ADVERTISEMENT

ಸಂಗತ: ನದಿ ನೀರು, ಕಡಲಿಗೂ ಪಾಲಿದೆ!

ನದಿಗಳ ದಿಕ್ಕನ್ನು ಬದಲಿಸುವುದೆಂದರೆ ಪ್ರಕೃತಿಯ ಸ್ವಾಭಾವಿಕ ತಾಳವನ್ನು ತಪ್ಪಿಸಿದಂತೆ, ಜೇನುಗೂಡಿಗೆ ಕಲ್ಲು ಬೀಸಿದಂತೆ

ಬಿ.ಎಸ್.ಭಗವಾನ್
Published 3 ಅಕ್ಟೋಬರ್ 2023, 23:30 IST
Last Updated 3 ಅಕ್ಟೋಬರ್ 2023, 23:30 IST
<div class="paragraphs"><p>ನದಿಯ ಸಾಂಕೇತಿಕ ಚಿತ್ರ.</p></div>

ನದಿಯ ಸಾಂಕೇತಿಕ ಚಿತ್ರ.

   

‘ಓಡುವ ನದಿ ಸಾಗರವ ಸೇರಲೆಬೇಕು...’ ‘ಬಂಗಾರದ ಹೂವು’ ಸಿನಿಮಾದ ಈ ಹಾಡು ಜನಪ್ರಿಯ. ಪ್ರೇಮಿಗಳು ಎಂದಿದ್ದರೂ ಒಂದು ಎನ್ನುವುದನ್ನು ಬಿಂಬಿಸುವ ಅದರ ವಿಶ್ವಾಸವನ್ನು ಮೆಚ್ಚೋಣ. ಆದರೆ ಜಗತ್ತಿನಲ್ಲಿ ಸಾಗರ ಸೇರದ ನದಿಗಳ ಸಂಖ್ಯೆ ಕಡಿಮೆಯೇನಿಲ್ಲ!

ರಾಜಸ್ಥಾನದ ಅಜ್ಮೀರ್‌ ಜಿಲ್ಲೆಯ ನಾಗಾ ಬೆಟ್ಟಪ್ರದೇಶ ಮೂಲದ ಲುನಿ ನದಿಯು ಸಾಗರವನ್ನು ಸೇರುವುದಿಲ್ಲ. ನೂರು ಅಣೆಕಟ್ಟುಗಳನ್ನು ಕಟ್ಟಿಸಿಕೊಂಡ ನೈರುತ್ಯ ಅಮೆರಿಕ ಮೂಲದ ಕೊಲರಾಡೊ ನದಿಗೆ 1998ರಿಂದ ಸಮುದ್ರ ಕಾಣುವ ಮನಸ್ಸೇ ಇಲ್ಲ. ಹಾಗಾಗಿ, ನದಿಯನ್ನು ಹಿಂಬಾಲಿಸಿದರೆ ಅಂತಿಮವಾಗಿ ಸಾಗರವನ್ನು ತಲುಪಿಯೇ ತೀರುತ್ತೇವೆಂಬ ನುಡಿ ಹುಸಿ.

ADVERTISEMENT

ಹರಿವ ಹಾದಿಯಲ್ಲಿ ಇತರ ಜಲಮೂಲಗಳಲ್ಲಿ ವಿಲೀನಗೊಳ್ಳುವ ಅಥವಾ ಬತ್ತಿ ತಮ್ಮ ಅಸ್ಮಿತೆಯನ್ನು ಕಳೆದುಕೊಳ್ಳುವ ನದಿಗಳೆಷ್ಟೊ? ನದಿಗಳು ಪ್ರವಹಿಸಿ ಸೊರಗಿ ಸರೋವರಗಳಾಗುವುದೂ ಉಂಟು. ಸುಮಾರು 69,000 ಚದರ ಕಿ.ಮೀ. ವಿಸ್ತಾರದ ವಿಕ್ಟೋರಿಯಾ ಸರೋವರ 4 ಲಕ್ಷ ವರ್ಷಗಳಷ್ಟು ಹಳೆಯದು. 3 ಕೋಟಿ ಮಂದಿಗೆ ಬದುಕು ಕೊಟ್ಟಿರುವ ಅದು ತನ್ನ ಇತಿಹಾಸದಲ್ಲಿ ಜೀರ್ಣಿಸಿಕೊಂಡ ನದಿಗಳ ಲೆಕ್ಕವಿಟ್ಟವರಾರು?

ಪರ್ವತಪ್ರದೇಶಗಳಲ್ಲಿ ಉಗಮಿಸುವ ನದಿಗಳು ತಮ್ಮ ಯಾನದಲ್ಲಿ ಬಗೆ ಬಗೆ ಸವಾಲುಗಳನ್ನು ಎದುರಿಸಬೇಕಿದೆ. ವಿಶ್ವದಾದ್ಯಂತ ಮನುಷ್ಯ ತನ್ನ ಬಳಕೆಗೆ ಒಟ್ಟು 58,000 ಭಾರಿ ಅಣೆಕಟ್ಟುಗಳನ್ನು ನಿರ್ಮಿಸಿದ್ದಾನೆ. ನದಿಯ ಇಬ್ಭಾಗದಿಂದ ಪರಿಸರದ ಮೇಲಾಗುವ ಮಾರಕ ಪರಿಣಾಮವನ್ನು ಆತ ಯೋಚಿಸಿದಂತಿಲ್ಲ. ಸಾಗರದ ಮಟ್ಟ ಏರಿಕೆಯಷ್ಟೇ ಭೂಕುಸಿತವೂ ಆತಂಕಕಾರಿ.

ಜಲಾಶಯ ನಿರ್ಮಾಣ ಮತ್ತು ಅದರ ನಿರ್ವಹಣೆಗೆ ತಗಲುವ ವೆಚ್ಚ ಅಪಾರ. ಅದಕ್ಕಾಗಿ ಮೂಲತಃ ಯುಕ್ತ ನದಿ ಕಣಿವೆ ಬಳಿಯ ನೆಲಹರವಿನ ಆಯ್ಕೆಯೇ ಸವಾಲು. ಅದೇ ಹಣವನ್ನು ಸಾಗರದ ನೀರಿನ ನಿರ್ಲವ ಣೀಕರಣ ಸ್ಥಾವರಗಳನ್ನು ನೆಲೆಗೊಳಿಸಲು ಬಳಸುವ ಬಗ್ಗೆ ಆಮೂಲಾಗ್ರ ಚಿಂತನೆ ನಡೆಯಬೇಕಿದೆ. ಇದರ ಜೊತೆಗೇ ಶುದ್ಧ ನೀರಿನ ಹನಿ ಹನಿಯೂ ಅಮೃತವೆನ್ನು ವಂತೆ ಎಚ್ಚರಿಕೆಯ ಉಪಯೋಗ ಮತ್ತು ನೀರಿನ ಮರುಬಳಕೆ ನಡೆದೇ ತೀರಬೇಕು. ನದಿಗಳ ದಿಕ್ಕನ್ನು ಬದಲಿಸುವುದೆಂದರೆ ಪ್ರಕೃತಿಯ ಸ್ವಾಭಾವಿಕ ತಾಳವನ್ನು ತಪ್ಪಿಸಿದಂತೆ, ಜೇನುಗೂಡಿಗೆ ಕಲ್ಲು ಬೀಸಿದಂತೆ.

ನಿಸರ್ಗದ ನಿಘಂಟಿನಲ್ಲಿ ‘ವ್ಯರ್ಥ’ ಎನ್ನುವುದೇ ಇಲ್ಲ. ಸಮುದ್ರ ಸೇರುವ ನದಿಯ ಶುದ್ಧ ಜಲ ತನ್ನೊಂದಿಗೆ ಭೂಪ್ರದೇಶದ ಹಲವಾರು ಪೋಷಕಾಂಶ ಗಳನ್ನು ಒಯ್ಯುತ್ತದೆ. ಅವು ಸಾಗರಿಕ ಜೀವನಕ್ಕೆ ಆಹಾರ. ತಾಜಾ ನೀರು ಸಾಗರ ಸೇರುವುದಕ್ಕೆ ಅಡ್ಡಿಪಡಿ ಸಿದರೆ ಸಾಗರದ ಜೀವರಾಶಿ ಹಸಿವಿನಿಂದ ಕಂಗೆಡುವ ಪರಿಸ್ಥಿತಿ. ಎಂದಮೇಲೆ ಸಮುದ್ರಕ್ಕೆ ಇತಿಮಿತಿಯಲ್ಲಿ ನದಿಯ ನೀರನ್ನು ಹರಿಯಗೊಡುವುದೇ ವಿವೇಕ. ಅದುವೆ ಜನಕ್ಕೆ, ಸಸ್ಯ, ಪ್ರಾಣಿ ಪ್ರಭೇದಗಳ ಉಳಿವಿಗೆ, ಪರಿಸರ ವ್ಯವಸ್ಥೆಗೆ ಶ್ರೇಯಸ್ಕರ.

ನದಿಯು ಸಮುದ್ರಕ್ಕೆ ಸ್ವಾಭಾವಿಕವಾಗಿ ಧಾವಿಸಿ ‘ಫ್ಲಶ್’ ತರಹ ಅಲ್ಲಿನ ಕಲ್ಮಶಗಳನ್ನು ಚದುರಿಸುತ್ತದೆ. ಹೆಚ್ಚುವರಿ ಪೋಷಕಾಂಶಗಳೂ ಸಮುದ್ರದ ಆರೋಗ್ಯ ಹದಗೆಡಿಸುವ ಮಾಲಿನ್ಯಕಾರಕಗಳೇ. ಶುದ್ಧ ನೀರು ಹಗುರ, ಲವಣಯುಕ್ತ ನೀರಿನ ಮೇಲೆ ತೆಳುಪದರವಾಗಿ ತೇಲುತ್ತದೆ, ಕ್ರಮೇಣ ಸಾಗರದೊಂದಿಗೆ ವಿಲೀನಗೊಳ್ಳು ವುದು. ಆ ಆಸುಪಾಸಿನ ಲವಣದ ಅಂಶ ಕ್ಷಯಿಸುತ್ತದೆ, ಸಾಂದ್ರತೆಯೂ ಕಡಿಮೆಯಾಗುತ್ತದೆ. ಸೀಮಿತ ಲವಣಯುಕ್ತ ನೀರಿನಲ್ಲಷ್ಟೇ ಬದುಕಬಲ್ಲ ಹಲವು ಸಾಗರ ಜೀವಪ್ರಭೇದಗಳಿಗೆ ಅನುಕೂಲಕರ ಸನ್ನಿವೇಶ ಪ್ರಾಪ್ತವಾಗುವುದು. ಜೀವವೈವಿಧ್ಯಕ್ಕೆ ಸಾಗರದ ಕೊಡುಗೆ ನಿರ್ಣಾಯಕ.

ನದಿಯು ಸಮುದ್ರಕ್ಕೆ ಮರಳಿದರೇನೆ ಅದು ಕೆಸರು, ಹೂಳಿನಿಂದ ಸ್ವಲ್ಪವಾದರೂ ಮುಕ್ತವಾಗುವುದು. ಮನುಷ್ಯನಿಗೆ ಬೇಕಾದ ಅರ್ಧದಷ್ಟು ಆಹಾರವನ್ನು ಸಾಗರ ಪೂರೈಸುವುದು. ಒಂದು ವೇಳೆ ಸಮುದ್ರ ಸೇರುವ ಎಲ್ಲ ನದಿಗಳನ್ನೂ ನಿರ್ಬಂಧಿಸಿದರೆ ಹಸಿವು, ಬರ, ರೋಗರುಜಿನ ತಾಂಡವವಾಡುತ್ತವೆ. ಜೀವ ಪ್ರಭೇದಗಳ ತವರು, ಮೂಲ ಸಂಪನ್ಮೂಲಗಳ ಭಂಡಾರವಾದ ಸಾಗರವು ಭೂಗ್ರಹದ ವಾತಾವರಣ ವನ್ನು ನಿಯಂತ್ರಿಸುತ್ತದೆ. ವಿಶ್ವದ ಆರ್ಥವ್ಯವಸ್ಥೆ, ವ್ಯಾಪಾರ, ಪ್ರವಾಸೋದ್ಯಮಕ್ಕೆ ಸಮುದ್ರವೇ ಅಡಿ ಗಲ್ಲು. ಕಡಲತೀರ ಪ್ರದೇಶಗಳಿಗೆ ಹೊಂದಿಕೊಂಡ ಸೌಂದರ್ಯ, ಪ್ರಾಕೃತಿಕ ರಮ್ಯತೆ ಹಾಗೂ ಸಾಂಸ್ಕೃತಿಕ ಮೌಲ್ಯಗಳು ಕಳೆದುಹೋಗುತ್ತವೆ.

ನದಿಮುಖದಲ್ಲಿ (ನದಿಯು ಸಾಗರ ಸೇರುವ ಸ್ಥಳ) ನೀರಿರದಿದ್ದರೆ ಸಾಗರ ಬರಿದಾಗುವುದು. ಆಮ್ಲಜನಕದ ಪ್ರಧಾನ ಆಕರವಾದ ಸಾಗರವೇ ಇಲ್ಲವಾದರೆ ಬದುಕೆಲ್ಲಿ? ಪೂರ್ವ-ಪಶ್ಚಿಮದ ಸಮನ್ವಯ ಸಾಹಿತಿಯೆಂದು ಪ್ರಸಿದ್ಧರಾಗಿದ್ದ ಲೆಬನಾನ್ ಮೂಲದ ಖಲೀಲ್ ಗಿಬ್ರಾನ್‌ ಅವರ ಕವನದ ಸಾಲಿದು: ‘ನದಿ ಸಮುದ್ರಕ್ಕೆ ಬರಲಿ, ಅದು ಹಿಂದಕ್ಕೆ ಹೋಗಲಾಗದು’. ನದಿಯು ಸಮುದ್ರ ಸೇರುವುದು ನಿಸರ್ಗ ನಿಯೋಜಿಸಿರುವ ‘ಜಲಚಕ್ರ’ ಎಂಬ ವಿದ್ಯಮಾನ. ಸಾಗರದ ನೀರು ಆವಿಯಾಗಿ ಮೋಡವಾಗುವುದು, ಮೋಡದಿಂದ ಮಳೆ- ಬಾಷ್ಪೀಕರಣ ಮತ್ತು ಸಾಂದ್ರೀಕರಣದ ಈ ಯಜ್ಞ ಸಾಗಲೇಬೇಕು.

ಜಾಗತಿಕವಾಗಿ ಸುಮಾರು 6,000 ನದಿಗಳು ಸಮುದ್ರ ಸೇರುತ್ತಿವೆ. ನದಿಯ ನೀರನ್ನು ಬೇಕಾದಷ್ಟು ಬಳಸಿ, ಉಳಿದದ್ದನ್ನು ಸಮುದ್ರಕ್ಕೆ ಹರಿಯಗೊಡುವುದೇ ಸಾರ್ಥಕ. ಗೊಬ್ಬರ ಹಾಕಿದ ಹೊಲ ಕೆಡದು ಎನ್ನುವಂತೆ ಸಿಹಿನೀರು ಸುರಿದ ಸಾಗರ ಕಿಂಚಿತ್ತಾದರೂ
ಶ್ರೀಮಂತವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.