ಸಂಗತ | ಶಾಲೆ ಸುಧಾರಣೆ: ಯಾರ ಹೊಣೆ?
‘ಸರ್ಕಾರಿ ಶಾಲೆಗಳು ಉಳಿಯಬೇಕು. ಸರ್ಕಾರಿ ಶಾಲೆಗಳಿಗೆ ಸರ್ಕಾರ ಮೂಲ ಸೌಲಭ್ಯ ಒದಗಿಸಬೇಕು’ ಎಂಬ ಬೇಡಿಕೆಯಲ್ಲಿ, ಸರ್ಕಾರಿ ಶಾಲೆಗಳು ಮುಚ್ಚಿದರೆ ಖಾಸಗಿ ಶಾಲೆಗಳ ಏಕಸ್ವಾಮ್ಯಕ್ಕೆ ಮಿತಿಯೇ ಇಲ್ಲದಂತಾಗಲಿದೆ’ ಎಂಬ ಆತಂಕವೂ ಇರುವಂತಿದೆ. ಸರ್ಕಾರಿ ಶಾಲೆ ಎಂದರೆ ಮುಖ್ಯವಾಗಿ ಅದು ಕನ್ನಡ ಮಾಧ್ಯಮ ಶಾಲೆ. ಕನ್ನಡ ಶಾಲೆಗಳು ಮುಚ್ಚಿದರೆ ಭವಿಷ್ಯದಲ್ಲಿ ಕನ್ನಡ ಭಾಷೆಗೆ ಹೊಡೆತ ಬೀಳಲಿದೆ ಎಂಬುದು ಕನ್ನಡಪ್ರೇಮಿಗಳ ಆತಂಕ.
‘ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸದಿದ್ದರೆ ಸರ್ಕಾರವಾದರೂ ಏನು ಮಾಡಬೇಕು? ವಿದ್ಯಾರ್ಥಿಗಳೇ ಇಲ್ಲದ ಶಾಲೆಗಳನ್ನು ಮುಂದುವರಿಸಿ ಏನು ಪ್ರಯೋಜನ?’ ಎನ್ನುವ ಪ್ರಶ್ನೆ ಕೆಲವರದು. ‘ಸರ್ಕಾರಿ ಶಾಲೆ ಮುಚ್ಚದೇ ಇರಬೇಕಾದರೆ ಜಾಗೃತಿ ಮೂಡಿಸಬೇಕಿ ರುವುದು ಯಾರಿಗೆ?’ ಹಾಗೂ ‘ಸರ್ಕಾರಿ ಶಾಲೆಗಳಲ್ಲಿ ಇಲ್ಲದ್ದು ಖಾಸಗಿ ಶಾಲೆಗಳಲ್ಲಿ ಏನಿದೆ?’ ಎನ್ನುವ ಪ್ರಶ್ನೆಗಳೂ ಇವೆ. ಈ ಜಿಜ್ಞಾಸೆಯ ಬಗ್ಗೆ ತಲೆಬಿಸಿ ಮಾಡಿಕೊಳ್ಳದ ಅನೇಕ ಪಾಲಕರು, ‘ಇಂಗ್ಲಿಷ್ ಮಾಧ್ಯಮ’ ಮುಖ್ಯ ಎಂದು ಭಾವಿಸಿದ್ದಾರೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಲು ಒತ್ತಾಯಿಸುತ್ತಿದ್ದಾರೆ.
‘ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳಿಲ್ಲ. ಶಿಥಿಲಾವಸ್ಥೆಯ ಕಟ್ಟಡಗಳಲ್ಲಿಯೇ ಮಕ್ಕಳು ಕಲಿಯು ತ್ತಿದ್ದಾರೆ. ಶಾಲೆ, ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಬಗ್ಗೆ ಸರ್ಕಾರಕ್ಕೆ ಕಾಳಜಿಯೇ ಇಲ್ಲವಾಗಿದೆ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಈಚೆಗೆ ಅಸಮಾಧಾನ ಹೊರಹಾಕಿದ್ದಾರೆ. ಪಾಲಕರು, ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಂದ ವಿಮುಖವಾಗಲು ಇದೇ ಪ್ರಮುಖ ಕಾರಣ ಎಂಬುದಾದರೆ, ದುಬಾರಿ ಶುಲ್ಕ ವಸೂಲಿ ಮಾಡುವ ಖಾಸಗಿ ಶಾಲೆಗಳಲ್ಲಿ ಎಲ್ಲ
ಸೌಲಭ್ಯಗಳಿವೆಯೇ? ಎಂಬ ಪ್ರಶ್ನೆ ಏಳುತ್ತದೆ. ಅನೇಕ ಖಾಸಗಿ ಶಾಲೆಗಳು ಮುಖ್ಯರಸ್ತೆಯ ಪಕ್ಕದಲ್ಲೇ ಇರುವ ಕಟ್ಟಡಗಳಲ್ಲಿ ನಡೆಯುತ್ತಿವೆ. ವಿದ್ಯಾರ್ಥಿಗಳಿಗೆ ಅಲ್ಲಿ ಪ್ರಾರ್ಥನೆ ಮಾಡಲೂ ಜಾಗವಿರುವುದಿಲ್ಲ. ಆಟದ ಬಯಲೂ ಇರುವುದಿಲ್ಲ. ಆ ಶಾಲೆಗಳಲ್ಲಿ ಮಕ್ಕಳನ್ನು ಕುರಿಮಂದೆಯಂತೆ ತುಂಬಿಸಿಕೊಳ್ಳಲಾಗುತ್ತದೆ.
ಸರ್ಕಾರ ವಿದ್ಯಾರ್ಥಿಗಳಿಗೆ ಒದಗಿಸುತ್ತಿರುವ ಸೌಲಭ್ಯಗಳಲ್ಲಿ, ‘ಶುಲ್ಕರಹಿತ ಶಿಕ್ಷಣ ಸೌಲಭ್ಯ’ ಮುಖ್ಯವಾದುದು. ಬಿಸಿಯೂಟ, ಪಠ್ಯಪುಸ್ತಕ, ಸಮವಸ್ತ್ರ, ಬಾಳೆಹಣ್ಣು, ಮೊಟ್ಟೆ, ಹಾಲು, ಆರೋಗ್ಯ ತಪಾಸಣೆಯಂಥ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಕಟ್ಟಡ, ಆಟದ ಮೈದಾನ, ಪ್ರಾರ್ಥನೆಗೆ ಜಾಗ ಸೇರಿದಂತೆ ಅನೇಕ ಸೌಲಭ್ಯಗಳು ಸರ್ಕಾರಿ ಶಾಲೆಗಳಲ್ಲಿರುವುದು ಸರ್ವವಿದಿತ. ಹಾಗಾದರೆ, ರಾಜ್ಯದಾದ್ಯಂತ ಸರ್ಕಾರಿ ಶಾಲೆಗಳ ಅಸ್ತಿತ್ವಕ್ಕೆ ಏಕೆ ಹೊಡೆತ ಬೀಳುತ್ತಿದೆ?
ಡಿ.ಇಡಿ ಅಥವಾ ಬಿ.ಇಡಿಯಲ್ಲಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದ ಪ್ರಶಿಕ್ಷಣಾರ್ಥಿಗಳು ಸರ್ಕಾರಿ ಶಾಲೆಯ ಶಿಕ್ಷಕರಾಗಲು, ಅತ್ಯಂತ ಕಠಿಣವಾದ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಟಿಇಟಿ–ಟೀಚರ್ಸ್ ಎಲಿಜಿಬಲಿಟಿ ಟೆಸ್ಟ್) ಉತ್ತೀರ್ಣರಾಗುವುದು ಕಡ್ಡಾಯ. ನಂತರ, ಶಿಕ್ಷಕ ಹುದ್ದೆಯ ನೇಮಕಾತಿಗೆ ನಡೆಯುವ ‘ಸಿಇಟಿ’ಯಲ್ಲಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಹೆಚ್ಚು ಅಂಕ ಗಳಿಸಿದವರೇ ಸರ್ಕಾರಿ ಶಾಲೆಗಳ ಶಿಕ್ಷಕರಾಗುತ್ತಾರೆ. ಟಿಇಟಿ ಪಾಸಾಗಲೂ ಆಗದವರು ಅಥವಾ ಸಿಇಟಿಯಲ್ಲಿ ವಿಫಲರಾದವರು ಖಾಸಗಿ ಶಾಲೆಗಳಲ್ಲಿ ಪಾಠ ಮಾಡುತ್ತಿದ್ದಾರೆ.
ಪ್ರತಿಭಾವಂತರೇ ಶಿಕ್ಷಕರಾಗಿದ್ದರೂ, ಸರ್ಕಾರಿ ಶಾಲೆಗಳಲ್ಲಿನ ಶೈಕ್ಷಣಿಕ ಗುಣಮಟ್ಟ ಸರಿಯಿಲ್ಲ ಎನ್ನುವ ದೂರುಗಳಿವೆ. ಸರ್ಕಾರಿ ಶಾಲೆಯ ಶಿಕ್ಷಕರ ಸಂಬಳ ಆರಂಭದಲ್ಲೇ ಅರ್ಧ ಲಕ್ಷ ದಾಟಿದ್ದರೆ, ಖಾಸಗಿ ಶಿಕ್ಷಕರ ಸಂಬಳ ₹20 ಸಾವಿರವೂ ಇರುವುದಿಲ್ಲ. ಆದರೂ, ಸರ್ಕಾರಿ ಪ್ರಾಥಮಿಕ ಶಾಲೆಗಳ ಅದೆಷ್ಟೋ ವಿದ್ಯಾರ್ಥಿಗಳಿಗೆ ಇಂಗ್ಲಿಷಿನ ಎಬಿಸಿಡಿ ಒತ್ತಟ್ಟಿಗಿರಲಿ, ಕನ್ನಡದ ವರ್ಣಮಾಲೆಯನ್ನೂ ಬರೆಯಲು ಬರುವುದಿಲ್ಲ!
ಸಿಇಟಿ, ಜೆಇಇ ಮತ್ತು ಎನ್‌ಇಇಟಿ (ನೀಟ್) ಪರೀಕ್ಷೆ ಎದುರಿಸಲು ಸುಲಭವಾಗುತ್ತದೆ ಎನ್ನುವ ಉದ್ದೇಶದಿಂದ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮ
ಆಯ್ದುಕೊಳ್ಳುವವರು ಹೆಚ್ಚುತ್ತಿದ್ದಾರೆ. ಗ್ರಾಮಗಳು, ಪಟ್ಟಣಗಳಿಂದ ಹಿಡಿದು ಮಹಾನಗರಗಳಲ್ಲಿ ತಲೆ ಎತ್ತಿರುವ ಖಾಸಗಿ ಶಾಲೆಗಳಲ್ಲಿ ಈ ಪಠ್ಯಕ್ರಮವೇ ಇದೆ. ಆ ಶಾಲೆಗಳಿಗೆ ಅಧಿಕ ಸಂಖ್ಯೆಯ ಪಾಲಕರು ಸ್ವಯಂ ಪ್ರೇರಣೆಯಿಂದಲೇ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ಈ ಪಾಲಕರಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಕರೂ ಇದ್ದಾರೆ.
ಬಹುತೇಕ ಸರ್ಕಾರಿ ಶಾಲೆಗಳ ಶಿಕ್ಷಕರು ತಾವು ಕೆಲಸ ಮಾಡುವ ಶಾಲೆ ಇರುವ (ಹಳ್ಳಿಯಾಗಿದ್ದರೆ) ಊರಲ್ಲಿ ತಂಗದೆ, ಸಮೀಪದ ಪಟ್ಟಣ ಅಥವಾ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಮಕ್ಕಳಿಗೆ ಖಾಸಗಿ ಶಾಲೆಯಲ್ಲಿ ದೊರೆಯುವ ಗುಣಮಟ್ಟದ ಶಿಕ್ಷಣ ಕೊಡಿಸುವುದಕ್ಕೆ ಅವರು ಆ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದಾಗಿ ಹೇಳುತ್ತಾರೆ.
ಸರ್ಕಾರಿ ಶಾಲೆಗಳಲ್ಲಿನ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಆ ಶಾಲೆಗಳ ಶಿಕ್ಷಕರೇ ಮುಂದಾಗಬೇಕಿದೆ. ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲೇ ಓದಿಸಲು ಅವರು ಮುಂದಾದಲ್ಲಿ, ಸರ್ಕಾರಿ ಶಾಲೆಗಳ ಮೇಲೆ ಇತರರಿಗೂ ನಂಬಿಕೆ ಮೂಡುತ್ತದೆ. ತಾವು ಕರ್ತವ್ಯ ನಿರ್ವಹಿಸುವ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸದ ಸರ್ಕಾರಿ ಶಾಲೆಗಳ ಶಿಕ್ಷಕರ ವರ್ತನೆಯು, ಮನೆಯಲ್ಲಿ ತಯಾರಾದ ಅಡುಗೆ ಸರಿಯಿಲ್ಲ ಎಂದು ಭಾವಿಸಿ ಹೋಟೆಲ್‌ನಿಂದಲೋ ಪಕ್ಕದ ಮನೆಯಿಂದಲೋ ತರಿಸಿ ತಿಂದಷ್ಟೇ ಅಸಹಜ ಎನಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.