ADVERTISEMENT

ಸಂಗತ | ‘ಅತಿಥಿ ಸತ್ಕಾರ’ಕ್ಕೆ ಬೇಕು ಇಚ್ಛಾಶಕ್ತಿ

ಅತಿಥಿ ಉಪನ್ಯಾಸಕರ ನೇಮಕಾತಿಯು ಔದಾರ್ಯವಲ್ಲ, ಸರ್ಕಾರದ ಕರ್ತವ್ಯ

ಸಿ.ಎನ್.ರಾಮಚಂದ್ರನ್
Published 17 ಜನವರಿ 2025, 0:30 IST
Last Updated 17 ಜನವರಿ 2025, 0:30 IST
   

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಎರಡು ದಶಕಗಳಿಂದ ಅತ್ಯಂತ ಕಡಿಮೆ ಗೌರವಧನಕ್ಕೆ ಕೆಲಸ ಮಾಡುತ್ತಾ ಬಂದಿದ್ದ ಐದು ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳಲಿದ್ದಾರೆ ಎಂಬ ವರದಿಯನ್ನು (ಪ್ರ.ವಾ., ಜ. 12) ಓದಿ ಗಾಢ ವಿಷಾದ ಕವಿಯಿತು. ಈ ಅವ್ಯವಸ್ಥೆ ಎಂದಿಗೂ ಮುಗಿಯದ ಕಥೆ ಎನಿಸಿತು. ಒಂದೆಡೆ, ಕಡಿಮೆ ವೇತನ ಪಡೆದು, 15– 20 ವರ್ಷ ಕಾಲೇಜುಗಳಲ್ಲಿ ಬೋಧನೆ ಮಾಡಿ, ಇದ್ದಕ್ಕಿದ್ದಂತೆ ಕೆಲಸ ಕಳೆದುಕೊಳ್ಳುವ ಸ್ಥಿತಿಯಲ್ಲಿ ಅತಿಥಿ ಉಪನ್ಯಾಸಕರು; ಮತ್ತೊಂದೆಡೆ, ಯುಜಿಸಿ ಕಾಲಕಾಲಕ್ಕೆ ನಿರ್ಧರಿಸುವ ಶೈಕ್ಷಣಿಕ ಅರ್ಹತೆ ಹಾಗೂ ಹೈಕೋರ್ಟ್ ತೀರ್ಪು. ಈ ಅಡಕತ್ತರಿಯಲ್ಲಿ ಸರ್ಕಾರ ಸಿಲುಕಿಕೊಂಡಿದ್ದು ಹೇಗೆ? ಇಂತಹ ಪರಿಸ್ಥಿತಿಗೆ ಯಾರು ಜವಾಬ್ದಾರರು? ಉತ್ತರ: ಹಿಂದಿನ 40 ವರ್ಷಗಳಿಂದ ಶಿಕ್ಷಣಕ್ಕೆ ಯಾವ ಆದ್ಯತೆಯನ್ನೂ ಕೊಡದ ಸರ್ಕಾರಗಳ ಅಸಂಬದ್ಧ ಶಿಕ್ಷಣ ನೀತಿ.

ಕೇಂದ್ರ ಸರ್ಕಾರದ ಆರ್ಥಿಕ ಮಿತವ್ಯಯ ನೀತಿ ಪ್ರಾರಂಭವಾದುದು, ನನಗೆ ನೆನಪಿರುವಂತೆ 1980ರಲ್ಲಿ. ಅಂದಿನಿಂದ ಎಲ್ಲ ಸರ್ಕಾರಗಳಿಗೂ ಇದೊಂದು ಸುಲಭವಾದ ಮಂತ್ರದಂಡವಾಯಿತು. ಅದನ್ನು ಕೈಯಲ್ಲಿ ಹಿಡಿದು, ಮೊದಲು ಬಡಿದುದು ಶಿಕ್ಷಣ ವ್ಯವಸ್ಥೆಗೆ. ಶಿಕ್ಷಕರ ನಿವೃತ್ತಿ ಮತ್ತು ಸ್ವಯಂ ನಿವೃತ್ತಿಯ ಕಾರಣದಿಂದ ವಿಶ್ವವಿದ್ಯಾಲಯ- ಕಾಲೇಜುಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿಯಾದಾಗ ಅವುಗಳನ್ನು ತುಂಬಲು ಸಮಯ ಬೇಕಾಗುತ್ತದೆ ಎಂಬ ನೆಪದಿಂದ ಆ ಸ್ಥಾನಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಲು ಸರ್ಕಾರಗಳು ಪ್ರಾರಂಭಿಸಿದವು. ಆದರೆ, ಎಲ್ಲ ಪಕ್ಷಗಳ ನೇತೃತ್ವದ ಎಲ್ಲ ಸರ್ಕಾರಗಳೂ ಹೊಸ ವಿಶ್ವವಿದ್ಯಾಲಯ
ಗಳು ಹಾಗೂ ಕಾಲೇಜುಗಳನ್ನು ಸ್ಥಾಪಿಸಲು ತುಂಬಾ ಉತ್ಸಾಹ ತೋರಿದವು. ಈ ಕಾರಣದಿಂದ, 15– 20 ವರ್ಷಗಳಲ್ಲಿ ಪ್ರತಿ ವಿಭಾಗದಲ್ಲಿಯೂ ಅತಿಥಿ ಉಪನ್ಯಾಸಕರ ಸಂಖ್ಯೆಯೇ ಹೆಚ್ಚಾಯಿತು.

ಇಂದು, ಎಲ್ಲ ಸರ್ಕಾರಿ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳ ಪ್ರತಿ ವಿಭಾಗದಲ್ಲಿಯೂ ಅತಿಥಿ ಉಪನ್ಯಾಸಕರಿದ್ದರೆ, ಕೆಲವು ವಿಭಾಗಗಳಲ್ಲಿ ಪೂರ್ಣಾವಧಿ ಉಪನ್ಯಾಸಕರು ಇಲ್ಲವೇ ಇಲ್ಲ ಎಂಬಂತಾಗಿದೆ. ಬೋಧಕನಾಗಿ ನಾನು ಕಾರ್ಯನಿರ್ವಹಿಸಿದ ಮಂಗಳೂರು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದಲ್ಲಿ ಒಬ್ಬರು ಪೂರ್ಣಾವಧಿ ಪ್ರಾಧ್ಯಾಪಕರಿದ್ದರೆ, ಮೂವರು ಅತಿಥಿ ಉಪನ್ಯಾಸಕರಿದ್ದಾರೆ. ಇನ್ನೆರಡು ವರ್ಷಗಳಲ್ಲಿ ಆ ಪ್ರಾಧ್ಯಾಪಕರು ನಿವೃತ್ತರಾದರೆ, ಇಂಗ್ಲಿಷ್ ವಿಭಾಗದಲ್ಲಿ ಯಾರೂ ಪೂರ್ಣಾವಧಿ ಅಧ್ಯಾಪಕರಿರು ವುದಿಲ್ಲ. ಪರಿಣಾಮವಾಗಿ, ಆ ವಿಭಾಗದ ನೇಮಕಾತಿ ಮಂಡಳಿ, ಅಧ್ಯಯನ ಮಂಡಳಿಯಲ್ಲಿ ವಿಭಾಗದವರು ಯಾರೂ ಇಲ್ಲದೆ, ಎಲ್ಲವನ್ನೂ ಡೀನ್‌ ನಿರ್ವಹಿಸಬೇಕಾಗುತ್ತದೆ. ಇನ್ನು, ಆ ವಿಭಾಗದವರು ಅಕಡೆಮಿಕ್ ಕೌನ್ಸಿಲ್‌, ಸಿಂಡಿಕೇಟ್‌ನಂತಹ ನೀತಿ ನಿರೂಪಕ ಅಂಗಗಳಲ್ಲಿ ಇರಲಾಗುವುದಿಲ್ಲ. ಎಲ್ಲ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ಈ ಪರಿಸ್ಥಿತಿಯಿದೆ.

ADVERTISEMENT

ಕರ್ನಾಟಕದ ಹೆಮ್ಮೆಯ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಿಲ್ಲದೆ ಎರಡು ವಿಭಾಗಗಳನ್ನು ಮುಚ್ಚಬೇಕಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಹಾಗೆಯೇ, ಮೈಸೂರಿನ ಒಂದು ಪ್ರಸಿದ್ಧ ಕಾಲೇಜಿನಲ್ಲಿ ಪ್ರಾಂಶುಪಾಲರ ನೇಮಕವೇ ಆಗದೆ, ಅಲ್ಲಿರುವ ಯಾವ ಶಿಕ್ಷಕರಲ್ಲಿ ಯಾರು ಬೇಕಾದರೂ ಇಚ್ಛಿಸಿದರೆ ‘ಪ್ರಿನ್ಸಿಪಾಲ್’ ಆಗಬಹುದು. ಅಂತಹ ಪ್ರಿನ್ಸಿಪಾಲರಿಗೆ ಹಣಕಾಸಿನ ಯಾವ ಅಧಿಕಾರವೂ ಇಲ್ಲ ಹಾಗೂ ಅವರ ಸಂಬಳವೇನೂ ಹೆಚ್ಚಾಗುವುದಿಲ್ಲ. ಕುಳಿತುಕೊಳ್ಳುವುದಕ್ಕೆ ಪ್ರಿನ್ಸಿಪಾಲರ ಕುರ್ಚಿ ಮಾತ್ರ ಇರುತ್ತದೆ.  

ಇಂತಹ ಪರಿಸ್ಥಿತಿಯಲ್ಲಿ ನಷ್ಟವಾಗುವುದು ವಿದ್ಯಾರ್ಥಿಗಳಿಗೆ, ಶೋಷಣೆಗೆ ಒಳಗಾಗುತ್ತಿರುವುದು ಅತಿಥಿ ಉಪನ್ಯಾಸಕರು. ಪೂರ್ಣಾವಧಿ ಉಪನ್ಯಾಸಕ ರಿಗೆ ದೊರಕುವ ಸಂಬಳದ ಅರ್ಧದಷ್ಟು ಸಂಬಳವನ್ನು ಮಾತ್ರ ಅತಿಥಿ ಉಪನ್ಯಾಸಕರಿಗೆ ಕೊಡಲಾಗುತ್ತದೆ. ಅಷ್ಟೇ ಅಲ್ಲದೆ, ಅವರಿಗೆ ಬೇಸಿಗೆ ರಜಾಕಾಲದಲ್ಲಿ ಎರಡು ತಿಂಗಳು ಸಂಬಳವಿಲ್ಲ. ಇನ್ನು ಹೌಸಿಂಗ್ ಅಲೋಯನ್ಸ್, ಡಿ.ಎ., ನಿವೃತ್ತಿ ವೇತನದಂತಹ ಯಾವ ಸೌಲಭ್ಯವೂ ಇಲ್ಲ. ಅರ್ಥಾತ್ ಅತಿಥಿ ಉಪನ್ಯಾಸಕರ ನೇಮಕಾತಿಯಿಂದ ಸರ್ಕಾರಕ್ಕೆ ಪ್ರತಿವರ್ಷವೂ ಲಕ್ಷಾಂತರ ಹಣ ಉಳಿಯುತ್ತದೆ.

ಇಲ್ಲೊಂದು ಪ್ರಶ್ನೆ ಏಳಬಹುದು. ಇಲ್ಲಿಯವರೆಗೆ, ಎಚ್ಚರಿಕೆಯನ್ನು ಕೊಟ್ಟರೂ ಹೆಚ್ಚಿನ ಅತಿಥಿ ಉಪನ್ಯಾಸಕರು ಯುಜಿಸಿ ನಿಗದಿಪಡಿಸಿರುವ ಪಿಎಚ್.ಡಿ ಹಾಗೂ ಎನ್‌ಇಟಿ ಅರ್ಹತೆಗಳನ್ನು ಪಡೆದಿಲ್ಲ, ಆದ್ದರಿಂದ ಯುಜಿಸಿ ನಿಯಮಗಳ ಪ್ರಕಾರ ಅವರು ಪೂರ್ಣಾವಧಿ ಬೋಧಕರಾಗಲು ಹೇಗೆ ಸಾಧ್ಯ? ಆದರೆ, ಇಲ್ಲಿ ಗಮನಿಸಬೇಕಾದುದು, ಈ ಉಪನ್ಯಾಸಕರಿಗೆ ಪಿಎಚ್.ಡಿ. ಮಾಡಲು ಅಥವಾ ಎನ್‌ಇಟಿ ಪಡೆಯಲು ಯಾವ ಬಗೆಯ ಉತ್ತೇಜನವಿದೆ? ಈಗಾಗಲೇ ಈ ಪದವಿಗಳನ್ನು ಪಡೆದವರೂ ಅತಿಥಿ ಉಪನ್ಯಾಸಕರೇ ಆಗಿ ಉಳಿದಿದ್ದಾರೆ. ಹಾಗಿರುವಾಗ, ನಡು ವಯಸ್ಸಿನಲ್ಲಿ ಹಣ ಹಾಗೂ ಸಮಯವನ್ನು ಬೇಡುವ ಪಿಎಚ್‌.ಡಿ. ಮಾಡಲು ಯಾರಿಗೆ ಉತ್ಸಾಹವಿರುತ್ತದೆ?

ಸರ್ಕಾರಗಳ ಬಳಿ ಯುಜಿಸಿ ನಿರ್ಧರಿಸಿರುವಷ್ಟು ಸಂಬಳವನ್ನು ಕೊಡಲು ಹಣವಿಲ್ಲದಿದ್ದರೆ, ಜಿಲ್ಲೆಗೊಂದು ವಿಶ್ವವಿದ್ಯಾಲಯ ಮತ್ತು ತಾಲ್ಲೂಕಿಗೊಂದು ಕಾಲೇಜು ಸ್ಥಾಪಿಸುವುದು ಎಷ್ಟು ಸರಿ? ಹಾಗೆಯೇ ಒಂದೆರಡು ವರ್ಷ ಸಮ್ಮೇಳನಗಳು, ಜಯಂತಿಗಳು, ಉತ್ಸವದಂತಹವುಗಳಿಗೆ ಅನುದಾನವನ್ನು ನಿಲ್ಲಿಸಬಹುದು. ಈ ವರ್ಷ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ನೀಡಿದ ಅನುದಾನ ₹ 25 ಕೋಟಿ. ಆ ಹಣವು ಒಂದು ಕಾಲೇಜಿನ ಎಲ್ಲಾ ಉಪನ್ಯಾಸಕರ ಒಂದು ವರ್ಷದ ಸಂಬಳವಾಗುತ್ತದೆ. ಆದರೆ ಜನಪ್ರಿಯವಲ್ಲದ ಇಂತಹ ಮಿತವ್ಯಯದ ಕ್ರಮಗಳಿಗೆ ಯಾವ ಸರ್ಕಾರ ಮುಂದಾಗುತ್ತದೆ? 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.