
ಕೊಪ್ಪಳ ಜಿಲ್ಲೆ ಪರಿಸರ ವಿಷಮಯವಾಗಿದೆ. ಮಾಲಿನ್ಯ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ನೂರು ದಿನ ತುಂಬಿದರೂ, ಸರ್ಕಾರ ಮೌನವಾಗಿದೆ.
ಕೊಪ್ಪಳದ ಸಂಕಟ ಸರ್ಕಾರಕ್ಕೆ ಕಾಣಿಸದೆ?
ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದು.
ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ,
ನಾರಿ ತನ್ನ ಮನೆಯಲ್ಲಿ ಕಳುವಡೆ,
ತಾಯ ಮೊಲೆವಾಲು ನಂಜಾಗಿ ಕೊಲುವಡೆ,
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ!
ಬಸವಣ್ಣನವರ ಈ ವಚನ ಮನುಕುಲದ ಜವಾಬ್ದಾರಿಯನ್ನು ಎಚ್ಚರಿಸುವಂತಿದೆ. ಕೊಪ್ಪಳ ಜಿಲ್ಲೆಯ ಸಾಹಿತಿ, ಪರಿಸರ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಅವರು ನಮ್ಮನ್ನು ಕೊಪ್ಪಳ ಜಿಲ್ಲೆಯ ಪಕ್ಕದಲ್ಲೇ ಇರುವ ಹಿರೇಬಗನಾಳ್ ಮತ್ತು ಹಾಲವರ್ತಿ ಗ್ರಾಮಗಳಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿಯ ಜನರೊಂದಿಗೆ ಸಂವಾದ ನಡೆಯಿತು. ನಾವು ದೇವಾಲಯದೊಳಗೆ ಹೋಗುವುದು ತುಂಬಾ ವಿರಳ. ಆದರೂ ಅಲ್ಲಿಯ ಜನರ ಒತ್ತಾಯವನ್ನು ತಿರಸ್ಕರಿಸಲಾಗಲಿಲ್ಲ. ನೆಲಕ್ಕೆ ಹಾಕಿರುವ ಕಲ್ಲುಹಾಸಿಗೆಯ ಮೇಲೆ ಕಾಲಿಟ್ಟಾಗ ಅಂಗಾಲುಗಳಿಗೆ ಮಸಿ ಮೆತ್ತಿಕೊಂಡಿತು. ದೇವಸ್ಥಾನದ ಕಸ ಹೊಡೆಯುವುದಿಲ್ಲವೇ ಎಂದಾಗ ‘ಬುದ್ಧಿ, ಬೆಳಗ್ಗೆ ಕಸ ಹೊಡೆದು ತೊಳೆದಿದ್ದೇವೆ’ ಎಂದರು. ಮತ್ತೆ ಈ ದೂಳು ಏಕೆ ಎಂದಾಗ ‘ಇದು ಈ ಭಾಗದಲ್ಲಿರುವ 200ಕ್ಕೂ ಹೆಚ್ಚಿನ ಕಬ್ಬಿಣ ಕಾರ್ಖಾನೆಗಳ ದೇಣಿಗೆ’ ಎಂದರು. ‘ಎಷ್ಟೇ ಕಸ ಹೊಡೆದು ನೆಲ ತೊಳೆದರೂ ಮೂರ್ನಾಲ್ಕು ಗಂಟೆಯೊಳಗೆ ಮತ್ತೆ ಹೀಗಾಗುತ್ತದೆ. ಮನೆಯೊಳಗೂ ಇದೇ ಹಣೇಬರಹ. ರೊಟ್ಟಿ ಬಯಲಿಗಿಟ್ಟರೆ ಅದೂ ಮಸಿಯಾಗುತ್ತದೆ’ ಎಂದರು.
ಜಲ, ನೆಲ ಮತ್ತು ವಾಯು ಶುದ್ಧವಾಗಿದ್ದರೆ ಮನುಷ್ಯರಾದಿಯಾಗಿ ಸಕಲ ಜೀವಜಂತುಗಳು ಆರೋಗ್ಯದಿಂದ ಬಾಳಲು ಸಾಧ್ಯ. ಮಾಲಿನ್ಯ ಹೆಚ್ಚಾದರೆ ಯಾವ ಜೀವಜಂತುಗಳೂ ಬದುಕಲು ಸಾಧ್ಯವಿಲ್ಲ. ಪರಿಸರ ಮಾಲಿನ್ಯರಹಿತ ಆಗಿರಬೇಕೆಂದರೆ ಕಾರ್ಖಾನೆಗಳು ಉಗುಳುವ ಹೊಗೆ, ಕಿಟ್ಟ ಮತ್ತಿತರ ವಿಷಕಾರಿ ಅನಿಲಗಳ ಶುದ್ಧೀಕರಣವಾಗಬೇಕು. ಈ ಬಗ್ಗೆ ಸಂಬಂಧಿಸಿದವರು ಎಚ್ಚರವಹಿಸಬೇಕು. ಆದರೆ, ಕಾರ್ಖಾನೆಗಳ ಮಾಲಿಕರಾಗಲಿ, ಅವರಿಗೆ ಅನುಮತಿಸುವ ಪರಿಸರ ಮಾಲಿನ್ಯ ಇಲಾಖೆಯಾಗಲಿ, ಸರ್ಕಾರವಾಗಲಿ ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎನ್ನುವುದು ಅಲ್ಲಿಯ ಜನರ ಅಳಲು. ಎಷ್ಟೇ ಮನವಿ ಕೊಟ್ಟರೂ ಜಿಲ್ಲಾಧಿಕಾರಿ, ತಹಸೀಲ್ದಾರ ಮತ್ತಿತರ ಅಧಿಕಾರಿಗಳು ನಮ್ಮ ಊರೊಳಗೆ ಬಂದಿಲ್ಲ. ನಮ್ಮ ಬೇಡಿಕೆ ‘ಕೋಣನ ಮುಂದೆ ಕಿನ್ನುರಿ ಬಾರಿಸಿದಂತಾಗಿದೆ’ ಎನ್ನುವುದು ಜನರು ನೊಂದ ನುಡಿ. ಅದಕ್ಕೆ ನಾವು ಹೇಳಿದ್ದು: ಕೊಪ್ಪಳ ಜಿಲ್ಲೆಯ ಅಧಿಕಾರಿಗಳು, ಪ್ರಜಾಪ್ರತಿನಿಧಿಗಳು ಕಾರ್ಖಾನೆಗಳ ಮಾಲಿನ್ಯಕ್ಕೆ ಕಡಿವಾಣ ಹಾಕದಿದ್ದರೆ ಮುಂಬರುವ ಎಲ್ಲ ಚುನಾವಣೆಗಳನ್ನೂ ಈ ಜಿಲ್ಲೆಯ ಮತದಾರಪ್ರಭುಗಳು ಬಹಿಷ್ಕರಿಸಬೇಕು. ‘ಅಳದ ಮಗುವಿಗೆ ಯಾವ ತಾಯಿಯೂ ಹಾಲು ಕೊಡುವುದಿಲ್ಲ’. ಕೆಲವರು ಮಾತ್ರ ಹೋರಾಡಿದರೆ ಯಶಸ್ವಿಯಾಗುವುದಿಲ್ಲ. ಜಿಲ್ಲೆಯ ಪ್ರತಿಯೊಬ್ಬ ನಾಗರಿಕರಿಗೂ ಜವಾಬ್ದಾರಿ ಇದೆ. ಎಲ್ಲರೂ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು.
ಗಾಂಧೀಜಿಯವರು ಒತ್ತು ಕೊಟ್ಟದ್ದು ಸರ್ವೋದಯ ರಾಜ್ಯ ನಿರ್ಮಾಣಕ್ಕೆ. ಸರ್ವೋದಯ ಎಂದರೆ ಸಕಲ ಜೀವಾತ್ಮರ ಕಲ್ಯಾಣ. ಇದಕ್ಕೆ ಮುಖ್ಯವಾಗಿ ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಆಡಳಿತ ಈ ಐದು ಕ್ಷೇತ್ರಗಳ ಸುಧಾರಣೆಯಾಗಬೇಕು. ಆಗ ಜನರು ನೆಮ್ಮದಿಯಿಂದ ಬಾಳಲು ಸಾಧ್ಯ. ಆದರೆ ಇವತ್ತು ಈ ಐದೂ ಕ್ಷೇತ್ರಗಳು ನಿರೀಕ್ಷೆಗೂ ಮೀರಿ ಹಾಳಾಗಿವೆ. ಪರಿಸರ ನೆಲ, ಜಲ, ವಾಯು ಇವುಗಳ ಸ್ವಚ್ಛತೆಯನ್ನು ಅವಲಂಬಿಸಿದೆ. ಇಂದು ಮಾನವನ ಅತಿಯಾದ ದುರಾಸೆಯಿಂದ ಗಣಿಗಾರಿಕೆ, ಬೃಹತ್ ಕಾರ್ಖಾನೆಗಳು, ಆಕಾಶ ಚುಂಬಿಸುವ ಕಟ್ಟಡಗಳು, ರಿಯಲ್ ಎಸ್ಟೇಟ್, ಒಳಚರಂಡಿ, ಕಸದ ವಿಲೇವಾರಿ ಇಂಥ ಕಾರಣಗಳಿಂದ ಪರಿಸರ ತನ್ನ ಶುದ್ಧಿಯನ್ನು ಕಾಯ್ದುಕೊಳ್ಳಲಾಗುತ್ತಿಲ್ಲ. ಕೊರೊನಾ ಸಂದರ್ಭದಲ್ಲಿ ಮುಖಕ್ಕೆ ಮಾಸ್ಕ್ ಧರಿಸಬೇಕು ಎನ್ನುತ್ತಿದ್ದರು. ಪರಿಸರ ಮಾಲಿನ್ಯದಿಂದಾಗಿ ಕೊಪ್ಪಳ ಜಿಲ್ಲೆಯ ಜನರು ಈಗ ಮುಖಕ್ಕೆ ಮಾಸ್ಕ್ ಧರಿಸಲೇಬೇಕಾಗಿದೆ. ಪರಿಸರ ಮಾಲಿನ್ಯದಿಂದ ಕೃಷಿ ಕುಲಗೆಟ್ಟಿದೆ. ನಾವು ಹಾಲವರ್ತಿ ಗ್ರಾಮದ ರಸ್ತೆಯಲ್ಲಿ ಜನರ ಜೊತೆ ಮಾತನಾಡುತ್ತ ನಿಂತಾಗ ಒಬ್ಬ ವ್ಯಕ್ತಿ ತನ್ನ ಬೈಕ್‌ನಲ್ಲಿ ದನಗಳಿಗೆ ಹಸಿ ಮೆಕ್ಕೆಜೋಳದ ಸೊಪ್ಪೆಯನ್ನು ತರುತ್ತಿದ್ದ. ಅವನ ಬಟ್ಟೆಗಳು ಮಾಸಿದ್ದವು. ಸೊಪ್ಪೆಗರಿಗಳ ಒಳ ಮತ್ತು ಹೊರಬಾಗದಲ್ಲಿ ಮಸಿ ಮೆತ್ತಿತ್ತು. ಅಂಥ ಸೊಪ್ಪೆಯನ್ನು ತಿಂದ ಜಾನುವಾರುಗಳ ಮತ್ತು ಅವುಗಳ ಹಾಲು ಸೇವಿಸಿದ ಮನುಷ್ಯರ ಆರೋಗ್ಯ ಏನಾಗಬಹುದು? ಈ ಬಗ್ಗೆ ಸರ್ಕಾರ ಗಂಭೀರವಾಗಿ ಆಲೋಚಿಸಬೇಕಾಗಿದೆ.
ಕೃಷಿ ಆರೋಗವಾಗಿದ್ದರೆ ಖುಷಿಯಿಂದ ಬಾಳಲು ಸಾಧ್ಯ. ಕೃಷಿ ರೋಗಪೀಡಿತವಾದರೆ ಮನುಷ್ಯ ಹೇಗೆ ಆರೋಗ್ಯವಾಗಿ ಬಾಳಲು ಸಾಧ್ಯ? ನೆಲ, ಜಲ, ವಾಯು ಮಾಲಿನ್ಯದಿಂದ ಬೆಳೆಯುವ ಎಲ್ಲ ಬೆಳೆಗಳು ಸತ್ವ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಅವು ಸಹ ರೋಗದಿಂದ ಬಳಲುತ್ತಿವೆ. ಅಂಥ ಆಹಾರ ಬಳಸಿದವರು ಹೇಗೆ ಆರೋಗ್ಯ ಕಾಪಾಡಿಕೊಳ್ಳಬಲ್ಲರು? ‘ಆರೋಗ್ಯವೇ ಭಾಗ್ಯ’ ಎಂದು ಆಸ್ಪತ್ರೆಗಳಿಗೆ ಹೋಗುವ ಪರಿಸ್ಥಿತಿ ಇದೆ. ಇಂದು ಸಾಕಷ್ಟು ಆಸ್ಪತ್ರೆಗಳು ದೊಡ್ಡ ದೊಡ್ಡ ಪ್ರಮಾಣದಲ್ಲಿ ತಲೆ ಎತ್ತಿವೆ. ಅಲ್ಲಿಗೆ ಹೋಗುವವರ ಬಳಿ ಸಾಕಷ್ಟು ಹಣ ಇರಬೇಕು. ಕೃಷಿ ಆದಾಯವೇ ಇಲ್ಲವಾದರೆ ಕೃಷಿಕರು ಎಲ್ಲಿಂದ ಹಣ ಜೋಡಿಸಲು ಸಾಧ್ಯ? ಅವರು ನಂಬಿರುವುದು ಭೂತಾಯಿಯನ್ನು. ಅವಳ ಆರೋಗ್ಯವೇ ಕೆಟ್ಟಿರುವಾಗ ಅದನ್ನು ನಂಬಿದ ಕೃಷಿಕರ ಬದುಕು ಏನಾಗಿರಬಹುದು?
ಈಗ ಚಿಕ್ಕ ಮಕ್ಕಳಿಗೆ ಸಹ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಚರ್ಮರೊಗ, ಕ್ಯಾನ್ಸರ್ ಮತ್ತಿತರ ಕಾಯಿಲೆಗಳು ಮುತ್ತಿಕೊಳ್ಳುತ್ತಿವೆ. ಇದಕ್ಕೆ ಕಾರಣ ಪರಿಸರ ಮತ್ತು ಕೃಷಿಯೇ ಕಾರಣ. ಇವು ಸುಧಾರಣೆ ಆಗದಿದ್ದರೆ ಯಾರೂ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿಲ್ಲ. ಆದಾಯ, ಆರೋಗ್ಯವೇ ಇಲ್ಲವೆಂದರೆ ಉತ್ತಮ ಶಿಕ್ಷಣ ಪಡೆಯುವುದು ದೂರವೇ ಉಳಿಯಿತು. ಕಾರ್ಖಾನೆಗಳಿರುವ ಕಾರಣದಿಂದ ಈ ಭಾಗದಲ್ಲಿ ಸರ್ಕಾರವಾಗಲಿ, ಖಾಸಗಿಯವರಾಗಲಿ ಉತ್ತಮ ಶಿಕ್ಷಣ ನೀಡುವ ಸಂಸ್ಥೆಗಳನ್ನು ತೆರೆಯಲು ಮುಂದೆ ಬರುತ್ತಿಲ್ಲವಂತೆ. ಶಿಕ್ಷಣವೂ ಒಂದು ಉದ್ದಿಮೆ ಆಗಿರುವುದರಿಂದ ಇಂಥಲ್ಲಿ ಶಾಲಾ ಕಾಲೇಜುಗಳನ್ನು ತೆರೆದರೆ ಆದಾಯ ತೆಗೆಯಲು ಸಾಧ್ಯವಾಗುವುದಿಲ್ಲ ಎನ್ನುವ ಭಾವನೆ ಅವರಿಗೆ ಬರುವುದು ಸಹಜ.
ಪರಿಸರ, ಕೃಷಿ, ಆರೋಗ್ಯ ಮತ್ತು ಶಿಕ್ಷಣದಲ್ಲಿ ಸುಧಾರಣೆಯಾಗಲು ಆದರ್ಶ ಆಡಳಿತ ಬೇಕು. ಆಡಳಿತವೆಂದರೆ ಪ್ರಜಾಪ್ರಭುಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಈ ಮೂರೂ ವರ್ಗ. ಇವರು ಆದರ್ಶವಾಗಿರದಿದ್ದರೆ ದೇಶ ದಿವಾಳಿಯಾಗದೆ ಇನ್ನೇನಾಗಲು ಸಾಧ್ಯ? ಯಾರಲ್ಲೂ ಒಂದು ‘ಬದ್ಧತೆ’ ಇಲ್ಲವಾಗಿದೆ. ಕಾರ್ಖಾನೆಯ ವಿರುದ್ಧ ಹೋರಾಡುವವರು ಹೋರಾಡಲಿ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಉದಾಸೀನ ಮಾಡಿದರೆ ನಾಳೆ ನಾವೂ ಅದರ ಫಲಾನುಭವಿಗಳಾಗುತ್ತೇವೆ ಎನ್ನುವ ಎಚ್ಚರ ಜನಪ್ರತಿನಿಧಿ, ಅಧಿಕಾರಿ, ಮತದಾರ ಮೂವರಲ್ಲೂ ಬರಬೇಕು. ಕೊಪ್ಪಳದಲ್ಲಿ ಕಾರ್ಖಾನೆಯ ಮಾಲಿನ್ಯ ನಿವಾರಣೆ ಬಗ್ಗೆ ನೂರು ದಿನಗಳ ಕಾಲ ನಿರಂತರ ಹೋರಾಟ ನಡೆದಿದೆ. ಇದು ತುಂಬಾ ನೋವಿನ ಸಂಗತಿ. ಹೋರಾಟ ನೂರು ದಿನಗಳ ಕಾಲ ನಡೆಯಬೇಕಿತ್ತೇ? ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ಈ ಹೋರಾಟ ಬಂದಿಲ್ಲವೇ? ಬಂದಿದ್ದರೆ ಹೋರಾಟಕ್ಕೆ ಮಂಗಳ ಹಾಡಿ ಅವರ ಬೇಡಿಕೆಗಳನ್ನು ಪೂರೈಸುವ ಕೆಲಸವನ್ನು ಕಾರ್ಖಾನೆಯ ಮಾಲಿಕರು, ಅಧಿಕಾರಿಗಳು, ಜನಪ್ರತಿನಿಧಿಗಳು, ಸರ್ಕಾರ ಮಾಡಬೇಕಿತ್ತು. ವಿಷಾದದ ಸಂಗತಿ ಎಂದರೆ ಜಿಲ್ಲಾಧಿಕಾರಿಗಳನ್ನು ಒಳಗೊಂಡಂತೆ ಎಲ್ಲ ಅಧಿಕಾರಿಗಳು ಮಾಲಿನ್ಯ ಪ್ರದೇಶದ ಊರುಗಳಿಗೆ ಹೋಗಿ ಅಲ್ಲಿನ ಜನರ ಸಮಸ್ಯೆಗಳನ್ನು ಕೇಳದಿರುವುದು ನಾಚಿಕೆಗೇಡಿನ ಸಂಗತಿ.
ನಾವು ಜಿಲ್ಲಾಧಿಕಾರಿ ಸುರೇಶ ಹಿಟ್ನಾಳ್ ಅವರಿಗೆ ಪೋನ್ ಮಾಡಿ, ಜನರ ಸಂಕಷ್ಟಗಳ ಮತ್ತು ಪರಿಸರ ಮಾಲಿನ್ಯದ ವಿಚಾರ ತಿಳಿಸಿದಾಗ ‘ನನಗೂ ಅದರ ಅರಿವಾಗಿದೆ. ತಾವಿದ್ದಲ್ಲಿಗೆ ಬಂದು ಮಾತನಾಡುವೆ’ ಎಂದರು. ಈ ಹೋರಾಟ ಯಶಸ್ವಿಯಾಗಬೇಕೆಂದರೆ ಕೊಪ್ಪಳ ಜಿಲ್ಲೆಯ ಪ್ರತಿಯೊಬ್ಬರೂ ಜಾಗೃತರಾಗಬೇಕು. ನೆಲ, ಜಲ, ವಾಯು ಮಾಲಿನ್ಯದ ಸಮಸ್ಯೆಗೆ ಪರಿಹಾರ ಪಡೆಯಬೇಕೆಂದರೆ ಜಿಲ್ಲೆಯ ಜನರೆಲ್ಲರೂ ಹೋರಾಟ ಮಾಡುವ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಪರಿಸರದ ಪಾವಿತ್ರ್ಯವನ್ನು ಉಳಿಸಿಕೊಳ್ಳಲು ಸಾಧ್ಯ. ಇಲ್ಲವಾದರೆ ದೇವಸ್ಥಾನಕ್ಕೆ ಹೋಗಿ ಗಂಟೆ ಹೊಡೆದು ಬಂದಂತಾಗುತ್ತದೆ. ಯಾವ ದೇವಸ್ಥಾನಗಳಿಗೆ ಹೋಗಿ ಗಂಟೆ ಬಾರಿಸಿಬಂದರೂ ಪ್ರಯೋಜನವಿಲ್ಲ. ಪರಿವರ್ತನೆ ಆಗಬೇಕಿರುವುದು ಜನರ ನಡೆ ನುಡಿಗಳಲ್ಲಿ. ಅದರಲ್ಲೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗಬಾರದು. ಇಲ್ಲಿ ವಾಸ ಮಾಡುವ ಜನರೂ ಅಷ್ಟೆ. ಅವರು ಆಮಿಷಗಳಿಗೆ ಬಲಿಯಾದರೆ ‘ನಿದ್ರೆ ಬಂದವರಿಗೆ ಹಾಸಿಗೆ ಹಾಸಿಕೊಟ್ಟಂತೆ’. ಬಸವಣ್ಣನವರ ಒಂದು ವಚನ: ನಡೆಯಲರಿಯದೆ, ನುಡಿಯಲರಿಯದೆ ಲಿಂಗವ ಪೂಜಿಸಿ ಫಲವೇನು? ಅವರ ಸುಖವೆನ್ನ ಸುಖ, ಅವರ ದುಃಖವೆನ್ನ ದುಃಖ. ಕೂಡಲಸಂಗನ ಶರಣರ ಮನ ನೊಂದಡೆ ಆನು ಬೆಂದೆನಯ್ಯಾ.
ಕಾರ್ಖಾನೆಯ ಮಾಲಿಕರು, ಸರ್ಕಾರ ಈ ವಚನದ ಆಶಯವನ್ನು ಅರ್ಥ ಮಾಡಿಕೊಳ್ಳಬೇಕು. ಅವರ ಸುಖ, ದುಃಖ ಎಂದರೆ ಈ ಭಾಗದ ಜನರ ಸುಖ, ದುಃಖ. ಅವರ ಸುಖ, ದುಃಖ ತಮ್ಮದೇ ಎಂದು ಮಾಲಿಕರು, ಸರ್ಕಾರ ಪರಿಗಣಿಸಿದಾಗ ಮಾತ್ರ ಪರಿಹಾರ ಸಾಧ್ಯ. ಪಾಲನೆ, ಪೋಷಣೆ ಮಾಡಬೇಕಾದವರೇ ಬೇಜವಾಬ್ದಾರಿ ತೋರಿಸಿದರೆ ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’. ಆಗ ‘ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹೊತ್ತಿ ಉರಿದಡೆ ನಿಲಬಹುದೆ’ ಎನ್ನುವ ವಚನ ಅವರಿಗೆ ಅರ್ಥವಾಗುವುದಿಲ್ಲ. ತಾಯಿಯ ಎದೆಯ ಹಾಲು ಅಮೃತಕ್ಕೆ ಸಮಾನ. ಅಂಥ ಹಾಲೇ ಇಂದು ಪರಿಸರ ಮಾಲಿನ್ಯದ ಕಾರಣದಿಂದ ನಂಜಾಗುತ್ತಿದೆ. ಇಲ್ಲಿ ತಾಯಿ ಎಂದರೆ ಭೂಮಾತೆ. ಅವಳ ಎದೆಯ ಹಾಲೇ ನಂಜಾದರೆ ಅವಳ ಹಾಲು ಕುಡಿಯುವ ಮಕ್ಕಳ ಪರಿಸ್ಥಿತಿ ಏನಾಗಬಹುದು?
ಈ ನೆಲೆಯಲ್ಲಿ ಸರ್ಕಾರ, ಸರ್ಕಾರದ ಭಾಗವಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜಾಗೃತರಾಗಿ ಹೊಸ ಹೊಸ ಕಾರ್ಖಾನೆಗಳಿಗೆ ಅನುಮತಿಸಬಾರದು. ಅಷ್ಟೇ ಅಲ್ಲ; ಇರುವ ಕಾರ್ಖಾನೆಗಳ ವಿಸ್ತರಣೆಗೆ ಕೊಟ್ಟಿರುವ ಅನುಮತಿಯನ್ನೂ ರದ್ದುಪಡಿಸಬೇಕು. ಕಾರ್ಖಾನೆಗಳು ತಮ್ಮ ಮಾಲಿನ್ಯವನ್ನು ತಡೆಗಟ್ಟಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಬೈಕ್, ಟ್ರ್ಯಾಕ್ಟರ್, ಕಾರು, ಲಾರಿ, ಬಸ್ ಮುಂತಾದ ವಾಹನಗಳು ಎಷ್ಟು ಹೊಗೆ ಉಗುಳುತ್ತವೆ ಎಂದು ಪರಿಸರ ಇಲಾಖೆಯವರು ಪರಿಶೀಲಿಸಿ ಅವರಿಗೆ ದಂಡ ವಿಧಿಸುವರು. ಅಂಥ ಪರಿಸರ ಮಾಲಿನ್ಯ ಇಲಾಖೆಯವರು ಕೊಪ್ಪಳದ ಸುತ್ತ ಇರುವ 200ಕ್ಕೂ ಹೆಚ್ಚು ಕಾರ್ಖಾನೆಗಳು ಉಗುಳುವ ವಿಷಯುಕ್ತ ಗಾಳಿಯನ್ನು ನಿಯಂತ್ರಿಸುವ ಕೆಲಸವನು ಏಕೆ ಮಾಡುತ್ತಿಲ್ಲ?
‘ಬಲ್ಡೋಟಾ’ ಇನ್ನಿತರ ಕಾರ್ಖಾನೆಗಳಿಂದಾಗಿ ಕೊಪ್ಪಳ ಜಿಲ್ಲೆ ಜಗತ್ತಿನ 250 ಕಲುಷಿತ ನಗರಗಳ ಪಟ್ಟಿಯಲ್ಲಿ ಸೇರಿದೆಯಂತೆ. ಬಲ್ಡೋಟಾ ಕಂಪನಿಯನ್ನು ವಿಸ್ತರಿಸಲು ಮತ್ತೆ ಪರಿಸರ ಇಲಾಖೆ ಮತ್ತು ಸರ್ಕಾರ ಅನುಮತಿಸಿದೆ. ಅದು 54 ಕೋಟಿ ರೂಪಾಯಿ ವೆಚ್ಚದ ವಿಸ್ತರಣೆ. ಈಗಲೇ ಆ ಭಾಗದ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ವಿಷಾನಿಲ ಹೊರಹಾಕುವಲ್ಲಿ ‘ಭದ್ರಶ್ರೀ ಕಂಪನಿಯ’ ಪಾತ್ರವೂ ಇದೆ. ಅದರ ಮಾಲಿನ್ಯದಿಂದ ಜನರು ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಈಗ ಅದರ ವಿಸ್ತರಣೆಗೆ ಪರಿಸರ ಇಲಾಖೆ ಅನುಮತಿ ನೀಡಿದೆ.
ಇದು ಸಹ ಅಲ್ಲಿನ ಜನರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ. ‘ಜಿಲ್ಲಾ ಬಚಾವೋ ಆಂದೋಲನ ಸಮಿತಿ ಮತ್ತು ಪರಿಸರ ಹಿತರಕ್ಷಣಾ ವೇದಿಕೆ’ ಜಂಟಿಯಾಗಿ ಎಲ್ಲ ಕಾರ್ಖಾನೆಗಳ, ಪ್ರಮುಖವಾಗಿ ಬಲ್ಡೋಟಾ ಕಾರ್ಖಾನೆಯ ವಿಸ್ತರಣೆಯ ವಿರುದ್ಧ ಅನಿರ್ದಿಷ್ಟ ಹೋರಾಟ ಪ್ರಾರಂಭಿಸಿ ಫೆ. 7ಕ್ಕೆ ನೂರು ದಿನಗಳಾಗಿವೆ. 2025ರ ಫೆ. 24ರಂದು ಕೊಪ್ಪಳದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಬೃಹತ್ ಬಹಿರಂಗ ಸಭೆ ನಡೆಸಿದ್ದರು. ‘ಬಲ್ಡೋಟಾ’ ಕಾರ್ಖಾನೆಯ ವಿಸ್ತರಣೆ ಯಾವುದೇ ಕಾರಣಕ್ಕೂ ಬೇಡವೆಂದು ನಿರ್ಣಯಿಸಿದ್ದರು. ಆಗ ಸ್ವಾಮೀಜಿಯವರ ಅಭಿಲಾಷೆಯಂತೆ ವಿಸ್ತರಣೆಗೆ ತಡೆ ಆದೇಶ ಪತ್ರ ತರುವುದಾಗಿ ಜನಪ್ರತಿನಿಧಿಗಳು ಒಪ್ಪಿದ್ದರಂತೆ. ಅದರಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಕಂಡು ಆಗುತ್ತಿರುವ ಅನಾಹುತದ ಮಾಹಿತಿ ನೀಡಿದಾಗ ಅವರು ತಕ್ಷಣ ಬಲ್ಡೋಟಾ ವಿಸ್ತರಣಾ ಚಟುವಟಿಕೆಗಳನ್ನು ನಿಲ್ಲಿಸಲು ಮೌಖಿಕವಾಗಿ ಆದೇಶ ನೀಡಿದ್ದರಂತೆ. ಆದರೆ ಇದುವರೆಗೂ ಕಾನೂನಾತ್ಮಕ ಲಿಖಿತ ಆದೇಶ ಆಗಿಲ್ಲ.
ಹೋರಾಟ ಪ್ರಾರಂಭವಾಗಿ 100 ದಿನವಾಗಿದ್ದರೂ ‘ಬರಬರುತ್ತ ರಾಯರ ಕುದುರೆ ಕತ್ತೆಯಾಯಿತು’ ಎನ್ನುವ ಪರಿಸ್ಥಿತಿ ಅಲ್ಲಿದೆ. ನಾವು ನೂರನೆಯ ದಿನದ ಹೋರಾಟದಲ್ಲಿ ಭಾಗವಹಿಸಿದ್ದೆವು. ನಮ್ಮೊಂದಿಗೆ ಸಾವಿರಾರು ಜನರಲ್ಲದೆ ಕಾರ್ಖಾನೆ ಬಾಧಿತ ರೈತರು, ಮಹಿಳೆಯರು ಮಕ್ಕಳು ಸಹ ಭಾಗವಹಿಸಿ ತಮ್ಮ ಅಳಲನ್ನು ತೋಡಿಕೊಂಡರು. ಇದೇ 24 ರಂದು ಬೃಹತ್ ಪಾದಯಾತ್ರೆ ಮತ್ತು ನಗರ ಬಂದ್ ಮಾಡುವ ನಿರ್ಣಯ ತೆಗೆದುಕೊಂಡರು.
ಅಂದಿನ ಸಮಾವೇಶದಲ್ಲಿ ತೆಗೆದುಕೊಂಡ ಪ್ರಮುಖ ನಿರ್ಣಯಗಳು:
1. ಫೆಬ್ರುವರಿ 24ರಂದು ಕೊಪ್ಪಳ ನಗರ ಬಂದ್.
2. ಗವಿಮಠದಿಂದ ತಾಲ್ಲೂಕು ಕ್ರೀಡಾಂಗಣದವರೆಗೆ ಪ್ರತಿಭಟನಾ ಮೆರವಣಿಗೆ.
3. ಬಲ್ಡೋಟಾ ಕಣ್ಣೊರೆಸುವ ಸಿಎಸ್‌ಆರ್ ಫಂಡ್ ಸಹಾಯದ ಟ್ರೀಗಾರ್ಡ್ ಮತ್ತು ಸಿಮೆಂಟ್ ಆಸನಗಳನ್ನು ಮರಳಿಸುವ ಅಭಿಯಾನಕ್ಕೆ ಚಾಲನೆ.
4. ತಜ್ಞರ ವರದಿಯಂತೆ ಕಾರ್ಖಾನೆಗಳ ಸ್ಥಳಾಂತರ ಪ್ರಾರಂಭಿಸಬೇಕು.
5. ಇಪ್ಪತ್ತು ಗ್ರಾಮಗಳ ಆರೋಗ್ಯ ಸಮೀಕ್ಷೆ, ಪರಿಸರ ಮತ್ತು ಆರೋಗ್ಯ ಪುನರ್ ನಿರ್ಮಾಣಕ್ಕೆ ಒತ್ತಾಯ.
6. ತುಂಗಭದ್ರಾ ವಿಷಗೊಳಿಸುವ ಕಾರ್ಖಾನೆ ಮುಚ್ಚಿಸಬೇಕು. ಅಲ್ಲಿಯವರೆಗೆ ಶುದ್ಧ ಸಂಸ್ಕರಿಸಿದ ನೀರನ್ನು ಜನ–ಜಾನುವಾರುಗಳಿಗೆ ಸರಬರಾಜು ಮಾಡಲು ಕ್ರಮವಹಿಸಬೇಕು.
7. ಬಸಾಪುರ ಸಾರ್ವಜನಿಕ ಕೆರೆ ಕೂಡಲೇ ಮರಳಿ ಜನರಿಗೆ ಬಿಟ್ಟುಕೊಡಬೇಕು.
8. ಭದ್ರಶ್ರೀ ಕಾರ್ಖಾನೆ ವಿಸ್ತರಣೆಗೆ ವಿರೋಧಿಸಿ ಹೋರಾಟ ತೀವ್ರಗೊಳಿಸುವುದು.
ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ತಕ್ಷಣ ಸರ್ಕಾರದ ಗಮನಕ್ಕೆ ತಂದು ಇದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಪ್ರಜಾಪ್ರಭುತ್ವದಲ್ಲಿ ಪ್ರಜಾಪ್ರಭುಗಳ ಬೇಡಿಕೆಗೆ ಮಾನ್ಯತೆ ಇಲ್ಲದಿದ್ದರೆ ಅದು ಸರ್ವಾಧಿಕಾರವಾಗುತ್ತದೆ. ಆಗ ನಮ್ಮ ಸಂವಿಧಾನ ಕೂಡ ಮೌಲ್ಯ ಕಳೆದುಕೊಳ್ಳುವಂತೆ ಆಗುತ್ತದೆ. ಇದಾಗದಂತೆ ಎಚ್ಚರಿಕೆ ವಹಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.