ಬಹುತ್ವ ಭಾರತದ ಸೌಂದರ್ಯಕ್ಕೆ ಹೊಳಪು ನೀಡುವಲ್ಲಿ ಹಾಗೂ ವೈಚಾರಿಕ ನೆಲೆಗಳನ್ನು ವಿಸ್ತರಿಸುವಲ್ಲಿ ‘ನಾಸ್ತಿಕ ಪರಂಪರೆ’ ಬಹು ದೊಡ್ಡ ಕೊಡುಗೆ ನೀಡಿದೆ.
‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ಯ ಹಿನ್ನೆಲೆಯಲ್ಲಿ ನಡೆಯುತ್ತಿರುವ ಚರ್ಚೆಗಳಲ್ಲಿ, ‘ನಾಸ್ತಿಕ’ ಎನ್ನುವ ಆಯ್ಕೆಯ ಅವಕಾಶ ಸಮೀಕ್ಷೆಯಲ್ಲಿ ಇರುವುದಕ್ಕೆ ವಿರೋಧವೂ ಒಂದಾಗಿದೆ.
ಈ ದೇಶದ ಮೂಲ ದಾರ್ಶನಿಕ ಪಂಥಗಳಾಗಿರುವ ನ್ಯಾಯ, ವೈಶೇಷಿಕ, ಯೋಗ, ಸಾಂಖ್ಯ, ಮೀಮಾಂಸೆ, ಲೋಕಾಯತ ಹಾಗೂ ಜೈನ, ಬೌದ್ಧಧರ್ಮಗಳೆಲ್ಲ ನಾಸ್ತಿಕವಾದಿ ಪರಂಪರೆಯಿಂದ ರೂಪುಗೊಂಡಿವೆ. ಪ್ರಾಚೀನ ಭಾರತದ ಧರ್ಮ ಯಾವತ್ತೂ ತನ್ನ ಕೇಂದ್ರಪ್ರಜ್ಞೆಯಲ್ಲಿ ದೇವರು, ದೇವಸ್ಥಾನ, ಆರಾಧನೆಗಳಂತಹ ಕಲ್ಪನೆಗಳನ್ನು ಹೊಂದಿರಲಿಲ್ಲ. ಬದಲಿಗೆ ಶೀಲ, ಕರುಣೆ, ಮೈತ್ರಿ ಹಾಗೂ ನೈತಿಕತೆಯನ್ನೇ ಅನುಸರಿಸಿಕೊಂಡು ಬಂದಿತ್ತು. ಸತ್ಯಾನ್ವೇಷಣೆ ಹಾಗೂ ಸತ್ಯದ ಅನುಸರಣೆಗೆ ಆದ್ಯತೆ ನೀಡಲಾಗಿತ್ತು. ಯಾವುದೋ ಕಾಲಘಟ್ಟದಲ್ಲಿ ಇಲ್ಲಿಯ ನೆಲಕ್ಕೆ ದೇವರು, ಆರಾಧನೆ, ಯಾಗ, ಯಜ್ಞ ಬಲಿ ಮೊದಲಾದ ನಂಬಿಕೆಗಳ ಪ್ರವೇಶವಾಯಿತು.
ವೇದಗಳು, ರಾಮಾಯಣ, ಮಹಾಭಾರತದ ಕಾಲದಲ್ಲಿಯೂ ಮಂದಿರ ಸ್ಥಾಪನೆಯ ಪ್ರಸ್ತಾಪ ಇಲ್ಲದಿರುವುದನ್ನು ಗಮನಿಸಬಹುದು. ಈ ಆಸ್ತಿಕತೆಯ ಜೊತೆ ಜೊತೆಗೆ ಮತಾಚಾರಗಳು ಹುಟ್ಟು ಪಡೆದವು. ಮೌಢ್ಯ, ಪವಾಡಗಳ ಕಲ್ಪನೆ, ತನ್ನದು ಮಾತ್ರ ಶ್ರೇಷ್ಠ ಎಂಬ ಜೀವವಿರೋಧಿ ನಿಲುವು ಮುನ್ನೆಲೆಗೆ ಬಂದ ಪರಿಣಾಮವಾದ ಧಾರ್ಮಿಕ ಹಿಂಸೆ ವರ್ತಮಾನದ ಬದುಕನ್ನು ಅಸಹನೀಯಗೊಳಿಸಿದೆ.
ಹಿಟ್ಲರನ ಧಾರ್ಮಿಕ ಶ್ರೇಷ್ಠತೆಯ ವ್ಯಸನದಿಂದಾಗಿಯೇ ಎರಡು ವಿಶ್ವಯುದ್ಧಗಳು ಸಂಭವಿಸಿವೆ. ಇಂದಿನ ಪ್ಯಾಲೆಸ್ಟೀನ್– ಇಸ್ರೇಲ್ ಸಂಘರ್ಷಕ್ಕೂ ಇದುವೇ ಕಾರಣವಾಗಿದೆ. ಹತ್ತನೇ ಶತಮಾನದ ಆಚೀಚೆ ಸಂಭವಿಸಿದ ಬೌದ್ಧ, ಜೈನ, ವಚನಕಾರರ ಮೇಲಿನ ಅಮಾನುಷ ಹತ್ಯಾಕಾಂಡ ನಡೆದದ್ದು ಉಗ್ರ ಆಸ್ತಿಕವಾದಿಗಳಿಂದ. ನಾಸ್ತಿಕರನ್ನು, ಅನ್ಯಧರ್ಮೀಯರನ್ನು ಈ ಜಗತ್ತಿನಿಂದಲೇ ಉಚ್ಚಾಟಿಸುತ್ತೇವೆ ಎನ್ನುವ ಮತಾಂಧರ ಹಿಂಸಾರತಿಯಿಂದಾಗಿ ಮನುಕುಲ ಇನ್ನಿಲ್ಲದಷ್ಟು ನಷ್ಟವನ್ನು ಅನುಭವಿಸಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ಪ್ರಸಕ್ತ ಸಮೀಕ್ಷೆಯ ಭಾಗವಾದ ‘ನಾಸ್ತಿಕ’ ಎನ್ನುವ ಆಯ್ಕೆಯ ಔಚಿತ್ಯವನ್ನು ಗಮನಿಸಬೇಕು.
ಭಾರತ ಒಂದು ಧರ್ಮ, ಒಂದು ಭಾಷೆ, ಒಂದು ಜಾತಿ, ಒಂದು ವರ್ಣದ ನಾಡಲ್ಲ. ಒಂದು ವಾದ, ಒಂದು ಸಿದ್ಧಾಂತದ ನೆಲವೂ ಅಲ್ಲ. ಅನೇಕ ದಾರ್ಶನಿಕತೆಗಳು ಇಲ್ಲಿ ಹುಟ್ಟಿ ಬೆಳೆದಿವೆ. ಕಾಲ ಕಾಲಕ್ಕೆ ನೂರೆಂಟು ವಾಗ್ವಾದಗಳನ್ನು ಜೀವಂತವಾಗಿಟ್ಟುಕೊಂಡು ಬಂದ ನೆಲವಿದು. ಈ ಎಲ್ಲ ವೈವಿಧ್ಯ, ವಿಶೇಷಗಳನ್ನು ನಮ್ಮ ಸಂವಿಧಾನ ನಿರ್ಮಾತೃಗಳು ಪರಿಗಣಿಸಿ ಬಹುತ್ವದ ನೆಲೆಯಲ್ಲಿ ಅದನ್ನು ರಚಿಸಿದ್ದಾರೆ.
ಬಹುತ್ವ ಭಾರತದ ಮಣ್ಣಲ್ಲಿ ಆಸ್ತಿಕರ ಹಾಗೆಯೇ ನಾಸ್ತಿಕರು ಹಾಗೂ ಆಜ್ಞೇಯತಾವಾದಿಗಳೂ ಇದ್ದಾರೆ, ಇರಬೇಕು ಕೂಡ. ಆಸ್ತಿಕರಿಗೆ ಇಲ್ಲಿ ಜಾಗವಿಲ್ಲ ಎನ್ನುವ ಕಮ್ಯುನಿಸ್ಟ್‌ವಾದಿಗಳ ಅತಿರೇಕದಂತೆಯೇ, ಪ್ರಜಾತಂತ್ರ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ ಭಾರತದಲ್ಲಿ ನಾಸ್ತಿಕರು ಇರಕೂಡದು ಎನ್ನುವುದು ಹಾಸ್ಯಾಸ್ಪದ. ಮೇಲಾಗಿ ಒಂದು ದೇಶದ ಅಭಿವೃದ್ಧಿ ಹಾಗೂ ವಿಕಾಸಕ್ಕೆ ಬೇಕಾದದ್ದು ಪ್ರಾಮಾಣಿಕತೆ, ನೈತಿಕತೆ, ಬದ್ಧತೆ, ಮಾನವೀಯತೆ, ಜಾತ್ಯತೀತತೆ ಹಾಗೂ ವೈಚಾರಿಕತೆ ಇರುವ ಸತ್ಯಪರ ಮನಸ್ಸುಗಳೇ ವಿನಾ ವ್ಯಕ್ತಿಯೊಬ್ಬ ಆಸ್ತಿಕನೋ ನಾಸ್ತಿಕನೋ ಎಂಬ ಚರ್ಚೆ ಅಲ್ಲ. ನಾಸ್ತಿಕತೆಯನ್ನು ವಿರೋಧಿಸುವವರು ಗಮನಿಸಬೇಕಾದದ್ದು: ಸಂವಿಧಾನ ಕರ್ತೃ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಾಸ್ತಿಕರಾಗಿದ್ದರು ಮತ್ತು ಅವರು ತಮ್ಮ ಆಧ್ಯಾತ್ಮಿಕ ಗುರುವಾಗಿ ಒಪ್ಪಿಕೊಂಡಿದ್ದ ಬುದ್ಧ ಆಜ್ಞೇಯತಾವಾದಿ.
ಭಾರತದಲ್ಲಿ ಸಾತ್ವಿಕ ಆಸ್ತಿಕತೆಯ ಪರಿಕಲ್ಪನೆ, ಮಾದರಿಯೊಂದಿತ್ತು. ಬಸವಣ್ಣ, ಕನಕದಾಸ, ಕಬೀರ, ಪರಮಹಂಸ, ವಿವೇಕಾನಂದ, ನಾರಾಯಣಗುರು, ರಮಣ ಮಹರ್ಷಿ, ಗಾಂಧಿ, ಕುವೆಂಪು, ಮೊದಲಾದವರು ಅನುಸರಿಸಿಕೊಂಡು ಬಂದ ಮಾದರಿಯದು. ವಚನಕಾರರು, ಹರಿದಾಸರು, ಸೂಫಿಗಳನ್ನೂ ಈ ಪರಂಪರೆಗೆ ಸೇರಿಸಿಕೊಳ್ಳಬಹುದು. ಜಾತಿ–ಧರ್ಮಗಳ ಹೆಸರಲ್ಲಿ ಮನುಕುಲವನ್ನು ಬೇರ್ಪಡಿಸದೆ, ಮೂಢನಂಬಿಕೆ ಮತಾಚಾರಗಳನ್ನು ಹೊರಗಿಟ್ಟು ಸತ್ಯದ ಸ್ಥಾನದಲ್ಲಿ ದೇವರನ್ನು ಕಾಣುವ ಅಪರೂಪದ ಆಸ್ತಿಕತೆಯ ಮಾದರಿಯದು. ದೇವರೇ ಸತ್ಯ ಎನ್ನುವ ಈ ಮಹಾತ್ಮರು ಅಂತಿಮವಾಗಿ ಬಂದು ತಲುಪಿದ್ದು ‘ಸತ್ಯವೇ ದೇವರು’ ಎಂಬ ನೆಲೆಗೆ.
ಪೆರಿಯಾರ್ ನಾಸ್ತಿಕತೆಯನ್ನು ಬೋಧಿಸಿದ ತಮಿಳುನಾಡಲ್ಲಿ ಅಸಂಖ್ಯಾತ ಮಂದಿರಗಳು ತಲೆಯೆತ್ತಿ ನಿಂತಿವೆ. ಇಂದು ಜನ ನಾಸ್ತಿಕರನ್ನು ಅನುಮಾನದಿಂದ ನೋಡುತ್ತಿದ್ದಾರೆ ಕೂಡ. ಶೀಲಪ್ರಜ್ಞೆ, ನೈತಿಕತೆಗಳಿಲ್ಲದ ನಾಸ್ತಿಕತೆ ಉಗ್ರ ಆಸ್ತಿಕತೆಯಷ್ಟೇ ಅಪಾಯಕಾರಿ. ಅಂಬೇಡ್ಕರ್, ಲೋಹಿಯಾರವರ ನಾಸ್ತಿಕತೆಯ ಮಾದರಿ ಅನುಸರಣೀಯ. ಭಾರತದ ಉಗ್ರ ನಾಸ್ತಿಕವಾದಿಗಳು ಧರ್ಮ, ಅಧ್ಯಾತ್ಮ, ರಾಮ–ಕೃಷ್ಣ ಮೊದಲಾದ ಪದಗಳನ್ನು ಕೇಳಿಸಿಕೊಳ್ಳಲೂ ಸಿದ್ಧರಿಲ್ಲ. ಅಂಬೇಡ್ಕರ್ ಬೌದ್ಧಧರ್ಮದ ಆಧ್ಯಾತ್ಮಿಕ ವಿಚಾರಗಳನ್ನು ಮುಕ್ತವಾಗಿ ಚರ್ಚಿಸಬಲ್ಲರು. ಲೋಹಿಯಾರವರು, ರಾಮ– ಕೃಷ್ಣ– ಶಿವ– ದ್ರೌಪದಿ ಮೊದಲಾದ ಪಾತ್ರಗಳನ್ನು ಭಾರತೀಯ ಕಾವ್ಯ ಪರಂಪರೆಯ ಹಿನ್ನೆಲೆಯಲ್ಲಿ ವಿಶ್ಲೇಷಿಸಬಲ್ಲರು. ರಾಮಾಯಣದ ರಾಮ, ಮಹಾಭಾರತ– ಭಗವದ್ಗೀತೆಯ ಕೃಷ್ಣ ಇವರೆಲ್ಲ ಅನುಸರಣೆಯ ಮಾದರಿಗಳೇ ವಿನಾ ಆರಾಧನೆಯ ಸಂಕೇತಗಳಲ್ಲ ಎಂಬುದನ್ನು ತೋರಿಸಿಕೊಟ್ಟದ್ದು ಕೂಡ ಸಾತ್ವಿಕ ನಾಸ್ತಿಕತೆ ಎಂಬುದನ್ನು ಮರೆಯಲಾಗದು. ಭಾರತದ ಬಹುತ್ವದ ಸೌಂದರ್ಯವನ್ನು ಕಾಪಾಡುವಲ್ಲಿ, ವೈಚಾರಿಕ ನೆಲೆಗಳನ್ನು ವಿಸ್ತರಿಸುವಲ್ಲಿ ಈ ದೇಶದ ನಾಸ್ತಿಕ ಪರಂಪರೆ ಬಹುದೊಡ್ಡ ಕೊಡುಗೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.