ತರಣೆಯಲ್ಲಿ ಮರೀಗೌಡರ ಪಾತ್ರವಿದೆ ಎಂದು ಹೇಳಲಾಗುತ್ತದೆ. ಆದರೆ, ಮಹಾನಗರದಲ್ಲಿನ ಮಹಾ ಉದ್ಯಾನಗಳ ಅಭಿವೃದ್ಧಿಯಷ್ಟೇ ಅವರ ಸಾಧನೆಯಲ್ಲ; ಬರಪೀಡಿತ ಪ್ರದೇಶಗಳಲ್ಲಿ ಬರ ಸಹಿಷ್ಣು ಬೆಳೆಗಳನ್ನು ಬೆಳೆಸಲು ಅವರು ಕೈಗೊಂಡ ಕ್ರಮಗಳಿಗೆ ವಿಶೇಷ ಮಹತ್ವವಿದೆ. ನಿರ್ದೇಶಕರಾಗಿ ತೋಟಗಾರಿಕೆ ಇಲಾಖೆಗೆ ಹೊಸ ಹೊಳಪು ತಂದುಕೊಟ್ಟ ಹಿರಿಮೆ ಅವರದು. ಪ್ರಸ್ತುತ, ಕೋಲಾರದ ಪರಿಸರದಲ್ಲಿ ತೋಟಗಾರಿಕೆ ಯಶಸ್ವಿಯಾಗಿ ನಡೆಯುತ್ತಿರುವುದಕ್ಕೆ, ಮಾವಿನ ಕೃಷಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವುದಕ್ಕೆ ಮರೀಗೌಡರು ನೀಡಿರುವ ಕೊಡುಗೆ ಮಹತ್ವದ್ದು ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಗಳು ನೆನಪಿಸಿಕೊಳ್ಳುತ್ತಾರೆ.
ಆಗಸ್ಟ್ ಹದಿನೈದರ ಸ್ವಾತಂತ್ರ್ಯ ದಿನಾಚರಣೆ ಹಾಗೂ ಜನವರಿ ಇಪ್ಪತ್ತಾರರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಲಾಲ್‌ಬಾಗ್‌ನಲ್ಲಿ ಪುಷ್ಪ ಪ್ರದರ್ಶನದ ಹೆಸರಿನಲ್ಲಿ ಹೂವಿನ ಜಾತ್ರೆಯೇ ನಡೆಯುತ್ತದೆ. ಈ ಆಗಸ್ಟ್ ತಿಂಗಳು, ಮರೀಗೌಡರನ್ನು ನೆನಪಿಸಿಕೊಳ್ಳುವ ಸಂದರ್ಭವೂ (ಆಗಸ್ಟ್ 8 ಅವರ ಜನ್ಮದಿನ) ಹೌದು. ಅಳತೆ ಮೀರಿ ಬೆಳೆದಿರುವ ಬೆಂಗಳೂರಿಗೆ ಇನ್ನೊಂದು ಲಾಲ್‌ಬಾಗ್, ಕಬ್ಬನ್ ಪಾರ್ಕ್ ಬೇಕಲ್ಲವೆ? ಹೊಸ ಹಸಿರು ಆವರಣಗಳು ರಾಜಧಾನಿಯಲ್ಲಿ ಯಾಕೆ ಸೃಷ್ಟಿಯಾಗುತ್ತಿಲ್ಲ ಹಾಗೂ ಇರುವ ತಾಣಗಳು ಏಕೆ ವಿಸ್ತರಣೆಯಾಗುತ್ತಿಲ್ಲ ಎನ್ನುವ ಪ್ರಶ್ನೆಗಳು, ಮರೀಗೌಡರಂಥ ದಕ್ಷ ಹಾಗೂ ನಿಸ್ಪೃಹ ಸಸ್ಯ ವಿಜ್ಞಾನಿಗಳು, ಅಧಿಕಾರಿಗಳು ಈಗೆಲ್ಲಿ ಎನ್ನುವ ಪ್ರಶ್ನೆಗೂ ಅವಕಾಶ ಕಲ್ಪಿಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.