ADVERTISEMENT

ಸಂಗತ: ಬಾರಿಸಲಿದೆ ‘ವಾಟರ್ ಬೆಲ್’

ಶಾಲೆಗಳಲ್ಲಿ ನೀರಿನ ಬೆಲ್‌ ಬಾರಿಸಿ ನೀರು ಕುಡಿಯಲು ಮಕ್ಕಳಿಗೆ ಅನುವು ಮಾಡಿಕೊಡುವ ಪ್ರಯತ್ನವು ಅವರ ಆರೋಗ್ಯಕರ ಜೀ

ಸದಾಶಿವ ಸೊರಟೂರು
Published 20 ನವೆಂಬರ್ 2022, 19:30 IST
Last Updated 20 ನವೆಂಬರ್ 2022, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಶಾಲೆಯಲ್ಲಿ ದಿನಕ್ಕೆ ಮೂರು ಬಾರಿ ಗಂಟೆ ಬಾರಿಸಿ ಮಕ್ಕಳಿಗೆ ನೀರು ಕುಡಿಯಲು ಅನುವು ಮಾಡಿಕೊಡಬೇಕು ಎಂದು ಶಿಕ್ಷಣ ಇಲಾಖೆ ಆದೇಶಿಸಿದಾಗ ಬಹುತೇಕರು ನಕ್ಕರು, ಕುಹಕವಾಡಿದರು. ನೀರು ಕುಡಿಯಲು ಕೂಡ ಒಂದು ಗಂಟೆ ಬಾರಿಸಬೇಕಾ ಎಂಬುದು ಅವರ ಪ್ರಶ್ನೆ. ಈ ‘ವಾಟರ್ ಬೆಲ್’ ಎಷ್ಟೊಂದು ಪರಿಣಾಮಕಾರಿಯಾದದ್ದು ಹಾಗೂ ಅವಶ್ಯವಾದದ್ದು ಎಂಬುದರ ಅರಿವು ಪೋಷಕರು ಮತ್ತು ಶಿಕ್ಷಕರಿಗೆ ಈಗ ಆಗಿದೆ. 2019ರಲ್ಲಿ ಈ ನಿಯಮ ಜಾರಿಯಾದಾಗ ಸಿಕ್ಕಿದ ಅದ್ಭುತ ಫಲಿತಾಂಶವು ಈಗ ಅದನ್ನು ಮರುಜಾರಿಗೊಳಿಸು
ವಂತೆ ಮಾಡಿದೆ.

ಮಕ್ಕಳಿಗೆ ಕುಡಿಯಲು ಇಟ್ಟ ನೀರು ಸ್ವಲ್ಪವೂ ಖರ್ಚಾಗದೆ ಉಳಿದಾಗ, ಸಂಜೆ ಮನೆಗೆ ಹೊರಟಾಗ ಅವರ ಬ್ಯಾಗಿನಲ್ಲಿ ಬೆಳಿಗ್ಗೆ ಮನೆಯಿಂದ ತಂದಿದ್ದ ಕುಡಿಯುವ ನೀರು ಬಾಟಲಿಗಳಲ್ಲಿ ಹಾಗೆಯೇ ಉಳಿದಾಗ ಮಗುವಿನ ಆರೋಗ್ಯದ ಬಗ್ಗೆ ಗಾಬರಿಯಾಗುವುದು ಸಹಜ. ‘ನೀವು ನೀರು ಕುಡಿಯಬೇಕು’ ಎಂದು ಎಷ್ಟೋ ಬಾರಿ ತಿಳಿ ಹೇಳಿದರೂ ಮಕ್ಕಳು ಅದನ್ನು ಪಾಲಿಸುತ್ತಿರಲಿಲ್ಲ. ಈಗ ನಿಶ್ಚಿತ ಸಮಯ ನೀಡಿರುವುದರಿಂದ ಶಿಕ್ಷಕರ ಎದುರಲ್ಲೇ ಅವರು ನೀರು ಕುಡಿಯಬೇಕಾಗುತ್ತದೆ. ಶಿಕ್ಷಕರು ಪ್ರತೀ ಮಗುವನ್ನೂ ಅವಲೋಕಿಸುತ್ತಾರೆ. ಎಲ್ಲ ಬಾರಿಯೂ ಶಿಕ್ಷಕರೇ ಮುಂದೆ ನಿಂತು ನೀರು ಕುಡಿಸಲು ಆಗುವುದೇ ಎಂಬ ಪ್ರಶ್ನೆ ಮೂಡಬಹುದು. ಇದು ಮಗುವಿಗೆ ಮಾಡಿಸುತ್ತಿರುವ ರೂಢಿ, ಆರೋಗ್ಯಕರ ಅಭ್ಯಾಸ. ಶಾಲೆ ಇರುವುದೇ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಲು ಅಲ್ಲವೆ?

ನೀರು ಕುಡಿಯದೇ ಇರುವುದರಿಂದ ಮಗು ಎದುರಿಸುವ ಆರೋಗ್ಯದ ಸಮಸ್ಯೆಗಳ ಅರಿವು ಶಿಕ್ಷಕರಿಗೆ ಆಗಿದೆ. ಸದಾ ತಲೆನೋವು ಮತ್ತು ಹೊಟ್ಟೆನೋವಿನಿಂದ ಬಳಲುತ್ತಿದ್ದ ಆರನೇ ತರಗತಿಯ ಬಾಲಕಿಯೊಬ್ಬಳನ್ನು ವೈದ್ಯರ ಬಳಿ ತೋರಿಸಿದಾಗ, ಅವರು ಮಗುವಿನ ದೇಹ ನೀರಿನ ಅಭಾವದಿಂದ ಬಳಲಿದೆ ಎಂದಿದ್ದರು. ಮಗುವಿನ ಬ್ಯಾಗಿನಲ್ಲಿ ನೀರು ಇರುತ್ತದೆ, ಶಾಲೆಯಲ್ಲೂ ಕುಡಿಯಲು ನೀರು ಇರುತ್ತದೆ. ಆದರೆ ಮಗು ಕುಡಿಯುವುದಿಲ್ಲ. ಓದಿನ ಕಡೆ, ಆಟದ ಕಡೆ, ಸ್ನೇಹಿತರ ಜೊತೆಗಿನ ಹರಟೆಯ ಕಡೆ ಗಮನಕೊಟ್ಟು ನೀರು ಕುಡಿಯುವುದನ್ನು ಅದು ಮರೆಯುತ್ತದೆ.

ADVERTISEMENT

ನಿರ್ಜಲೀಕರಣವು ತಲೆನೋವು, ತಲೆತಿರುಗುವಿಕೆ, ಬಾಯಿ ದುರ್ವಾಸನೆ, ಮೆದುಳಿನಲ್ಲಿ ಅರಿವಿನ ಸಮಸ್ಯೆ, ಸ್ನಾಯು ಸೆಳೆತ, ದಣಿವು, ಗೊಂದಲ ಮತ್ತು ದುರ್ಬಲ ಮೂತ್ರಪಿಂಡದ ಕಾರ್ಯನಿರ್ವಹಣೆಗೆ ಕಾರಣವಾಗು ತ್ತದೆ ಮತ್ತು ಕೆಲವು ವಿಪರೀತ ಸಂದರ್ಭಗಳಲ್ಲಿ ಇದು ಸಾವಿಗೂ ಕಾರಣವಾಗಬಹುದು ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ. ಹೀಗಾಗಿ ಮಗು ಸರಿಯಾಗಿ ನೀರು ಕುಡಿಯದೇ ಇರುವುದು ಎಷ್ಟೊಂದು ಗಂಭೀರ ವಾದ ಸಮಸ್ಯೆ ಎಂಬುದು ನಮಗೆ ಅರ್ಥವಾಗಬೇಕು.

ಯುರೋಪಿಯನ್ ಫುಡ್ ಸೇಫ್ಟಿ ಅಥಾರಿಟಿಯು (ಇಎಫ್‌ಎಸ್‌ಎ) 4ರಿಂದ 13 ವರ್ಷ ವಯಸ್ಸಿನ ಮಕ್ಕಳು ದಿನಕ್ಕೆ ಸರಿಸುಮಾರು 6-8 ಗ್ಲಾಸ್ ನೀರನ್ನು ಕುಡಿಯುವುದು ತೀರಾ ಅಗತ್ಯ ಎಂದು ಹೇಳುತ್ತದೆ. ವಿಶ್ವಸಂಸ್ಥೆಯ ಮಾರ್ಗಸೂಚಿಯು ಪ್ರತೀ ಮಗುವಿಗೆ ಸುರಕ್ಷಿತ ಕುಡಿಯುವ ನೀರಿನ ಹಕ್ಕಿದೆ ಮತ್ತು ಶಾಲೆಗಳಲ್ಲಿ ಅದಕ್ಕೆ ಅವಕಾಶ ಇರಬೇಕು ಎನ್ನುತ್ತದೆ.‌ ಭಾರತದಲ್ಲಿ ಪ್ರತೀ ಮಗುವೂ ಅಗತ್ಯವಿರುವಷ್ಟು ನೀರು ಕುಡಿಯುವುದನ್ನು ಖಾತರಿಪಡಿಸುವ ಯಾವುದೇ ಕಾರ್ಯವಿಧಾನವಿಲ್ಲ. ನೀರಿನ ಗಂಟೆಯ ಪ್ರವೃತ್ತಿಯು ಈ ದಿಕ್ಕಿನಲ್ಲಿ ಸಹಾಯ ಮಾಡುತ್ತದೆ ಎನ್ನಬಹುದು.

ಶಾಲೆಯಲ್ಲಿ ಇನ್ನು ಮುಂದೆ ದಿನಕ್ಕೆ ಮೂರು ಬಾರಿ ‘ವಾಟರ್ ಬೆಲ್’ ಬಾರಿಸುತ್ತದೆ. ಬೆಳಿಗ್ಗೆ 10.35ಕ್ಕೆ, ಮಧ್ಯಾಹ್ನ 12 ಮತ್ತು 2 ಗಂಟೆಗೆ ಈ ಬೆಲ್‌ ಬಾರಿಸುವಂತೆ ವೇಳಾಪಟ್ಟಿ ನಿಗದಿಪಡಿಸಲಾಗಿದೆ.

ಉತ್ತಮ ಪ್ರಯತ್ನದಂತೆ ತೋರುವ ಈ ‘ವಾಟರ್ ಬೆಲ್’ ಮೂಲತಃ ಕೇರಳದ್ದು. ಕೇರಳದ ಇರಿಂಜಾಲಕ್ಕುಡದಲ್ಲಿರುವ ಸಂತ ಜೋಸೆಫ್ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಜೆನಿಲ್ ಜಾನ್ ಅವರು ಈ ಯೋಜನೆಯ ರೂವಾರಿ. ಬಾಯಾರಿಕೆ ಅನುಭವಿಸಿದರೂ ನೀರು ಕುಡಿಯದೆ ಮೂರ್ಛೆ ಹೋದ ಶಾಲೆಯ ಮಗುವೊಂದರ ಪ್ರಕರಣದಿಂದ ಅವರು ಕಳವಳಗೊಂಡು ಇಂತಹದ್ದೊಂದು ಹೊಸ ಕಲ್ಪನೆಯನ್ನು ಹುಟ್ಟುಹಾಕಿದರು. ಅದು ಯಶಸ್ಸು ಕಂಡಿತು.‌ ನಂತರ ಇಡೀ ಕೇರಳ ಅದನ್ನು ಅನುಷ್ಠಾನಗೊಳಿಸಿತು. ಈಗ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಒಡಿಶಾ ರಾಜ್ಯಗಳೂ ಅದನ್ನು ಅನುಷ್ಠಾನಗೊಳಿಸಿವೆ.

ಶಾಲೆ ಈಗ ಓದು- ಬರಹವನ್ನಷ್ಟೇ ಹೇಳಿಕೊಡದೆ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದೆ. ಮಧ್ಯಾಹ್ನದ ಪೌಷ್ಟಿಕ ಆಹಾರ, ನಿಯಮಿತವಾಗಿ ವೈದ್ಯರಿಂದ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ, ವಿಟಮಿನ್ ಮಾತ್ರೆಗಳ ವಿತರಣೆ, ಚಟುವಟಿಕೆಯಿಂದ ಇರುವಂತೆ ಮಾಡಲು ಆಟೋಟ, ಸ್ವಚ್ಛತೆ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮಗಳು ಮಕ್ಕಳನ್ನು ಆರೋಗ್ಯವಾಗಿ ಇಡಲು ಸಹಕಾರಿಯಾಗಿವೆ. ಈಗ ‘ವಾಟರ್ ಬೆಲ್’ ಅದಕ್ಕೊಂದು ಹೊಸ ಸೇರ್ಪಡೆ. ನಾವು ನಾಳೆಗಳ ಬಗ್ಗೆ ಯೋಚಿಸುವುದೆಂದರೆ ಅದು ಮಕ್ಕಳ ಬಗ್ಗೆ ಯೋಚಿಸುವುದೇ ಆಗಿದೆ. ನಮ್ಮ ಮಕ್ಕಳ ನಾಳಿನ ದಿನಗಳ ಸ್ವಾಸ್ಥ್ಯವು ನಾವು ಇಂದು ಕಲಿಸುವ ಆರೋಗ್ಯಕರ ಅಭ್ಯಾಸಗಳಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.