ADVERTISEMENT

ಸಂಗತ | ಸೆಬಿ ಆಶಯಕ್ಕೆ ಭಾಷೆಯ ಆಯಾಮ ಇರಲಿ

ಮ್ಯೂಚುವಲ್‌ ಫಂಡ್‌ಗಳು ಜನಸಮುದಾಯವನ್ನು ವ್ಯಾಪಕವಾಗಿ ತಲುಪಿಲ್ಲ ಎಂಬುದನ್ನು ಅಂಕಿ–ಅಂಶಗಳು ಹೇಳುತ್ತಿವೆ

ವಿಜಯ್ ಜೋಷಿ
Published 23 ಜನವರಿ 2025, 23:54 IST
Last Updated 23 ಜನವರಿ 2025, 23:54 IST
<div class="paragraphs"><p>ಸಂಗತ</p></div>

ಸಂಗತ

   

ಹೂಡಿಕೆಗಳ ಜಗತ್ತಿಗೆ ಎಲ್ಲರೂ ಪ್ರವೇಶಿಸುವಂತೆ ಆಗಬೇಕು ಎಂಬ ಉದ್ದೇಶದಿಂದ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಹೊಸ ಪ್ರಸ್ತಾವವೊಂದನ್ನು ಸಿದ್ಧಪಡಿಸಿದೆ. ಬರೀ ₹250ಕ್ಕೆ ಮ್ಯೂಚುವಲ್‌ ಫಂಡ್‌ ವ್ಯವಸ್ಥಿತ ಹೂಡಿಕೆ ಯೋಜನೆಗಳ (ಎಸ್‌ಐಪಿ) ಮೂಲಕ ಷೇರುಗಳಲ್ಲಿ ಹೂಡಿಕೆ ಮಾಡುವ ಅವಕಾಶವು ಸಮಾಜದಲ್ಲಿನ ‘ಕಡಿಮೆ ಆದಾಯದ ಸಮುದಾಯ’ಗಳಿಗೆ ಸಿಗಬೇಕು, ಹಣಕಾಸಿನ ಒಳಗೊಳ್ಳುವಿಕೆಯ ಉದ್ದೇಶ ಈಡೇರಬೇಕು ಎಂಬುದು ಸೆಬಿ ಪ್ರಸ್ತಾವದ ಹಿಂದಿರುವ ಆಶಯ.

ಇದಕ್ಕೆ ಸಂಬಂಧಿಸಿದಂತೆ ಸಮಾಲೋಚನಾ ಪತ್ರವೊಂದನ್ನು ಸಿದ್ಧಪಡಿಸಿರುವ ಸೆಬಿ, ಅದರ ಬಗ್ಗೆ ಫೆಬ್ರುವರಿ 6ಕ್ಕೆ ಮೊದಲು ಸಲಹೆಗಳನ್ನು ನೀಡಬೇಕು ಎಂದು ಸಾರ್ವಜನಿಕರನ್ನು ಕೋರಿದೆ. ₹250ಕ್ಕೆ ಮ್ಯೂಚುವಲ್‌ ಫಂಡ್‌ಗಳ ಮೂಲಕ ಷೇರುಗಳಲ್ಲಿ ಹೂಡಿಕೆ ಮಾಡುವುದು ಸಾಧ್ಯವಾದರೆ, ಇದುವರೆಗೆ ಈ ಹೂಡಿಕೆಗಳ ಪ್ರಯೋಜನ ಲಭ್ಯವಾಗಿರದ ಸಮುದಾಯಗಳ ಹಣಕಾಸಿನ ಸಬಲೀಕರಣ ಸಾಧ್ಯವಾ
ಗುತ್ತದೆ, ಮ್ಯೂಚುವಲ್ ಫಂಡ್‌ ಹೂಡಿಕೆ ಸೇವೆ ಒದಗಿಸುವ ಕಂಪನಿಗಳಿಗೆ ತಮ್ಮ ವ್ಯಾಪ್ತಿಯನ್ನು ದೇಶದ ಮೂಲೆಮೂಲೆಗಳಿಗೂ ವಿಸ್ತರಿಸಲು ಅವಕಾಶವಾಗುತ್ತದೆ
ಎಂಬ ಮಾತನ್ನು ಸೆಬಿ ಹೇಳಿದೆ.

ADVERTISEMENT

ದೇಶದಲ್ಲಿ ಉಳಿತಾಯದ ಹಣವನ್ನು ಜಮೀನು ಮತ್ತು ಚಿನ್ನದ ಬದಲು ಹಣಕಾಸು ಉತ್ಪನ್ನಗಳಲ್ಲಿ (ಮ್ಯೂಚುವಲ್‌ ಫಂಡ್‌ಗಳು, ಷೇರುಗಳು, ಬಾಂಡ್‌ಗಳು ಇತ್ಯಾದಿ) ತೊಡಗಿಸುವ ಪ್ರವೃತ್ತಿಗೆ ಈಗ ಕೆಲವು ವರ್ಷಗಳಿಂದ ಹೆಚ್ಚಿನ ಬಲ ಬಂದಿದೆ. ಈ ಪ್ರವೃತ್ತಿಯು ಮುಂದಿನ ದಿನಗಳಲ್ಲಿ ಇನ್ನಷ್ಟು ವ್ಯಾಪಕವಾಗಲಿದೆ ಎಂಬ ಮಾತನ್ನು ಹಣಕಾಸು ತಜ್ಞರು ಹಲವು ಬಾರಿ ಹೇಳಿದ್ದಾರೆ. ಈ ಮಾತನ್ನು ಪುಷ್ಟೀಕರಿಸುವ ಅಂಕಿ–ಅಂಶಗಳು ಹಲವು ಇವೆ. ದೇಶದ ಮ್ಯೂಚುವಲ್‌ ಫಂಡ್‌ ಕಂಪನಿಗಳು ನಿರ್ವಹಿಸುತ್ತಿರುವ ಹಣದ ಒಟ್ಟು ಮೊತ್ತವು 2014ರಲ್ಲಿ ₹10 ಲಕ್ಷ ಕೋಟಿ ಇದ್ದದ್ದು 2024ರ ನವೆಂಬರ್‌ 30ರ ವೇಳೆಗೆ ₹68.08 ಲಕ್ಷ ಕೋಟಿಗೆ ಏರಿಕೆ ಕಂಡಿದೆ. ಅಂದರೆ, ಈ ಮೊತ್ತ ಹತ್ತು ವರ್ಷಗಳಲ್ಲಿ ಆರು ಪಟ್ಟು ಏರಿ‌ದೆ. ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರ ಒಟ್ಟು ಸಂಖ್ಯೆಯು 2018ರ ಮಾರ್ಚ್‌ 31ಕ್ಕೆ 1.7 ಕೋಟಿ ಇದ್ದದ್ದು 2024ರ ನವೆಂಬರ್‌ 30ಕ್ಕೆ 5.18 ಕೋಟಿಗೆ ಏರಿಕೆ ಆಗಿದೆ (ಹೂಡಿಕೆದಾರರ ಸಂಖ್ಯೆಯು ಆರು ವರ್ಷಗಳಲ್ಲಿ ಸರಿಸುಮಾರು ಮೂರು ಪಟ್ಟು ಹೆಚ್ಚಾಗಿದೆ) ಎಂಬ ಅಂಕಿ–ಅಂಶವು ಸೆಬಿ ಬಳಿ ಇದೆ.

ಮ್ಯೂಚುವಲ್‌ ಫಂಡ್‌ ಹೂಡಿಕೆದಾರರ ಖಾತೆಗಳ ಸಂಖ್ಯೆಯು 2019ರ ನವೆಂಬರ್‌ 30ರಂದು 8.65 ಕೋಟಿ ಇದ್ದದ್ದು 2024ರ ನವೆಂಬರ್‌ 30ರ ವೇಳೆಗೆ 22.08 ಕೋಟಿಗೆ ಹೆಚ್ಚಳವಾಗಿದೆ. ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಸುಲಭ ಮತ್ತು ಸರಳ, ಇಲ್ಲಿ ಹೂಡಿಕೆ ಮಾಡಿದ ಹಣವನ್ನು ಹಣಕಾಸು ನಿರ್ವಹಣಾ ತಜ್ಞರು ಆಯ್ದ ಕಂಪನಿಗಳ ಷೇರುಗಳಲ್ಲಿ ವೃತ್ತಿಪರವಾಗಿ ತೊಡಗಿಸುತ್ತಾರೆ, ಚಿನ್ನವನ್ನು ಅಡಮಾನವಾಗಿ ಇರಿಸಿ ಹೇಗೆ ಸಾಲ ಪಡೆಯಬಹುದೋ ಅದೇ ರೀತಿಯಲ್ಲಿ ಮ್ಯೂಚುವಲ್ ಫಂಡ್‌ ಯೂನಿಟ್‌ಗಳನ್ನು ಅಡಮಾನವಾಗಿ ಇರಿಸಿ ಆರ್‌ಬಿಐ ನೋಂದಾಯಿತ ಹಣಕಾಸು ಸಂಸ್ಥೆಗಳಿಂದ ತ್ವರಿತವಾಗಿ ಸಾಲ ಪಡೆಯಬಹುದು. ಇವೆಲ್ಲಕ್ಕಿಂತ ಹೆಚ್ಚಾಗಿ, ಮ್ಯೂಚುವಲ್‌ ಫಂಡ್‌ಗಳ ಮೂಲಕ ಆಗುವ ಹೂಡಿಕೆಗಳು ದೀರ್ಘಾವಧಿಯಲ್ಲಿ ಹೂಡಿಕೆದಾರರಿಗೆ ಕೆಲವು ಸಾಂಪ್ರದಾಯಿಕ ಹೂಡಿಕೆ ಉತ್ಪನ್ನಗಳಿಗಿಂತ ಹೆಚ್ಚಿನ ಪ್ರಮಾಣದ ಲಾಭ ತಂದುಕೊಡುವ ಸಾಮರ್ಥ್ಯ ಹೊಂದಿವೆ. ಇವೆಲ್ಲವೂ ಮ್ಯೂಚುವಲ್‌ ಫಂಡ್‌ಗಳಲ್ಲಿನ ಹೂಡಿಕೆಯ ಮಹತ್ವವನ್ನು ಹೇಳುತ್ತಿವೆ.

ಆದರೆ, ಇಷ್ಟೆಲ್ಲ ಪ್ರಯೋಜನಗಳು ಇದ್ದರೂ ಅಂದಾಜು 142 ಕೋಟಿ ಜನಸಂಖ್ಯೆ ಇರುವ ಈ ದೇಶದಲ್ಲಿ ಈ ಯೋಜನೆಗಳಲ್ಲಿ ಹಣ ತೊಡಗಿಸಿದವರ ಸಂಖ್ಯೆ 5.18 ಕೋಟಿ ಮಾತ್ರ ಎನ್ನುವುದು ಇವು ಜನಸಾಮಾನ್ಯರನ್ನು ವ್ಯಾಪಕವಾಗಿ ಇನ್ನೂ ತಲುಪಿಲ್ಲ ಎಂಬುದನ್ನು ಬಹಳ ಸ್ಪಷ್ಟವಾಗಿ ಹೇಳುತ್ತಿದೆ.

ಸೆಬಿ ಹೇಳಿರುವ ‘ಕಡಿಮೆ ಆದಾಯದ ಸಮುದಾಯ’ ಗಳನ್ನು ಮ್ಯೂಚುವಲ್‌ ಫಂಡ್‌ ಕಂಪನಿಗಳು ಪರಿಣಾಮಕಾರಿಯಾಗಿ ತಲುಪಬೇಕು ಎಂದಾದರೆ, ಹೂಡಿಕೆ ಮೊತ್ತವು ಕಡಿಮೆ ಇದ್ದರಷ್ಟೇ ಸಾಕಾಗುವುದಿಲ್ಲ. ಕಡಿಮೆ ಮೊತ್ತಕ್ಕೆ ಹೂಡಿಕೆ ಸಾಧ್ಯವಾಗಿಸುವುದು ಮೆಚ್ಚುವಂಥದ್ದೇ ಆದರೂ, ಹೂಡಿಕೆಗೆ ಸಂಬಂಧಿಸಿದ ಅಷ್ಟೂ ಮಾಹಿತಿಯು ‘ಕಡಿಮೆ ಆದಾಯದ ಹಾಗೂ ಹೂಡಿಕೆ ಯೋಜನೆಗಳ ಪ್ರಯೋಜನ ಹೆಚ್ಚಾಗಿ ದೊರೆತಿರದ’ ಸಮುದಾಯಗಳ ಜನರಿಗೆ ಅವರ ಭಾಷೆಯಲ್ಲೇ ಸಿಗುವಂತೆ ಮಾಡಬೇಕಿರುವುದು ಹೆಚ್ಚು ಮಹತ್ವದ್ದಾಗುತ್ತದೆ. ದೇಶದ ಮುಂಚೂಣಿ ಮ್ಯೂಚುವಲ್‌ ಫಂಡ್‌ ಕಂಪನಿಗಳ ವೆಬ್‌ಸೈಟ್‌ ಗಳಲ್ಲಿ ವಿವಿಧ ಫಂಡ್‌ಗಳ ಬಗ್ಗೆ ಬಹಳ ವಿಸ್ತೃತವಾದ ವಿವರಗಳು, ವಿಡಿಯೊ ಮಾಹಿತಿ ಇವೆ. ಆದರೆ ಇಂಗ್ಲಿಷ್‌, ಹಿಂದಿ ಹೊರತುಪಡಿಸಿ ಬೇರೆ ಭಾಷೆಗಳಲ್ಲಿ
ವಿವರಗಳು ಇಲ್ಲದಿರುವುದು ‘ಕಡಿಮೆ ವರಮಾನ’ದ ವರ್ಗಗಳು ಈ ಹೂಡಿಕೆ ಜಗತ್ತನ್ನು ಪ್ರವೇಶಿಸುವುದಕ್ಕೆ ಒಂದು ಅಡ್ಡಿ.

ಮ್ಯೂಚುವಲ್‌ ಫಂಡ್‌ ಯೋಜನೆಗಳಿಗೆ ಸಂಬಂಧಿಸಿದ ಎಲ್ಲ ವಿವರಗಳು ಜನರ ಭಾಷೆಯಲ್ಲಿ ಲಭ್ಯವಾಗುವಂತೆ ಮಾಡಬೇಕಿರುವುದು ಸೆಬಿ ತನ್ನ ಗುರಿ ತಲುಪಲು ಅಗತ್ಯವಾಗಿ ಮಾಡಬೇಕಿರುವ ಕೆಲಸ. ಜನರಿಗೆ ಹೂಡಿಕೆ ಮಾಹಿತಿ ತಮ್ಮ ಭಾಷೆಯಲ್ಲೇ ಲಭ್ಯವಾದರೆ, ಅವರು ಹೂಡಿಕೆಗಳ ಹೆಸರಿನಲ್ಲಿ ವಂಚನೆಗೆ ತುತ್ತಾಗುವುದು ಕೂಡ ಕಡಿಮೆಯಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.