ಪ್ರತಿ ಮಗುವೂ ಅನನ್ಯ, ವಿಶೇಷ. ಕಲಿಯುವ ರೀತಿಯಲ್ಲಿ ಕಲಿಸಿದರೆ ಎಲ್ಲ ವಿದ್ಯಾರ್ಥಿಗಳೂ ಕಲಿಯಲು ಶಕ್ತ. ವಿವಿಧ ಶೈಲಿಗಳಲ್ಲಿ ಕಲಿಯುವವರಿದ್ದಾರೆ. ಆಲಿಸಿ ಕಲಿಯುವವರು ಇರುವಂತೆ, ನೋಡಿ, ಮಾಡಿ, ಓದಿ, ಬರೆದು, ಮಾತಾಡಿ ಕಲಿಯುವವರೂ ಇದ್ದಾರೆ. ಹೀಗೆ ವಿಶೇಷವೆನಿಸುವ ಕಲಿಕಾ ಮಾದರಿಗಳನ್ನು ಅರ್ಥೈಸಿ ಕೊಳ್ಳದೆ, ಏಕರೂಪದ ಕಲಿಕಾ ವಿಧಾನ, ಏಕರೀತಿಯ ಪಾಠ, ಏಕರೀತಿಯ ಪರೀಕ್ಷೆಗಳನ್ನು ನಡೆಸಿ, ತಮ್ಮದಲ್ಲದ ತಪ್ಪಿಗೆ ಮಕ್ಕಳನ್ನು ಅನುತ್ತೀರ್ಣಗೊಳಿಸುವ ಯೋಚನೆ ಇತ್ತೀಚೆಗೆ ಮತ್ತೆ ಮುನ್ನೆಲೆಗೆ ಬಂದಿದೆ. ಕೇಂದ್ರ ಶಿಕ್ಷಣ ಸಚಿವಾಲಯದ ಅಧೀನಕ್ಕೆ ಒಳಪಡುವ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಗಳಲ್ಲಿ ನಿಗದಿತ ಕಲಿಕಾ ಸಾಮರ್ಥ್ಯ ಇಲ್ಲದ ವಿದ್ಯಾರ್ಥಿಗಳನ್ನು ಫೇಲು ಮಾಡಬೇಕೆಂಬ ನಿರ್ಧಾರವು ಈ ಚರ್ಚೆಗೆ ಇಂಬು ನೀಡಿದೆ.
ಅನುತ್ತೀರ್ಣಕ್ಕೆ ಅವಕಾಶ ಇಲ್ಲದಿದ್ದರೆ ಮಗು ಆತಂಕಕ್ಕೆ ಒಳಗಾಗದೆ, ಫೇಲು ಎಂಬ ಹಣೆಪಟ್ಟಿಯನ್ನು
ಹೊತ್ತುಕೊಳ್ಳುವ ಭಯವಿಲ್ಲದೆ ಕಲಿಯಲು ಸಾಧ್ಯ ಎಂದು ತೆಲಂಗಾಣ ರಾಜ್ಯ ಅಭಿಪ್ರಾಯಪಟ್ಟಿದ್ದರೆ, ಇಂತಹ ಕ್ರಮವು ಶಾಲೆ ಬಿಡುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಿ, ಅವರ ಆತ್ಮಗೌರವವನ್ನು ಹೆಚ್ಚಿಸುತ್ತದೆ ಎಂದು ಮಹಾರಾಷ್ಟ್ರ ಪ್ರತಿಪಾದಿಸಿದೆ.
ಐಐಎಂ– ಅಹಮದಾಬಾದ್‌ನ ಸಂಶೋಧಕರಾದ ಅಂಕಿತ್ ಸರಾಫ್ ಮತ್ತು ಕೇತನ್ ಎಸ್. ದೇಶಮುಖ್ ಅವರು 2005– 15ರವರೆಗೆ, ಅಂದರೆ ಶಿಕ್ಷಣ ಹಕ್ಕು ಕಾಯ್ದೆ– 2009 (ಆರ್‌ಟಿಇ) ಜಾರಿಗೆ ಬರುವ ಮೊದಲಿನ ಐದು ವರ್ಷ ಹಾಗೂ ನಂತರದ ಐದು ವರ್ಷ ಸೇರಿ ಹತ್ತು ವರ್ಷಗಳ ದತ್ತಾಂಶವನ್ನು ಸಂಗ್ರಹಿಸಿದ್ದಾರೆ. 2006– 16ರವರೆಗಿನ ಆ್ಯನ್ಯುಯಲ್ ಸ್ಟೇಟಸ್ ಆಫ್ ಎಜುಕೇಷನ್ ರಿಪೋರ್ಟ್ (ಏಸರ್) ಸಮೀಕ್ಷೆಯ ದತ್ತಾಂಶವನ್ನು ವಿಶ್ಲೇಷಿಸಿ ಅವರು ಕಂಡುಕೊಂಡಿರುವ ಸಂಗತಿಗಳು ಪ್ರಮುಖವಾಗಿವೆ.
ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವುದ ರಿಂದ ವ್ಯವಸ್ಥೆಯಲ್ಲಿ, ಮಕ್ಕಳ ಕಲಿಕೆಯ ಗುಣಮಟ್ಟದಲ್ಲಿ
ಅಥವಾ ಅವರ ಸ್ವಯಂ ಪ್ರಗತಿಯಲ್ಲಿ ಯಾವುದೇ ಸುಧಾರಣೆಗಳು ಆಗಿಲ್ಲ. ನಪಾಸು ಮಾಡದಿರುವ ನಿರ್ಧಾರಕ್ಕೆ ಮುನ್ನವೂ ಕಲಿಕಾ ಗುಣಮಟ್ಟ ಕುಸಿಯುತ್ತಿತ್ತು. ಆದರೆ ನಪಾಸು ಮಾಡದಿರುವ ನಿರ್ಧಾರವು ಮಕ್ಕಳು ಶಾಲೆ ಬಿಡುವುದನ್ನು ತಡೆದಿದೆ ಎಂದು ಗುರುತಿಸಿರುವುದು ಇಲ್ಲಿ ಗಮನಾರ್ಹ. ಇಂತಹ ನಿಯಮವನ್ನು ಮೊದಲಿನಿಂದ ಪಾಲಿಸಿಕೊಂಡು ಬಂದ ರಾಜ್ಯಗಳಾದ ಮಣಿಪುರ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಉತ್ತರಪ್ರದೇಶದಲ್ಲಿ ಮಕ್ಕಳ ಕಲಿಕೆಯಲ್ಲಿ ಹೆಚ್ಚಿನ ಸುಧಾರಣೆ ಕಂಡುಬಂದಿದೆ.
ಅನುತ್ತೀರ್ಣರಾದ ಹೆಚ್ಚಿನ ಮಕ್ಕಳು ಶಾಲೆ ಬಿಡುತ್ತಾರೆ. ಅದರಲ್ಲೂ ಫೇಲಾದ ಹೆಣ್ಣುಮಕ್ಕಳನ್ನು ಶಾಲೆ ಬಿಡಿಸಿಯೇ ತೀರುವುದು ಅನುಭವವೇದ್ಯ. ಫೇಲು ಎಂಬ ಹಣೆಪಟ್ಟಿಯು ಎಳೆಯ ಮನಸ್ಸಿಗೆ ಆಘಾತಕರ. ಮಕ್ಕಳ ಆತ್ಮಗೌರವವನ್ನು ಕುಂದಿಸಿ, ಭವಿಷ್ಯ ಕಟ್ಟಿಕೊಳ್ಳುವ ಅವರ ಆತ್ಮವಿಶ್ವಾಸವನ್ನು ಕಿತ್ತುಕೊಳ್ಳುತ್ತದೆ.
ಕಲಿಕೆ ಎನ್ನುವುದು ಒಂದು ಸುಂದರ ಬೌದ್ಧಿಕ ಅಪಘಾತ, ಅದು ಯಾವುದಾದರೂ ಒಂದು ಸಮಯದಲ್ಲಿ ನಡೆಯುತ್ತದೆ. ಆ ಪ್ರೌಢಿಮೆ ಘಟಿಸುವ ಕಾಲಕ್ಕಾಗಿ ಕಾಯುವ ಮೊದಲೇ ಮಕ್ಕಳನ್ನು ಫೇಲ್ ಮಾಡಿದರೆ, ಅವರನ್ನು ವ್ಯವಸ್ಥೆಯಿಂದ ಹೊರಗೆ ಇಟ್ಟಂತೆ ಆಗುತ್ತದೆ. ಇದರಿಂದ ಆ ಮಗುವಿಗೂ ಸಮಾಜಕ್ಕೂ ತುಂಬಲಾರದ ನಷ್ಟ.
ಅಮೆರಿಕದ ಶಿಕ್ಷಣ ಇಲಾಖೆಗೆ ಸೇರಿದ ‘ನಾಗರಿಕ ಹಕ್ಕುಗಳ ಕಚೇರಿ’ಯು (ಒಸಿಆರ್) 2010ರಲ್ಲಿ ಆ ದೇಶದ 7,000 ಶಾಲೆಗಳಲ್ಲಿ ಕೈಗೊಂಡ ಅಧ್ಯಯನದಿಂದ ಕಂಡುಕೊಂಡ ಸಂಗತಿಗಳು ಹೀಗಿವೆ: ಅತಿ ಹೆಚ್ಚು ಫೇಲಾದ ವಿದ್ಯಾರ್ಥಿಗಳು ಬಡವರು, ಅಲ್ಪಸಂಖ್ಯಾತರು, ಕಪ್ಪುವರ್ಣೀಯ ಸಮುದಾಯಗಳಿಗೆ ಸೇರಿದವರಾಗಿದ್ದರು. ಉಳ್ಳವರಾದ ಮತ್ತು ಶ್ವೇತವರ್ಣೀಯ ಮಕ್ಕಳು ಕಡಿಮೆ ಸಂಖ್ಯೆಯಲ್ಲಿ ಅನುತ್ತೀರ್ಣರಾಗಿದ್ದರು.
ಅನುತ್ತೀರ್ಣಗೊಳಿಸುವಿಕೆಯು ಕಲಿಕೆಯಲ್ಲಿ ಯಾವುದೇ ಪ್ರಮಾಣದ ಬದಲಾವಣೆ ಯನ್ನೂ ಮಾಡಿರಲಿಲ್ಲ. ಈ ಮಕ್ಕಳನ್ನು ಒಂದೇ ತರಗತಿಯಲ್ಲಿ ಒಂದಕ್ಕಿಂತ ಹೆಚ್ಚು ವರ್ಷ ಕೂರಿಸು ವುದರಿಂದ ಅವರಿಗೆ ಒದಗಿಸುವ ಸೌಲಭ್ಯಗಳನ್ನು ಪುನರಾವರ್ತನೆ ಮಾಡಬೇಕಾಗುತ್ತದೆ. ಇದರಿಂದ ಸರ್ಕಾರಕ್ಕೆ ಬರುವ ಖರ್ಚು 1,200 ಕೋಟಿ ಡಾಲರ್ (₹1.02 ಲಕ್ಷ ಕೋಟಿ). ಇಲ್ಲಿ ಪರಿಹಾರ ಬೋಧನೆಯ ಖರ್ಚು, ಈ ಮಕ್ಕಳು ಒಂದು ವರ್ಷ ತಡವಾಗಿ ವೃತ್ತಿಬದುಕನ್ನು ಪ್ರವೇಶಿಸುವುದರಿಂದ ಆಗುವ ನಷ್ಟವನ್ನೂ ಸೇರಿಸಿಕೊಂಡರೆ ಆಗುವ ಒಟ್ಟು ನಷ್ಟ ಇನ್ನೂ ಹೆಚ್ಚು. ಅಲ್ಲಿಗೆ ಫೇಲ್ ಮಾಡುವುದು ರಾಷ್ಟ್ರದ ಆರ್ಥಿಕ ದೃಷ್ಟಿಯಿಂದ ತುಂಬಾ ವೆಚ್ಚದಾಯಕ.
ನಮ್ಮಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ನೇಮಕ, ಕಲಿಕೆಗೆ ಒತ್ತು, ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನದ ಅರ್ಥಪೂರ್ಣ ಬಳಕೆಯಂತಹ ಕ್ರಮಗಳು ಮಕ್ಕಳ ಕಲಿಕಾ ಸಮಸ್ಯೆಯನ್ನು ಪರಿಹರಿಸು ತ್ತವೆ. ಅದುಬಿಟ್ಟು ವಾರ್ಷಿಕ ಪರೀಕ್ಷೆ ನಡೆಸಿ ಅವರನ್ನು ಅನುತ್ತೀರ್ಣಗೊಳಿಸುವುದರಿಂದ ಪ್ರಯೋಜನವಿಲ್ಲ
ಎಂದು ಸಂಶೋಧನೆಗಳು ಹೇಳುತ್ತವೆ. ಆದ್ದರಿಂದ ಇಂತಹ ನಿರ್ಧಾರವನ್ನು ದತ್ತಾಂಶಗಳ ವಿಶ್ಲೇಷಣೆ, ಜಿಜ್ಞಾಸೆ ಮತ್ತು ಅಧ್ಯಯನಗಳ ಆಧಾರದ ಮೇಲೆ ವೈಜ್ಞಾ ನಿಕ ನೆಲೆಯಲ್ಲಿ ತೆಗೆದುಕೊಳ್ಳಬೇಕೇ ವಿನಾ ಏಕಾಏಕಿ ಅಲ್ಲ. ವಾರ್ಷಿಕ ಪರೀಕ್ಷೆಗಳನ್ನು ವೈಭವೀಕರಿಸದೆ, ನಿತ್ಯ ಮೌಲ್ಯಾಂಕನದಿಂದ ಕಲಿಕೆಗೆ ಒತ್ತು ಕೊಡುವತ್ತ ಸಮಾಜ ಸಾಗಬೇಕಾಗಿದೆ.
ಲೇಖಕ: ಹಿರಿಯ ಉಪನ್ಯಾಸಕ, ಡಯಟ್, ಶಿವಮೊಗ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.