ಐವತ್ತಾರು ವರ್ಷಗಳ ಹಿಂದೆ ಚಂದ್ರನ ಮೇಲೆ ಮನುಷ್ಯನ ಮೊದಲ ಹೆಜ್ಜೆಗುರುತು ಮೂಡಿದ ಕ್ಷಣ ಈಗಲೂ ಪುಳಕ ಹುಟ್ಟಿಸುವಂತಿದೆ.
ಭಾನುವಾರವೊಂದರ ಮಧ್ಯಾಹ್ನದ ಇಳಿಹೊತ್ತು. ಗಗನನೌಕೆ ಯಲ್ಲಿದ್ದ ಇಬ್ಬರು ಗಗನಯಾತ್ರಿಗಳಲ್ಲಿ ಎದೆ ಬಿರಿಯುವಷ್ಟು ಆತಂಕ. ಚಂದ್ರನ ನೆಲದ ಮೇಲೆ ಹೆಜ್ಜೆಯೂರುವ ಪ್ರಪ್ರಥಮ ಪ್ರಯತ್ನ ಇನ್ನೇನು ಕೈಗೂಡಬೇಕು ಎನ್ನುವಷ್ಟರಲ್ಲಿ, ಕೇವಲ 45 ಸೆಕೆಂಡ್‌ಗಳಿಗೆ ಆಗುವಷ್ಟು ಇಂಧನ ಮಾತ್ರ ನೌಕೆಯಲ್ಲಿದೆ ಎಂಬ ಸಂದೇಶ ಭೂಮಿಯ ನಿಯಂತ್ರಣ ಕೇಂದ್ರದಿಂದ ಬಂದಿತ್ತು. ಮುಂದಿದ್ದ ಆಯ್ಕೆಗಳು ಎರಡೇ: ಇಂಧನ ಖಾಲಿಯಾದ ತಕ್ಷಣ ನೌಕೆಯ ಸಮೇತ ಚಂದ್ರನ ನೆಲಕ್ಕೆ ಅಪ್ಪಳಿಸಿ ಬೀಳುವುದು. ಇಲ್ಲವೇ, ಯಾನವನ್ನು ಸ್ಥಗಿತಗೊಳಿಸಿ ಲೂನಾರ್ ಮಾಡ್ಯೂಲ್‌ನ ಇಂಧನವಿರುವ ಇನ್ನೊಂದು ಭಾಗವನ್ನು ಬಳಸಿ, ಭೂಮಿಗೆ ಹಿಂದಿರುಗಿ ಪಯಣಿಸುವ ಕಮಾಂಡ್ ಮಾಡ್ಯೂಲ್‌ಗೆ ಬಂದು ಸೇರಿಕೊಳ್ಳುವುದು.
ಹಲವು ವರ್ಷಗಳ ಪ್ರಯತ್ನದ ಫಲ ಸಿಗುವ ಹೊತ್ತಿನಲ್ಲಿ ಆತಂಕ ಎದುರಾದರೂ, ಗಗನಯಾತ್ರಿಗಳು ಎದೆಗುಂದಲಿಲ್ಲ. ಲೂನಾರ್ ಮಾಡ್ಯೂಲ್‌ನಲ್ಲಿದ್ದ ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ ಅಸಾಧಾರಣ ತಾಳ್ಮೆ ಮತ್ತು ಬುದ್ಧಿವಂತಿಕೆಯಿಂದ ವರ್ತಿಸಿದರು. ಅದರ ಫಲವಾಗಿ, ಅಸಾಧಾರಣ ಸಾಧನೆಯೊಂದು ಅವರ ಹೆಸರಿನಲ್ಲಿ ದಾಖಲಾಯಿತು.
1969ರ ಜುಲೈ 16ರ ಮಧ್ಯಾಹ್ನ, ಫ್ಲೋರಿಡಾದ ಉಡ್ಡಯನ ನೆಲೆಯಿಂದ, 111 ಮೀಟರ್ ಎತ್ತರ ಮತ್ತು 3 ಲಕ್ಷ ಕಿಲೋಗ್ರಾಂ ತೂಕದ ‘ಸ್ಯಾಟರ್ನ್–5’ ರಾಕೆಟ್ ಉಡಾವಣೆಗೊಂಡಿತು. ಅದು, ಚಂದ್ರನ ನೆಲ ತಲುಪಿದ್ದು ನಾಲ್ಕು ದಿನಗಳ ನಂತರ. ಮೂವರು ಗಗನಯಾತ್ರಿಗಳನ್ನು ಹೊತ್ತ ನೌಕೆಯು, ಚಂದ್ರನ ಹಲವು ಕಕ್ಷೆಗಳಲ್ಲಿ ಸಂಚರಿಸಿ, ಜುಲೈ 20ರಂದು 4 ಗಂಟೆ, 17 ನಿಮಿಷ, 40 ಸೆಕೆಂಡಿಗೆ ಚಂದ್ರನ ಮೇಲೆ ಕಾಲೂರಿತ್ತು.
50,000 ಅಡಿ ಎತ್ತರದ ಚಂದ್ರನ ಕಕ್ಷೆಯಿಂದ ಲೂನಾರ್ ಮಾಡ್ಯೂಲ್ ನೌಕೆಯು ಕೆಳಗಿಳಿಯಲು ಪ್ರಾರಂಭಿಸಿದ ಕೆಲವೇ ನಿಮಿಷಗಳಲ್ಲಿ, ‘ಓವರ್‌ಲೋಡ್’ ಎಂಬ ಸಂದೇಶ ಕಂಪ್ಯೂಟರ್‌ನಲ್ಲಿ ಮೂಡತೊಡಗಿತು. ಆ ಸಂದೇಶ ಆತಂಕ ಮೂಡಿಸಿತಾದರೂ, ಉಡ್ಡಯನ ಕೇಂದ್ರದ ತಜ್ಞರು ‘ಸಮಸ್ಯೆ ಇಲ್ಲ, ಮುಂದುವರಿಯಿರಿ’ ಎಂದು ಅಭಯ ನೀಡಿದರು. ನೌಕೆಯಲ್ಲಿದ್ದ 30 ಕೆ.ಜಿ ತೂಕದ ಅಪೊಲೊ ಗೈಡೆನ್ಸ್ ಕಂಪ್ಯೂಟರ್, 2 ಕಿಲೋವರ್ಡ್ಸ್ ರ‍್ಯಾಮ್, 36 ಕಿಲೋವರ್ಡ್ಸ್ ಸಾಮರ್ಥ್ಯದ ಹಾರ್ಡ್ ಡಿಸ್ಕ್
ಹೊಂದಿತ್ತು.
ಭೂಮಿಯಿಂದ ಹಾರುವಾಗಲೇ ನೌಕೆಯನ್ನು ಎಲ್ಲಿ ಇಳಿಸಬೇಕೆಂದು ತೀರ್ಮಾನಿಸಲಾಗಿತ್ತು. ‘ಅಪೊಲೊ–11’ ಯಾನಕ್ಕಿಂತ ಮುಂಚೆ ಕೈಗೊಂಡ ಗಗನ ಯಾತ್ರೆಗಳ ಫಲವಾಗಿ ದೊರೆತ ಚಿತ್ರ ಮತ್ತು ಮಾಹಿತಿಗಳನ್ನಾಧರಿಸಿ, ನೌಕೆಯನ್ನು ಸುರಕ್ಷಿತವಾಗಿ ಕೆಳಗಿಳಿಸಲು ಐದು ಜಾಗಗಳನ್ನು ‘ನಾಸಾ’ ಅಂತಿಮಗೊಳಿಸಿತ್ತು. ಆ ಜಾಗಗಳನ್ನು ಕಂಪ್ಯೂಟರ್ ಬಳಸಿ ಪತ್ತೆ ಹಚ್ಚಬೇಕಿತ್ತು. ಆದರೆ, ಸರಿಯಾದ ಸಮಯದಲ್ಲಿ ಕಂಪ್ಯೂಟರ್ ಕೈಕೊಟ್ಟಿತ್ತು.
ಕಂಪ್ಯೂಟರ್‌ನಿಂದ ಯಾವ ಪ್ರಯೋಜನವೂ ಆಗದು ಎಂದು ನಿರ್ಧರಿಸಿದ ನೀಲ್ ಆರ್ಮ್‌ಸ್ಟ್ರಾಂಗ್, 300 ಅಡಿ ಎತ್ತರದಲ್ಲಿ ಸಮಾನಾಂತರವಾಗಿ ನೌಕೆಯನ್ನು ಹಾರಿಸಿ, ಸ್ವಲ್ಪ ಸಮತಟ್ಟಾಗಿದೆ ಎನ್ನಬಹುದಾದ ಜಾಗವನ್ನು ಕಣ್ಣಳತೆಯಿಂದಲೇ ನಿರ್ಧರಿಸಿ, ಅಲ್ಲಿ ನೌಕೆಯನ್ನು ಇಳಿಸಿದರು. ಮೊದಲು ನಿರ್ಧರಿಸಿದ ಜಾಗಕ್ಕಿಂತ 6 ಕಿ.ಮೀ ದೂರವಿದ್ದ ಆ ಜಾಗವನ್ನು ‘ಸೀ ಆಫ್ ಟ್ರಾನ್ಕ್ವಲಿಟಿ’ (ಶಾಂತ ಸಮುದ್ರ) ಎಂದು ಕರೆದರು. ಅದಕ್ಕೂ ಮುಂಚೆ ಚಂದ್ರನ ಮೇಲ್ಮೈ ಸ್ಪಷ್ಟವಾಗಿ ಗೋಚರಿಸುತ್ತಿದ್ದಂತೆ ನೀಲ್ ಎದೆ ಝಲ್ ಎಂದಿತ್ತು. ಎತ್ತ ನೋಡಿದರೂ ಆಳದ ಕುಳಿಗಳು, ಎತ್ತರದ ಬಂಡೆಗಳು!
ಚಂದ್ರನ ನೆಲದ ಮೇಲೆ ಇಳಿದಾಕ್ಷಣ ನೀಲ್ ನೌಕೆಯಿಂದ ಹೊರಬರಲಿಲ್ಲ. ನೌಕೆ ಚಂದ್ರನ ಮೇಲಿಳಿದು ಸುಮಾರು 6 ಗಂಟೆ 38 ನಿಮಿಷದ ನಂತರ, ಅಮೆರಿಕದ ಕಾಲಮಾನ– ಜುಲೈ 20ರ ರಾತ್ರಿ 10 ಗಂಟೆ, 56 ನಿಮಿಷ, 15 ಸೆಕೆಂಡಿಗೆ (ಭಾರತೀಯ ಕಾಲಮಾನ ಜುಲೈ 21ರ ಬೆಳಿಗ್ಗೆ 8.26) ನೌಕೆಯ ಮುಚ್ಚಳ ತೆರೆದು, ಏಣಿಯ ಮೂಲಕ ಕೆಳಗಿಳಿದರು; ಚಂದ್ರನ ಮೇಲೆ ಮೊದಲ ಹೆಜ್ಜೆ ಇರಿಸಿದರು. ಅಲ್ಲಿಗೆ ಮಾನವ ಅಭ್ಯುದಯದ ಚಾರಿತ್ರಿಕ ಘಟನೆಯೊಂದು ಸಾಕಾರಗೊಂಡಿತ್ತು.
ಜಗತ್ತಿನಾದ್ಯಂತ ಕೋಟ್ಯಂತರ ಜನ ಟೆಲಿವಿಷನ್ ಮೂಲಕ ನೀಲ್ ಚಂದ್ರನ ಮೇಲೆ ಇಡುವ ಹೆಜ್ಜೆಯನ್ನು ಕಣ್ತುಂಬಿಕೊಂಡರು. ನೀಲ್ ಇಳಿದ 19 ನಿಮಿಷಗಳ ನಂತರ ಬಜ್ ಆಲ್ಡ್ರಿನ್ ನೌಕೆಯಿಂದ ಹೊರಬಂದು ಚಂದ್ರನ ಮೇಲೆ ನಿಂತರು. ಮೈಕಲ್ ಕಾಲಿನ್ಸ್ ನೌಕೆಯಲ್ಲೇ ಉಳಿದುಕೊಂಡಿದ್ದರು.
ಚಂದ್ರನ ನೆಲದ ಮೇಲೆ ಒಟ್ಟು 21 ಗಂಟೆ 36 ನಿಮಿಷಗಳ ಕಾಲ ಕಳೆದ ಅವರು, ಸುಮಾರು ಎರಡೂವರೆ ತಾಸು ನೆಲದ ಮೇಲೆ ಓಡಾಡಿದರು; ಅಲ್ಲಿನ ಕಲ್ಲು– ಮಣ್ಣು ಸಂಗ್ರಹಿಸಿದರು. ನಂತರ ಲೂನಾರ್ ಮಾಡ್ಯೂಲ್‌ನಲ್ಲಿ ಸಂಚರಿಸಿ, ಮೈಕಲ್ ಕಾಲಿನ್ಸ್ ನಡೆಸುತ್ತಿದ್ದ ‘ಕೊಲಂಬಿಯಾ ಕಮಾಂಡ್ ಮಾಡ್ಯೂಲ್’ಗೆ ಬಂದು ತಲುಪಿದರು. ಅಲ್ಲಿಂದ ಎರಡು ದಿನ 19 ಗಂಟೆ ಸಂಚರಿಸಿ 1969ರ ಜುಲೈ 24ರಂದು ಸಂಜೆ 4.50ಕ್ಕೆ ಭೂಮಿಗೆ ತಲುಪಿದರು. ತಮ್ಮ ಸಾಧನೆಯನ್ನು ನೀಲ್ ಆರ್ಮ್‌ಸ್ಟ್ರಾಂಗ್ ಬಣ್ಣಿಸಿದ್ದುದು ಹೀಗೆ: ‘ಮಾನವನಿಗೆ ಇದೊಂದು ಹೆಜ್ಜೆ; ಮನುಕುಲಕ್ಕೆ ದೈತ್ಯ ಜಿಗಿತ’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.