ADVERTISEMENT

ಸಂಗತ | ಕಲಿಕಾ ವಿಷಯ: ಬೇಡ ಕುರುಡು ಆಯ್ಕೆ

ಶಿಕ್ಷಣ ಮತ್ತು ಉದ್ಯೋಗದ ಕುರಿತು ಮಕ್ಕಳಿಗೆ ಹಾಗೂ ಪೋಷಕರಿಗೆ ಸರಿಯಾದ ಸಮಯದಲ್ಲಿ ಮಾರ್ಗದರ್ಶನ ಮಾಡಬೇಕಾದ ಹೊಣೆ ಶಿಕ್ಷಣ ಸಂಸ್ಥೆಗಳ ಮೇಲೆ ಇರುತ್ತದೆ

ಡಾ.ಮುರಳೀಧರ ಕಿರಣಕೆರೆ
Published 24 ಮಾರ್ಚ್ 2025, 0:30 IST
Last Updated 24 ಮಾರ್ಚ್ 2025, 0:30 IST
   

ಗ್ರಾಮೀಣ ಪ್ರದೇಶದ ಪ್ರೌಢಶಾಲೆಯೊಂದರ ಮುಖ್ಯೋಪಾಧ್ಯಾಯರು ಕರೆ ಮಾಡಿದ್ದರು. ಅವರ ಶಾಲೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರವೂ ಹೌದು. ‘ಏಪ್ರಿಲ್‌ ನಾಲ್ಕಕ್ಕೆ ಎಸ್‌ಎಸ್‌ಎಲ್‌ಸಿ ಎಕ್ಸಾಂ ಮುಗಿಯುತ್ತೆ. ಪರೀಕ್ಷೆ ಮುಗಿದ ಮೇಲೆ ಮಕ್ಕಳಿಗೆ ಕಾಲೇಜು ಶಿಕ್ಷಣದಲ್ಲಿ ಲಭ್ಯವಿರುವ ವಿವಿಧ ಕೋರ್ಸ್‌ಗಳು ಮತ್ತು ವಿದ್ಯಾರ್ಥಿ ವೇತನದ ಬಗ್ಗೆ ಒಂದು ಮಾಹಿತಿ ಕಾರ್ಯಕ್ರಮ ನಡೆಸಿಕೊಡಬಹುದಾ?’ ಎಂಬ ಅವರ ಕೋರಿಕೆ ಆಶ್ಚರ್ಯ ತಂದಿತ್ತು. ‘ಮಕ್ಕಳೆಲ್ಲಾ ಪರೀಕ್ಷೆ ಮುಗಿಸಿ, ಒತ್ತಡದಿಂದ ಮುಕ್ತರಾಗಿ ಮನೆಗೆ ಓಡುವ ಸಂಭ್ರಮದಲ್ಲಿರುತ್ತಾರೆ. ಈ ವಿಷಯವನ್ನೆಲ್ಲಾ ಕೇಳೋ ತಾಳ್ಮೆ, ಮನಃಸ್ಥಿತಿ ಎಲ್ಲಿರುತ್ತೆ? ಕೆರಿಯರ್‌ ಗೈಡೆನ್ಸ್‌ ಪ್ರೋಗ್ರಾಂ ಮಾಡೋ ಹೊತ್ತಲ್ಲ ಇದು’ ಎಂದೆ.

‘ಇಂತಹ ಮಾರ್ಗದರ್ಶನ ಕಾರ್ಯಕ್ರಮವನ್ನು ಮೊದಲೇ ಮಾಡಬೇಕು ಅಂತ ನಮಗೆ ಸೂಚನೆ ಇರುತ್ತೆ ಸರ್‌. ಆದರೆ ಪಾಠ ಪ್ರವಚನದ ಒತ್ತಡದ ಮಧ್ಯೆ ಇದನ್ನೆಲ್ಲಾ ಮಾಡೋಕ್ಕೆ ಸಮಯವಿರಲ್ಲ. ಈಗ ಇಟ್ಕೊಂಡ್ರೂ ಕೆಲವರಾದ್ರೂ ಉಪಯೋಗ ಪಡ್ಕೋತಾರೆ’ ಆಶಾಭಾವನೆಯಿತ್ತು ಅವರ ಧ್ವನಿಯಲ್ಲಿ.

ಹೌದು, ಪ್ರೌಢಶಾಲೆ ಮತ್ತು ಪಿಯುಸಿ ಹಂತದಲ್ಲಿರುವವರಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅವರ ಆಸಕ್ತಿಗೆ ಅನುಗುಣವಾದ ವಿಷಯ ಆಯ್ದುಕೊಳ್ಳುವಲ್ಲಿ ಸಕಾಲಿಕ ಶೈಕ್ಷಣಿಕ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ. ಬಹುತೇಕರಿಗೆ ಕಾಲೇಜು ಹಂತದಲ್ಲಿ ಲಭ್ಯವಿರುವ ವೈವಿಧ್ಯಮಯ ಕೋರ್ಸ್‌ಗಳ ಬಗ್ಗೆ ಸರಿಯಾದ ಅರಿವು ಇರುವುದಿಲ್ಲ. ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಈ ದಿನಗಳಲ್ಲಿ ಬೇಡಿಕೆಯಿರುವ ಕ್ಷೇತ್ರಗಳು, ಬೇಕಿರುವ ವಿದ್ಯಾರ್ಹತೆ, ಅಗತ್ಯ ಕೌಶಲಗಳ ಬಗ್ಗೆ ಮಾಹಿತಿಯ ಕೊರತೆಯಿದೆ. ತಮ್ಮ ಆಸಕ್ತಿ ಏನೆಂದು ಅರಿಯದೆ, ಪೋಷಕರು ಹೇಳಿದ ಇಲ್ಲವೇ ಸ್ನೇಹಿತರು ಆಯ್ದುಕೊಂಡ ಕೋರ್ಸ್‌ಗಳಿಗೆ ಕುರುಡಾಗಿ ಸೇರಿಕೊಳ್ಳುವ
ವರೇ ಬಹು ಮಂದಿ!

ADVERTISEMENT

ಕೃಷಿ ಕುಟುಂಬದವಳಲ್ಲದಿದ್ದರೂ ಪದವಿಗೆ ಕೃಷಿ ವಿಜ್ಞಾನಕ್ಕೆ ಸೇರಿದ ಆ ಪರಿಚಿತ ಹುಡುಗಿಯ ಆಯ್ಕೆ ನನಗೆ ತುಸು ಆಶ್ಚರ್ಯದ ಜೊತೆಗೆ ಕುತೂಹಲ ತಂದಿತ್ತು. ಇಂತಹದ್ದೊಂದು ನಡೆಗೆ ಆಕೆ ಕೊಟ್ಟ ವಿವರಣೆಯು ಕುರಿಗಳ ವರ್ತನೆ ನೆನಪಿಸುವುದರ ಜೊತೆಗೆ ಭವಿಷ್ಯದ ಬಗ್ಗೆ ಆತಂಕ ಮೂಡಿಸುವಂತೆ ಇತ್ತು! ‘ನನ್ನ ಸ್ನೇಹಿತೆ ಅಗ್ರಿಕಲ್ಚರ್‌ ಕೋರ್ಸ್‌ಗೆ ಸೇರ್ತೀನಿ ಅಂದಳು. ಅದಕ್ಕೇ ನಮ್ಮ ಗ್ರೂಪ್‌ನ ಏಳೂ ಮಂದಿ ಮಾತನಾಡಿಕೊಂಡು ಒಟ್ಟಿಗೆ ಈ ಕೋರ್ಸಿಗೆ ಸೇರಿದ್ದು’ ಎಂದಿದ್ದಳು ಹೆಮ್ಮೆಯಿಂದ. ಇವರಲ್ಲಿ ಒಬ್ಬರೂ ತಮ್ಮ ಇಷ್ಟಕ್ಕಾಗಲಿ, ಗುರಿ ಸಾಧನೆಗಾಗಲಿ ಈ ವಿಭಾಗವನ್ನು ಆಯ್ದುಕೊಂಡಿರಲಿಲ್ಲ! ಹತ್ತನೆಯ ತರಗತಿ ಮುಗಿಸಿದ, ಆರ್ಥಿಕವಾಗಿ ದುರ್ಬಲನಾಗಿರುವ ಆ ಹುಡುಗ ತನಗೆ ಇಷ್ಟವಿಲ್ಲದಿದ್ದರೂ ತಾಯಿಯ ಒತ್ತಡದಿಂದ ಡಿಪ್ಲೊಮಾ ಸೇರಿದ್ದ. ವಿಷಯಗಳನ್ನು ಅರಗಿಸಿಕೊಳ್ಳಲಾಗದೆ ಒಂದೇ ವರ್ಷಕ್ಕೆ ಕಾಲೇಜು ಬಿಟ್ಟಿದ್ದಷ್ಟೇ ಅಲ್ಲ, ವಿದ್ಯಾಭ್ಯಾಸದ ಬಗ್ಗೆ ಜುಗುಪ್ಸೆ ಹೊಂದಿ, ಯಾರ ಮಾತನ್ನೂ ಕೇಳದೆ ಈಗ ಗಾರೆ ಕೆಲಸಕ್ಕೆ ಹೋಗುತ್ತಿದ್ದಾನೆ.

ಮೊದಲ ಹಂತದಲ್ಲಿ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗ ದರ್ಶನದ ಅವಶ್ಯಕತೆ ಮಕ್ಕಳಿಗಿಂತ ಅವರ ಹೆತ್ತವರಿಗೇ ಹೆಚ್ಚಾಗಿರುತ್ತದೆ. ಈಡೇರದ ತಮ್ಮ ಕನಸುಗಳನ್ನು ಮಕ್ಕಳ ಮೂಲಕ ನನಸಾಗಿಸಿಕೊಳ್ಳಲು ಪ್ರಯತ್ನಿಸುವ ಪೋಷಕರೇ ಅಧಿಕ. ಸ್ಥಾನಮಾನ, ಪ್ರತಿಷ್ಠೆಗಾಗಿ ತಮ್ಮ ಆಸೆ, ಆಕಾಂಕ್ಷೆಗಳನ್ನು ಬಲವಂತವಾಗಿ ಹೇರುವವರೂ ಇದ್ದಾರೆ. ಇವರು ತಮ್ಮ ಮಕ್ಕಳ ಇಷ್ಟಾನಿಷ್ಟಗಳನ್ನು ತಿಳಿಯಲು ಹೋಗುವುದಿಲ್ಲ. ತಾವು ಹೇಳಿದ ಕೋರ್ಸನ್ನೇ ಆಯ್ಕೆ ಮಾಡಿಕೊಳ್ಳಬೇಕೆಂದು ಒತ್ತಡ ಹಾಕುತ್ತಾರೆ. ಸಾಕಷ್ಟು ಅಂಕಗಳು ಇಲ್ಲದಾಗ ಅಥವಾ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗದಿದ್ದರೆ ಡೊನೇಷನ್‌ ಕೊಟ್ಟಾದರೂ ಮಕ್ಕಳನ್ನು ತಮ್ಮ ಬಯಕೆಯ ಕೋರ್ಸ್‌ಗೆ ಸೇರಿಸಿ ಧನ್ಯರಾಗುತ್ತಾರೆ!

ಈ ರೀತಿಯ ಬಲವಂತದ ಹೇರಿಕೆ ಒಮ್ಮೊಮ್ಮೆ ಮಕ್ಕಳ ಭವಿಷ್ಯವನ್ನೇ ಹಾಳು ಮಾಡುತ್ತದೆ. ಕೆಲವರು ಮಧ್ಯದಲ್ಲೇ ಬಿಟ್ಟು ಬೇರೆ ವಿಷಯಗಳನ್ನು ಆಯ್ಕೆ ಮಾಡಿಕೊಂಡು ವಿದ್ಯಾರ್ಥಿ ಜೀವನದ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಂಡರೆ, ಓದುವುದನ್ನೇ ಕೈಬಿಡುವವರೂ ಇದ್ದಾರೆ. ಒಂದು ವೇಳೆ ಉದ್ಯೋಗ ಹಿಡಿದರೂ ತಮಗಿಷ್ಟವಿಲ್ಲದ ಕ್ಷೇತ್ರದಲ್ಲಿ ಮನಃಪೂರ್ವಕ
ವಾಗಿ ಕೆಲಸ ಮಾಡುವುದಾದರೂ ಹೇಗೆ ಸಾಧ್ಯ?

ಮೊದಲು ಮಕ್ಕಳ ಆಕಾಂಕ್ಷೆ, ಅಭಿರುಚಿಯ ಬಗ್ಗೆ ಪೋಷಕರು ವಿಚಾರಿಸಬೇಕು. ‘ನಿನಗೇನು ತಿಳಿಯುತ್ತದೆ, ಇನ್ನೂ ಸಣ್ಣ ವಯಸ್ಸು’ ಎಂಬ ಧೋರಣೆ ಖಂಡಿತ ಸಲ್ಲದು. ಮಕ್ಕಳಿಗೆ ಗುರಿಯೇ ಇಲ್ಲದಾಗ, ಮುಂದಿನ ವಿದ್ಯಾಭ್ಯಾಸದ ಬಗ್ಗೆ ಗೊಂದಲವಿದ್ದಾಗ ಹೆತ್ತವರು ಅವರ ಇಚ್ಛೆ, ಬಯಕೆ, ಆತಂಕವನ್ನು ತಿಳಿದುಕೊಂಡು ಸರಿಯಾದ ಸಲಹೆ, ಬೆಂಬಲ ನೀಡಬೇಕು. ಹಾಗೆಂದು ಆಯ್ಕೆಯ ಜವಾಬ್ದಾರಿಯನ್ನು ಎಳೆಯರ ಮೇಲೆಯೇ ಪೂರ್ಣವಾಗಿ ಬಿಡುವಂತೆಯೂ ಇಲ್ಲ. ಮಕ್ಕಳಿಗೆ ಸಿನಿಮಾ, ಕ್ರಿಕೆಟ್‌ನಂತಹ ಕ್ಷೇತ್ರಗಳಲ್ಲಿ ಹುಚ್ಚು ಜಾಸ್ತಿ. ಅವರನ್ನು ಪ್ರೋತ್ಸಾಹಿಸುವ ಮುನ್ನ ಅಪಾಯಗಳು, ಸಾಧಕ-ಬಾಧಕಗಳನ್ನು ತಿಳಿಸಿ ಹೇಳುವ ಜೊತೆಗೆ ಅಪೇಕ್ಷಿತ ಶೈಕ್ಷಣಿಕ ಮಟ್ಟದ ಬಗ್ಗೆಯೂ ಮನದಟ್ಟು ಮಾಡಿಸಬೇಕು.

ಮಕ್ಕಳು, ಪೋಷಕರಿಗೆ ಶಿಕ್ಷಣ, ಉದ್ಯೋಗದ ಕುರಿತು ಸಕಾಲದಲ್ಲಿ ಮಾರ್ಗದರ್ಶನ ಮಾಡುವುದ ರಿಂದ ಕಲಿಕೆ ಉತ್ತಮವಾಗುತ್ತದೆ. ಶೈಕ್ಷಣಿಕ ವೈಫಲ್ಯ, ಶಾಲೆ-ಕಾಲೇಜುಗಳಿಂದ ಹೊರಗುಳಿಯುವ ಅಪಾಯ, ನಿರುದ್ಯೋಗ ಕಡಿಮೆಯಾಗುತ್ತದೆ. ವೃತ್ತಿಯಲ್ಲಿನ ಸೋಲು, ಒತ್ತಡ ಗಣನೀಯವಾಗಿ ತಗ್ಗುತ್ತವೆ. ಇಷ್ಟಪಟ್ಟು ಕೆಲಸ ಮಾಡುವುದರಿಂದ ಆಯಾ ಕ್ಷೇತ್ರಕ್ಕೂ ಲಾಭವಾಗಿ ಉತ್ಪಾದಕತೆ ಹೆಚ್ಚುತ್ತದೆ. ಇಂತಹ ದಾರಿ ತೋರುವ ಹೊಣೆಗಾರಿಕೆ ಶಿಕ್ಷಣ ಸಂಸ್ಥೆಗಳ ಮೇಲೆಯೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.