ADVERTISEMENT

ಸಂಗತ | ಶಕ್ತಿ ಯೋಜನೆ: ತಪ್ಪಬೇಕಿದೆ ಜಟಾಪಟಿ

ಸರ್ಕಾರಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರು ಹಾಗೂ ಕಂಡಕ್ಟರ್‌ ನಡುವೆ ಜಗಳ ಹೆಚ್ಚುತ್ತಿವೆ. ಇದಕ್ಕೆ ಅರಿವಿನ ಕೊರತೆ, ನಿಯಮಗಳಲ್ಲಿನ ಗೊಂದಲಗಳೇ ಕಾರಣ.

ಸಿದ್ದಯ್ಯ ಹಿರೇಮಠ
Published 3 ಡಿಸೆಂಬರ್ 2025, 23:30 IST
Last Updated 3 ಡಿಸೆಂಬರ್ 2025, 23:30 IST
ಸಂಗತ
ಸಂಗತ   

ಮೈಸೂರಿನಿಂದ ತುಮಕೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ, ‘ಶಕ್ತಿ’ ಯೋಜನೆಯಡಿ ಉಚಿತ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಶ್ರೀರಂಗಪಟ್ಟಣದಲ್ಲಿ ಇಳಿದಿದ್ದಕ್ಕೆ ತೀವ್ರ ಜಟಾಪಟಿ ನಡೆದ ಘಟನೆ ಇತ್ತೀಚೆಗೆ ವರದಿಯಾಗಿದೆ. ತುಮಕೂರಿಗೆ ಟಿಕೆಟ್‌ ಪಡೆದು, ಮಾರ್ಗಮಧ್ಯೆ ಇಳಿದುಹೋಗುತ್ತಿರುವುದನ್ನು ಗಮನಿಸಿ ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಮಹಿಳೆ, ಕಂಡಕ್ಟರ್ ಶರ್ಟ್ ಕಾಲರ್ ಹಿಡಿದು ವಾಗ್ವಾದ ನಡೆಸಿದ್ದರು. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಬಸ್‌ ಹತ್ತಿ ನಿಗದಿತ ನಿಲುಗಡೆಗೆ ಉಚಿತ ಟಿಕೆಟ್‌ ಪಡೆಯುವ ಮಹಿಳೆಯರು ಅದೇ ನಿಲುಗಡೆ ಪ್ರದೇಶದಲ್ಲೇ ಬಸ್ಸಿನಿಂದ ಇಳಿಯಬೇಕು. ಮಧ್ಯದಲ್ಲಿ ಇಳಿಯುವಂತೆ ಇಲ್ಲ. ಮಹಿಳಾ ಪ್ರಯಾಣಿಕರು ತಾವು ಟಿಕೆಟ್‌ ಪಡೆದ ಊರಿಗೆ ಬದಲಾಗಿ ಮುಂಚಿತವಾಗಿಯೇ ಬಸ್‌ನಿಂದ ಇಳಿದುಹೋಗಿದ್ದರೆ, ಮುಂದಿನ ಊರಿನಲ್ಲಿ ಟಿಕೆಟ್‌ ತಪಾಸಣಾ ಸಿಬ್ಬಂದಿ ಬಂದಾಗ ಸಮಸ್ಯೆಯಾಗುತ್ತದೆ. ವಿತರಣೆ ಆದ ಟಿಕೆಟ್‌ಗಳ ಲೆಕ್ಕ ಹಾಕಿ ನೋಡಿದಾಗ ಆ ಪ್ರಯಾಣಿಕರು ಇಲ್ಲದಿರುವುದು ಕಂಡುಬಂದರೆ, ಅದಕ್ಕೆ ಕಂಡಕ್ಟರ್‌ ನೇರ ಹೊಣೆ. ಈ ಕಾರಣಕ್ಕೆ ಅನೇಕ ಕಂಡಕ್ಟರ್‌ಗಳನ್ನು ಅಮಾನತು ಮಾಡಿದ ಉದಾಹರಣೆಗಳಿವೆ. ಕೆಲವು ಕಂಡಕ್ಟರ್‌ಗಳಿಗೆ ನೋಟಿಸ್‌ ನೀಡಲಾಗಿದೆ.

‘ಯಾವುದೋ ಊರಿಗೆ ಟಿಕೆಟ್‌ ಪಡೆಯುವ ಮಹಿಳೆಯರು ಮಧ್ಯದಲ್ಲಿ ಇನ್ಯಾವುದೋ ಊರಲ್ಲಿ ಬಸ್‌ ಇಳಿದುಹೋಗದಂತೆ ನಾವೀಗ ಕಾವಲು ಕಾಯಬೇಕಿದೆ. ಬಸ್‌ ಖಾಲಿ ಇರಲಿ, ಕಿಕ್ಕಿರಿದು ತುಂಬಿರಲಿ, ಮಹಿಳೆಯರು ಯಾವ ಊರಿಗೆ ಟಿಕೆಟ್‌ ಪಡೆದಿರುತ್ತಾರೋ ಅಲ್ಲಿಯೇ ಇಳಿಯುವಂತೆ ನೋಡಿಕೊಳ್ಳಬೇಕಿದೆ. ನಮ್ಮ ಕಣ್ತಪ್ಪಿಸಿ ಯಾರಾದರೂ ಇಳಿದುಹೋಗಿದ್ದರೆ, ಮುಂದೆ ಟಿ.ಸಿ ಬಂದು ತಪಾಸಣೆ ನಡೆಸಿದಾಗ ಮಾಡದ ತಪ್ಪಿಗೆ ನಮ್ಮ ಕೆಲಸಕ್ಕೆ ಕುತ್ತುಬರುತ್ತದೆ’ ಎಂಬುದು ಕಂಡಕ್ಟರ್‌ಗಳ ಅಳಲು.

ADVERTISEMENT

ಶ್ರೀರಂಗಪಟ್ಟಣದಲ್ಲಿ ನಡೆದಂಥ ಘಟನೆಯೂ, ಜಟಾಪಟಿಯೂ ಹೊಸದೇನಲ್ಲ. ಇಂಥವು ‘ಶಕ್ತಿ’ ಯೋಜನೆ ಆರಂಭವಾದಾಗಿನಿಂದ ಅಲ್ಲಲ್ಲಿ ನಡೆಯುತ್ತಲೇ ಇವೆ.

‌ಇದೀಗ ಬಹುತೇಕರ ಕೈಯಲ್ಲಿ ಮೊಬೈಲ್‌ ಫೋನ್‌ ಇರುವುದು ಸಾಮಾನ್ಯ. ಕೆಲಸದ ನಿಮಿತ್ತ ಯಾರನ್ನೋ ಭೇಟಿಯಾಗಲು, ಯಾವುದೋ ಊರಿಗೆ ಹೊರಟ ಮಹಿಳೆಗೆ ಮಾರ್ಗಮಧ್ಯದಲ್ಲೇ ಕರೆಯೊಂದು ಬಂದು, ಅವರು ಭೇಟಿ ಮಾಡಬೇಕಿರುವ ವ್ಯಕ್ತಿ ಅನಿವಾರ್ಯ ಕಾರಣಗಳಿಂದ ಲಭ್ಯವಿರುವುದಿಲ್ಲ ಎಂಬ ಸಂದೇಶ ಬಂದಾಗ, ಆ ಊರಿಗೆ ಹೋಗುವುದು ಬೇಡ ಅನ್ನಿಸಿ, ಮಾರ್ಗಮಧ್ಯದಲ್ಲೇ ಇಳಿದು ವಾಪಸ್‌ ಹೋಗುವ ಸಾಧ್ಯತೆಯಿದೆ. ಅಥವಾ ಮಾರ್ಗಮಧ್ಯದ ಊರಲ್ಲಿ ಪ್ರೀತಿಪಾತ್ರರ ಅಥವಾ ಆಪ್ತಸ್ನೇಹಿತರ ಮನೆ ಇದ್ದಲ್ಲಿ, ಅವರನ್ನು ಭೇಟಿ ಮಾಡಿ, ಉಭಯ ಕುಶಲೋಪರಿ ವಿಚಾರಿಸಿ, ಮತ್ತೆ ತಮ್ಮೂರಿನತ್ತ ಪ್ರಯಾಣ ಮುಂದುವರಿಸುವ ದಿಢೀರ್‌ ನಿರ್ಧಾರ ಮಾಡುವವರೂ ಇರುತ್ತಾರೆ. ಕೆಲವೊಮ್ಮೆ ಯಾವುದೋ ಕೆಲಸಕ್ಕೆ ಹೊರಟವರಿಗೆ ಮಾರ್ಗಮಧ್ಯದಲ್ಲೇ ಅವರ ಕೆಲಸ ಆಗಿರುವ ಸಂದೇಶ ಬರುತ್ತದೆ. ಆಗ ಅರ್ಧದಾರಿಗೇ ಪ್ರಯಾಣ ಮೊಟಕುಗೊಳಿಸಿ ವಾಪಸ್‌ ಹೋಗುವಂಥ ಸ್ಥಿತಿಯೂ ಎದುರಾಗುತ್ತದೆ. ಅಂಥವರು ‘ಶಕ್ತಿ’ ಯೋಜನೆ ನಿಯಮದ ಪ್ರಕಾರ ಬಸ್‌ ಇಳಿಯುವಂತೆಯೇ ಇಲ್ಲ. ಇಳಿಯಲು ಕಂಡಕ್ಟರ್‌ ಬಿಡುವಂತಿಲ್ಲ.

ಹತ್ತೋ ಹದಿನೈದೋ ಕಿಲೋಮೀಟರ್‌ ದೂರದ ಮಾರ್ಗವಾದರೆ ಕೆಲವರು ಅಲ್ಲಿಯವರೆಗೂ ಹೋಗಿ ಮರಳುವುದುಂಟು. ಆದರೆ, ನೂರಾರು ಕಿಲೋಮೀಟರ್‌ ದೂರ ಹೊರಟವರು ಮೇಲೆ ತಿಳಿಸಿದ ಕಾರಣಕ್ಕೆ ಬಸ್‌ ಇಳಿಯುವ ಅನಿವಾರ್ಯತೆ ಎದುರಾದರೆ ಅಮೂಲ್ಯವಾದ ಸಮಯದ ಬಗ್ಗೆ ಆಲೋಚಿಸಿ ಇಳಿಯುವುದಕ್ಕೆ ಮನಸು ಮಾಡುವುದರಲ್ಲಿ ತಪ್ಪಿರುವುದಿಲ್ಲ. ಆದರೆ, ಅದಕ್ಕೆ ನಿಯಮ ಅಡ್ಡಿಯಾಗುತ್ತಿದೆ.

‘ಶಕ್ತಿ’ ಯೋಜನೆ ಅಡಿ ನೀಡಲಾಗುವ ಪ್ರತಿ ಟಿಕೆಟ್‌ ಲೆಕ್ಕಹಾಕಿ ಆಯಾ ಸಾರಿಗೆ ನಿಗಮಗಳಿಗೆ ಹಣ ಪಾವತಿಸುವು ದರಿಂದ ಖೊಟ್ಟಿ ಟಿಕೆಟ್‌ ಕೊಡುವುದರ ಮೇಲೆ ಸರ್ಕಾರ ನಿಗಾ ಇರಿಸುತ್ತಿದೆ. ಪ್ರಯಾಣಕ್ಕೆ ಮಹಿಳೆಯರೇ ಬಾರದಿದ್ದರೂ ಕಂಡಕ್ಟರ್‌ಗಳು ಸುಖಾಸುಮ್ಮನೇ ಟಿಕೆಟ್‌ ನೀಡಿದಂತೆ ಮಾಡಿ ನಿಗಮಕ್ಕೆ ಲಾಭ ತಂದು ಸರ್ಕಾರಕ್ಕೆ ನಷ್ಟ ಮಾಡಬಾರದು ಎಂಬ ಉದ್ದೇಶದಿಂದ ಈ ನಿಯಮ ಜಾರಿಗೊಳಿಸಲಾಗಿದೆ. ಯೋಜನೆಯ ಫಲಾನುಭವಿಗಳು ಮಾರ್ಗಮಧ್ಯೆ ಇಳಿದು ಹೋಗಿದ್ದರೆ ಕಂಡಕ್ಟರ್‌ ಮೇಲೆ ವಂಚನೆಯ ಗುಮಾನಿ ಮೂಡುತ್ತದೆ. ಹೀಗೆ ಮಾಡುವುದರಿಂದ ಕಂಡಕ್ಟರ್‌ಗಳಿಗೆ ಲಾಭವೇನೂ ಇಲ್ಲ. ಆದರೆ, ‘ಇಂತಿಷ್ಟು ಮೊತ್ತ ಸಂಗ್ರಹಕ್ಕೆ ಇಂತಿಷ್ಟು ಎಂಬಂತೆ ಇನ್ಸೆಂಟಿವ್‌ ಪಡೆಯುವ ಆಸೆಗೆ ಕಂಡಕ್ಟರ್‌ಗಳು ವಂಚಿಸದಿರಲಿ’ ಎಂಬುದೂ ನಿಯಮ ಜಾರಿಗೆ ಕಾರಣ.

‘ಶಕ್ತಿ’ ಯೋಜನೆಯ ಫಲಾನುಭವಿಗಳು ಮಾರ್ಗಮಧ್ಯೆ ಬಸ್‌ ಇಳಿಯಲು ಅವಕಾಶ ನೀಡುವ ನಿಟ್ಟಿನಲ್ಲಿ ನಿಯಮಕ್ಕೆ ತಿದ್ದುಪಡಿ ತರುವತ್ತ ಸರ್ಕಾರ ಆಲೋಚಿಸಬೇಕಿದೆ.

ಬಸ್‌ ಹತ್ತುವ ಮಹಿಳೆಯರ ಆಧಾರ್‌ ಕಾರ್ಡ್‌ ಪರಿಶೀಲಿಸಿಯೇ ಟಿಕೆಟ್‌ ನೀಡಬೇಕೆಂಬ ನಿಯಮವೂ ಇದೆ. ಆಧಾರ್‌ ತೋರಿಸಲು ಹೇಳಿದರೆ, ‘ನಾವು ಹೆಣ್ಣುಮಕ್ಕಳು ಅಲ್ಲವೇನಪ್ಪಾ?’ ಎಂದು ಕೆಲವರು ಪ್ರಶ್ನಿಸುವುದುಂಟು. ಈ ಯೋಜನೆ ಕರ್ನಾಟಕದ ಮಹಿಳೆಯರಿಗೆ ಮಾತ್ರ ಇರುವಂಥದ್ದು. ಬೇರೆ ರಾಜ್ಯದ ಮಹಿಳೆಯರು ಟಿಕೆಟ್‌ ಕೇಳಿದಾಗ ವಿಳಾಸ ಪರಿಶೀಲಿಸಲೆಂದೇ ಈ ನಿಯಮ ಇದೆ. ಇದು ಅನೇಕರಿಗೆ ಗೊತ್ತಿಲ್ಲ. ಹಾಗಾಗಿ, ಜಗಳಗಳು ಆಗುತ್ತವೆ. ಅರಿವು ಮೂಡಿಸುವ ಕೆಲಸ ಆಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.